'ಚಂದ್ರ'ನ ಜೊತೆಗಿನ ಸಕ್ಸಸ್ ಬಳಿಕ ನಟನೆಗೆ ಗುಡ್​ಬೈ ಹೇಳಿದ್ದೇಕೆ ಈ 'ಚಕೋರಿ'? ಕೊನೆಗೂ ಸತ್ಯ ರಿವೀಲ್ ಆಗೋಯ್ತು!

Published : Sep 30, 2026, 11:42 AM IST
Prriya Chhabria

ಸಾರಾಂಶ

‘ಸುಧಾ’ ಎಂದೇ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿರುವ ಪ್ರಿಯಾ, ಹಲವು ವರ್ಷಗಳ ವಿರಾಮದ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿರುವುದು ಹಳೆಯ ಸಿನಿಪ್ರೇಕ್ಷಕರಿಗೆ ಖುಷಿಯ ವಿಚಾರವಾಗಿದೆ. ಒಂದು ಕಾಲದಲ್ಲಿ ಸಿನಿಮಾದ ಹಾಡುಗಳ ಮೂಲಕ ಮನ ಗೆದ್ದಿದ್ದ ನಟಿ, ಮತ್ತೆ ಬರಲಿದ್ದಾರೆ!

Chandra Chakori Actress Priya Chabria Comesback: ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಭಾರಿ ಸದ್ದು ಮಾಡಿದ್ದ ಸಿನಿಮಾಗಳ ಪೈಕಿ ‘ಚಂದ್ರ ಚಕೋರಿ’ ಸಿನಿಮಾಗೆ ವಿಶೇಷ ಸ್ಥಾನವಿದೆ. ಶ್ರೀಮುರಳಿ ಮತ್ತು ಪ್ರಿಯಾ ಜೋಡಿಯಾಗಿ ನಟಿಸಿದ್ದ ಈ ಸಿನಿಮಾ ಪ್ರೇಕ್ಷಕರ ಮನ ಗೆದ್ದು ಬ್ಲಾಕ್‌ಬಸ್ಟರ್ ಆಗಿತ್ತು. ಚಿತ್ರದಲ್ಲಿ ಶ್ರೀಮುರಳಿ ಪುಟ್ಟರಾಜು ಪಾತ್ರದಲ್ಲಿ ಕಾಣಿಸಿಕೊಂಡರೆ, ಪ್ರಿಯಾ ಅವರು ಸುಧಾ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಸಿನಿಮಾದ ಯಶಸ್ಸಿನ ಬಳಿಕ ಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳನ್ನು ಪಡೆಯುವ ನಿರೀಕ್ಷೆ ಇತ್ತು. ಆದರೆ ಆಗಿದ್ದೇ ಬೇರೆ!

‘ಚಂದ್ರ ಚಕೋರಿ’ ಚಿತ್ರದ ನಂತರ ಪ್ರಿಯಾ ದಿಢೀರನೆ ಚಿತ್ರರಂಗದಿಂದ ದೂರವಾದರು. ವರ್ಷಗಳು ಕಳೆದರೂ ಅವರು ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರಿಂದ ಅಭಿಮಾನಿಗಳಲ್ಲೂ ಸಹಜವಾಗಿಯೇ ಹಲವು ಪ್ರಶ್ನೆಗಳು ಮೂಡಿದ್ದವು. ಅಷ್ಟಕ್ಕೂ ಪ್ರಿಯಾ ಎಲ್ಲಿದ್ದರು? ಯಾಕೆ ಸಿನಿಮಾಗಳಿಂದ ದೂರ ಉಳಿದರು? ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳಲು ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ನಟಿಯೇ ಸಾಮಾಜಿಕ ಜಾಲತಾಣದ ಮೂಲಕ ಉತ್ತರ ನೀಡಿದ್ದಾರೆ.

ತಂದೆಯ ಆರೋಗ್ಯಕ್ಕಾಗಿ ಚಿತ್ರರಂಗಕ್ಕೆ ಗುಡ್‌ಬೈ

‘ಚಂದ್ರ ಚಕೋರಿ’ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪ್ರಿಯಾ ಅವರ ತಂದೆಯ ಆರೋಗ್ಯದಲ್ಲಿ ಗಂಭೀರ ಏರುಪೇರು ಉಂಟಾಯಿತು. ಕುಟುಂಬದ ಪರಿಸ್ಥಿತಿಯನ್ನು ಗಮನಿಸಿದ ಅವರು, ಸಿನಿಮಾಗಳಿಗಿಂತ ಕುಟುಂಬವೇ ಮುಖ್ಯ ಎಂದು ನಿರ್ಧರಿಸಿ ಸೌದಿ ಅರೇಬಿಯಾಗೆ ವಾಪಸ್ ತೆರಳಿದರು. ಆ ಸಮಯದಲ್ಲಿ ಕನ್ನಡ ಚಿತ್ರರಂಗದಿಂದ ಹಲವು ಸಿನಿಮಾಗಳ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದ್ದರೂ, ತಂದೆಯ ಆರೋಗ್ಯದ ಕಾರಣದಿಂದ ಎಲ್ಲ ಅವಕಾಶಗಳಿಗೂ ಅವರು ನಿರಾಕರಿಸಿದರು.

ತಂದೆ ಚೇತರಿಸಿಕೊಳ್ಳುವವರೆಗೆ ಸುಮಾರು ಎರಡು ವರ್ಷಗಳ ಕಾಲ ಸೌದಿಯಲ್ಲೇ ಉಳಿದುಕೊಂಡಿದ್ದರು. ಇದೇ ಅವಧಿಯಲ್ಲಿ ಪ್ರಿಯಾ ಇನ್ನು ಮುಂದೆ ಭಾರತಕ್ಕೆ ಮರಳುವುದಿಲ್ಲ ಎಂಬ ಮಾತುಗಳೂ ಹರಿದಾಡಿದ್ದವು. ಆದರೆ ಎರಡು ವರ್ಷಗಳ ಬಳಿಕ ಅವರು ಭಾರತಕ್ಕೆ ಮರಳಿದರು. ಆದರೆ ಅಷ್ಟರೊಳಗೆ ಪರಿಸ್ಥಿತಿ ಬದಲಾಗಿತ್ತು.

ಪ್ರಿಯಾ ಭಾರತಕ್ಕೆ ವಾಪಸ್ ಬಂದಾಗ ಅವರಿಗೆ ಬರುತ್ತಿದ್ದ ಸಿನಿಮಾದ ಅವಕಾಶಗಳು ಬಹುತೇಕ ಕಡಿಮೆಯಾಗಿದ್ದವು. ಹೀಗಾಗಿ ಅವರು ಜಾಹೀರಾತುಗಳು ಮತ್ತು ಡ್ಯಾನ್ಸ್ ಕಾರ್ಯಕ್ರಮಗಳ ಮೂಲಕ ತಮ್ಮ ವೃತ್ತಿಜೀವನವನ್ನು ಮುಂದುವರಿಸಿದರು. ನಂತರ ವಿವಾಹವಾದ ಬಳಿಕ ಅವರು ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದರು.

ಸೋಶಿಯಲ್ ಮೀಡಿಯಾ ಮತ್ತೆ ಹಳೆಯ ನೆನಪು ತಂದಿತು!

ಕಾಲ ಬದಲಾಯಿತು, ಸಾಮಾಜಿಕ ಜಾಲತಾಣಗಳ ಯುಗ ಆರಂಭವಾಯಿತು. ವಿಶೇಷವಾಗಿ ಇನ್‌ಸ್ಟಾಗ್ರಾಮ್ ಮೂಲಕ ‘ಚಂದ್ರ ಚಕೋರಿ’ ಸಿನಿಮಾದ ನೆನಪುಗಳು ಮತ್ತೆ ಅಭಿಮಾನಿಗಳ ಮುಂದೆ ಬರತೊಡಗಿದವು. ಕಳೆದ ಒಂದು ವರ್ಷದಿಂದ ಚಿತ್ರದ ಹಾಡುಗಳು ಮತ್ತು ಪ್ರಿಯಾ ಅವರ ಪಾತ್ರಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತೆ ವೈರಲ್ ಆಗಲು ಆರಂಭಿಸಿದವು.

ಅಭಿಮಾನಿಗಳಿಂದ ಬರುತ್ತಿದ್ದ ಸಂದೇಶಗಳು, ಹಳೆಯ ಸಿನಿಮಾದ ಮೇಲಿನ ಪ್ರೀತಿ ಮತ್ತು ಪ್ರಿಯಾ ಅವರನ್ನು ಮತ್ತೆ ತೆರೆ ಮೇಲೆ ನೋಡಬೇಕು ಎಂಬ ಆಸೆ ನಟಿಯ ಗಮನ ಸೆಳೆದಿದೆ. ಇದೇ ಕಾರಣಕ್ಕೆ ಅಭಿಮಾನಿಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಅವರು ‘ಚಂದ್ರ ಚಕೋರಿ’ ಚಿತ್ರದ ಹಾಡುಗಳಿಗೆ ರೀಲ್ಸ್ ಮಾಡಲು ಆರಂಭಿಸಿದರು. ಈ ಮೂಲಕ ವರ್ಷಗಳ ಬಳಿಕ ಪ್ರಿಯಾ ಮತ್ತೊಮ್ಮೆ ಅಭಿಮಾನಿಗಳ ನಡುವೆ ಕಾಣಿಸಿಕೊಳ್ಳಲು ಶುರುಮಾಡಿದರು.

ಮತ್ತೆ ಬಣ್ಣದ ಲೋಕದಲ್ಲಿ ಸಕ್ರಿಯ!

ಇದೀಗ ಪ್ರಿಯಾ ಅಧಿಕೃತವಾಗಿ ಮತ್ತೆ ಬಣ್ಣದ ಲೋಕದತ್ತ ಹೆಜ್ಜೆ ಇಟ್ಟಿದ್ದಾರೆ. ಜಾಹೀರಾತುಗಳು, ನಾಟಕಗಳು, ಸಿನಿಮಾಗಳು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿಯೂ ಸಕ್ರಿಯರಾಗಿರುವುದಾಗಿ ಅವರು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ, ತಮ್ಮ ಕೈಯಲ್ಲಿ ಕೆಲವು ಹೊಸ ಯೋಜನೆಗಳೂ ಇವೆ ಎಂಬ ಸುಳಿವನ್ನು ನೀಡಿದ್ದಾರೆ. ಆದರೆ ಆ ಪ್ರಾಜೆಕ್ಟ್‌ಗಳ ಬಗ್ಗೆ ಈಗಲೇ ಮಾಹಿತಿ ನೀಡದೆ, ಸರಿಯಾದ ಸಮಯ ಬಂದಾಗ ಎಲ್ಲವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ, ‘ಚಂದ್ರ ಚಕೋರಿ’ಯ ಸುಧಾ ಎಂದೇ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿರುವ ಪ್ರಿಯಾ, ಹಲವು ವರ್ಷಗಳ ವಿರಾಮದ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿರುವುದು ಹಳೆಯ ಸಿನಿಪ್ರೇಕ್ಷಕರಿಗೆ ಖುಷಿಯ ವಿಚಾರವಾಗಿದೆ. ಒಂದು ಕಾಲದಲ್ಲಿ ಸಿನಿಮಾದ ಹಾಡುಗಳ ಮೂಲಕ ಮನ ಗೆದ್ದಿದ್ದ ನಟಿ, ಇದೀಗ ಸೋಶಿಯಲ್ ಮೀಡಿಯಾ ಮೂಲಕ ಮತ್ತೆ ಅಭಿಮಾನಿಗಳೊಂದಿಗೆ ಸಂಪರ್ಕ ಬೆಳೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಹೊಸ ಸಿನಿಮಾಗಳು ಮತ್ತು ಯೋಜನೆಗಳು ಯಾವ ರೀತಿಯಲ್ಲಿ ಮೂಡಿಬರಲಿವೆ ಎಂಬ ಕುತೂಹಲ ಈಗಾಗಲೇ ಶುರುವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕುಟುಂಬ ಸಮೇತ ಕುಳಿತು ನೋಡುವ ಸಾಮಾಜಿಕ ಕಳಕಳಿಯ ಚಿತ್ರಗಳು ಬರಲಿ: ಹಾಸ್ಯ ಸಾಹಿತಿ ಬಿ. ಪ್ರಾಣೇಶ್
ಕೋಮಲ್‌ಗೆ ಡಬಲ್ ಶೇಡ್, ಮೇಘನಾ ಕೇರಳದ ರಾಣಿ: ಬಾರ್‌ನಲ್ಲಿ ಶುರುವಾಗಿ ದೇವರ ತಾಣದಲ್ಲಿ ಮುಗಿಯುವ ಕಥೆ!