
ನವರಸ ನಾಯಕ ಜಗ್ಗೇಶ್ ಎಂದರೆ ನಗು, ಸಿನಿಮಾ ಹಾಗೂ ಪಂಚಿಂಗ್ ಡೈಲಾಗ್‌ಗಳು ನೆನಪಾಗುತ್ತವೆ. ಆದರೆ, ಅವರ ಬದುಕಿನ ಮತ್ತೊಂದು ಮುಖ ಆಗಾಗ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಮುಂದೆ ತೆರೆದುಕೊಳ್ಳುತ್ತದೆ. ಇದೀಗ ಜಗ್ಗೇಶ್ ಹಂಚಿಕೊಂಡಿರುವ ಒಂದು ಹಳೆಯ ಫೋಟೋ, ಅವರ ಸಿನಿಮಾ ಬದುಕಿಗಿಂತಲೂ ದೊಡ್ಡದಾದ ಜೀವನದ ಕಥೆಯೊಂದನ್ನು ಹೇಳುತ್ತಿದೆ.
ತಮ್ಮ ಹಳೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ ಜೊತೆಗಿನ ಅಪರೂಪದ ಫೋಟೋವನ್ನು ಹಂಚಿಕೊಂಡಿರುವ ಜಗ್ಗೇಶ್, ಆ ಬೈಕ್‌ನೊಂದಿಗೆ ಬೆಸೆದುಕೊಂಡಿರುವ ತಮ್ಮ ಬದುಕಿನ ನೆನಪುಗಳನ್ನು ಭಾವನಾತ್ಮಕವಾಗಿ ಬಿಚ್ಚಿಟ್ಟಿದ್ದಾರೆ. ಅವರ ಪಾಲಿಗೆ ಇದು ಕೇವಲ ಒಂದು ಬೈಕ್ ಅಲ್ಲ. ಅಪ್ಪ-ಅಮ್ಮನ ಪ್ರೀತಿ, ಬಾಲ್ಯದ ನೆನಪು, ಪ್ರೇಮ, ಕುಟುಂಬ ಹಾಗೂ ನಾಲ್ಕು ತಲೆಮಾರುಗಳ ಬದುಕಿಗೆ ಸಾಕ್ಷಿಯಾಗಿರುವ ‘ಭಾಗ್ಯದೇವತೆ’.
ಅಮ್ಮನ ಆಸೆಯಿಂದ ಮನೆಗೆ ಬಂದ ಬುಲೆಟ್!
ಜಗ್ಗೇಶ್ ಅವರ ನೆನಪುಗಳ ಪಯಣ ಆರಂಭವಾಗುವುದು ಅವರ ಬಾಲ್ಯದಿಂದ. 1956ರಲ್ಲಿ ಅವರ ತಾಯಿ ಊದುಬತ್ತಿ ತಯಾರಿಸಿ, ತರಕಾರಿ ಮಾರಿ ಹಣ ಉಳಿಸಿ ₹1,800 ಸಂಗ್ರಹಿಸಿ ಪತಿಗಾಗಿ ಈ ಬುಲೆಟ್ ಕೊಡಿಸಿದ್ದರು ಎಂಬುದು ಅವರ ಬರಹದ ಪ್ರಮುಖ ಅಂಶ. ಬಾಲಕ ಜಗ್ಗೇಶ್ ಈ ಬೈಕ್‌ನ ಮುಂದೆ ಕುಳಿತು ಅಪ್ಪ-ಅಮ್ಮನೊಂದಿಗೆ ಮಾಯಸಂದ್ರಕ್ಕೆ ಹೋಗುತ್ತಿದ್ದರಂತೆ.
ಮನೆಯ ಮುಂದೆ ಬುಲೆಟ್‌ನ ಸದ್ದು ಕೇಳುತ್ತಿದ್ದಂತೆಯೇ ತಾತ ಬಾಗಿಲ ಬಳಿ ಬಂದು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದ ನೆನಪನ್ನೂ ಅವರು ಹಂಚಿಕೊಂಡಿದ್ದಾರೆ. ಕಾಲೇಜು ದಿನಗಳು ಬಂದಾಗ ಅಪ್ಪನ ಬಳಿ ಕಾಡಿಬೇಡಿ ಇದೇ ಬೈಕ್ ಅನ್ನು ಪಡೆದುಕೊಂಡಿದ್ದರಂತೆ. ಆದರೆ, ಆಗ ಪೆಟ್ರೋಲ್ ಹಾಕಿಸಲು ಹಣವಿಲ್ಲದ ದಿನಗಳೂ ಇದ್ದವು. ಅವರದೇ ಮಾತಿನಲ್ಲಿ ಹೇಳುವುದಾದರೆ, “ಡೌನ್ ಬಂದಾಗ ನ್ಯೂಟ್ರಲ್, ಅಪ್ ಬಂದಾಗ ಗೇರ್‌ನಲ್ಲಿ ಜೀವನ” ಎಂಬಂತಿತ್ತು ಆ ದಿನಗಳ ಬದುಕು.
ಪೆಟ್ರೋಲ್‌ಗೆ ₹7.. ಹಿಂದೆ ಕುಳಿತಿದ್ದವರು ಮುಂದೆ ಜೀವನ ಸಂಗಾತಿಯಾದರು!
ಈ ಬುಲೆಟ್ ಜಗ್ಗೇಶ್ ಅವರ ಪ್ರೇಮಕಥೆಯನ್ನೂ ಕಂಡಿದೆ. ಪರಿಮಳ ಗೆಳತಿಯಾಗಿದ್ದ ದಿನಗಳಲ್ಲಿ ಅವರ ಬಳಿಯೇ ₹7 ಪಡೆದು ಪೆಟ್ರೋಲ್ ಹಾಕಿಸಿ, ಅವರನ್ನು ಹಿಂದೆ ಕೂರಿಸಿಕೊಂಡು ಊರು ಸುತ್ತುತ್ತಿದ್ದ ನೆನಪನ್ನು ಜಗ್ಗೇಶ್ ಮೆಲುಕು ಹಾಕಿದ್ದಾರೆ. ಅಷ್ಟೇ ಅಲ್ಲ, ಆಗ ಹಾಡುತ್ತಾ ಸುತ್ತಾಡುತ್ತಿದ್ದ ಆ ಹುಡುಗನೇ ಮುಂದೆ ಪರಿಮಳ ಅವರನ್ನು ಮದುವೆಯಾಗಿ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡರು. ನಂತರ ಮಗ ಗುರುರಾಜನನ್ನು ಇದೇ ಬೈಕ್‌ನಲ್ಲಿ ಮುಂದೆ ಕೂರಿಸಿಕೊಂಡು, ಅಪ್ಪನ ಹಾದಿಯಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡರು. ಇಂದು ಅದೇ ಬೈಕ್ ಜಗ್ಗೇಶ್ ಅವರ ಮೊಮ್ಮಗ ಅರ್ಜುನನಿಗೂ ಆತ್ಮೀಯ ಸಂಗಾತಿಯಾಗಿದೆ. ಅದಕ್ಕಾಗಿಯೇ ಜಗ್ಗೇಶ್ ಈ ಬುಲೆಟ್ ಅನ್ನು ತಮ್ಮ “ಬದುಕಿನ ಭಾಗ್ಯದೇವತೆ” ಎಂದು ಕರೆದಿದ್ದಾರೆ.
ಅಪ್ಪನಿಂದ ಮಗನಿಗೆ.. ಮಗನಿಂದ ಮೊಮ್ಮಗನಿಗೆ!
ಒಂದು ಬೈಕ್ ಹೇಗೆ ಒಂದು ಕುಟುಂಬದ ನಾಲ್ಕು ತಲೆಮಾರುಗಳ ಬದುಕಿನ ಭಾಗವಾಗಬಹುದು ಎಂಬುದಕ್ಕೆ ಜಗ್ಗೇಶ್ ಅವರ ಈ ಕಥೆ ಅಪರೂಪದ ಉದಾಹರಣೆ. ಅಪ್ಪನ ನೆನಪುಗಳಿಂದ ಆರಂಭವಾದ ಈ ಪಯಣ, ಜಗ್ಗೇಶ್ ಅವರ ಬಾಲ್ಯ, ಕಾಲೇಜು, ಪ್ರೀತಿ, ಮದುವೆ, ಕುಟುಂಬ ಹಾಗೂ ಈಗ ಮೊಮ್ಮಗನ ಕಾಲದವರೆಗೂ ಸಾಗಿದೆ. ಹೀಗಾಗಿ ಜಗ್ಗೇಶ್ ಹಂಚಿಕೊಂಡಿರುವ ಫೋಟೋ ಕೇವಲ ಹಳೆಯ ನೆನಪಿನ ಚಿತ್ರವಲ್ಲ. ಅದರ ಹಿಂದೆ ಒಂದು ಕುಟುಂಬದ ಹಲವು ದಶಕಗಳ ಬದುಕಿದೆ.
‘ಮೊನ್ನೆ ತಾತ.. ನೆನ್ನೆ ಅಪ್ಪ.. ಇಂದು ನಾವು..’
ಈ ನೆನಪುಗಳನ್ನು ಹಂಚಿಕೊಂಡ ಬಳಿಕ ಜಗ್ಗೇಶ್ ಬದುಕಿನ ಬಗ್ಗೆ ಮತ್ತೊಂದು ಗಂಭೀರ ಸಂದೇಶವನ್ನೂ ನೀಡಿದ್ದಾರೆ. ನಿನ್ನೆ ಇದ್ದವರು ಇಂದು ಇಲ್ಲ, ಇಂದು ಇರುವ ನಾವು ನಾಳೆ ಇರಲಾರೆವು. ಮಕ್ಕಳು, ಮೊಮ್ಮಕ್ಕಳು ಹೀಗೆ ಜೀವನ ಮುಂದುವರಿಯುತ್ತಲೇ ಹೋಗುತ್ತದೆ. ಕೊನೆಗೆ ಗೋಡೆಯ ಮೇಲಿನ ಚಿತ್ರಪಟವಾಗಿ ಉಳಿಯುವುದು ಮಾತ್ರ. ಹಾಗಾಗಿ ಹಣ, ಆಸ್ತಿ, ‘ನಾನು-ನನ್ನದು’ ಎನ್ನುವುದಕ್ಕಿಂತ ಇರುವ ದಿನವನ್ನು ತೃಪ್ತಿಯಿಂದ, ಸಂತೋಷದಿಂದ ಬದುಕಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ. “ಕಾಲವನ್ನು ತಡೆಯೋರು ಯಾರು ಇಲ್ಲ. ತೃಪ್ತರಾಗಿರಿ, ಸಂತೋಷವಾಗಿರಿ, ಇಂದಿನ ದಿನವನ್ನು ಆನಂದಿಸಿ. ನಾಳೆ ಏನಾಗುತ್ತೋ ಯಾರಿಗೂ ತಿಳಿದಿಲ್ಲ” ಎಂಬ ಅವರ ಮಾತುಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಸಾಮಾನ್ಯವಾಗಿ ಹಾಸ್ಯ ಹಾಗೂ ಮನರಂಜನೆಯ ಮೂಲಕ ಜನರನ್ನು ರಂಜಿಸುವ ಜಗ್ಗೇಶ್, ಈ ಬಾರಿ ತಮ್ಮ ಜೀವನದ ನಿಜವಾದ ಕಥೆಯ ಮೂಲಕ ಅಭಿಮಾನಿಗಳ ಮನಸ್ಸು ಮುಟ್ಟಿದ್ದಾರೆ. ಅಮ್ಮನ ₹1,800ರಿಂದ ಆರಂಭವಾದ ಬುಲೆಟ್ ಪಯಣ, ನಾಲ್ಕು ತಲೆಮಾರುಗಳನ್ನು ದಾಟಿ ಇಂದಿಗೂ ಮುಂದುವರಿದಿದೆ. ಅದಕ್ಕಾಗಿಯೇ ನೆಟ್ಟಿಗರು ಕೂಡ ಜಗ್ಗೇಶ್ ಅವರ ಬರಹಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, “ಬದುಕಿಗೊಂದು ಅರ್ಥ ಹೇಳಿದ ನಟ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಂದು ಹಳೆಯ ಬುಲೆಟ್.. ಅದರ ಹಿಂದೆ ಸಾವಿರಾರು ನೆನಪುಗಳು.. ಅದರೊಳಗೆ ಅಪ್ಪ-ಅಮ್ಮನ ಪ್ರೀತಿ, ಪ್ರೇಮದ ದಿನಗಳು, ಕುಟುಂಬದ ಬೆಳವಣಿಗೆ ಮತ್ತು ಕಾಲದ ಅನಿವಾರ್ಯ ಪಯಣ. ಜಗ್ಗೇಶ್ ಅವರ ಈ ಕಥೆ ಬಹುಶಃ ಒಂದು ಬೈಕ್‌ನ ಕಥೆಯಲ್ಲ; ಬದುಕು ಹೇಗೆ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತದೆ ಎಂಬುದರ ಕಥೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.