ರಕ್ಷಿತ್‌ ಶೆಟ್ಟಿ ಮುಂದಿನ ಚಿತ್ರಗಳಿಗೆ ಪರಶುರಾಮ ಮತ್ತು ಆತನ ಕೊಡಲಿಯೇ ಸ್ಫೂರ್ತಿ!

By Kannadaprabha News  |  First Published Jul 3, 2023, 6:44 PM IST

ಉಳಿದವರು ಕಂಡಂತೆಯಲ್ಲಿ ರಿಚ್ಚಿಯಾಗಿ, ಕಿರಿಕ್‌ ಪಾರ್ಟಿಯಲ್ಲಿ ಕರ್ಣನಾಗಿ ತೀರಾ ಇತ್ತೀಚೆಗೆ 77 ಚಾರ್ಲಿಯಲ್ಲಿ ಎಲ್ಲಾ ನೋವುಗಳನ್ನು ಅದುಮಿಟ್ಟುಕೊಂಡ ಧರ್ಮನಾಗಿ ಕಾಣಿಸಿಕೊಂಡಿದ್ದ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಹೊಸ ಕನಸಿನೊಂದಿಗೆ ಬರ್ತಿದ್ದಾರೆ. ಹೊಸ ತಲೆಮಾರಿನ 'ಕನಸುಗಾರ' ತಮ್ಮೊಳಗಿನ ಕಥಾಪ್ರಪಂಚವನ್ನು ಜನರ ಮುಂದಿಡಲು ತೀರ್ಮಾನ ಮಾಡಿದ್ದಾರೆ. 



ಗುರುಪೂರ್ಣಿಮೆಯ ದಿನ ರಕ್ಷಿತ್‌ ಶೆಟ್ಟಿ ತನ್ನ ಸಿನಿಮಾ ಜರ್ನಿಯ ವೃತ್ತಾಂತಗಳನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಕರಾವಳಿಗರಿಗೆ ಗುರು ಸದೃಶರಾದ ಪರಶುರಾಮ ಹಾಗೂ ಆತನ ಕೊಡಲಿಯೇ ತನ್ನ ಮುಂದಿನ ಚಿತ್ರಗಳಿಗೆ ಸ್ಫೂರ್ತಿ ಅಂದಿರುವ ಅವರ ಸಿನಿಮಾ ಪ್ಲಾನ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಜೊತೆಗೆ 'ನಾ ಕಂಡಂತೆ' ಅನ್ನುವ ಸರಣಿಯನ್ನು ಆರಂಭಿಸುತ್ತಿದ್ದಾರೆ. ಪುರಾತನ ಇತಿಹಾಸವನ್ನು ಆಧುನಿಕ ಕಥೆಗಳಿಗೆ ಅಳವಡಿಸಿಕೊಳ್ಳುವ ಪ್ರಕ್ರಿಯೆಯಾಗಿ ಈ ಸರಣಿ ಬರಲಿದೆ. 

ಸ್ಯಾಂಡಲ್‌ವುಡ್‌ನ ಶಂಕರ್‌ನಾಗ್‌ ಅಂತಲೇ ಅಭಿಮಾನಿಗಳಿಂದ ಹೊಗಳಿಸಿಕೊಳ್ಳೋ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಮೊನ್ನೆ ಮೊನ್ನೆ ಅಮೆರಿಕಾಗೆ ಹೋಗಿದ್ದರು. ಕಾರಣ 'ರಿಚರ್ಡ್‌ ಆಂಟನಿ' ಸ್ಕ್ರಿಪ್ಟಿಗೆ ಫೈನಲ್‌ ಟಚ್‌ ಕೊಡೋದು. ಅಂದುಕೊಂಡಿದ್ದನ್ನು ಸಾಧಿಸಿ ಊರಿಗೆ ಮರಳಿರೋ ರಕ್ಷಿತ್‌ ಇದೀಗ ಎಮೋಶನಲ್‌ ಆಗಿ, ಮನತಾಕುವಂಥಾ ಮಾತುಗಳನ್ನು ಹೇಳಿದ್ದಾರೆ. ಆ ಮಾತುಗಳು ಅವರ ಸಿನಿಮಾ ಜರ್ನಿಯ ಕುರಿತಾದದ್ದು. ಇಲ್ಲಿಯವರೆಗೆ ತಾನು ನಡೆದುಬಂದಿರುವ ದಾರಿಯನ್ನು ನೆನೆದು 'ಕೆಲವರಿಗೆ ಯಶಸ್ಸು ರಾತ್ರೋರಾತ್ರಿ ಕಥೆ ಆದ್ರೆ, ಇನ್ನೂ ಕೆಲವರಿಗೆ ಅದೆಷ್ಟೋ ವರ್ಷಗಳ ತಪಸ್ಸು ಆಗಿಬಿಡುತ್ತದೆ' ಎಂದು ಅಂತರಾಳದ ನುಡಿಗಳನ್ನು ಹೊರಹಾಕಿದ್ದಾರೆ. ಇದರ ಜೊತೆಗೆ ತನ್ನ ಹೊಸ ಸಿನಿಮಾದ ಹಿಂದಿನ ಸ್ಫೂರ್ತಿ ಕಥೆಯನ್ನೂ ಹೇಳಿದ್ದಾರೆ. 

Tap to resize

Latest Videos

ರಿಷಭ್‌ಗೆ ಗೆಳೆಯ ಮಾತ್ರ ಅಲ್ಲ, ಪತ್ನಿ ಪ್ರಗತಿಗೆ ಪ್ರೀತಿಯ ಅಣ್ಣ ರಕ್ಷಿತ್ ಶೆಟ್ಟಿ

ಅವಿಭಜಿತ ದಕ್ಷಿಣ ಕನ್ನಡ ಪರಶುರಾಮ ಸೃಷ್ಟಿ ಎಂದೇ ಜನ ಜನಿತ. ಇಲ್ಲಿನ ಜನರಿಗೆ ಪರಶುರಾಮನ ಮೇಲೆ ಗುರುವಿನ ಗೌರವ. ಇದೇ ನೆಲದ ಪ್ರತಿಭೆ ರಕ್ಷಿತ್‌ ಶೆಟ್ಟಿ ಅವರೂ ಬಾಲ್ಯದಿಂದ ಪರಶುರಾಮನ ಕಥೆ ಕೇಳಿ ಬೆಳೆದವರು. ತಾನು ಬೆಳೆಯುತ್ತ ತನ್ನೊಳಗಿನ ಪರಶುರಾಮನನ್ನೂ ಬೆಳೆಸಿದ ರಕ್ಷಿತ್‌ ಇದೀಗ ಆತನನ್ನು ಬೃಹತ್‌ ಪರದೆಯ ಮೇಲೆ ಪ್ರೇಕ್ಷಕರೆದುರು ನಿಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನೆವದಲ್ಲಿ ಅವರು ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಂದ ಆರಂಭದ ದಿನಗಳ ಸಂಘರ್ಷವನ್ನು ಕಾವ್ಯಾತ್ಮಕವಾಗಿ ಉದ್ಧರಿಸಿದ್ದಾರೆ. 

'ನಾನು ಚಿಕ್ಕವನಿದ್ದಾಗ ಪ್ರತೀ ಸೋಮವಾರ ನನ್ನ ತಾಯಿ ಶಾಲೆಯಿಂದ ನೇರ ರಥಬೀದಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಮೊದಲಿಗೆ ಅನಂತೇಶ್ವರನ ಸನ್ನಿಧಿ, ನಂತರ ಕೃಷ್ಣನ ದೇವಸ್ಥಾನ, ಮತ್ತೆ ಗುರು ರಾಘವೇಂದ್ರರ ದರ್ಶನ. ನನ್ನ ಖುಷಿಗೆ ಮತ್ತೊಂದು ಕಾರಣ 'ಸಂಪೂರ್ಣ' ಅಂಗಡಿಯಲ್ಲಿ ನಾವು ತೆಗೆದುಕೊಳ್ಳುತ್ತಿದ್ದ ಆ ೫ ಸ್ಟಾರ್‌ ಚಾಕ್ಲೇಟ್‌. ನಮ್ಮ ಸೋಮವಾರದ ದಿನಚರಿಯ ಸಂಭ್ರಮ ಹೀಗಿರುತ್ತಿತ್ತು. 

 

 

ಪ್ರತೀ ಬಾರಿ ದೇವಸ್ಥಾನಕ್ಕೆ ಹೋದಾಗ ನನಗೆ ಅದರ ಹಿಂದಿರುವ ಕಥೆಗಳನ್ನು ತಿಳಿದುಕೊಳ್ಳಲು ಎಲ್ಲಿಲ್ಲದ ಕುತೂಹಲ. ಒಂದಿಷ್ಟು ಕತೆಗಳನ್ನು ಅಮ್ಮ ಹೇಳುತ್ತಿದ್ದರು. ಇನ್ನುಳಿದ ಕುತೂಹಲಕ್ಕೆ ಅಲ್ಲಿಗೆ ಬರುತ್ತಿದ್ದ ಜನರು ಬೆಳಕು ಚೆಲ್ಲುತ್ತಿದ್ದರು. ಉಳಿದ ಎಲ್ಲ ದೇವಸ್ಥಾನಗಳಿಗಿಂತ ನನ್ನನ್ನು ಅತ್ಯಂತವಾಗಿ ಸೆಳೆದದ್ದು ಅನಂತೇಶ್ವರನ ಸನ್ನಿಧಿ. ಕಾರಣ ಶಿವ ನನ್ನ ಇಷ್ಟ ದೈವ. ಆದರೆ ಶಿವನಿಗೆ ಸಮರ್ಪಿತವಾದ ಅನಂತೇಶ್ವರ ದೇಗುಲವು ಲಿಂಗಸ್ವರೂಪದಲ್ಲಿರುವ ಪರಶುರಾಮ ಎಂದು ತಿಳಿದಾಗ ಸಹಸ್ರಾರು ಪ್ರಶ್ನೆಗಳು ಕಾಡಲಾರಂಭಿಸಿದವು. ಇನ್ನೂ ಉತ್ತರ ಅರಸುತ್ತಾ ನಾನು ಸುತ್ತುತ್ತಿದ್ದೇನೆ. ಅದಕ್ಕೆಯೇ ಏನೂ ಕಥೆಗಾರನಾಗಬೇಕೆಂಬ ಹಂಬಲ ನನ್ನೊಳಗೆ ಹುಟ್ಟಿಕೊಂಡದ್ದು. 

 

ಮಗುವಿನ ನಗು, ಸಂತಸ, ಕಾಡು; ರಿಷಬ್ ಮತ್ತು ಸ್ನೇಹಿತರ ಜೊತೆ ರಕ್ಷಿತ್ ಶೆಟ್ಟಿ ಪ್ರವಾಸ, ಫೋಟೋ ವೈರಲ್

ಇದೇ ಹಿನ್ನೆಲೆಯಲ್ಲಿ ನಾ ಕಂಡಂತೆ ಒಂದು ಸಂವಾದಾತ್ಮಕ ಸರಣಿ. ನಮ್ಮ ಪುರಾಣಗಳು, ಇತಿಹಾಸ ಬರಿ ಕಥೆಗಳಲ್ಲ, ಪುರಾತನ ಕಾಲದಿಂದ ನಮಗೆ ಬಳುವಳಿಯಾಗಿ ಬಂದಿರುವ ವಿಜ್ಞಾನ. ಮನುಕುಲವನ್ನು ವಿಕಸನಗೊಳಿಸುವ ಅಧ್ಯಯನ' ಎಂದು ಬರೆದುಕೊಂಡಿದ್ದಾರೆ ರಕ್ಷಿತ್‌. ಗುರುಪೂರ್ಣಿಮೆಯ ದಿನ ಅವರು ಘೋಷಿಸಿರುವ 'ನಾ ಕಂಡಂತೆ' ಸರಣಿ ಮುಂದಿನ ದಿನಗಳಲ್ಲಿ ನಮ್ಮ ಪುರಾಣ, ಇತಿಹಾಸವನ್ನು ಇಂದಿನ ಕಥೆಗೆ ಅಳವಡಿಸಿಕೊಳ್ಳುವ ಪ್ರಯತ್ನ. 'ನನ್ನ ಈ ಕಥಾಪ್ರಪಂಚಕ್ಕೆ ನಿಮ್ಮೆಲ್ಲರಿಗೂ ಸ್ವಾಗತ' ಎನ್ನುವ ಮೂಲಕ ಈ ಬಗ್ಗೆ ಮುಕ್ತ ಚರ್ಚೆ ನಡೆಯಲಿ ಅನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ.  ಹಗಲಿರುಳೂ ಕ್ರಿಯೇಟಿವಿಟಿಗೆ ತುಡಿಯುವ ಶೆಟ್ಟರ ಈ ಹೊಸ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

click me!