
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ವೆಂಕಟ್ ಕೆ. ನಾರಾಯಣ ನಿರ್ಮಿಸಿರುವ, ಪವನ್ ಒಡೆಯರ್ ನಿರ್ದೇಶನದ, ಶಿವರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ ‘ಬೇಲ್’ ಚಿತ್ರದ ಶಿವಣ್ಣ ಆಂಥಮ್ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ. ಈ ಸಮಾರಂಭದಲ್ಲಿ ಶಿವರಾಜ್‌ಕುಮಾರ್ ಹಾಗೂ ನಿರ್ದೇಶಕ ಪವನ್ ಒಡೆಯರ್ ತಮ್ಮ ವೈಯಕ್ತಿಕ ಬದುಕಿನ ಸವಾಲುಗಳು ಮತ್ತು ಚಿತ್ರೀಕರಣದ ದಿನಗಳ ಭಾವನಾತ್ಮಕ ಕ್ಷಣಗಳನ್ನು ಹಂಚಿಕೊಂಡರು.
ಶಿವರಾಜ್‌ಕುಮಾರ್, ‘ನಾನು ಕೊನೆಯ ಹಂತದ ಕೀಮೋಥೆರಪಿಗೆ ಒಳಗಾಗುತ್ತಿದ್ದ ಸಮಯದಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ಅವರ ಪತ್ನಿ ಅಪೇಕ್ಷಾ ಭೇಟಿ ನೀಡಿ ಕಥೆ ಹೇಳಿದರು. ಕೀಮೋ ವೇಳೆ ಸಾಮಾನ್ಯವಾಗಿ ಕೂದಲು ಉದುರುತ್ತದೆ. ಅಷ್ಟು ಪ್ರಬಲ ಡೋಸ್ ನೀಡಿದ್ದರೂ ದೇವರ ದಯೆಯಿಂದ ನನಗೆ ಒಂದೇ ಒಂದು ಕೂದಲು ಕೂಡ ಉದುರಲಿಲ್ಲ. 64 ವರ್ಷದವರೆಗೆ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ಕೂದಲನ್ನು ನೋಡಿ ಬೇರೆಯವರು ಮರುಗಬಾರದು ಎಂಬ ಆತಂಕವಿತ್ತು. ಚಿಕಿತ್ಸೆಯ ಆ ಸಂದರ್ಭದಲ್ಲೂ ಪವನ್ ದಂಪತಿ ಬಂದು ಪ್ರೀತಿಯಿಂದ ಅಡ್ವಾನ್ಸ್ ನೀಡಿ ಸಿನಿಮಾ ಒಪ್ಪಿಸಿದರು. ಅವರ ನಂಬಿಕೆ ಕಂಡು ನಾನು ಹಾಗೂ ಗೀತಾ ಕಣ್ಣೀರಿಟ್ಟಿದ್ದೆವು’ ಎಂದರು.
ನಿರ್ದೇಶಕ ಪವನ್ ಒಡೆಯರ್, ‘ಶಿವಣ್ಣ ಚಿಕಿತ್ಸೆ ಮುಗಿಸಿ ಬಂದ ತಕ್ಷಣ ಚಿತ್ರೀಕರಣಕ್ಕೆ ಡೇಟ್ ಕೊಟ್ಟರು. ಗೀತಕ್ಕ ಹಾಗೂ ನಿವೇದಿತಾ ಶಿವರಾಜ್‌ಕುಮಾರ್ ಬೆನ್ನೆಲುಬಾಗಿ ನಿಂತರು. ಈ ಚಿತ್ರವನ್ನು ನಾವೇ ನಿರ್ಮಿಸಲು ಹೊರಟಾಗ, ಕಥೆ ಮೆಚ್ಚಿದ ವೆಂಕಟ್ ಕೆ. ನಾರಾಯಣ ಬೆಂಬಲ ಕೊಟ್ಟರು. ಎರಡನೇ ಶೆಡ್ಯೂಲ್ ಚಿತ್ರೀಕರಣದ ವೇಳೆ ನನ್ನ ತಾಯಿಗೂ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ಶಿವಣ್ಣ ಅಭಿಮಾನಿ. ತಮಗೆ ನೋವಿದ್ದರೂ, ‘ಚಿತ್ರ ಚೆನ್ನಾಗಿ ಮೂಡಿಬರಬೇಕು, ನಿಲ್ಲಿಸದೆ ಕೆಲಸ ಮಾಡು’ ಎಂದೇ ಹುರಿದುಂಬಿಸುತ್ತಿದ್ದರು. ತಾಯಿ ತೀರಿಕೊಂಡ ಸೂತಕದ ದಿನದಲ್ಲೂ ನಾನು ಈ ಸಿನಿಮಾಗಾಗಿ ದುಡಿದಿದ್ದೇನೆ’ ಎಂದು ಗದ್ಗದಿತರಾದರು. ಅ. 2 ರಂದು ‘ಬೇಲ್’ ಚಿತ್ರವು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.