'ಕಲಾವಿದರು ಮನೆ ಕೆಲಸ ಮಾಡಬಾರದು': ಅಣ್ಣಾವ್ರ ಸಿನಿಮಾ ನೋಡಿ ಊರನ್ನೇ ಬಿಟ್ಟಿದ್ಯಾಕೆ ವೈಜನಾಥ್ ಬಿರಾದಾರ್

Published : Nov 14, 2026, 04:42 PM IST
Vaijanath Biradar

ಸಾರಾಂಶ

ಕನ್ನಡ ನಟ ವೈಜನಾಥ್ ಬಿರಾದಾರ್ ಅವರ ಸಿನಿಪಯಣಕ್ಕೆ ಡಾ. ರಾಜ್‌ಕುಮಾರ್ ಹೇಗೆ ಸ್ಫೂರ್ತಿಯಾದರು? 'ಬಂಗಾರದ ಮನುಷ್ಯ' ಸಿನಿಮಾ ನೋಡಿ ಊರು ಬಿಟ್ಟ ನಟ, ಅಣ್ಣಾವ್ರನ್ನು ಮದ್ರಾಸ್‌ನಲ್ಲಿ ಭೇಟಿಯಾದ ಸ್ವಾರಸ್ಯಕರ ಘಟನೆ ಇಲ್ಲಿದೆ.

ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಮಿಂಚಬೇಕು, ದೊಡ್ಡ ನಟನಾಗಬೇಕು ಎಂಬ ಕನಸು ಅದೆಷ್ಟೋ ಜನರಲ್ಲಿರುತ್ತದೆ. ಆದರೆ ಆ ಕನಸನ್ನು ನನಸು ಮಾಡಿಕೊಳ್ಳಲು ಊರು ಬಿಟ್ಟು, ಕೈಯಲ್ಲಿ ಯಾವುದೇ ಅವಕಾಶವಿಲ್ಲದೆ ಬೆಂಗಳೂರಿಗೆ ಬಂದವರ ಕಥೆಗಳು ಮಾತ್ರ ರೋಚಕ. ಅಂತಹವರ ಸಾಲಿನಲ್ಲಿ ಕನ್ನಡದ ಪ್ರತಿಭಾವಂತ ಪೋಷಕ ನಟ ವೈಜನಾಥ್ ಬಿರಾದಾರ್ ಕೂಡ ಒಬ್ಬರು. ಅವರ ಪಾಲಿಗೆ ಚಿತ್ರರಂಗದ ಬಾಗಿಲು ತೆರೆಯಲು ಪ್ರೇರಣೆಯಾಗಿದ್ದು ಬೇರಾರೂ ಅಲ್ಲ, ಕನ್ನಡಿಗರ ಆರಾಧ್ಯದೈವ ಡಾ. ರಾಜ್‌ಕುಮಾರ್!

ಹೌದು, ಇಂದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ವೈಜನಾಥ್ ಬಿರಾದಾರ್ ಅವರ ಸಿನಿಪಯಣದ ಹಿಂದೆ ಅಣ್ಣಾವ್ರ ಮೇಲಿನ ಅಭಿಮಾನ ಮತ್ತು ಒಂದು ಸಿನಿಮಾ ಹುಟ್ಟಿಸಿದ ಕನಸಿನ ಕಥೆಯಿದೆ. 'ಬಂಗಾರದ ಮನುಷ್ಯ' ಸಿನಿಮಾ ನೋಡಿದ ಬಳಿಕ ಊರು ಬಿಡುವ ನಿರ್ಧಾರ ಮಾಡಿದ್ದ ಅವರು, ನೇರವಾಗಿ ಮದ್ರಾಸ್‌ಗೆ ತೆರಳಿ ಡಾ. ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದರಂತೆ. ಈ ಸ್ವಾರಸ್ಯಕರ ಸಂಗತಿಯನ್ನು ಸ್ವತಃ ಬಿರಾದಾರ್ ಅವರೇ ಈ ಹಿಂದಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು.

ಅಣ್ಣಾವ್ರ ಸಿನಿಮಾ ನೋಡಿ ಶುರುವಾಗಿತ್ತು ಕನಸಿನ ಪಯಣ!

ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ವೈಜನಾಥ್ ಬಿರಾದಾರ್ ಅವರಿಗೆ ಡಾ. ರಾಜ್‌ಕುಮಾರ್ ಅವರೇ ದೊಡ್ಡ ಸ್ಫೂರ್ತಿಯಾಗಿದ್ದರು. ಅಣ್ಣಾವ್ರ ಸಿನಿಮಾಗಳನ್ನು ನೋಡುತ್ತಾ, ಅವರ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳನ್ನು ಓದುತ್ತಾ ತಾವೂ ಕಲಾವಿದರಾಗಬೇಕೆಂಬ ಹಂಬಲ ಬೆಳೆಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ಅವರು, "ನಾನು ರಂಗಭೂಮಿ ಮತ್ತು ಸಿನಿಮಾರಂಗಕ್ಕೆ ಬರಲು ಡಾ. ರಾಜ್‌ಕುಮಾರ್ ಅವರೇ ಕಾರಣ. 'ಬಂಗಾರದ ಮನುಷ್ಯ' ಸಿನಿಮಾ ನೋಡಿ ಊರು ಬಿಟ್ಟು ಬಂದೆ. ಅವರ ಬಗ್ಗೆ 'ಕಥಾನಾಯಕನ ಕಥೆ' ಎಂಬ ಅಂಕಣ ಪತ್ರಿಕೆಗಳಲ್ಲಿ ಬರುತ್ತಿತ್ತು. ಅದನ್ನೆಲ್ಲ ಓದಿ ರಂಗಭೂಮಿಗೆ ಸೇರಿಕೊಂಡೆ" ಎಂದು ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಅಣ್ಣಾವ್ರ ಮನೆಗೆ ಕೆಲಸಕ್ಕೆ ಸೇರಲು ಹೋಗಿದ್ದರಂತೆ ಬಿರಾದಾರ್!

ಕಲಾವಿದನಾಗಬೇಕೆಂಬ ಆಸೆಯಿಂದ ಮದ್ರಾಸ್‌ಗೆ ತೆರಳಿದ್ದ ವೈಜನಾಥ್ ಬಿರಾದಾರ್, ಅಲ್ಲಿ ಡಾ. ರಾಜ್‌ಕುಮಾರ್ ಅವರನ್ನು ಭೇಟಿಯಾಗುವ ಅವಕಾಶ ಪಡೆದುಕೊಂಡಿದ್ದರು. ಆಗ ಅಣ್ಣಾವ್ರು 'ತಾಯಿಗೆ ತಕ್ಕ ಮಗ' ಸಿನಿಮಾದಲ್ಲಿ ನಟಿಸುತ್ತಿದ್ದರಂತೆ. ತಾವು ಕರ್ನಾಟಕದಿಂದ ಬಂದಿರುವುದಾಗಿ ಪರಿಚಯಿಸಿಕೊಂಡ ಬಿರಾದಾರ್ ಅವರನ್ನು ಕಂಡು ರಾಜ್‌ಕುಮಾರ್ ಅವರು, 'ಏನ್ ಮಾಡ್ತೀರಿ ತಾವು?' ಎಂದು ವಿಚಾರಿಸಿದ್ದರಂತೆ. ಆಗ ಕೆಲಸ ಕೇಳಿದ ಬಿರಾದಾರ್, 'ಅಣ್ಣ, ನಿಮ್ಮ ಮನೆಯಲ್ಲಿ ಏನಾದರೂ ಕೆಲಸ ಮಾಡಿಕೊಂಡು ಇರುತ್ತೇನೆ' ಎಂದು ಹೇಳಿದ್ದರಂತೆ. ಅದಕ್ಕೆ ಅಣ್ಣಾವ್ರು ಕೇಳಿದ ಪ್ರಶ್ನೆ ಮಾತ್ರ ಅವರಿಗೆ ಇಂದಿಗೂ ನೆನಪಿದೆ. 'ನಿಮಗೆ ಕಾರು ಓಡಿಸಲು ಬರುತ್ತಾ?' ಎಂದು ರಾಜ್‌ಕುಮಾರ್ ಪ್ರಶ್ನಿಸಿದ್ದರಂತೆ. ಆದರೆ, ಬಿರಾದಾರ್ ತಾವು ರಂಗಭೂಮಿ ಕಲಾವಿದ ಎಂಬುದನ್ನು ತಿಳಿಸಿದಾಗ ಅಣ್ಣಾವ್ರ ಪ್ರತಿಕ್ರಿಯೆ ಬೇರೆಯೇ ಆಗಿತ್ತು.

'ಕಲಾವಿದರು ಪಾತ್ರ ಮಾಡಬೇಕು, ಮನೆ ಕೆಲಸವಲ್ಲ' ಎಂದಿದ್ದ ಅಣ್ಣಾವ್ರು!

ತಾವು ರಂಗಭೂಮಿಯಲ್ಲಿ ಅಭಿನಯಿಸುತ್ತಿರುವುದಾಗಿ ಬಿರಾದಾರ್ ಹೇಳಿದಾಗ, ಡಾ. ರಾಜ್‌ಕುಮಾರ್ ಅವರು ನೀಡಿದ ಸಲಹೆ ಅವರ ಜೀವನದ ಮರೆಯಲಾಗದ ಕ್ಷಣಗಳಲ್ಲಿ ಒಂದಾಯಿತು. 'ಕಲಾವಿದರು ಪಾತ್ರಗಳನ್ನು ಮಾಡಬೇಕು, ಮನೆಯಲ್ಲಿ ಕೆಲಸ ಮಾಡಬಾರದು' ಎಂದು ಅಣ್ಣಾವ್ರು ಹೇಳಿದ್ದರಂತೆ. ಅಷ್ಟೇ ಅಲ್ಲದೆ, ಅವಕಾಶ ಕೊಡಿಸುವಂತೆ ಕೇಳಿಕೊಂಡಾಗ ಕಂಠೀರವ ಸ್ಟುಡಿಯೋಗೆ ಬರುವಂತೆ ಸೂಚಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಅಲ್ಲಿ ಅಣ್ಣಾವ್ರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಹೀಗೆ ಅಂದು ಅವಕಾಶ ಸಿಗದೇ ಹೋದರೂ, ಅಣ್ಣಾವ್ರು ಹೇಳಿದ ಆ ಮಾತುಗಳು ಬಿರಾದಾರ್ ಅವರ ಮನಸ್ಸಿನಲ್ಲಿ ಉಳಿದುಕೊಂಡಿದ್ದವು.

ಕೊನೆಗೂ ಅಣ್ಣಾವ್ರ ಜೊತೆ ನಟಿಸುವ ಅವಕಾಶ!

ಕಾಲಚಕ್ರ ಉರುಳಿತು. ಅಂದು ಅವಕಾಶ ಕೇಳಿಕೊಂಡು ಅಣ್ಣಾವ್ರ ಮುಂದೆ ನಿಂತಿದ್ದ ವೈಜನಾಥ್ ಬಿರಾದಾರ್ ಅವರಿಗೆ, ಕೊನೆಗೂ ಅವರೊಂದಿಗೇ ತೆರೆ ಹಂಚಿಕೊಳ್ಳುವ ಅದೃಷ್ಟ ಒಲಿಯಿತು. ಡಾ. ರಾಜ್‌ಕುಮಾರ್ ಅಭಿನಯದ 'ಭಾಗ್ಯದ ಲಕ್ಷ್ಮೀ ಬಾರಮ್ಮ' ಸಿನಿಮಾದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಅಲ್ಲಿಂದ ಅವರ ಸಿನಿಪಯಣಕ್ಕೆ ಮತ್ತಷ್ಟು ವೇಗ ಸಿಕ್ಕಿತು. ಶಿವರಾಜ್‌ಕುಮಾರ್ ಅವರೊಂದಿಗೆ ಸುಮಾರು 8ರಿಂದ 10 ಸಿನಿಮಾಗಳಲ್ಲಿ, ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗೆ 'ಸ್ವಸ್ತಿಕ್' ಚಿತ್ರದಲ್ಲಿ ಅಭಿನಯಿಸಿದರು. ಪುನೀತ್ ರಾಜ್‌ಕುಮಾರ್ ಅವರೊಂದಿಗೂ 3ರಿಂದ 4 ಸಿನಿಮಾಗಳಲ್ಲಿ ನಟಿಸಿದರು.

ಅಲ್ಲದೇ ಅಣ್ಣಾವ್ರ ಮೊಮ್ಮಗ ಯುವ ನಟನೆಯ 'ಎಕ್ಕ' ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಈ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ತಮ್ಮ ಸಿನಿಪಯಣದ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಬಿರಾದಾರ್, ರಾಜ್‌ಕುಮಾರ್ ಕುಟುಂಬದ ಮೂರು ತಲೆಮಾರಿನ ನಟರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಒಂದು ಕಾಲದಲ್ಲಿ ಅಣ್ಣಾವ್ರ ಸಿನಿಮಾದಿಂದ ಪ್ರೇರಣೆ ಪಡೆದು ಊರು ಬಿಟ್ಟಿದ್ದ ಕಲಾವಿದ, ಇಂದು ಅದೇ ಕುಟುಂಬದ ಮೂರು ತಲೆಮಾರಿನ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಬಿರಾದಾರ್ ಅವರ ಪಾಲಿಗೆ ಇದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿರಲಿಕ್ಕಿಲ್ಲ. ಅವರ ಈ ಸಿನಿಪಯಣದ ಕಥೆ ಕನಸು ಕಾಣುವವರಿಗೆ ಮಾತ್ರವಲ್ಲ, ಆ ಕನಸಿನ ಬೆನ್ನತ್ತಿ ಹೊರಡುವ ಧೈರ್ಯ ಮಾಡುವವರಿಗೂ ಸ್ಫೂರ್ತಿಯಾಗುವಂಥದ್ದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಬಲ್ ಮೀನಿಂಗ್ ಎಂದವರ ಎದುರೇ 37 ವಾರ ಓಡಿ, 3 ರಾಜ್ಯ ಪ್ರಶಸ್ತಿ ಬಾಚಿ, ಬೇರೆ ಭಾಷೆಗಳಿಗೂ ರಿಮೇಕ್ ಆದ ಕಾಶಿನಾಥ್ ಸಿನಿಮಾ
'ನಾನು ಯಾವತ್ತೂ ರೈತ ಆದವನಲ್ಲ, ರೈತರ ಕೆಲಸ ಮಾಡಿದವನಲ್ಲ; ವಿಡಿಯೋ ಹಂಚಿಕೊಂಡು ಶ್ರೀರಾಮ್ ಹೇಳಿದ್ದೇನು?