Happy Birthday Shivarajkumar: ಹ್ಯಾಟ್ರಿಕ್‌ ಹೀರೋ @ 60

Published : Jul 12, 2022, 09:39 AM IST
Happy Birthday Shivarajkumar: ಹ್ಯಾಟ್ರಿಕ್‌ ಹೀರೋ @ 60

ಸಾರಾಂಶ

ಅವಶ್ಯ ಬಿದ್ದಾಗ ಹಿರಿಯನಂತೆ ನಿಂತು ದಾರಿ ತೋರುವ, ಕಿರಿಯರ ಜೊತೆ ಎನಗಿಂತ ಕಿರಿಯರಿಲ್ಲ ಎಂಬಂತೆ ಇರುವ ಶಿವರಾಜ್‌ಕುಮಾರ್ ಹುಟ್ಟುಹಬ್ಬ ಇಂದು. 60 ಸಂವತ್ಸರ ಮುಗಿಸಿ 61ನೇ ವರ್ಷಕ್ಕೆ ಕಾಲಿಡುತ್ತಿರುವ ಮಾಂತ್ರಿಕ ನಟನಿಗೆ ಹುಟ್ಟು ಹಬ್ಬದ ಶುಭಾಶಯ. 

ಆನಂದ್‌ ಚಿತ್ರದ ಮೂಲಕ ಶಿವರಾಜ್‌ಕುಮಾರ್‌ ಚಿತ್ರರಂಗ ಪ್ರವೇಶ ಮಾಡುತ್ತಾರೆ ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಘೋಷಿಸಿದಾಗ ಅದು ಚಿತ್ರರಂಗದ ಪಾಲಿಗೆ ಬ್ರೇಕಿಂಗ್‌ ನ್ಯೂಸ್‌ ಆಗಿತ್ತು. ಅಲ್ಲಿಯ ತನಕ ಚೆನ್ನೈಯಲ್ಲಿದ್ದ ಶಿವರಾಜ್‌ಕುಮಾರ್‌ ಬಗ್ಗೆ ರಾಜ್‌ ಕುಟುಂಬ ಎಂದೂ ಮಾತಾಡಿರಲಿಲ್ಲ. ಮಕ್ಕಳನ್ನು ಚಿತ್ರರಂಗಕ್ಕೆ ಕರೆತರುವ ಕುರಿತು ರಾಜ್‌ಕುಮಾರ್‌ ಆಗಲೀ ಪಾರ್ವತಮ್ಮನವರಾಗಲೀ ಏನನ್ನೂ ಹೇಳಿರಲಿಲ್ಲ. ಹೀಗಾಗಿ ಸಿಂಗೀತಂ ಶ್ರೀನಿವಾಸರಾವ್‌ ನಿರ್ದೇಶನದ ಆನಂದ್‌ ಚಿತ್ರದ ಮೂಲಕ ಶಿವರಾಜ್‌ಕುಮಾರ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬುದು ಆ ಕಾಲಕ್ಕೆ ದೊಡ್ಡ ಸುದ್ದಿಯೇ ಆಗಿತ್ತು.

ಅಲ್ಲಿಯ ತನಕ ಶಿವರಾಜ್‌ಕುಮಾರ್‌ ಕುರಿತು ಪತ್ರಕರ್ತರಿಗಾಗಲೀ, ಅಭಿಮಾನಿಗಳಿಗಾಗಲೀ ಅಷ್ಟೇನೂ ಗೊತ್ತಿರಲಿಲ್ಲ. ಅವರಿಗೆ ಕನ್ನಡ ಬರುತ್ತದೋ ಇಲ್ಲವೋ ಎಂಬೊಂದು ಚರ್ಚೆ ಆ ಕಾಲಕ್ಕೆ ಚಾಲ್ತಿಯಲ್ಲಿತ್ತು. ರಾಜ್‌ಕುಟುಂಬದ ಕೂಸಾಗಿದ್ದರಿಂದ ಒಂದೆರಡು ಸಿನಿಮಾ ಮಾಡಬಹುದು ಎಂಬ ಭಾವನೆ ಆ ಸಂದರ್ಭದಲ್ಲಿ ಗಾಂಧೀನಗರಕ್ಕಿತ್ತೇ ಹೊರತು, ಶಿವಣ್ಣ ಈಗ ತಾವು ಏರಿರುವ ಮಟ್ಟಕ್ಕೆ ಏರುತ್ತಾರೆ ಎಂಬ ಕಲ್ಪನೆಯಂತೂ ಯಾರಿಗೂ ಇದ್ದಿರಲಿಕ್ಕಿಲ್ಲ.

ಎಲ್ಲ ಮಾತುಗಳಿಗೆ ಕೊನೆ ಹಾಡುವಂತೆ, ಶಿವರಾಜ್‌ಕುಮಾರ್‌ ನಟಿಸಿದ ಮೂರು ಚಿತ್ರಗಳು ಸೂಪರ್‌ಹಿಟ್‌ ಆದವು. ಆನಂದ್‌, ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ- ದಾಖಲೆ ಬರೆಯಿತು. ಪಾರ್ವತಮ್ಮನವರ ಆಯ್ಕೆಯ ಬಗ್ಗೆ ಚಿತ್ರರಂಗ ಬೆರಗಾಯಿತು. ಶಿವರಾಜ್‌ಕುಮಾರ್‌ ತನ್ನ ನೃತ್ಯಕೌಶಲ, ಅಭಿನಯ ಮತ್ತು ಚುರುಕುತನದಿಂದ ಎಲ್ಲರ ಮನಗೆದ್ದರು. ಮೂರು ಚಿತ್ರಗಳ ನಂತರ ಅವರು ತಿರುಗಿನೋಡುವ ಪರಿಸ್ಥಿತಿ ಬರಲಿಲ್ಲ.

ಶಿವಣ್ಣನ ಅಸಲಿ ಹೆಸರೇನು, ಅಣ್ಣಾವ್ರು ಇಟ್ಟ ಹೆಸರನ್ನು ಬದಲಾಯಿಸಿದ್ದೇಕೆ?

ಶಿವಣ್ಣ ಚಿತ್ರರಂಗಕ್ಕೆ ಕಾಲಿಟ್ಟದ್ದು ತಡವಾಗಿಯೇ. ಮೊದಲ ಚಿತ್ರ ಬಿಡುಗಡೆ ಆದಾಗ ಅವರಿಗೆ 24 ವರ್ಷ. ಈಗ ಅರವತ್ತರ ಹೊಸಿಲು ದಾಟಿರುವ ಶಿವಣ್ಣ 36 ವರ್ಷಗಳ ಸುದೀರ್ಘ ಇನ್ನಿಂಗ್‌್ಸ ಆಡಿದವರು. ಏಳುಬೀಳುಗಳನ್ನು ಕಂಡವರು. ಯಾವತ್ತೂ ಸೋತಾಗ ಕುಗ್ಗಿದವರಲ್ಲ, ಗೆದ್ದಾಗ ಹಿಗ್ಗಿದವರೂ ಅಲ್ಲ. ಸತತವಾಗಿ ಅವರ ಆರೇಳು ಸಿನಿಮಾಗಳು ಹೇಳಿಕೊಳ್ಳುವಷ್ಟುಚೆನ್ನಾಗಿ ಗಳಿಕೆ ಮಾಡದೇ ಇದ್ದಾಗಲೂ ನಿರ್ಮಾಪಕರು ಶಿವಣ್ಣ ಬೇಕು ಅಂತ ಕಾದು ಕುಳಿತರು. ಈಗ, ಅರವತ್ತರ ಹರೆಯದಲ್ಲಿ, ಅವರ ಕೈಯಲ್ಲಿರುವ ಸಿನಿಮಾಗಳ ಸಂಖ್ಯೆ 8. ಇವು ಅಧಿಕೃತವಾಗಿ ಘೋಷಣೆ ಆದಂಥವು. ಮಾತುಕತೆಯ ಹಂತದಲ್ಲಿ ಇನ್ನೂ ಏಳೆಂಟು ಸಿನಿಮಾಗಳಿದ್ದರೂ ಇರಬಹುದು.

ಅಪ್ಪನ ಆಸೆಯಂತೆ ಗಾಜನೂರು ಜಮೀನಿನಲ್ಲಿ ಹಣ್ಣಿನ ಗಿಡ ನೆಡಲು ಶಿವಣ್ಣ ತಯಾರಿ..!

ಶಿವಣ್ಣನಿಗೆ ವಯಸ್ಸಾಗುವುದಿಲ್ಲ ಅಂತ ಅವರ ಅಭಿಮಾನಿಗಳು ಪ್ರೀತಿಯಿಂದ ಹೇಳುತ್ತಿರುತ್ತಾರೆ. ಸದಾ ಬಿಜಿಯಾಗಿರುವ, ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಅವರಿಗೆ ವಯಸ್ಸಾಗಲು ಪುರುಸೊತ್ತಿಲ್ಲ. 36ರಲ್ಲಿ ಹೇಗಿದ್ದರೋ ಈಗಲೂ ಅವರು ಹಾಗೆಯೇ ಇದ್ದಾರೆ. ಅದೇ ಥರ ಕುಣಿಯುತ್ತಾರೆ, ಜಿಗಿಯುತ್ತಾರೆ, ಹೊಡೆದಾಟದ ಸನ್ನಿವೇಶದಲ್ಲಿ ಭಾಗವಹಿಸುತ್ತಾರೆ. ನಿರ್ದೇಶಕರ ಜತೆ ಗಂಟೆಗಟ್ಟಲೆ ಮಾತುಕತೆ ನಡೆಸುತ್ತಾರೆ. ಅರ್ಧ ಟೀ ಕುಡಿಯುತ್ತಾ ಇಡೀ ದಿನ ಕಳೆಯುತ್ತಾರೆ.

ಅನೇಕ ಪ್ರಥಮಗಳ ನಟ ಅವರು. ಒಂದು ದಿನ ಇದ್ದಕ್ಕಿದ್ದಂತೆ ತಾನಿನ್ನು ರೀಮೇಕ್‌ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿದ ಶಿವಣ್ಣ, ಹೊಸ ಕತೆಗಳನ್ನು ಹುಡುಕಿಕೊಂಡು ಹೊರಟರು. ಡಬ್ಬಿಂಗ್‌ ಬರುತ್ತಿದೆ ಅಂತ ಗೊತ್ತಾದಾಗ ಅದನ್ನು ಎದುರಿಸಿದರು. ಟೀಕೆಗಳಿಗೆ ಅಂಜದೇ ಡಬ್ಬಿಂಗ್‌ ಪರ ನಿಂತವರ ವಿರುದ್ಧ ಮಾತಾಡಿದರು. ಚಿತ್ರೋದ್ಯಮ ಕಷ್ಟಕ್ಕೆ ಸಿಲುಕಿದಾಗ ತಾವೇ ಮುಂದೆ ನಿಂತು ಹೋರಾಟ ಮಾಡಿದರು. ಹೊಸಬರು ಬಂದಾಗ ಕಾಲ್‌ಶೀಟ್‌ ಕೊಟ್ಟು ಕೈ ಹಿಡಿದರು. ಹಿರಿಯ ನಿರ್ದೇಶಕರಿಗೂ ಅವಕಾಶ ಕೊಟ್ಟರು. ಕನ್ನಡದ ನಾಯಕಿಯರಿಗೆ, ಗಾಯಕರಿಗೆ ಆದ್ಯತೆ ಇರಲಿ ಎಂದರು.

ಶಿವಣ್ಣ ಸಿನಿಮಾಗಳ ಪಟ್ಟಿನೋಡಿದರೆ ಯಾರಿಗೇ ಆದರೂ ಆಶ್ಚರ್ಯವಾಗುತ್ತದೆ. ಚಿತ್ರರಂಗದ ಅನೇಕ ದಾಖಲೆಗಳು ಇನ್ನೂ ಅವರ ಹೆಸರಲ್ಲೇ ಇವೆ. ಮೊದಲ ಮೂರು ಸಿನಿಮಾಗಳು ಕೌಟುಂಬಿಕ ಚಿತ್ರಗಳು. ಅಭಿನಯಕ್ಕೆ ಹೆಚ್ಚು ಅವಕಾಶ ಇದ್ದಂಥ ಸಿನಿಮಾಗಳು. ಅದನ್ನು ಸವಾಲಾಗಿ ಸ್ವೀಕರಿಸಿ ಶಿವಣ್ಣ ಗೆದ್ದರು. ಸಾಮಾನ್ಯವಾಗಿ ಮೊದಲ ಸಿನಿಮಾ ಮಾಸ್‌ ಆಗಿರಬೇಕು, ಹೊಡೆದಾಟ ತುಂಬಿರಬೇಕು ಎಂಬ ಸಂಪ್ರದಾಯ ಮುರಿದರು. ಎಂಥದ್ದೇ ಪಾತ್ರ ಕೊಟ್ಟರೂ ಸೈ ಅಂದರು. ಓಂ, ಜನುಮದ ಜೋಡಿ, ಎಕೆ 47, ನಮ್ಮೂರ ಮಂದಾರ ಹೂವೆ, ಪ್ರೀತ್ಸೆ ಮುಂತಾದ ಚಿತ್ರಗಳ ಜತೆಗೇ ಭೂಮಿತಾಯಿಯ ಚೊಚ್ಚಲ ಮಗದಂಥ ಚಿತ್ರಗಳಲ್ಲೂ ನಟಿಸಿದರು. ಅದೇ ಹೊತ್ತಿಗೆ ನಂಜುಂಡಿ, ಚಿಗುರಿದ ಕನಸು, ಜನುಮದಾತ- ಮುಂತಾದ ಚಿತ್ರಗಳನ್ನೂ ಒಪ್ಪಿಕೊಂಡರು.

ಶಿವರಾಜ್‌ಕುಮಾರ್‌ ಅರವತ್ತರ ಸಂಭ್ರಮವನ್ನು ಚಿತ್ರರಂಗ ನಿಜಕ್ಕೂ ಅದ್ದೂರಿಯಾಗಿ ಆಚರಿಸಬೇಕು. ಯಾಕೆಂದರೆ ಚಿತ್ರರಂಗಕ್ಕೆ ಅವರ ಕೊಡುಗೆ ಸಾಕಷ್ಟಿದೆ. ಅವರು ನಟಿಸಿರುವ ನೂರಾರು ಚಿತ್ರಗಳು ಹತ್ತಾರು ನಿರ್ಮಾಪಕರನ್ನು ಹುಟ್ಟುಹಾಕಿವೆ. ಹೊಸ ನಿರ್ದೇಶಕರ ಹುಟ್ಟಿಗೆ ಕಾರಣವಾಗಿವೆ.

ಅರವತ್ತು ಮರಳಿ ಅರಳುವ ಹೊತ್ತು. ಶಿವಣ್ಣ ನಟರಾಗಿ ಮಾಗುತ್ತಿರುವುದಕ್ಕೆ ಅವರ ಇತ್ತೀಚಿನ ಚಿತ್ರಗಳಾದ ಮಫ್ತಿ, ದ್ರೋಣ, ಕವಚ ಮುಂತಾದ ಚಿತ್ರಗಳೇ ಸಾಕ್ಷಿ. ಇದೀಗ ಅವರು ರಾಜ್‌ಕುಟುಂಬದ ಅಭಿಮಾನಿ ರಜನೀಕಾಂತ್‌ ನಟನೆಯ ಜೈಲರ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ ನಟನಾಬದುಕು ವಿಸ್ತಾರಗೊಳ್ಳುತ್ತಿರುವುದಕ್ಕೆ ಸಾಕ್ಷಿ.

ಶಿವರಾಜ್‌ಕುಮಾರ್‌ ಅವರಿಗೆ ಕನ್ನಡಪ್ರಭದ ಹಾರ್ದಿಕ ಶುಭಾಶಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ