RIP Kalatapasvi Rajesh: ಸ್ಯಾಂಡಲ್‌ವುಡ್ ಹಿರಿಯ ನಟ 'ಕಲಾತಪಸ್ವಿ' ರಾಜೇಶ್ ವಿಧಿವಶ!

By Suvarna NewsFirst Published Feb 19, 2022, 7:23 AM IST
Highlights

*ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜೇಶ್‌
*ಫೆಬ್ರವರಿ 9 ರಂದು ಖಾಸಗಿ ಆಸ್ಪತ್ರೆಗೆ ದಾಖಲಲಾಗಿದ್ದ ಹಿರಿಯ ನಟ
*ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನ

ಬೆಂಗಳೂರು (ಫೆ. 19): 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್(89) ನಿಧನರಾಗಿದ್ದಾರೆ ((Sandalwood Actor Rajesh Death). ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ವಿದ್ಯಾರಣ್ಯಪುರದ ಸ್ವಗೃಹದಲ್ಲಿ ಮನೆಯಲ್ಲಿ ಹಿರಿಯ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಅಂತಿಮ ದರ್ಶನಕ್ಕೆ‌ ಅವಕಾಶ ನೀಡಲಾಗುವುದು. ನಟ ಅರ್ಜುನ್ ಸರ್ಜಾ ಅವರ ಮಾವನೂ ಆಗಿರುವ ರಾಜೇಶ್‌ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

"

Latest Videos

ಅಂತಿಮ ಪೂಜವಿಧಿ ವಿಧಾನಗಳ ಮುಗಿಸಿದ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು 11ಗಂಟಗೆ  ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಮೂರು ಗಂಟೆಗಳ ಕಾಲ ಅಂತಿಮ ದರ್ಶನದ ಬಳಿಕ ಮೇಡಿ ಅಗ್ರಹಾರದ ಚಿತಾಗಾರದಲ್ಲಿ ನಟ ರಾಜೇಶ್ ಅಂತ್ಯಸಂಸ್ಕಾರ‌ ನಡೆಯಲಿದೆ. 

ಬಾಣಸವಾಡಿಯ ನ್ಯೂ ಜನಪ್ರಿಯ  ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ರಾಜೇಶ್ ಅವರು ನಾಯಕ ನಟನಾಗಿಯೂ ಹೆಸರು ಮಾಡಿದ್ದಾರೆ.ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಫೆಬ್ರವರಿ 9 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ. ರಾಜೇಶ್ ಅವರ ಪತ್ನಿ ಪಾರ್ವತಮ್ಮ  ಬೆಂಗಳೂರಿನ ವಿದ್ಯಾರಣ್ಯಪುರದ ನಿವಾಸದಲ್ಲಿ ಕಳೆದ ವರ್ಷದ ನವೆಂಬರ್ ನಲ್ಲಿ ಇಹಲೋಕ ತ್ಯಜಿಸಿದ್ದರು. ಅಂದಿನಿಂದಲೂ ರಾಜೇಶ್ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು.  

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಿಡ್ನಿ ವೈಫಲ್ಯ ಹಾಗೂ ವಯೋ ಸಹಜವಾದ ಕಾಯಿಲೆಗಳಿಂದ ರಾಜೇಶ್ ಅವರು ಬಳಲುತ್ತಿದ್ದರು. 89 ವರ್ಷದ ರಾಜೇಶ್‌  ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಹೊಂದಿದ್ದು, ಇತ್ತೀಚೆಗೆ ನಟನೆಯಿಂದ ದೂರ ಉಳಿದಿದ್ದರು. 

ಇದನ್ನೂ ಓದಿ: ಅರ್ಜುನ್‌ ಸರ್ಜಾ ನಿಶ್ಚಿತಾರ್ಥ; ಪುಟ್ಟ ಚಿರಂಜೀವಿ ಸರ್ಜಾ, ಅನು ಪ್ರಭಾಕರ್‌ ನೋಡಿ!

ಕಲಾ ತಪಸ್ವಿ ಎಂದೇ ಖ್ಯಾತ: ಬೆಂಗಳೂರಿನಲ್ಲಿ ಜನಿಸಿದ ರಾಜೇಶ್‌ ಅವರ ಮೂಲ  ಹೆಸರು ಮುನಿ ಚೌಡಪ್ಪ, ನಂತರದ ದಿನಗಳಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದ ರಾಜೇಶ್, ವಿದ್ಯಾಸಾಗರ್‌ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಕಲಾ ತಪಸ್ವಿ ಎಂದೇ ಖ್ಯಾತರಾಗಿದ್ದರು. ನಾಯಕನಾಗಿ ಮತ್ತು ಪೋಷಕ  ಪಾತ್ರಗಳಲ್ಲೂ ರಾಜೇಶ್ ಅಭಿನಯಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ 2012ರಲ್ಲಿ ರಾಜೇಶ್‌ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಚಿಕ್ಕವಯಸ್ಸಿನಲ್ಲೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಮುನಿ ಚೌಡಪ್ಪ ರಂಗಭೂಮಿ ಪ್ರವೇಶಿಸಿದರು. ತಂದೆ-ತಾಯಿಗೆ ಗೊತ್ತಿಲ್ಲದಂತೆ ‘ಸುದರ್ಶನ ನಾಟಕ ಮಂಡಳಿ’ ಸೇರಿದ ಮುನಿ ಚೌಡಪ್ಪ ರಂಗಭೂಮಿಯಲ್ಲಿ ‘ವಿದ್ಯಾಸಾಗರ್’ ಹೆಸರಿನಿಂದ ಗುರುತಿಸಿಕೊಂಡರು. ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನ ಸ್ಥಾಪಿಸಿದರು.

ಸರ್ಕಾರಿ ಕೆಲಸ ಬಿಟ್ಟು ಸಿನಿಮಾ ರಂಗಕ್ಕೆ:‌  ನಟನಾಗುವ ಇಚ್ಛೆ ಹೊಂದಿದ್ದ ರಾಜೇಶ್ ಅವರು ಪಿಡಬ್ಲ್ಯೂಡಿ (PWD) ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಸರ್ಕಾರಿ ಕೆಲಸ ಮಾಡಿದ್ರು. ಆದರೆ ಸಿನಿಮಾ ಮೇಲಿನ ಆಸೆಯಿಂದ ಸರ್ಕಾರಿ ಕೆಲಸ ಬಿಟ್ಟು ‘ವೀರ ಸಂಕಲ್ಪ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ‘ನಿರುದ್ಯೋಗಿ ಬಾಳು’, ‘ಬಡವನ ಬಾಳು’, ‘ವಿಷ ಸರ್ಪ’, ‘ನಂದಾ ದೀಪ’, ‘ಚಂದ್ರೋದಯ’, ‘ಕಿತ್ತೂರು ರಾಣಿ ಚೆನ್ನಮ್ಮ’ ಮುಂತಾದ ನಾಟಕಗಳ ಮೂಲಕ ವಿದ್ಯಾಸಾಗರ್ ಆಗಿ ಗಮನ ಸೆಳೆದರು.

ಇದನ್ನೂ ಓದಿ: 'ಮಾಮ ಬಂದಿದ್ದೀನಿ, ಕಣ್ಣು ಬಿಡೋ'; ಬಿಕ್ಕಿ ಬಿಕ್ಕಿ ಅತ್ತ ಅರ್ಜುನ್‌ ಸರ್ಜಾ!

ದೇವರ ದುಡ್ಡ, ಸೊಸೆ ತಂದ ಸೌಭಾಗ್ಯ, ಕಲಿಯುಗ, ಕಪ್ಪು-ಬಿಳುಪು, ದೇವರ ಗುಡಿ, ಮರೆಯದ ದೀಪಾವಳಿ, ಪ್ರತಿಧ್ವನಿ, ವೀರ ಸಂಕಲ್ಪ, ಗಂಗೆ ಗೌರಿ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್​ ನಟಿಸಿದ್ದರು. ಫೆ.25ರಂದು ಬಿಡುಗಡೆ ಆಗಲಿರುವ ‘ಓಲ್ಡ್​ ಮಾಂಕ್​’ ಸಿನಿಮಾದಲ್ಲಿ ರಾಜೇಶ್ ಅತಿಥಿ ಪಾತ್ರ ಮಾಡಿದ್ದರು. 

ರಾಜೇಶ್ ದಂಪತಿಯ ಪುತ್ರಿ ನಿವೇದಿತಾ ಅವರನ್ನು ನಟ ಅರ್ಜುನ್ ಸರ್ಜಾ ವಿವಾಹವಾಗಿದ್ದರು.ಸ್ಯಾಂಡಲ್‌ವುಡ್‌ ಆ್ಯಕ್ಷನ್‌ ಕಿಂಗ್ ಅರ್ಜುನ್ ಸರ್ಜಾ ಹಾಗೂ ಹಿರಿಯ ನಟ ರಾಜೇಶ್ ಪುತ್ರಿ ಆಶಾ ರಾಣಿ ಹಲವು ವರ್ಷಗಳ ಕಾಲ ಪ್ರೀತಿಸಿ, ಕುಟುಂಬದ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಹಾಗೂ ಮದುವೆ ಮಾಡಿಕೊಂಡವರು. ರಾಜೇಶ್​ ಅವರ ಪುತ್ರಿ ಆಶಾ ರಾಣಿ ಕೂಡ ಚಿತ್ರರಂಗದಲ್ಲಿ ಯಶಸ್ಸು ಕಂಡವರು. ಆಶಾ ರಾಣಿ ಅವರನ್ನು ನಟ ಅರ್ಜುನ್​ ಸರ್ಜಾ 1988ರಲ್ಲಿ ಮದುವೆ ಆದರು. ರಾಜೇಶ್​ ಅವರ ಕುಟುಂಬದ ಹಲವರು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ

click me!