ಬಾಂಬೆಯಲ್ಲಿ ಹಿಂದಿ ಚಿತ್ರ ಮಾಡಿ ಬರೋಬ್ಬರಿ ₹15 ಲಕ್ಷ ಕಳೆದುಕೊಂಡು, ಮೂರು ವರ್ಷ ಕೆಲಸವಿಲ್ಲದೆ ಕಂಗಾಲಾಗಿದ್ದಾಗ ನಿರ್ದೇಶಕ ಕಾಶಿನಾಥ್ ಕೈಗೆತ್ತಿಕೊಂಡ ಕ್ರಾಂತಿಕಾರಿ ಸಾಹಸವೇ ‘ಅನುಭವ’ (1984). ಸಮಾಜದಲ್ಲಿ ಯಾರೂ ಬಹಿರಂಗವಾಗಿ ಮಾತನಾಡಲು ಧೈರ್ಯಮಾಡದ ಮುಜುಗರದ ವಿಷಯವನ್ನು ಹಾಸ್ಯದ ಲೇಪನದಲ್ಲಿ ತೆರೆಮೇಲೆ ತಂದು ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ಚಿತ್ರವಿದು.
ಈ ಚಿತ್ರಕ್ಕೆ ಪ್ರೇರಣೆಯಾಗಿದ್ದು ಅವರ ದೂರದ ಸಂಬಂಧಿಕರ ಮನೆಯಲ್ಲಿ ನಡೆದ ಒಂದು ನೈಜ ಘಟನೆ. ಮದುವೆಯ ಮೊದಲ ರಾತ್ರಿ ಏನೂ ಅರಿಯದ ಹಳ್ಳಿ ಹುಡುಗಿ ಭಯದಿಂದ ಕಿರುಚಿಕೊಂಡು ಕೋಣೆಯಿಂದ ಹೊರಗೆ ಓಡಿಬಂದಿದ್ದಳು. ಇದರಿಂದ ರೊಚ್ಚಿಗೆದ್ದ ವರ "ಮದುವೆಯೇ ಕ್ಯಾನ್ಸಲ್" ಎಂದು ಹಠ ಹಿಡಿದಿದ್ದ. ಈ ಸನ್ನಿವೇಶವನ್ನು ಕಾಶಿನಾಥ್ ಅವರ ತಾಯಿ ವಿವರಿಸಿದಾಗ, "ಅತಿಯಾದ ಕಾತರದ ಯುವಕ ಮತ್ತು ಲೈಂ*ಗಿಕತೆಯ ಅರಿವೇ ಇಲ್ಲದ ಮುಗ್ಧ ಹುಡುಗಿ ಒಂದಾದಾಗ ಸೃಷ್ಟಿಯಾಗುವ ಕ್ಲೇಶವನ್ನು ಜನರಿಗೆ ಯಾಕೆ ಮುಟ್ಟಿಸಬಾರದು?" ಎಂಬ ಸ್ಪಾರ್ಕ್ ಅವರಲ್ಲಿ ಹೊಳೆಯಿತು. ಯೌವನದಲ್ಲಿ ಯುವಕರು ನಿರೋ*ಧ್ ಅಥವಾ ಲೈಂ*ಗಿಕತೆಯ ಪುಸ್ತಕಗಳನ್ನು ಖರೀದಿಸಲು ಪಡುತ್ತಿದ್ದ ತಿಣುಕಾಟವನ್ನು ಅತ್ಯಂತ ನೈಜವಾಗಿ ಕಥೆಯಲ್ಲಿ ಹೆಣೆದರು.
ಚಿತ್ರದ ಕಥೆ ಸಿದ್ಧವಾದಾಗ "ಹೀರೋ ಯಾರು?" ಎಂದು ವಿತರಕರು ಕೇಳಿದ್ದರು. "ನಾನೇ ಹೀರೋ" ಎಂದಾಗ ಹಲವರು ನಕ್ಕಿದ್ದರು. ಆದರೆ ಈ ಕಥೆಗೆ ಸ್ಟಾರ್ ನಟನಿಗಿಂತ ಪಕ್ಕದ ಮನೆಯ ಸಾಮಾನ್ಯ ಯುವಕನ ಮುಖವೇ ಬೇಕಾಗಿದ್ದರಿಂದ ತಾವೇ ನಟಿಸಲು ನಿರ್ಧರಿಸಿದರು. ಇತ್ತ ತಮ್ಮ ಮನೆಯೆದುರು ಚಡ್ಡಿ ಎಳೆದುಕೊಂಡು ಗಂಡುಬೀರಿಯಂತೆ ಓಡಾಡುತ್ತಿದ್ದ ಕೆಲಸದ ಹುಡುಗಿಯನ್ನು ನೋಡಿ ಪ್ರೇರಿತರಾಗಿ, ನಟಿ ಅಭಿನಯ ಅವರನ್ನು ಕರೆತಂದು ಆ ಪಾತ್ರಕ್ಕೆ ಪಳಗಿಸಿದರು.
"ನಾನು ಯಾವುದೇ ಡಬಲ್ ಮೀನಿಂಗ್ ಸಿನಿಮಾ ಮಾಡಲಿಲ್ಲ. ಸಮಾಜ ಮುಚ್ಚಿಟ್ಟುಕೊಂಡಿದ್ದ ಗುಪ್ತ ವಿಷಯಗಳಿಗೆ ಕನ್ನಡಿ ಹಿಡಿದೆ ಅಷ್ಟೇ. ಥಿಯೇಟರ್ನಲ್ಲಿ ಜನ ಸಿನಿಮಾ ನೋಡುತ್ತಿರಲಿಲ್ಲ, ತಮ್ಮನ್ನೇ ತಾವು ನೋಡಿಕೊಳ್ಳುತ್ತಿದ್ದರು," ಅಂದಿದ್ದರು ಕಾಶಿನಾಥ್. ಸಿನಿಮಾದಲ್ಲಿ ವಯಸ್ಸಾದ ವ್ಯಕ್ತಿ ನಿರೋ*ಧ್ ಕೇಳುವ ದೃಶ್ಯವನ್ನು ನೋಡಿ ಸೆನ್ಸಾರ್ ಅಧಿಕಾರಿಯೊಬ್ಬರು ಸಿಟ್ಟಿಗೆದ್ದು ತೊಂದರೆ ಕೊಟ್ಟಿದ್ದರಂತೆ. ಆದರೂ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತ ‘ಅನುಭವ’, ಬೆಂಗಳೂರಿನ ಕೈಲಾಶ್ ಚಿತ್ರಮಂದಿರದಲ್ಲೇ ಬರೋಬ್ಬರಿ 37 ವಾರಗಳ ಕಾಲ ಪ್ರದರ್ಶನ ಕಂಡು, ಮೂರು ರಾಜ್ಯ ಪ್ರಶಸ್ತಿಗಳೊಂದಿಗೆ ಸ್ಯಾಂಡಲ್ವುಡ್ನ ಸಾರ್ವಕಾಲಿಕ ಟ್ರೆಂಡ್ಸೆಟ್ಟರ್ ಆಯಿತು.
ಇತ್ತ ಸಿನಿಮಾರಂಗಕ್ಕೆ ಬಂದಾಗ ಅಭಿನಯ ಅವರಿಗೆ ನಟನೆಯ ಗಂಧ-ಗಾಳಿಯೂ ಗೊತ್ತಿರಲಿಲ್ಲ. ಅತ್ಯಂತ ಮುಗ್ಧ ಹುಡುಗಿಯಾಗಿದ್ದ ಆಕೆಯನ್ನು ಕಾಶಿನಾಥ್ ಆಡಿಷನ್ ಮಾಡಿ ಹೀರೋಯಿನ್ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಅಷ್ಟು ದೊಡ್ಡ ನಿರ್ದೇಶಕರು ತಮ್ಮ ಮಗಳಿಗೆ ನಾಯಕಿಯ ಅವಕಾಶ ಕೊಟ್ಟಿದ್ದನ್ನು ಕಂಡು ಅಭಿನಯ ಅವರ ತಾಯಿಗೆ ನಂಬಲು ಸಾಧ್ಯವಾಗಲಿಲ್ಲವಂತೆ! "ಅಯ್ಯೋ, ನನ್ನ ಮಗಳಿಗೆ ಕಾಶಿನಾಥ್ ಹೀರೋಯಿನ್ ಚಾನ್ಸ್ ಕೊಟ್ಟುಬಿಟ್ಟಿದ್ದಾರಲ್ಲ, ಸಿನಿಮಾ ಹೇಗಾಗುತ್ತೋ ಏನೋ.. ತಾಯಿ-ಮಗಳ ಮರ್ಯಾದೆ ಉಳಿಸಪ್ಪ" ಎಂದು ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಹರಕೆ ಹೊತ್ತಿದ್ದರಂತೆ!
‘ಅನುಭವ’ ಚಿತ್ರದ ಯಶಸ್ಸು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಲಿಲ್ಲ. ಇಡೀ ದೇಶಾದ್ಯಂತ ಈ ಕಥೆಗೆ ಭಾರೀ ಬೇಡಿಕೆ ಸೃಷ್ಟಿಯಾಯಿತು. ಹಿಂದಿಯಲ್ಲಿ ಖ್ಯಾತ ನಟ ಶೇಖರ್ ಸುಮನ್ ಹಾಗೂ ಪದ್ಮಿನಿ ಕೊಲ್ಹಾಪುರೆ ಅವರನ್ನು ಹಾಕಿ ‘ಅನುಭವ್’ ಹೆಸರಿನಲ್ಲಿ ಸ್ವತಃ ಕಾಶಿನಾಥ್ ಅವರೇ ನಿರ್ದೇಶಿಸಿ ಅಲ್ಲಿಯೂ ಸೈ ಎನಿಸಿಕೊಂಡರು. ತೆಲುಗಿನಲ್ಲೂ ‘ಆದ್ಯತ ಅನುಭವಂ’ ಎಂಬ ಹೆಸರಿನಲ್ಲಿ ಕಾಶಿನಾಥ್ ಸಾರಥ್ಯದಲ್ಲೇ ಚಿತ್ರ ರೀಮೇಕ್ ಆಗಿ ಶತದಿನೋತ್ಸವ ಆಚರಿಸಿತು. ಒಬ್ಬ ಹೊಸಬ ಹುಡುಗಿಯನ್ನು ಕರೆತಂದು, ನಟನೆಯ ಪಾಠ ಹೇಳಿಕೊಟ್ಟು, ರಾಜ್ಯ ಪ್ರಶಸ್ತಿ ಬರುವಂತೆ ರೂಪಿಸಿದ ಕಾಶಿನಾಥ್ ಅವರ ತಾಳ್ಮೆ ಮತ್ತು ಪ್ರತಿಭೆ ಇಂದಿಗೂ ಸ್ಯಾಂಡಲ್ವುಡ್ನಲ್ಲಿ ಅಚ್ಚಳಿಯದೆ ಉಳಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.