
‘ಪೋಸ್ಟ್ ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದೇನೆ. ಎಲ್ಲರೂ ನಾಳೆ ನಾಡಿದ್ದು ಮುಂದಿನ ವರ್ಷ ಅಂತ ನೋಡುತ್ತಿದ್ದರೆ ನಾನು ಹತ್ತು ವರ್ಷಗಳ ನಂತರ ಏನಾಗಬಹುದು ಅಂತ ಆಲೋಚನೆ ಮಾಡುತ್ತಿದ್ದೇನೆ. ಈ ಕೋವಿಡ್ ಅನ್ನೋದು ಎಲ್ಲರ ಬದುಕನ್ನೂ ಪೂರ್ತಿ ಬದಲಾಯಿಸಿದೆ. ಇದು ಸರಿಹೋಗುತ್ತೆ, ಮತ್ತೆ ಮೊದಲಿನಂತೆ ಆಗುತ್ತೆ ಅನ್ನುವ ನಂಬಿಕೆ ನನಗಂತೂ ಇಲ್ಲ. ಆದರೂ ನನ್ನ ಕೈಲಿ ಸುಮಾರು ಸಿನಿಮಾಗಳಿವೆ. ನಿರ್ಮಾಪಕರ ಉತ್ಸಾಹ ನೋಡಿದಾಗ ಸಂತೋಷವಾಗುತ್ತೆ. ನಾವೇನೋ ಸಿನಿಮಾ ಮಾಡಬಹುದು. ಅದನ್ನು ನೋಡುವ ರೀತಿಯಲ್ಲಿ ಖಂಡಿತಾ ಬದಲಾವಣೆ ಆಗುತ್ತದೆ. ಚಿತ್ರಮಂದಿರಗಳು ತೆರೆಯುವುದಕ್ಕೇ ನಾನೂ, ಎಲ್ಲರಂತೆ ಕಾಯುತ್ತಿದ್ದೇನೆ’ ಅಂದರು ಉಪೇಂದ್ರ. ಅವರೀಗ ಮತ್ತೆ ಮೈ ಹುರಿಗಟ್ಟಿಸಿಕೊಳ್ಳುವ ಕಾರ್ಯದಲ್ಲಿದ್ದಾರೆ. ಜಿಮ್ ಚಟುವಟಿಕೆ ಶುರುವಾಗಿದೆ. ಅವರಿಗೆ ಸಾಥ್ ಕೊಡುವುದಕ್ಕೆ ನಿರಂಜನ್ ಕೂಡ ಜತೆಗಿದ್ದಾನೆ.
ಉಪೇಂದ್ರ ಬಳಿ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳೇ ಸಿಗುತ್ತವೆ. ನೀವೆಂಥ ಸಿನಿಮಾ ನೋಡುತ್ತೀರಿ ಅಂತ ಅವರು ಸಂದರ್ಶನ ಮಾಡಲಿಕ್ಕೆ ಬಂದವರನ್ನೇ ಕೇಳುತ್ತಾರೆ. ಅದೇ ನನ್ನ ಮುಖ್ಯವಾದ ಸುದ್ದಿಮೂಲ. ಇದನ್ನೆಲ್ಲ ಇಟ್ಟುಕೊಂಡೇ ನಾನು ಸಿನಿಮಾ ಮಾಡಬೇಕು. ಯಾರ ಆಸಕ್ತಿ ಏನು ಅಂತ ತಿಳಿದುಕೊಳ್ಳುವುದು ಬಹಳ ಮುಖ್ಯ. ಸ್ಟೀವನ್ ಸ್ಪಿಲ್‌ಬರ್ಗ್ ನಿರ್ದೇಶನದ ರೆಡಿ ಪ್ಲೇಯರ್ 1 ಎಂಬ ಸಿನಿಮಾದ ಮುಖ್ಯಪಾತ್ರವಾದ ಒಬ್ಬ ಬಾಲಕ, ಈ ಲೋಕವನ್ನೇ ಮರೆತು, ತಾನು ಬದುಕುತ್ತಿರುವುದೇ ವರ್ಚುಯಲ್ ಜಗತ್ತಿನಲ್ಲಿ ಅಂದುಕೊಳ್ಳುತ್ತಾನೆ. ಅವನಿಗೆ ಅದೇ ಅದ್ಭುತ ಅನ್ನಿಸುತ್ತದೆ. ಟೊಣಪನಾಗಿರುವ ಆ ಹುಡುಗ ವರ್ಚುಯಲ್ ಜಗತ್ತಿನಲ್ಲಿ ತೆಳ್ಳಗಿನ ಚೆಂದದ ತರುಣನಾಗಿ ಮಾರ್ಪಾಡಾಗುತ್ತಾನೆ. ಅಲ್ಲಿಯೇ ಅವನ ಪ್ರೇಮ, ವಿರಹ, ಸಾಹಸದ ಕತೆಗಳು ನಡೆಯುತ್ತವೆ. ಈ ಕೋವಿಡ್ ಅವಧಿಯಲ್ಲಿ ನಮ್ಮದೂ ಅದೇ ಕತೆಯಾಗಿದೆ. ಅದೇ ಸರಿ ಅಂತಲೂ ಎಷ್ಟೋ ಸಲ ಅನ್ನಿಸುತ್ತದೆ’ ಎಂದು ಉಪೇಂದ್ರ ತನ್ನ ಥಿಯರಿ ಮುಂದಿಡುತ್ತಾ ಹೋಗುತ್ತಾರೆ.
‘ನಾನೊಂದು ಕಾಲೇಜಿಗೆ ಹೋಗಿ, ನೀವೆಲ್ಲ ಓದಬೇಡಿ ಅಂತ ಭಾಷಣ ಮಾಡಿದೆ. ಪ್ರತಿವರ್ಷವೂ ಅದೇ ಕಟ್ಟಡ ಕಟ್ಟುವ ಆರ್ಕಿಟೆಕ್ಚರ್ ಕಲಿಸೋದರಲ್ಲಿ ಅರ್ಥವೇನಿದೆ. ಕಟ್ಟಡ ಕಟ್ಟೋದು ಹೇಗೆಂದು ಗೊತ್ತಾಗಿದೆ. ನಾವೀಗ ಅದಕ್ಕಿಂತ ಹೆಚ್ಚಿನದೇನನ್ನೋ ಕಲಿಸಬೇಕು. ಅದು ಬಿಟ್ಟು ದಂಧೆಯೇ ಆಗಿರುವ ಶಿಕ್ಷಣ ಅದದೇ ಪಠ್ಯ ಕಲಿಸುತ್ತಿದೆ. ಮಕ್ಕಳಿಗೆ ಶಾಲೆ ಬೇಕಾಗಿಯೇ ಇಲ್ಲ. ಕಂಪ್ಯೂಟರ್ ಪರದೆಯಲ್ಲಿ ಅದ್ಭುತವಾಗಿ ಪಾಠ ಕಲಿಸಬಹುದು. ಮೇಷ್ಟು್ರ ಬಳಪದಲ್ಲಿ ಗಿಡದ ಎಲೆಯ ಚಿತ್ರ ಬರೆದು ತೋರಿಸುವ ಬದಲು, ಡಿಜಿಟಲ್ ಜಗತ್ತಿನಲ್ಲಿ ಮರದ ಎಲೆಯನ್ನೂ ಅದರ ಒಳಗನ್ನೂ ಇನ್ನೂ ಚೆಂದವಾಗಿ ತೋರಿಸಬಹುದು. ಅದು ಬಿಟ್ಟು ನಾವು ಶಾಲೆಯ ಪರಿಕಲ್ಪನೆಯಲ್ಲೇ ಇದ್ದೇವೆ’ ಅಂತ ಉಪೇಂದ್ರ ಮುನ್ನೂರು ವರ್ಷ ಮುಂದಕ್ಕೆ ಹೋಗುತ್ತಾರೆ.
‘ಅಯ್ಯು’ ಚಿತ್ರದ ಕತೆಯನ್ನು ಉಪೇಂದ್ರ ಬಹಳ ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಅವರ ಮಿತ್ರರೂ ಹಳೆಯ ಸಹವಾಸಿಗಳೂ ಕತೆಯಲ್ಲಿ ಪಾಲುದಾರರು. ಸಾಮಾನ್ಯವಾಗಿ ಕತೆ ಬರೆಯಲು ಹೊರಗೆ ಹೋಗುವ ಉಪೇಂದ್ರ, ಈ ಚಿತ್ರದ ಕತೆಯನ್ನೂ ಊರಾಚೆಗಿನ ಯಾವುದೋ ಊರಲ್ಲಿ ಕೂತು ಬರೆದಿದ್ದಾರೆ. ಮತ್ತೊಂದು ಸುತ್ತಿನ ಕತೆಗಾಗಿ ಮತ್ತೆ ಹೋಗುವವರಿದ್ದಾರೆ.
"
ಉಪೇಂದ್ರ ಹೇಳುವುದಿಷ್ಟು: ಈಗ ಪರಿಸ್ಥಿತಿ ಕಷ್ಟವಿದೆ. ಹೊಸ ಮಾಧ್ಯಮಗಳಿವೆ ನಿಜ. ವೆಬ್ ಸೀರೀಸ್ ಮಾಡಬಹುದು. ಓಟಿಟಿಗೆ ಸೀರಿಯಲ್ ಮಾಡಬಹುದು. ಆದರೆ ಈಗೇನು ಮಾಡಿದರೂ ಮೂವತ್ತು ವರ್ಷದ ಮೊದಲು ಹಾಕುತ್ತಿದ್ದ ಶ್ರಮದ ಹತ್ತು ಪಟ್ಟು ಶ್ರಮ ಹಾಕಬೇಕು. ಆಗಲೇ ತಿರುಗಿ ನೋಡುವಂಥ ಸಿನಿಮಾ ಮಾಡಬಹುದು. ಎಲ್ಲ ಕಡೆಯೂ ಎಲ್ಲವೂ ಸಿಗುತ್ತಿರುವಾಗ ನಿಮ್ಮದೇ ಸಿನಿಮಾ ಯಾಕೆ ನೋಡಬೇಕು ಅನ್ನುವ ಪ್ರಶ್ನೆಗೆ ನಿಮ್ಮದೇ ಆದ ಉತ್ತರ ಕೊಡುವುದು ಕಷ್ಟವಿದೆ.
ಕೋವಿಡ್ ಅವಧಿಯಲ್ಲಿ ಉಪೇಂದ್ರ ಮಾಡಿದ ಒಳ್ಳೆಯ ಕೆಲಸ ಅಂದರೆ ಫುಡ್ ಕಿಟ್ ಹಂಚಿದ್ದು. ‘ಇಲ್ಲಿ ಸಣ್ಣದೊಂದು ನೆರವು ನೀಡಿದರೆ ಮುಖ್ಯಮಂತ್ರಿ ಆಗಿಬಿಡಬಹುದು ಎಂಬ ಭ್ರಮೆ ಇದೆ. ಆದರೆ ನನಗೆ ಅಂಥದ್ದೇನಿಲ್ಲ. ನಾನು ನಿಜವಾಗಿಯೂ ಪ್ರೀತಿಯಿಂದ ಕೊಟ್ಟದ್ದು. ಅದಕ್ಕೂ ಪ್ರಜಾಕೀಯಕ್ಕೂ ಸಂಬಂಧ ಇಲ್ಲ. ಅದು ಸುದ್ದಿಯಾಗೋದೂ ನನಗೆ ಇಷ್ಟವಿರಲಿಲ್ಲ. ಸುದ್ದಿ ಆಯಿತು ಅಷ್ಟೇ’ ಅಂತ ಉಪೇಂದ್ರ ಮತ್ತೆ ನಾಳೆಗಳ ಕಡೆ ಮಾತು ಹೊರಳಿಸಿದರು.
ನಾಳೆಯ ಮಾತು ನಾಳೆಗೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.