ಕುಟುಂಬ ಸಮೇತ ಕುಳಿತು ನೋಡುವ ಸಾಮಾಜಿಕ ಕಳಕಳಿಯ ಚಿತ್ರಗಳು ಬರಲಿ: ಹಾಸ್ಯ ಸಾಹಿತಿ ಬಿ. ಪ್ರಾಣೇಶ್

Published : Sep 28, 2026, 06:40 PM IST
Kalyana Movie Title Launch

ಸಾರಾಂಶ

ಗಂಗಾವತಿಯ ಸಮೀಪದ ದಾಸನಾಳ ಗ್ರಾಮದಲ್ಲಿ ಸಿದ್ಧಾರ್ಥ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ‘ಕಲ್ಯಾಣ’ ಕನ್ನಡ ಸಿನಿಮಾದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಾಸ್ಯ ಸಾಹಿತಿ ಬಿ. ಪ್ರಾಣೇಶ್ ಭಾಗವಹಿಸಿದರು.

ಗಂಗಾವತಿ (ಸೆ.28): ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಕುಳಿತು ವೀಕ್ಷಿಸುವಂತೆಯೂ, ಸಮಾಜದ ಬಗ್ಗೆ ಕಾಳಜಿ ಮೂಡಿಸುವಂತೆಯೂ ಇರುವ ಉತ್ತಮ ಚಲನಚಿತ್ರಗಳು ಇನ್ನಷ್ಟು ನಿರ್ಮಾಣವಾಗಬೇಕು ಎಂದು ಗಂಗಾವತಿಯ ಹಾಸ್ಯ ಸಾಹಿತಿ ಬಿ. ಪ್ರಾಣೇಶ್ ಆಶಯ ವ್ಯಕ್ತಪಡಿಸಿದರು. ಸಮೀಪದ ದಾಸನಾಳ ಗ್ರಾಮದಲ್ಲಿ ಸಿದ್ಧಾರ್ಥ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ‘ಕಲ್ಯಾಣ’ ಚಲನಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಸಿನಿಮಾಗಳಿಗೂ ತಾವು ಚಿಕ್ಕವರಿದ್ದಾಗ ನೋಡುತ್ತಿದ್ದ ಸಿನಿಮಾಗಳಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಕಲಾವಿದರು ಹಾಗೂ ಚಿತ್ರತಂಡಗಳು ಚಿತ್ರರಂಗದಲ್ಲಿ ಬೆಳೆಯುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲೂ ಸಿದ್ಧಾರ್ಥ ಅವರು ‘ಕಲ್ಯಾಣ’ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವುದು ಹಾಗೂ ಕುಟುಂಬ ಸಮೇತ ಕುಳಿತು ನೋಡುವಂತಹ ಸಿನಿಮಾ ನೀಡಲು ಮುಂದಾಗಿರುವುದು ಸಂತೋಷದ ವಿಚಾರ ಎಂದರು. ನಮ್ಮ ಭಾಗದ ಕಲಾವಿದರು ಸೇರಿ ನಿರ್ಮಿಸಿರುವ ಈ ಸಿನಿಮಾವನ್ನು ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸಿ, ಚಿತ್ರತಂಡವನ್ನು ಪ್ರೋತ್ಸಾಹಿಸಿ ಎಂದು ಬಿ. ಪ್ರಾಣೇಶ್ ಮನವಿ ಮಾಡಿದರು.

ಚಿತ್ರಮಂದಿರಗಳು ಮುಚ್ಚುತ್ತಿರುವ ಕಾಲದಲ್ಲೂ ಸಿನಿಮಾ ನಿರ್ಮಾಣ ಶ್ಲಾಘನೀಯ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ರಾಮಮೂರ್ತಿ ನವಲಿ ಮಾತನಾಡಿ, ವಾಟ್ಸಪ್, ಫೇಸ್‌ಬುಕ್, ಯೂಟ್ಯೂಬ್‌ನಂತಹ ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚುತ್ತಿರುವುದರ ಜೊತೆಗೆ ಚಿತ್ರಮಂದಿರಗಳು ಕೂಡ ಮುಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಸಿದ್ಧಾರ್ಥ ಅವರು ಸಿನಿಮಾ ನಿರ್ಮಿಸಿರುವುದು ಮೆಚ್ಚುವಂತಹ ಸಂಗತಿ ಎಂದರು. ‘ಕಲ್ಯಾಣ’ ಸಿನಿಮಾವನ್ನು ನಮ್ಮ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಬೇಕು. ಸಿನಿಮಾ ಯಶಸ್ವಿಯಾಗಿ ಶತದಿನೋತ್ಸವ ಆಚರಿಸಲಿ ಎಂದು ಅವರು ಶುಭ ಹಾರೈಸಿದರು. ಇದೇ ವೇಳೆ ತಾವು ಕೂಡ ನಾಲ್ಕು ಚಿತ್ರಗಳಲ್ಲಿ ನಟಿಸಿರುವ ತಮ್ಮ ಅನುಭವವನ್ನು ಹಂಚಿಕೊಂಡರು.

ಸಿನಿಮಾ ನಿರ್ಮಾಣದ ಹಿಂದಿನ ಕಷ್ಟಗಳನ್ನು ನೆನೆದ ಸಿದ್ಧಾರ್ಥ

ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಸಿದ್ಧಾರ್ಥ ಪ್ರಾಸ್ತಾವಿಕವಾಗಿ ಮಾತನಾಡಿ, ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ ತಾವು ಎದುರಿಸಿದ ಸವಾಲುಗಳು ಹಾಗೂ ವಿವಿಧ ಹಂತಗಳಲ್ಲಿ ಸಹಕಾರ ನೀಡಿದ ಸ್ನೇಹಿತರು ಮತ್ತು ಹಿತೈಷಿಗಳನ್ನು ಸ್ಮರಿಸಿದರು. ಚಿತ್ರತಂಡಕ್ಕೆ ಇದೇ ರೀತಿಯ ಪ್ರೋತ್ಸಾಹ ಮತ್ತು ಬೆಂಬಲ ಮುಂದುವರಿದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಿನಿಮಾಗಳನ್ನು ನಾಡಿಗೆ ನೀಡುವುದಾಗಿ ಭರವಸೆ ನೀಡಿದರು.

ಚಿತ್ರತಂಡಕ್ಕೆ ಸನ್ಮಾನ

ಕಾರ್ಯಕ್ರಮದಲ್ಲಿ ಚಿತ್ರದ ನಾಯಕಿ ಪ್ರೀತಿ ಆಚಾರ್ಯ, ಸಂಗೀತ ನಿರ್ದೇಶಕ ಸಲೀಮ್ ರಾಜ್, ನೃತ್ಯ ನಿರ್ದೇಶಕ ಯಶವಂತ್ ಬಡಿ, ಸಹಾಯಕ ನಿರ್ದೇಶಕ ಅರ್ಜುನ್, ನಟಿ ಡಾ. ಸಿ. ಮಹಾಲಕ್ಷ್ಮಿ ಸೇರಿದಂತೆ ಚಿತ್ರತಂಡದ ಕಲಾವಿದರು ಹಾಗೂ ತಂತ್ರಜ್ಞರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸಂಗಮೇಶ್ ಸುಗ್ರೀವ, ದೇವಾನಂದ, ಹಿರೇಮಠದ ಜಡೆಸಿದ್ದ ಸ್ವಾಮಿ, ಗ್ರಾಮದ ಹಿರಿಯರಾದ ವೀರಭದ್ರಗೌಡ ಮಾಲಿಪಾಟೀಲ್, ಹನುಮಂತಗೌಡ ರಾಯನಗೌಡ, ನಾಗಪ್ಪ ದಾಸಾಪುರ, ಮಲ್ಲನಗೌಡ ಬುಡ್ಡನಗೌಡ್ರು, ದೇವಪ್ಪ ಪೂಜಾರಿ, ವಿರೂಪಾಕ್ಷಯ್ಯ ಸ್ವಾಮಿ ಹಿರೇಮಠ, ರಸುಲ್ ಸಾಬ್, ಮಹಮದ್ ಸಾಬ್ ದಳಪತಿ, ದುರ್ಗೇಶ್ ನಾಯಕ್, ಡಾ. ಮಲ್ಲಿಕಾರ್ಜುನ ಕೋರಿ, ಬಸನಗೌಡ ಬುಡ್ಡನಗೌಡ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೋಮಲ್‌ಗೆ ಡಬಲ್ ಶೇಡ್, ಮೇಘನಾ ಕೇರಳದ ರಾಣಿ: ಬಾರ್‌ನಲ್ಲಿ ಶುರುವಾಗಿ ದೇವರ ತಾಣದಲ್ಲಿ ಮುಗಿಯುವ ಕಥೆ!
'ಅವರೊಂದಿಗೆ ಹೋಲಿಸಿದರೆ ನನ್ನ ನಟನೆ ಏನೂ ಅಲ್ಲ': ತಂದೆಯ ಬಗ್ಗೆ ಕಿಚ್ಚನ ಮನದಾಳದ ಮಾತು