ಮೈಸೂರು ದಸರಾ ಸಂಭ್ರಮದ ನಡುವೆ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮದಲ್ಲಿ ಸಂಗೀತ ಮಾಂತ್ರಿಕ ಇಳಯರಾಜ ತಮ್ಮ ಸೂಪರ್ ಹಿಟ್ ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಈ ವೇಳೆ ಅವರು ಕನ್ನಡ ಸಿನಿಮಾ ಲೋಕದ ಕೆಲವು ಅಚ್ಚರಿಯ ಸಂಗತಿಗಳನ್ನು ತಿಳಿಸಿದರು.
ಮೈಸೂರು (ಅ.11): 'ಐ ಲವ್ ಮೈಸೂರು..' ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದಲೇ ನಾನು ಮತ್ತೆ ಮೈಸೂರಿಗೆ ಬರುವಂತಾಗಿದೆ ಎಂದು ಸಂಗೀತ ಮಾಂತ್ರಿಕ ಇಳಯರಾಜ ದಸರಾ ವೇದಿಕೆಯಲ್ಲಿ ಹೇಳಿದರು. ಯುವ ದಸರಾ ಸಂಭ್ರಮವನ್ನು ಹೆಚ್ಚಿಸಿದ ಇಳಯರಾಜಾ ಅವರ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಅವರು ಸಂಗೀತ ನಿರ್ದೇಶನ ಮಾಡಿದ ಆಲ್‌ಟೈಮ್ ಫೇವರಿಟ್ ಸಾಂಗ್‌ಗಳ ಮೇಳ ನಡೆಯಿತು. ಈ ವೇಳೆ ಮೈಸೂರಿನ ಜೊತೆಗಿರುವ ನಂಟಿನ ಬಗ್ಗೆಯೂ ಇಳಯರಾಜ ಮಾತನಾಡಿದರು. ಅದಲ್ಲದೆ, ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರಿಗೆ ಹಾಡುವಂತೆ ಮೊದಲು ಹೇಳಿದ್ದು ನಾನೇ ಎನ್ನುವ ವಿಚಾರವನ್ನೂ ಕೂಡ ಇಳಯರಾಜ ತಿಳಿಸಿದರು. ನಾನು 1974ರಲ್ಲಿ ಕಾರ್ಯಕ್ರಮ ನೀಡಲು ಮೈಸೂರಿಗೆ ಬಂದಿದ್ದೆ. ಅಂದಿನಿಂದಲೂ ಈ ನಗರದೊಂದಿಗೆ ನನ್ನ ನಂಟಿದೆ.
ಜಿ.ಕೆ ವೆಂಕಟೇಶ್, ಪಿ.ಬಿ ಶ್ರೀನಿವಾಸ್, ಎಸ್ ಜಾನಕಿ ಅವರ ಜೊತೆಯಲ್ಲಿ ಕೀ ಬೋರ್ಡ್ ನುಡಿಸಲು ಇಲ್ಲಿಗೆ ಬಂದಿದೆ. ಚಾಮುಂಡೇಶ್ವರಿ ತಾಯಿಯ ಆಶೀರ್ವಾದವೇ ಇಂದು ನನ್ನನ್ನು ಮತ್ತೆ ಮೈಸೂರಿಗೆ ಬರುವಂತೆ ಮಾಡಿದೆ. ನಿಮ್ಮನ್ನೆಲ್ಲಾ ನೋಡುವ ಅವಕಾಶ ಸಿಕ್ಕಿದೆ ಎಂದು ಖುಷಿಯಾದರು. ಮೊದಲ ಬಾರಿಗೆ ಮೈಸೂರಿನಲ್ಲಿ ಶೋ ನೀಡಿದ ಬಳಿಕ ನೇರವಾಗಿ ಕೊಲ್ಲೂರಿಗೆ ತೆರಳಿಗೆ ಮೂಕಾಂಬಿಕಾ ತಾಯಿಯ ದರ್ಶನ ಮಾಡಿದೆ. ಆ ದೇವಿಯ ಸೌಂದರ್ಯ ನೋಡಲು ಕಣ್ಣುಗಳೇ ಸಾಲದು ಎನ್ನುವ ಮೂಲಕ ಭಕ್ತಿಗೀತೆ ಹಾಡಿ ಆರಾಧನೆ ಮಾಡಿದರು.
ಇದೇ ವೇಳೆ ಡಾ.ರಾಜ್‌ಕುಮಾರ್ ಅವರನ್ನೂ ಇಳಯರಾಹಾ ನೆನೆದರು. ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್‌ಕುಮಾರ್ ಅವರು ಮೊದಲಿಗೆ ಕನ್ನಡದಲ್ಲಿ ಹಾಡಿದ್ದು ಯಾರೇ ಕೂಗಾಡಲಿ ಎನ್ನುವ ಹಾಡು. ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದವರು ನನ್ನ ಗುರುಗಳಾದ ಜಿಕೆ ವೆಂಕಟೇಶ್ ಅವರು. ಈ ಹಾಡನ್ನು ಅಣ್ಣಾವ್ರಿಂದಲೇ ಹಾಡಿಸಿದರೆ ಹೇಗೆ. ಅವರು ಹಾಡಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದೆ. ಕೊನೆಗೆ ಅದೇ ನಿಜವಾಯಿತು. ರಾಜ್‌ಕುಮಾರ್ ಕೂಡ ಈ ಹಾಡಲು ಹೇಳಲು ಒಪ್ಪಿಕೊಂಡಿದ್ದರು ಎಂದು ಅಂದಿನ ದಿನವನ್ನು ನೆನಪಿಸಿಕೊಂಡರು.
‘ಕೇಳದೇ ನಿಮಗೀಗ..’ ಹಾಡು ಹುಟ್ಟಿದ್ದು ಹೇಗೆ.. ಸ್ವತಃ ಇಳಯರಾಜ ಬಹಿರಂಗಪಡಿಸಿದರು ಸತ್ಯ
ಮೈಸೂರಿನಲ್ಲಿಯೇ ಕೊನೆಯ ಕಾರ್ಯಕ್ರಮ ನೀಡಿದ್ದ ಎಸ್‌ಪಿಬಿ: ಸಂಗೀತ ದಿಗ್ಗಜರಾದ ಎಸ್‌ಪಿ ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಹಾಗೂ ಇಳಯರಾಜ ಅವರಲ್ಲಿ ಬಹುತೇಕ ಸಾಮ್ಯತೆಗಳಿವೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ತಮ್ಮ ಕೊನೆಯ ಸಂಗೀತ ಕಾರ್ಯಕ್ರಮವನ್ನು ಮೈಸೂರಿನಲ್ಲಿಯೇ ನೀಡಿದ್ದರು. ಈ ವೇಳೆ ಅವರು ಮುಂದಿನ ಜನ್ಮ ಅಂತಿದ್ದರೆ, ಕನ್ನಡ ನಾಡಿನಲ್ಲಿಯೇ ಹುಟ್ಟೋದಾಗಿ ತಿಳಿಸಿದ್ದರು. ಎಸ್. ಜಾನಕಿ ಕೂಡ ಕರ್ನಾಟಕದಲ್ಲಿ ತಮ್ಮ ಕೊನೆಯ ಕಾರ್ಯಕ್ರಮವನ್ನು ಮೈಸೂರಿನಲ್ಲಿಯೇ ನೀಡಿದ್ದರು.
ಇಳೆಯರಾಜಗೋಸ್ಕರ ನೋವಿನ ಹಾಡನ್ನೂ ಖುಷಿಯಾಗಿಯೇ ಹಾಡಿದ್ದ ಎಸ್‌ಪಿಬಿ
ಸಾಮಾನ್ಯವಾಗಿ ಯುವದಸರಾ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಪರಭಾಷೆಯ ಹಾಡುಗಳನ್ನೇ ಹಾಡುವುದರ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಇಳಯರಾಜ ಶೋನಲ್ಲಿ ಹೆಚ್ಚಿನ ಕನ್ನಡದ ಹಾಡುಗಳೇ ರಾರಾಜಿಸಿದವು. ಕನ್ನಡದಲ್ಲಿಯೇ ಅವರು ಹೆಚ್ಚಿನ ಮಾತುಕತೆ ನಡೆಸಿದರು.