ಡಾ. ರಾಜ್‌ಕುಮಾರ್‌ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್: 54 ವರ್ಷಗಳ ಬಳಿಕ ಕಲರ್‌ನಲ್ಲಿ 'ಜಗಮೆಚ್ಚಿದ ಮಗ'

Published : Sep 18, 2026, 04:29 PM IST
Dr Rajkumar Jaga Mecchida Maga

ಸಾರಾಂಶ

ವರನಟ ಡಾ. ರಾಜ್‌ಕುಮಾರ್‌ ಅಭಿನಯದ 1972ರ ಕ್ಲಾಸಿಕ್ ‘ಜಗಮೆಚ್ಚಿದ ಮಗ’ ಬರೋಬ್ಬರಿ 54 ವರ್ಷಗಳ ಬಳಿಕ ಹೊಸ ರೂಪದಲ್ಲಿ ಮತ್ತೆ ಚಿತ್ರಮಂದಿರಗಳಿಗೆ ಬರಲಿದೆ. ಮೂಲತಃ ಕಪ್ಪು-ಬಿಳುಪಿನಲ್ಲಿ ತೆರೆಕಂಡಿದ್ದ ಈ ಪೌರಾಣಿಕ ಫ್ಯಾಂಟಸಿ ಚಿತ್ರ.

ವರನಟ ಡಾ. ರಾಜ್‌ಕುಮಾರ್‌ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ಸಿನಿಪ್ರಿಯರಿಗೆ ಈ ಕನ್ನಡ ರಾಜ್ಯೋತ್ಸವ ಮತ್ತಷ್ಟು ವಿಶೇಷವಾಗಲಿದೆ. 1972ರಲ್ಲಿ ತೆರೆಕಂಡಿದ್ದ ಡಾ. ರಾಜ್‌ಕುಮಾರ್‌ ಅಭಿನಯದ ಕ್ಲಾಸಿಕ್ ಚಿತ್ರ ‘ಜಗಮೆಚ್ಚಿದ ಮಗ’ ಬರೋಬ್ಬರಿ 54 ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದೆ. ಅಂದಿನ ಕಪ್ಪು-ಬಿಳುಪು ಚಿತ್ರವನ್ನು ಇದೀಗ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಲರ್‌ನಲ್ಲಿ ಮರುಸಿದ್ಧಪಡಿಸಲಾಗಿದ್ದು, ವೈಡ್‌ಸ್ಕ್ರೀನ್ ಸಿನಿಮಾಸ್ಕೋಪ್ ಹಾಗೂ 5.1 ಸರೌಂಡ್ ಸೌಂಡ್‌ನಲ್ಲೂ ಚಿತ್ರವನ್ನು ಅಪ್‌ಗ್ರೇಡ್ ಮಾಡಲಾಗಿದೆ.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಈ ಪೌರಾಣಿಕ ಫ್ಯಾಂಟಸಿ ಚಿತ್ರವನ್ನು ರಾಜ್ಯಾದ್ಯಂತ ಅದ್ದೂರಿಯಾಗಿ ಮರುಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಚಿತ್ರದ ಮರುಸಿದ್ಧತೆ ಹಾಗೂ ಮರುಬಿಡುಗಡೆಯ ಜವಾಬ್ದಾರಿಯನ್ನು ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅನುಭವ ಹೊಂದಿರುವ ಹಿರಿಯ ನಿರ್ಮಾಪಕ ಹಾಗೂ ವಿತರಕ ಎಸ್. ಉದಯಶಂಕರ್ ವಹಿಸಿಕೊಂಡಿದ್ದಾರೆ. ಐದು ದಶಕಗಳಷ್ಟು ಹಳೆಯದಾದ ಕಪ್ಪು-ಬಿಳುಪು ಚಿತ್ರವನ್ನು ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಪರಿವರ್ತಿಸುವ ಕೆಲಸ ಕಳೆದ 18 ತಿಂಗಳಿಂದ ಚೆನ್ನೈನ ಪ್ರಸಾದ್ ಸ್ಟುಡಿಯೋದಲ್ಲಿ ನಡೆಯುತ್ತಿದೆ.

ಈ ಕುರಿತು ಮಾತನಾಡಿರುವ ಎಸ್. ಉದಯಶಂಕರ್, ಡಾ. ರಾಜ್‌ಕುಮಾರ್‌ ಅವರ ಮೇಲಿನ ತಮ್ಮ ಅಭಿಮಾನ ಹಾಗೂ ಈ ಚಿತ್ರವನ್ನು ಆಧುನಿಕ ಪ್ರೇಕ್ಷಕರಿಗೆ ಮತ್ತೊಮ್ಮೆ ಪರಿಚಯಿಸುವ ಕನಸಿನ ಬಗ್ಗೆ ಮಾತನಾಡಿದ್ದಾರೆ. ನಾನು ಡಾ. ರಾಜ್‌ಕುಮಾರ್‌ ಅವರ ಪರಮ ಅಭಿಮಾನಿ. ಕಳೆದ ಹಲವು ದಶಕಗಳಲ್ಲಿ ಹಲವಾರು ಸಿನಿಮಾಗಳನ್ನು ನಿರ್ಮಿಸಿ, ವಿತರಿಸಿದ್ದೇನೆ. ಆದರೆ ‘ಜಗಮೆಚ್ಚಿದ ಮಗ’ ಚಿತ್ರವನ್ನು ಇಂದಿನ ಪ್ರೇಕ್ಷಕರಿಗೆ ಹೊಸ ರೂಪದಲ್ಲಿ ತೋರಿಸಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು.

ಐದು ದಶಕಗಳಷ್ಟು ಹಳೆಯದಾದ ಕಪ್ಪು-ಬಿಳುಪು ಚಿತ್ರವನ್ನು ಇಂದಿನ ಗುಣಮಟ್ಟಕ್ಕೆ ತಕ್ಕಂತೆ ಪರಿವರ್ತಿಸುವುದು ಅತ್ಯಂತ ಸವಾಲಿನ ತಾಂತ್ರಿಕ ಪ್ರಕ್ರಿಯೆ. ಕಳೆದ 18 ತಿಂಗಳಿಂದ ಚೆನ್ನೈನ ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರದ ರಿಸ್ಟೋರೇಷನ್ ಮತ್ತು ಕಲರ್ ಗ್ರೇಡಿಂಗ್ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಹಿರಿಯ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ನಿರ್ದೇಶಿಸಿದ್ದ ‘ಜಗಮೆಚ್ಚಿದ ಮಗ’ ಚಿತ್ರವನ್ನು ಮೂಲತಃ ಭವನಾರಾಯಣ್ ನಿರ್ಮಿಸಿದ್ದರು. ಡಾ. ರಾಜ್‌ಕುಮಾರ್‌ ಜೊತೆಗೆ ಭಾರತಿ, ಕೆ.ಎಸ್. ಅಶ್ವತ್ಥ್, ಎಂ.ವಿ. ರಾಜಮ್ಮ ಹಾಗೂ ಹಾಸ್ಯನಟರ ಸಾಮ್ರಾಟ್‌ ನರಸಿಂಹರಾಜು ಸೇರಿದಂತೆ ಹಲವು ಹಿರಿಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದರು.

ತಂತ್ರಜ್ಞಾನಕ್ಕೆ ತಕ್ಕಂತೆ ಮರುಸಿದ್ಧ

ಡಾ. ರಾಜ್‌ಕುಮಾರ್‌ ಅವರ ಹಳೆಯ ಕ್ಲಾಸಿಕ್ ಸಿನಿಮಾಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಕಲರ್‌ನಲ್ಲಿ ಮರುಬಿಡುಗಡೆ ಮಾಡುವ ಸಾಲಿಗೆ ಇದೀಗ ‘ಜಗಮೆಚ್ಚಿದ ಮಗ’ ಕೂಡ ಸೇರ್ಪಡೆಯಾಗಿದೆ. ಈ ಹಿಂದೆ ‘ಸತ್ಯ ಹರಿಶ್ಚಂದ್ರ’ (2008) ಹಾಗೂ ‘ಕಸ್ತೂರಿ ನಿವಾಸ’ (2014) ಚಿತ್ರಗಳು ಕಲರ್ ರೂಪದಲ್ಲಿ ಮರುಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದವು.

ಇದೇ ರೀತಿಯಲ್ಲಿ ಮತ್ತೊಂದು ಡಾ. ರಾಜ್‌ಕುಮಾರ್‌ ಅವರ ಕ್ಲಾಸಿಕ್ ಚಿತ್ರಕ್ಕೂ ಕಲರ್ ಟ್ರೀಟ್‌ಮೆಂಟ್ ನೀಡುವ ಯೋಜನೆ ನಡೆಯುತ್ತಿದೆ. 1966ರಲ್ಲಿ ತೆರೆಕಂಡಿದ್ದ ಭಕ್ತಿ ಪ್ರಧಾನ ಜೀವನಚರಿತ್ರೆ ‘ಮಂತ್ರಾಲಯ ಮಹಾತ್ಮೆ’ ಚಿತ್ರವನ್ನೂ ಇದೇ ರೀತಿಯಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಮರುಸಿದ್ಧಪಡಿಸುವ ಯೋಜನೆ ಇದೆ ಎಂದು ಎಸ್. ಉದಯಶಂಕರ್‌ ತಿಳಿಸಿದ್ದಾರೆ.

ಹೀಗಾಗಿ, ಡಾ. ರಾಜ್‌ಕುಮಾರ್‌ ಅವರ ಅಭಿಮಾನಿಗಳಿಗೆ ಹಳೆಯ ನೆನಪುಗಳನ್ನು ಹೊಸ ಅನುಭವದೊಂದಿಗೆ ಮತ್ತೆ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ‘ಜಗಮೆಚ್ಚಿದ ಮಗ’ ತನ್ನ ಹೊಸ ಕಲರ್ ಅವತಾರದಲ್ಲಿ ಈ ನವೆಂಬರ್‌ನಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Birthday's Special: ಕನ್ನಡದ 3 ದಿಗ್ಗಜರ ಜನ್ಮದಿನ- ವಿಷ್ಣುವರ್ಧನ್-ಉಪೇಂದ್ರ-ಶ್ರುತಿ.. ಈ ತ್ರಿಮೂರ್ತಿಗಳ ಹುಟ್ಟುಹಬ್ಬದಂದು ಇವೆಲ್ಲಾ ವಿಶೇಷತೆಗಳಿವೆ ನೋಡಿ!
Dr Vishnuvardhan 75th Birthday: ವಿಷ್ಣುವರ್ಧನ್ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲದ ಹಲವು ಸೀಕ್ರೆಟ್‌ಗಳು ಇಲ್ಲಿವೆ ನೋಡಿ!