ವಿಕಟಕವಿ ಯೋಗರಾಜ್ ಭಟ್ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಈ ಬಾರಿ ಗರಡಿ ಎನ್ನುವ ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದು, ಯಶಸ್ ಸೂರ್ಯ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
ಸ್ಯಾಂಡಲ್‌ವುಡ್ ಡೈರೆಕ್ಟರ್ ಯೋಗರಾಜ್ ಭಟ್ (Yogaraj Bhat) ನಿರ್ದೇಶಿಸಿರುವ 'ಗಾಳಿಪಟ 2' (Galipata 2) ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ವಿಕಟಕವಿ ಯೋಗರಾಜ್ ಭಟ್ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಹೌದು! ಯೋಗರಾಜ್ ಭಟ್ ಈ ಬಾರಿ 'ಗರಡಿ' (Garadi) ಎನ್ನುವ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಯಶಸ್ ಸೂರ್ಯ (Yashas Surya) ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ (Poster) ಬಿಡುಗಡೆಯಾಗಿದೆ.
ಈ ಬಗ್ಗೆ ಚಿತ್ರದ ನಾಯಕ ಯಶಸ್ ಸೂರ್ಯ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ, ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಬಿ.ಸಿ.ಪಾಟೀಲ್ (B.C.Patil) ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ (V.Harikrishna) ಜೊತೆ 'ಗರಡಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಚಿತ್ರದ ಪೋಸ್ಟರ್‌ನ್ನು ಶೇರ್ ಮಾಡಿಕೊಂಡಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದರೂ ಗೆಲುವು ಕಾಣದ ನಟ ಯಶಸ್ ಸೂರ್ಯ ಅವರಿಗೆ 'ಗರಡಿ' ಚಿತ್ರದ ಮೂಲಕ ಯೋಗರಾಜ್ ಭಟ್ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಯಶಸ್ ಸೂರ್ಯ ಈ ಚಿತ್ರದೊಂದಿಗೆ ಆ್ಯಕ್ಷನ್ ನಟನಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ. 'ಗರಡಿ' ಚಿತ್ರಕ್ಕೆ ಬಿ ರೆಡಿ ಎನ್ನುವ ಟ್ಯಾಗ್‌ಲೈನ್ ಇದೆ.
'ಗಾಳಿಪಟ 2' ಶೂಟಿಂಗ್ ಮುಕ್ತಾಯ: ಯೋಗರಾಜ್ ಭಟ್
2016 ರಲ್ಲಿ ತೆರೆಕಂಡ 'ಹ್ಯಾಪಿ ನ್ಯೂ ಇಯರ್' ಚಿತ್ರದ ಬಳಿಕ 'ಗರಡಿ' ಚಿತ್ರವನ್ನು ಸಚಿವ ಬಿ.ಸಿ ಪಾಟೀಲ್ ಸೌಮ್ಯ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಮತ್ತು ಪೈಲ್ವಾನ್‌ಗಳ ಫಿಟ್‌ನೆಸ್‌ಗಳ ಬಗ್ಗೆ ಕಥೆಯಿರುತ್ತದೆ. ಉತ್ತರ ಕರ್ನಾಟಕದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ವಿಶೇಷವಾಗಿ ಯೋಗರಾಜ್ ಭಟ್ ಸಿನಿಮಾಗಳು ಬೇರೆ ರೀತಿ ಇರುತ್ತವೆ. ಹಾಗಾಗಿ ಯೋಗರಾಜ್ ಭಟ್ಟರ ಸಿನಿಮಾ ಅಂದರೆ ಅಲ್ಲಿ ಪ್ರೇಮ ಕತೆಯೇ ಪ್ರಧಾನವಾಗಿ ಇರುತ್ತದೆ. ಹಾಗಾಗಿ ಈ ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಸುಂದರ ಪ್ರೇಮ ಇರುವುದು ಮಿಸ್ ಆಗುವುದಿಲ್ಲ.
ಯಶಸ್ ಸೂರ್ಯ 2007ರಲ್ಲಿ ತೆರೆಕಂಡ 'ಯುಗ ಯುಗಗಳೇ ಸಾಗಲಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, 2009ರಲ್ಲಿ ತೆರೆಕಂಡ 'ಶಿಶಿರ' ಸಿನಿಮಾದಿಂದ ಗಮನಸೆಳೆದರು. 'ಚಿಂಗಾರಿ', 'ಪರಮಶಿವ', 'ಜಿಲೇಬಿ', 'ಚಕ್ರವರ್ತಿ', 'ಸೈಕೋ ಶಂಕರ', 'ರಾಮ ಧಾನ್ಯ', 'ಚಿಟ್ಟೆ', 'ಒಡೆಯ' ಚಿತ್ರಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ತೆರೆಕಂಡ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಸಿನಿಮಾದಲ್ಲಿ ಸಹದೇವನ ಪಾತ್ರದಲ್ಲಿ ಯಶಸ್ ಕಾಣಿಸಿಕೊಂಡಿದ್ದರು. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ಯಶಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಯಶಸ್, ಅಂಬಿಕಾ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
'ನಮ್ಮೊಲವಿನ ಪರಮಾತ್ಮ ಶಾಶ್ವತ': ಯೋಗರಾಜ್ ಭಟ್
ಇನ್ನು, ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕಿಯರಾಗಿ ವೈಭವಿ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಅನಂತ್ನಾಗ್, ಪದ್ಮಜಾ ರಾವ್, ಸುಧಾ ಬೆಳವಾಡಿ, ರಂಗಾಯಣ ರಘು ಸೇರಿದಂತೆ ಮುಂತಾದವರ ತಾರಾಗಣ ಚಿತ್ರಕ್ಕಿದೆ.