ನಟ ರಕ್ಷಿತ್ ಶೆಟ್ಟಿಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ‘777 ಚಾರ್ಲಿ’ ಚಿತ್ರದ ಹೊಸ ವಿಡಿಯೋ ಹಾಗೂ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಪೋಸ್ಟರ್ ಬಿಡುಗಡೆ ಆಗುತ್ತಿದೆ. ಈ ಬಾರಿ ಸರಳವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸಿಂಪಲ್ ಸ್ಟಾರ್ ಮಾತುಗಳು ಇಲ್ಲಿವೆ.
ನಟ ರಕ್ಷಿತ್ ಶೆಟ್ಟಿಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ‘777 ಚಾರ್ಲಿ’ ಚಿತ್ರದ ಹೊಸ ವಿಡಿಯೋ ಹಾಗೂ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಪೋಸ್ಟರ್ ಬಿಡುಗಡೆ ಆಗುತ್ತಿದೆ. ಈ ಬಾರಿ ಸರಳವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸಿಂಪಲ್ ಸ್ಟಾರ್ ಮಾತುಗಳು ಇಲ್ಲಿವೆ.
ಪ್ರತಿ ವರ್ಷ ಹುಟ್ಟು ಹಬ್ಬ ಅಂದಾಗ ನೆನಪಾಗುವುದೇನು?
ನನ್ನ ಶಾಲೆಯ ದಿನಗಳು. ಹುಟ್ಟು ಹಬ್ಬಕ್ಕೆ ಅಂತ ಮನೆಯಲ್ಲಿ ಕೊಡಿಸುತ್ತಿದ್ದ ಚಾಕಲೆಟ್‌ಗಳನ್ನು ಪ್ರತಿ ಕ್ಲಾಸ್ ರೂಮಿಗೆ ಹಂಚುವುದು. ಹಾಗೆ ಶಾಲೆಯ ಶಿಕ್ಷಕರಿಗೆ ಕೊಟ್ಟಾಗ ಅವರು ಮೆಚ್ಚಿ ಮಾತಾಡುತ್ತಿದ್ದು. ಇದೆಲ್ಲವೂ ಸಿಹಿಯಾದ ನೆನಪುಗಳೇ. ಬಹುಶಃ ಎಲ್ಲರ ಜೀವನದಲ್ಲೂ ಇಂಥ ನೆನಪುಗಳು ಇರುತ್ತವೆ.
ಇಷ್ಟು ವರ್ಷಗಳಲ್ಲಿ ನೀವು ಕಲಿತಿದ್ದು ಏನು?
ಇಂತಿಷ್ಟುವರ್ಷಗಳಲ್ಲಿ, ಇಂತಿಷ್ಟುಕಲಿತುಬಿಟ್ಟಿದ್ದೇನೆ ಎಂದು ಯಾವತ್ತೂ ಅಂದುಕೊಂಡಿಲ್ಲ. ಯಾಕೆಂದರೆ ನನ್ನ ಪಯಣವೇ ಒಂದು ಕಲಿಕೆ. ಹೀಗಾಗಿ ಜರ್ನಿ ಸಾಗುವ ತನಕ ಕಲಿಯುವುದು ಇರುತ್ತದೆ. ಸೋತಾಗ, ಗೆದ್ದಾಗ, ಖುಷಿ ಆದಾಗ... ಎಲ್ಲವೂ ಕಲಿಕೆಯ ಕ್ಷಣಗಳೇ ಅಂತ ನಾನು ಭಾವಿಸುತ್ತೇನೆ. ಹೀಗಾಗಿ ಜರ್ನಿಗಿಂತ ದೊಡ್ಡ ಪಾಠ ಮತ್ತು ಕಲಿಕೆ ಮತ್ತೊಂದು ಇಲ್ಲ.
ಬರ್ತಡೇಗೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಡಲಿದ್ದಾರೆ ರಕ್ಷಿತ್ ಶೆಟ್ರು
ಪ್ಯಾನ್ ಇಂಡಿಯಾ ಸಿನಿಮಾದಿಂದ ನಿಮಗೆ ಸಿಕ್ಕ ಅನುಭವಗಳೇನು?
ಪ್ರತಿ ಚಿತ್ರಕ್ಕೂ ಏನಾದರೂ ಹೊಸದು ಮಾಡಬೇಕು, ನಮ್ಮ ಹೊಸತನ ಎಲ್ಲರಿಗೂ ಗೊತ್ತಾಗಬೇಕು ಎನ್ನುವ ಆಸೆ ಮತ್ತು ಆಸಕ್ತಿಯಲ್ಲಿ ಮಾಡಿದ್ದು ‘ಅವನೇ ಶ್ರೀಮನ್ನಾರಾಯಣ’. ಆರಂಭದಲ್ಲಿ ಕನ್ನಡಕ್ಕೇ ಅಂತ ಮಾಡಿಕೊಂಡು ಆ ಮೇಲೆ ಸಿನಿಮಾ ಮೇಕಿಂಗ್, ಅದರ ಕತೆ ನೋಡಿ ಎಲ್ಲ ಭಾಷೆಗಳಿಗೂ ತೆಗೆದುಕೊಂಡು ಹೋಗುವ ನಿರ್ಧಾರ ಮಾಡಿದ್ವಿ. ಒಳ್ಳೆಯ ಚಿತ್ರವನ್ನು ಭಾಷೆಯ ಬೇಲಿಯ ಆಚೆಗೂ ನೋಡುತ್ತಾರೆ ಎನ್ನುವುದು ತಿಳಿಯಿತು.
‘ಅವನೇ ಶ್ರೀಮನ್ನಾರಾಯಣ’ ಪ್ಯಾನ್ ಇಂಡಿಯಾ ಚಿತ್ರ ಆಗಿದ್ದರ ಹಿಂದಿನ ಧೈರ್ಯ ಯಾವುದು?
‘ಕಿರಿಕ್ ಪಾರ್ಟಿ’ ಚಿತ್ರದ ಯಶಸ್ಸು. ಈ ಸಿನಿಮಾ ನಮ್ಮೆಲ್ಲರಿಗೂ ಒಂದು ದೊಡ್ಡ ಧೈರ್ಯ ಕೊಟ್ಟಿತು. ಕಮರ್ಷಿಯಲ್ಲಾಗಿಯೂ ನಾವು ಏನಾದರೂ ಮಾಡಬಹುದು ಎನ್ನುವ ವಿಶ್ವಾಸ ಬಂತು. ಆ ವಿಶ್ವಾಸವನ್ನು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮೇಲೆ ಹೂಡಿಕೆ ಮಾಡಿದ್ವಿ.
ನಿಮ್ಮ ಜೀವನದಲ್ಲಿ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, ‘ಉಳಿದವರು ಕಂಡಂತೆ’, ‘ಕಿರಕ್ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳು ಬರದೆ ಹೋಗಿದ್ದರೆ?
ಬೇರೆ ಚಿತ್ರಗಳು ಬರುತ್ತಿದ್ದವು. ಮತ್ತೊಂದು ರೀತಿಯ ರಕ್ಷಿತ್ ಶೆಟ್ಟಿಕಾಣುತ್ತಿದ್ದರು. ಸಿನಿಮಾ ಬರುವುದು ಮಾತ್ರ ಕಾಯಂ. ಆದರೆ, ನೀವು ಹೇಳಿದ ಈ ಸಿನಿಮಾಗಳು ನನ್ನ ಜೀವನಕ್ಕೆÜ ಮಹತ್ವದ ತಿರುವು ಕೊಟ್ಟವು. ಹೀಗಾಗಿ ಅವು ನನ್ನ ಜೀವನದ ಭಾಗ ಆಗಿವೆ.
ನೀವು ನಟರಾಗಿ, ನಿರ್ದೇಶಕರಾಗಿ ಒಂದು ತಂಡಕ್ಕೆ ಸೀಮಿತ ಆಗಿದ್ದೀರಿ ಅನಿಸುತ್ತಿಲ್ಲವೇ?
ನಾನು ಯಾವುದೇ ಗಡಿ ಹಾಕಿಕೊಂಡಿಲ್ಲ. ಆದರೆ, ನನ್ನ ಜತೆ ಪ್ರಯಾಣ ಮಾಡಿಕೊಂಡು ಬರುತ್ತಿರುವ ಸುಮಾರು ಮಂದಿ ಇದ್ದಾರೆ. ಅವರ ಜತೆ ನಿಲ್ಲಬೇಕಿದೆ. ಅವರು ನನಗಾಗಿ ಕತೆ ಮಾಡಿಕೊಂಡಾಗ ಅವರ ಜತೆ ನಾನು ಸಿನಿಮಾ ಮಾಡಬೇಕು. ಯಾಕೆಂದರೆ ಸೋಲು- ಗೆಲುವಿನಲ್ಲಿ ನನ್ನ ಜತೆ ಇದ್ದವರಿಗೂ ನಾನು ಸಿನಿಮಾ ಮಾಡುವ ಅವಕಾಶ ಕೊಟ್ಟು ಜತೆಗೆ ನಿಲ್ಲುವುದು ನನ್ನ ಕರ್ತವ್ಯ ಕೂಡ. ಹೀಗಾಗಿ ರಕ್ಷಿತ್ ಶೆಟ್ಟಿಸಿನಿಮಾ, ನಟನೆ ಅಂದರೆ ಅವರದ್ದೇ ಸ್ನೇಹಿತರ ಬಳಗಕ್ಕೆ ಸೀಮಿತ ಆಗಿರುತ್ತಾರೆಂಬ ಅಭಿಪ್ರಾಯ ಬಂದಿರಬಹುದು. ತಪ್ಪಿಲ್ಲ. ಆದರೆ, ನನ್ನ ಜತೆಗೆ ನಿಂತವರ ಬೆಳವಣಿಗೆಗೆ ನಾನು ಸಾಥ್ ಕೊಡುವುದು ಕೂಡ ನನ್ನ ಜವಾಬ್ದಾರಿ. ಅದನ್ನ ಮಾಡುತ್ತಿದ್ದೇನೆ.
ಹಾಗಾದರೆ ಬೇರೆ ನಿರ್ದೇಶಕ, ನಿರ್ಮಾಪಕರ ಚಿತ್ರಗಳನ್ನೂ ಒಪ್ಪಿಕೊಳ್ಳುತ್ತೀರಿ?
ಖಂಡಿತ ಒಪ್ಪುತ್ತೇನೆ. ಯಾಕೆಂದರೆ ನಾನು ಸಿನಿಮಾ ಮಾಡಲಿಕ್ಕೆ ಬಂದಿರುವುದು. ಹೇಮಂತ್ ರಾವ್ ನನ್ನ ಸಿನಿಮಾ ಮಾಡುವಾಗ ಅವರು ನನಗೆ ಹೊಸಬರೇ. ಆದರೂ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡಿಲ್ಲವೆ. ಈಗ ಮತ್ತೆ ‘ಸಪ್ತಸಾಗರದಾಚೆ ಎಲ್ಲೋ’ ಹೆಸರಿನ ಸಿನಿಮಾ ನಮ್ಮ ಕಾಂಬಿನೇಷನ್‌ನಲ್ಲಿ ಬರುತ್ತಿದೆ.
ರಾಕಿಭಾಯ್ ಬಂದಿಳಿಯುವ ರೋಲ್ಸ್ ರಾಯ್ ಕಾರಿನ ಸಿಕ್ರೇಟ್ ಇದು..!
ಈಗಿನ ರಕ್ಷಿತ್ ಶೆಟ್ಟಿ, ಹತ್ತು ವರ್ಷಗಳ ಹಿಂದಕ್ಕೆ ತಿರುಗಿ ನೋಡಿದಾಗ ಕಾಣುವ ವ್ಯತ್ಯಾಸಗಳೇನು?
ನನಗೆ ವ್ಯತ್ಯಾಸಗಳು ಕಾಣಬಾರದು ಅಂತಲೇ ಇದ್ದೀನಿ. ಅದೇ ರಕ್ಷಿತ್ ಶೆಟ್ಟಿ. ಆದರೆ, ಹೆಚ್ಚು ಹೆಚ್ಚು ಕೆಲಸ ಮಾಡುವ ರಕ್ಷಿತ್ ಶೆಟ್ಟಿಈಗ ಕಾಣಬಹುದು. ಜತೆಗೆ ಈಗ ಒಂಚೂರು ಪ್ರಬುದ್ಧವಾಗಿ ಮಾತನಾಡಬಹುದು ಅಷ್ಟೆ. ಇದರ ಹೊರತಾಗಿ ನನಗೆ ಯಾವ ವ್ಯತ್ಯಾಸಗಳು ಕಾಣುತ್ತಿಲ್ಲ.
ನಟನೆ, ನಿರ್ದೇಶನ, ಕತೆ, ನಿರ್ಮಾಣ ಎಲ್ಲದರಲ್ಲೂ ತೊಡಗಿಸಿಕೊಳ್ಳುತ್ತೀರಿ. ಒತ್ತಡ ಅನಿಸಲ್ಲವೇ?
ಸಿನಿಮಾದ ಪ್ರತಿಯೊಂದು ವಿಭಾಗದಲ್ಲೂ ನಾನು ಖುಷಿಯಿಂದ ತೊಡಗಿಸಿಕೊಳ್ಳುತ್ತೇನೆ. ನಾನು ಮೂಲತಃ ರೈಟರ್. ಹೀಗಾಗಿ ಬೇರೆಯವರು ನನಗಾಗಿ ಕತೆ ಬರೆದಾಗ ಹೇಗಿರುತ್ತದೆ ಅಂತ ನೋಡುವುದು ತಪ್ಪಲ್ಲ. ಇನ್ನೂ ನಾನು ನಟ ಆಗಬೇಕು ಅಂತ ನಿರ್ದೇಶಕನಾಗಿದ್ದು. ನಿರ್ಮಾಣ ಕೂಡ ನನ್ನ ಇಷ್ಟದ ಸಂಗತಿ. ಹೀಗಾಗಿ ನನಗೆ ಇದ್ಯಾವುದು ಒತ್ತಡ ಆಗಲ್ಲ. ಆದರೆ, ಹೀಗೆ ಯಾವುದರಲ್ಲೂ ತೊಡಗಿಸಿಕೊಳ್ಳದೆ ಕೇವಲ ನಟನಾಗಿ ಇದ್ದಾಗ ಸೋತಿರುವ ಉದಾಹರಣೆಗಳು ಇವೆ.
ನಿಮ್ಮಲ್ಲಿ ನೀವು ಕಂಡುಕೊಂಡ ಶಕ್ತಿ ಏನು?
ಚಿತ್ರವೊಂದರ ಪ್ರತಿಯೊಂದು ವಿಭಾಗದ ಬಗ್ಗೆಯೂ ನನಗೆ ಇರುವ ತಿಳುವಳಿಕೆ ಮತ್ತು ತಿಳಿಯಬೇಕೆಂಬ ಆಸಕ್ತಿಯೇ ನನ್ನ ಶಕ್ತಿ.
ನಟರಾಗಿಯೇ ಇದ್ದಿದ್ದರೆ ವರ್ಷಕ್ಕೆ ನಿಮ್ಮ ಸಿನಿಮಾಗಳು ಎಷ್ಟು ಬರುತ್ತಿದ್ದವು?
ಎರಡು ಅಥವಾ ಮೂರು ಸಿನಿಮಾ ಬರುತ್ತಿತ್ತು. ಆದರೆ, ನನಗೆ ಹಾಗೆ ಸಿನಿಮಾ ಮಾಡಿಕೊಂಡು ಹಣ ಮಾಡಬೇಕು ಅಂತ ಆಸೆ ಇಲ್ಲ. ಹಣ ಮಾಡುವುದೇ ಗುರಿ ಆದರೆ ನಮ್ಮದು ಅಂತ ಏನೂ ಇರಲ್ಲ. ಬಂದ್ವಿ ,ಹೋದ್ವಿ ಅಷ್ಟೆಆಗುತ್ತದೆ.
ನಿರ್ದೇಶನ ಮಾಡುವುದಾದರೆ ಕನ್ನಡದ ಯಾವ ಹೀರೋ ನಿಮ್ಮ ಚಿತ್ರದಲ್ಲಿ ಕಾಣಬಹುದು?
ಬೇರೆಯವರಿಗೆ ನಿರ್ದೇಶನ ಮಾಡುವ ಯೋಚನೆ ನನಗೆ ಈಗಿಲ್ಲ. ಯಾಕೆಂದರೆ ನಾನು ನಿರ್ದೇಶಕ ಆಗಿದ್ದು, ನನಗೆ ಯಾರೂ ಅವಕಾಶ ಕೊಡುತ್ತಿಲ್ಲ, ನಾನು ನಟ ಆಗಬೇಕು ಅಂದರೆ ನಾನೇ ನಿರ್ದೇಶಕ ಆಗಬೇಕು ಎಂದುಕೊಂಡು ಡೈರೆಕ್ಟರ್ ಸೀಟ್‌ನಲ್ಲಿ ಕೂತೆ. ಹೀಗಾಗಿ ಮತ್ತೊಬ್ಬರನ್ನು ನಿರ್ದೇಶಿಸುವ ಯೋಚನೆ ಮಾಡಲಿಲ್ಲ. ಆದರೆ, ನಟ ಸುದೀಪ್ ಅವರ ಜತೆ ಸಿನಿಮಾ ಮಾಡಬೇಕು, ಅವರಿಗೆ ನಿರ್ದೇಶನ ಮಾಡಬೇಕೆಂಬ ಆಸೆ ಇತ್ತು. ಆ ಕಾರಣಕ್ಕೆ ಒಂದು ಸಿನಿಮಾ ಕೂಡ ಘೋಷಣೆ ಮಾಡಿದ್ದು. ಅದು ಯಾವಾಗ ಆಗುತ್ತೋ ಗೊತ್ತಿಲ್ಲ.
ಸದ್ಯ ನಿಮ್ಮ ಮುಂದಿರುವ ಚಿತ್ರಗಳು ಯಾವುವು? ಹುಟ್ಟು ಹಬ್ಬಕ್ಕೂ ಹೊಸ ಸಿನಿಮಾ ಘೋಷಣೆ ಮಾಡುತ್ತೀರಾ?
ಕಿರಣ್ ರಾಜ್ ನಿರ್ದೇಶನದಲ್ಲಿ ‘777 ಚಾರ್ಲಿ’ ಚಿತ್ರ ಶೂಟಿಂಗ್ ಮುಗಿಸುತ್ತ ಬಂದಿದೆ. ಹೇಮಂತ್ ರಾವ್ ನಿರ್ದೇಶನದ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಸೆಟ್ಟೇರಿದೆ. ನನ್ನ ನಿರ್ದೇಶನದಲ್ಲಿ ‘ಪುಣ್ಯಕೋಟಿ’ ಹಾಗೂ ‘ರಿಚ್ಚಿ’ ಚಿತ್ರಗಳಿವೆ. ಇದು ಬಿಟ್ಟು ಹೊಸದು ಯಾವುದು ಇಲ್ಲ.
ಪುಷ್ಕರ್ ಮತ್ತು ನಿಮ್ಮ ಸ್ನೇಹದ ಬಗ್ಗೆ ಹೇಳೋದಾದ್ರೆ?
ಸಿನಿಮಾಗಳ ಬಗ್ಗೆ ಪ್ಯಾಷನ್ ಇರೋ ನಿರ್ಮಾಪಕರು. ಅವರ ಸಿನಿಮಾ ಕನಸುಗಳು, ನನ್ನ ಗುರಿಗಳು ಇಬ್ಬರನ್ನು ಜತೆಯಾಗಿಸಿದವು. ರಿಷಬ್ ಶೆಟ್ಟಿ, ಹೇಮಂತ್ ರಾವ್, ಕಿರಣ್ ರಾಜ್... ಹೀಗೆ ನಾನು ಯಾರ ಜತೆ ಹೆಚ್ಚು ಸ್ನೇಹ ಇರುತ್ತಿನೋ ನನ್ನ ಮತ್ತು ಅವರ ಗುರಿ, ಕನಸುಗಳು ಒಂದೇ ಇರುತ್ತವೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಹಾಗೆ. ಒಳ್ಳೆಯ ವ್ಯಕ್ತಿ.
- ಆರ್. ಕೇಶವಮೂರ್ತಿ