ಕ್ರೇಜಿಸ್ಟಾರ್ ರವಿಚಂದ್ರನ್ ಗುರುಗಳು, ಶಿವಣ್ಣನ ಅಭಿಮಾನಿ, ಸುದೀಪ್ ಜತೆಗೂ ಸ್ನೇಹ, ದರ್ಶನ್ ಗರಡಿಯಲ್ಲಿ ಬೆಳೆದ ಪ್ರತಿಭೆ...
-ಇವಿಷ್ಟುಸೇರಿದರೆ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮೂರ್ತ ರೂಪ ಕಣ್ಣ ಮುಂದೆ ಬರುತ್ತದೆ. ಬೆಂಗಳೂರಿನ ಕಾಟನ್ ಪೇಟೆಯಲ್ಲಿ ಸುಮ್ಮನೆ ಓಡಾಡಿಕೊಂಡಿದ್ದ ಡೊಳ್ಳು ಹೊಟ್ಟೆಯ ಹುಡುಗನನ್ನು ಸಿನಿಮಾ ಮಂದಿ ನೋಡಿ, ಮನಸಾರೆ ನಕ್ಕಿದ್ದಾರೆ ಅಂದರೆ ಅದಕ್ಕೆ ಮೊದಲ ಕಾರಣವೇ ಕ್ರೇಜಿಸ್ಟಾರ್ ರವಿಚಂದ್ರನ್.
ಗುರುಗಳಾದ ಕ್ರೇಜಿಸ್ಟಾರ್
ಅದು ‘ಶಾಂತಿ ಕ್ರಾಂತಿ’ ಸಿನಿಮಾ ದಿನಗಳು. ಆ ಚಿತ್ರದಲ್ಲಿ ನೂರಾರು ಮಂದಿ ಮಕ್ಕಳು ನಟಿಸಿದ್ದಾರೆ. ಆ ಮಕ್ಕಳ ಜತೆ ಬಂದು ಹೋದ ಬುಲೆಟ್ ಪ್ರಕಾಶ್ ಅವರನ್ನು ಗುರುತಿಸಿದವರು ಎಷ್ಟುಮಂದಿ ಇದ್ದಾರೋ ಗೊತ್ತಿಲ್ಲ. ಆದರೆ, ಏಕಾಏಕಿ ಶೂಟಿಂಗ್ ಸೆಟ್‌ಗೆ ಬಂದು ಸಾರ್ ನಾನು ನಿಮ್ಮ ಸಿನಿಮಾದಲ್ಲಿ ಕಾಣಬೇಕು. ನನ್ನನ್ನೂ ತೋರಿಸಿ ಎಂದು ರವಿಚಂದ್ರನ್ ಮುಂದೆ ಬೇಡಿಕೊಂಡ ಬುಲೆಟ್ ಪ್ರಕಾಶ್ ಅವರಿಗೆ, ‘ಮೊದಲು ಶಾಲೆಗೆ ಹೋಗು, ವಿದ್ಯಾಭ್ಯಾಸ ಕಲಿ’ ಅಂತ ಬುದ್ಧಿ ಹೇಳಿದ್ದರು ರವಿಚಂದ್ರನ್. ಆದರೂ ಕೇಳದೆ ಸೆಟ್‌ನಲ್ಲೇ ಇದ್ದವನ್ನು ಆ ನೂರಾರು ಮಕ್ಕಳ ಜತೆ ಸೇರಿಸಿದರು ರವಿಚಂದ್ರನ್. ಹಾಗೆ ಕಂಡು ಕಾಣದಂತೆ ‘ಶಾಂತಿ ಕ್ರಾಂತಿ’ ಚಿತ್ರದಲ್ಲಿ ಬಂದು ಹೋದ ಬುಲೆಟ್ ಪ್ರಕಾಶ್ ಅವರಿಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ‘ಅಹಂ ಪ್ರೇಮಾಸ್ಮಿ’ ಸಿನಿಮಾ.
undefined
ರವಿಚಂದ್ರನ್ ಅವರ ‘ಅಹಂ ಪ್ರೇಮಾಸ್ಮಿ’ ಸಿನಿಮಾಗೆ ಬರುವ ಮುನ್ನ ‘ಪುಟ್ಟಮಲ್ಲಿ’ ಎನ್ನುವ ಚಿತ್ರದಲ್ಲಿ ಸೆಟ್‌ಬಾಯ್ ಆಗಿ ಕೆಲಸ ಮಾಡಿದ್ದಾರೆ. ‘ಜೋಡಿಹಕ್ಕಿ’ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕರೂ ಅದು ಎಡಿಟಿಂಗ್ ರೂಮ್‌ನಲ್ಲಿ ಬಲಿ ಆಯಿತು ಎಂದು ತುಂಬಾ ವರ್ಷಗಳ ನಂತರ ಬುಲೆಟ್ ಪ್ರಕಾಶ್ ಅವರೇ ಹೇಳಿಕೊಂಡಿದ್ದರು.
ಬುಲೆಟ್ ಪ್ರಕಾಶ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ; ಅಂತರ ಕಾಯ್ದುಕೊಳ್ಳುವಂತೆ ಮನವಿ!
ಈ ಚಿತ್ರದ ನಂತರ ಮತ್ತೆ ರವಿಚಂದ್ರನ್ ಅವರದ್ದೇ ‘ಓ ನನ್ನ ನಲ್ಲೆ’ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ಶೂಟಿಂಗ್ ಸಮಯದಲ್ಲೇ ಬುಲೆಟ್ ಮೇಲೆ ಬಂದು ಹೋಗುತ್ತಿದ್ದ ಪ್ರಕಾಶ್ ಅವರಿಗೆ ರವಿಚಂದ್ರನ್ ಅವರೇ ‘ಬುಲೆಟ್ ಪ್ರಕಾಶ್’ ಎನ್ನುವ ಹೆಸರು ಕೊಟ್ಟರು. ಹಾಗೆ ನೋಡಿದರೆ ‘ಅಹಂ ಪ್ರೇಮಾಸ್ಮಿ’ ಹಾಗೂ ‘ಓ ನನ್ನ ನಲ್ಲೆ’ ಚಿತ್ರಗಳು ಬುಲೆಟ್ ಪ್ರಕಾಶ್ ಅವರಿಗೆ ಹೆಸರು ಕೊಟ್ಟವು. ಜತೆಗೆ ಹೆಸರು ಬದಲಾವಣೆಗೂ ಕಾರಣವಾದವು. ಆ ಮೂಲಕ ರವಿಚಂದ್ರನ್ ಅವರೇ ಇವರ ಪಾಲಿಗೆ ಗುರುಗಳಾದರು.
ಬೆಸ್ಟ್ ಕಾಂಬಿನೇಷನ್
ಕನ್ನಡ ಚಿತ್ರರಂಗದಲ್ಲಿ ಬೆಸ್ಟ್ ಕಾಂಬಿನೇಷನ್‌ಗಳು ಪ್ರೇಕ್ಷಕರ ಮನದಲ್ಲಿ ಹಿಟ್ ಆಗಿವೆ. ಆ ಪೈಕಿ ಸಾಧು ಕೋಕಿಲಾ ಹಾಗೂ ಬುಲೆಟ್ ಪ್ರಕಾಶ್ ಅವರದ್ದೂ ಒಂದು. ಹೇಗೆ ಟೆನಿಸ್ ಕೃಷ್ಣ ಮತ್ತು ದೊಡ್ಡಣ್ಣ ಜೋಡಿ ಹಿಟ್ ಆಗಿತ್ತೋ ಅದೇ ರೀತಿ ಸಾಧು- ಬುಲೆಟ್ ತೆರೆ ಮೇಲೆ ಜತೆಯಾಗಿ ನಗಿಸಿದರು. ಸಾಧು ಕೋಕಿಲ, ಬಿರಾದಾರ್, ಬುಲೆಟ್ ಪ್ರಕಾಶ್ ಈ ಮೂವರು ಇದ್ದರಂತೂ ಮನರಂಜನೆಯ ಹಬ್ಬವೇ ಸರಿ. ಕೇವಲ ಹಾಸ್ಯ ನಟರ ಜತೆಗೆ ಮಾತ್ರವಲ್ಲ ದರ್ಶನ್ ಅವರ ಜತೆಗೂ ಬೆಸ್ಟ್ ಅನಿಸಿಕೊಂಡವರು. ಅದಕ್ಕೆ ಸಾಕ್ಷಿ ಕಲಾಸಿಪಾಳ್ಯ ಹಾಗೂ ಸುಂಟರಗಾಳಿ ಚಿತ್ರಗಳು. ನಿರ್ದೇಶಕ ಕಂ ನಟ ಓಂ ಪ್ರಕಾಶ್ ರಾವ್ ಜತೆಗೂ ಸೈ ಎನಿಸಿಕೊಂಡಿದ್ದಾರೆ. ಹೀಗೆ ಎಲ್ಲರಿಗೂ ಹೊಂದಿಕೊಳ್ಳುವ ಹಾಸ್ಯ ಕಲಾವಿದ ಅಂದರೆ ಅದು ಬುಲೆಟ್ ಪ್ರಕಾಶ್.
ಅಭಿಮಾನ, ನೆರವು ಮತ್ತು ಗರಡಿ
ತಿರುಗಿ ನೋಡದಷ್ಟುಜನಪ್ರಿಯ ಹಾಸ್ಯ ನಟನಾಗಿದ್ದಾಗಲೇ ಏಕಾಏಕಿ ಅವಕಾಶಗಳು ಕಡಿಮೆಯಾಗಿ ಮನೆಯಲ್ಲಿ ಕೂತಿರಬೇಕಾಯ್ತು. ಆಗ ಇವರ ನೆರವಿಗೆ ಬಂದಿದ್ದು ನಟ ಸುದೀಪ್. ಸ್ನೇಹಪೂರ್ವಕವಾಗಿ ಒಂದಿಷ್ಟುಸಿನಿಮಾಗಳಲ್ಲಿ ಅವಕಾಶ ಕೊಟ್ಟವರು. ಆ ನಂತರ ಪಟ್ಟಾಗಿ ಕೂತ ಮೇಲೆ ದರ್ಶನ್ ಅವರ ಗರಡಿಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಹಾಗೆ ನೋಡಿದರೆ ದರ್ಶನ್ ಅವರಿಗೆ ಸಿನಿಮಾವೊಂದನ್ನು ನಿರ್ಮಾಣ ಮಾಡುವ ಹಂತಕ್ಕೆ ಇವರ ಕಾಂಬಿನೇಷನ್ ಹಿಟ್ ಆಗಿತ್ತು. ಅಲ್ಲದೆ ನಟ ಶಿವರಾಜ್ ಕುಮಾರ್ ಅವರಿಗೆ ದೊಡ್ಡ ಅಭಿಮಾನಿಯೂ ಆಗಿದ್ದವರು.
ದೇಹ ಇಳಿಸಿಕೊಂಡರು, ಅವಕಾಶಗಳು ದೂರವಾದವು
ಬುಲೆಟ್ ಪ್ರಕಾಶ್ ಅವರ ವೈಯಕ್ತಿಕ ಜೀವನಕ್ಕೆ ಮಾತ್ರವಲ್ಲ, ವೃತ್ತಿ ಪಯಣಕ್ಕೂ ದೊಡ್ಡ ಶತ್ರು ಆಗಿದ್ದು ಅವರು ದೇಹಕ್ಕೆ ಮಾಡಿಸಿಕೊಂಡ ಸರ್ಜರಿ. ಧಡೂತಿ ಮೈಗೆ ಕತ್ತರಿ ಹಾಕಿಸಿಕೊಂಡ ಮೇಲೆಯೇ ಅವರಿಂದ ಸಿನಿಮಾ ಅವಕಾಶಗಳು ದೂರವಾದವು. ಯಾರೂ ಅವರನ್ನ ಕರೆದು ಅವಕಾಶ ಕೊಡಲಿಲ್ಲ. ಇದರ ಜತೆಗೆ ದರ್ಶನ್ ಅವರೊಂದಿಗೆ ಮುನಿಸಿಕೊಂಡು ಅವರೊಂದಿಗೆ ನಡೆದ ಗಲಾಟೆಯಿಂದ ದರ್ಶನ್ ಗರಡಿಯಿಂದಲೂ ದೂರವಾದರು. ಬೇರಿಯಾಟ್ರಿಕ್ ಸರ್ಜರಿ ಮಾಡಿಸಿಕೊಂಡ ನಂತರ ಜಾಸ್ತಿ ಭಾವುಕರಾಗುತ್ತಿದ್ದರು.
ಹಾಸ್ಯಲೋಕ ಅಗಲಿದ ಪ್ರಕಾಶ, ಅದೊಂದು ಆಸೆ ಬುಲೆಟ್‌ಗೆ ಹಾಗೆ ಉಳಿದೋಯ್ತು!
ನನ್ ಮಗನೂ ಹೀರೋ ಆಗ್ತಾನೆ ಸ್ವಾಮಿ
..ಹೀಗಂತ ಕಣ್ಣೀರು ಹಾಕುತ್ತಲೇ ನೋವು ತೋಡಿಕೊಂಡಿದ್ದರು ಬುಲೆಟ್ ಪ್ರಕಾಶ್. ಅವರ ಕಣ್ಣೀರು ಮಾತುಗಳು ಹೀಗಿದ್ದವು.. ‘ಯಾಕೆ ನನ್ನ ಈ ಪಾಟಿ ತುಳಿಯುತ್ತಿದ್ದೀರಿ. ನಾನು ಸತ್ತೋದೆ, ನನಗೆ ಕಾಯಿಲೆ ಇದೆ. ನಟನೆ ಮಾಡಕ್ಕೆ ಬರಲ್ಲ ಅಂತ ಯಾಕೆ ಅಪಪ್ರಚಾರ ಮಾಡ್ತಿರಿ. ಒಬ್ಬ ಕಲಾವಿದನನ್ನ ಹೀಗೆ ಬದುಕಿದ್ದಾಗಲೇ ಸಾಯಿಸಬೇಡಿ. ಆಯ್ತು ನನ್ನ ತುಳಿತೀರಾ, ತುಳಿಯಿರಿ. ನನಗೂ ಒಬ್ಬ ಮಗ ಇದ್ದಾನೆ. ಅವನೂ ಚಿತ್ರರಂಗಕ್ಕೆ ಬರುತ್ತಾನೆ. ಈಗಾಗಲೇ ಎಲ್ಲ ರೀತಿಯಲ್ಲೂ ತರಬೇತಿ ಕೊಡಿಸುತ್ತಿದ್ದೇನೆ. ನನ್ನ ಮಗ ಹೀರೋ ಆಗಿ ನನ್ನ ಕೈ ಹಿಡೀತಾನೆ. ನನ್ನ ನೋವು ದೂರ ಮಾಡುತ್ತಾನೆ’ ಎಂದು ಬುಲೆಟ್ ಪ್ರಕಾಶ್ ಹೇಳಿಕೊಂಡಿದ್ದರು.
ಕನಸಾಗಿಯೇ ಉಳಿಯಿತು ಸುಲ್ತಾನ್
ಬುಲೆಟ್ ಪ್ರಕಾಶ್ ಒಂದು ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು. ಅದಕ್ಕೆ ‘ಸುಲ್ತಾನ್’ ಎಂದು ಹೆಸರಿಟ್ಟುಕೊಂಡಿದ್ದು, ಇದನ್ನು ತಮ್ಮ ಬಹು ಕಾಲದ ಗೆಳೆಯರೂ ಕೂಡ ಆಗಿದ್ದ ದರ್ಶನ್ ನಟನೆಯಲ್ಲಿ ನಿರ್ಮಿಸುವ ಕನಸು ಕಂಡಿದ್ದರು. ‘ನೋಡ್ತಾ ಇರಿ, ಡಿ ಬಾಸ್ ಜತೆ ಒಂದು ಸಿನಿಮಾ ಮಾಡಿ ಗೆಲ್ತೀನಿ’ ಎಂದು ಮಾಧ್ಯಮಗಳ ಮುಂದೆ ಆಗಾಗ ಹೇಳಿಕೊಳ್ಳುತ್ತಿದ್ದರು. ಆದರೀಗ ಈ ಕನಸು ಹಾಗೆ ಉಳಿದು ಹೋಗಿದೆ.
ಪರಿಮಳ ಲಾಡ್ಜ್ ನಲ್ಲಿ ನಗಿಸಬೇಕಿತ್ತು
ಆರೋಗ್ಯದಿಂದ ಚೇತರಿಸಿಕೊಂಡವರಂತೆ ಕಂಡ ಮೇಲೆ ಅವರು ಕಾಣಿಸಿಕೊಂಡ ಸಿನಿಮಾ ವಿಜಯ್ ಪ್ರಸಾದ್ ನಿರ್ದೇಶನದ ‘ಪರಿಮಳ ಲಾಡ್ಜ್’. ಈ ಚಿತ್ರದ ಟೀಸರ್‌ನಲ್ಲಿ ಬುಲೆಟ್ ಪ್ರಕಾಶ್ ಅವರನ್ನ ನೋಡಿದವರು ಅಚ್ಚರಿಗೊಂಡಿದ್ದೂ ಇದೆ. ಆದರೆ, ಈ ಸಿನಿಮಾ ಶೂಟಿಂಗ್‌ಗೆ ಹೋಗುವ ಮೊದಲೇ ಬುಲೆಟ್ ಪ್ರಕಾಶ್ ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ. ಟೀಸರ್‌ನಲ್ಲಿ ಕಂಡ ಬುಲೆಟ್, ಸಿನಿಮಾದಲ್ಲಿ ಕಾಣಲಾಗದು.