
‘ಚಿತ್ರೋತ್ಸವಕ್ಕೆ ಆಗಮಿಸಲು ವಿದೇಶದ ನಿರ್ದೇಶಕರಿಗೆ ಆಹ್ವಾನ ಹೋಗಿದೆ. ಆದರೆ ಕನ್ನಡದ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರಿಗೆ ಆಹ್ವಾನ ಹೋಗಿಲ್ಲ ಅನ್ನುವುದು ಈಗ ದೊಡ್ಡ ಸುದ್ದಿಯಾಗಿದೆ. ಚಿತ್ರೋತ್ಸವದಲ್ಲಿ ನನ್ನ ಸಿನಿಮಾ ಪ್ರದರ್ಶನ ಆಗಿದೆ. ಆದರೆ ನನಗೆ ಆಹ್ವಾನವೇ ಬಂದಿಲ್ಲ, ನಾನು ಹೋಗುವುದೂ ಇಲ್ಲ’ ಎಂದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ. ಕನ್ನಡದ ಮೇರು ನಿರ್ದೇಶಕ, ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟ ಹಿರಿಯ ನಿರ್ದೇಶಕರಿಗೆ ಚಿತ್ರೋತ್ಸವಕ್ಕೆ ಆಹ್ವಾನ ಹೋಗಿಲ್ಲ ಅನ್ನುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಕನ್ನಡದ ಸಿನಿಮಾಗಳನ್ನು ಆರ್ಕೈವ್ ಮಾಡಿಟ್ಟುಕೊಳ್ಳುವ ಬಗ್ಗೆ ಮಾತನಾಡಿರುವ ಅವರು, ‘ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾದ ಪಿ.ಕೆ. ನಾಯರ್ ಅವರಿಲ್ಲದೇ ಇದ್ದಿದ್ದರೆ ನಮಗೆ ಫಾಲ್ಕೆ ಅವರ ‘ರಾಜ ಹರಿಶ್ಚಂದ್ರ’ ಚಿತ್ರವೇ ಸಿಗುತ್ತಿರಲಿಲ್ಲ. ಸಿನಿಮಾಗಳನ್ನು ಕಾಪಾಡಿಕೊಳ್ಳುವುದು ಬಹಳ ಮಹತ್ವದ ಕೆಲಸ. ನನ್ನ ವಿಷಯದಲ್ಲೇ ಹೇಳುವುದಾದರೆ ನಾನು ಮಾಡಿದ 16 ಸಿನಿಮಾಗಳ ಪೈಕಿ 10 ಸಿನಿಮಾಗಳು ಈಗಾಗಲೇ ಹಾಳಾಗಿವೆ. ‘ದ್ವೀಪ’ದವರೆಗೆ ನನ್ನ ಯಾವ ಚಿತ್ರದ ನೆಗೆಟಿವ್ ಕೂಡ ಸಿಗುವುದಿಲ್ಲ. ಹಿಂದಿ ಸಿನಿಮಾಗಳು ಆರ್ಕೈವ್ ಆಗುತ್ತವೆ, ಆದರೆ ಕನ್ನಡದ ಚಿತ್ರಗಳ ಆರ್ಕೈವಿಂಗ್ ಆಗುವುದು ಕಡಿಮೆ. ನಿರ್ಮಾಪಕರಿಗೆ ಈ ಕುರಿತು ಅರಿವಿಲ್ಲ. ಕರ್ನಾಟಕ ಚಲನಚಿತ್ರ ಅಕಾಡೆಮಿ ಆ ಕೆಲಸ ಮಾಡಬೇಕಿತ್ತು. ಆದರೆ ಅವರು ನಾಲ್ಕು ಜನ ವಿದೇಶಿಗರನ್ನು ಕರೆಸಿ ಚಿತ್ರೋತ್ಸವ ಮಾಡುವುದೇ ದೊಡ್ಡ ಕೆಲಸ ಅಂದುಕೊಂಡಿದ್ದಾರೆ’ ಎಂದು ಹೇಳಿದರು.
ಒಂದು ಕಡೆ ಸ್ಟಾರ್‌ಗಳಿಗೆ ಆಹ್ವಾನ ಹೋಗಿಲ್ಲ, ಆಹ್ವಾನವೇ ಇರದೆ ಅವರು ಹೇಗೆ ಬರಲು ಸಾಧ್ಯ ಎಂಬ ಮಾತು ಅವರ ಆಪ್ತರಿಂದ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಹಿರಿಯ ನಿರ್ದೇಶಕರು, ತಂತ್ರಜ್ಞರು ತಮಗೆ ಆಹ್ವಾನವೇ ಬಂದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ಗಿರೀಶ್ ಕಾಸರವಳ್ಳಿಯವರಿಗೂ ಆಹ್ವಾನ ನೀಡದೇ ಇರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಅವರಷ್ಟೇ ಅಲ್ಲದೆ, ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ, ರಾಜೇಂದ್ರ ಸಿಂಗ್ ಬಾಬು ಮುಂತಾದವರು ಕೂಡ ಆಹ್ವಾನ ಪತ್ರಿಕೆ ತಲುಪದಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಶದ ಅಪರೂಪದ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ: ಜಯಮಾಲಾ
ಉತ್ಸವಕ್ಕೆ ಕರೆಯುವ ಕನಿಷ್ಠ ಸೌಜನ್ಯ ತೋರಿಸಿಲ್ಲ, ಮುದ್ದುಕೃಷ್ಣ: ‘ನಾನು ರೀಮೇಕ್ ಫಿಲ್ಮ್ ರಿವ್ಯೂ ಸಮಿತಿ ಅಧ್ಯಕ್ಷ ನಾಗಿ ಏಳು ವರ್ಷ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಸಂಸ್ಕೃತಿ ಇಲಾಖೆ ನಿರ್ದೇಶಕನಾಗಿ, ಸುಗಮ ಸಂಗೀತ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಆದರೂ ಚಲನಚಿತ್ರೋತ್ಸವಕ್ಕೆ ಕರೆಯುವ ಕನಿಷ್ಠ ಸೌಜನ್ಯವನ್ನೂ ಆಯೋಜಕರು ತೋರಿಸಿಲ್ಲ’ ಎಂದು ಹಿರಿಯ ಗಾಯಕ ಮುದ್ದುಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.