ರಾಕಿಂಗ್ ಸ್ಟಾರ್ ಯಶ್ ಗೆ 36ನೇ ಹ್ಯಾಪಿ ಬರ್ತ್ ಡೇ. ಸಿನಿಮಾ ಫೀಲ್ಡ್ ನ ಯಾವುದೇ ಹಿನ್ನೆಲೆ ಇಲ್ಲದ ಮಧ್ಯಮ ವರ್ಗದ ಹುಡುಗ ಇದೀಗ ಜಗತ್ತಿನ ಗಮನ ಸೆಳೆಯುತ್ತಿರುವ ಸೂಪರ್ ಸ್ಟಾರ್. ಇದೆಲ್ಲ ಹೇಗೆ ಸಾಧ್ಯ ಆಯ್ತು!
ಈಗ ಸ್ಯಾಂಡಲ್‌ವುಡ್‌ನಲ್ಲಿ (Sandal wood) ರಾಕಿಂಗ್ ಸ್ಟಾರ್ (Rocking star) ಅಂತಲೇ ಕರೆಸಿಕೊಳ್ಳುತ್ತಿರುವ ಯಶ್ (Yash) ಅವರದು ಮಧ್ಯಮ ವರ್ಗದ ಹಿನ್ನೆಲೆ. ನವೀನ್ ಗೌಡ ಅನ್ನೋದು ಮೂಲ ಹೆಸರು. ಹಾಸನ ಜಿಲ್ಲೆಯ ಭುವನಹಳ್ಳಿ ಹುಟ್ಟೂರು. ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪಾ. ಅರುಣ್ ಅವರು ಬಿಎಂಟಿಸಿಯ ಚಾಲಕರು. ತಾಯಿ ಪುಷ್ಪಾ ಹೋಂ ಮೇಕರ್.
ಓದಿದ್ದು ಪಿಯುಸಿ
undefined
ಯಶ್ ಓದಿದ್ದು ಪಿಯುಸಿವರೆಗೆ. ಎಲ್ಲ ಯುವಕರು ಕನಸು ಕಾಣುವ ಹದಿನೇಳರ ಹರೆಯದಲ್ಲೇ ಪಿಯು ಕಾಲೇಜಿಗೆ ಗುಡ್ ಬೈ ಹೇಳ್ತಾರೆ. ಕಾರಣ ಆರ್ಥಿಕ ಸಮಸ್ಯೆ. ತಂದೆ ಒಬ್ಬರ ದುಡಿಮೆಯಲ್ಲಿ ಸಂಸಾರದ ರಥ ಮುಂದೆ ಹೋಗೋದು ಕಷ್ಟ ಅನಿಸಿ ಯಶ್ ಅನಿವಾರ್ಯವಾಗಿ ಓದನ್ನು ಡಿಸ್ ಕಂಟಿನ್ಯೂ ಮಾಡುತ್ತಾರೆ. ಮುಂದೇನು ಅನ್ನೋ ದೊಡ್ಡ ಪ್ರಶ್ನೆಗೆ ಉತ್ತರ ಅನ್ನೋ ಹಾಗೆ ಒಂದು ಪ್ರಾವಿಜನ್ ಸ್ಟೋರ್ ತೆರೆದರು. 'ನವೀನ್ ಪ್ರಾವಿಜನ್ ಸ್ಟೋರ್' ಮೂಲಕ ವ್ಯಾಪಾರ ಮಾಡುತ್ತಾ ಕುಟುಂಬದ ಜವಾಬ್ದಾರಿ ತೆಗೆದುಕೊಂಡರು.
ಇವರ ಡ್ಯಾನ್ಸ್ ಕಂಡು ಉಪ್ಪಿ (Upendra) ಶಾಭಾಷ್ ಅಂದಿದ್ರು!
ಸ್ಕೂಲ್ ಡೇಸ್‌ನಿಂದಲೂ ಯಶ್‌ಗೆ ಡ್ಯಾನ್ಸ್ ಅಂದ್ರೆ ಬಹಳ ಇಷ್ಟ. ಕನ್ನಡ ಸಿನಿಮಾ ಅಂದರೂ ಅಷ್ಟೇ ಪ್ರೀತಿ. ಹೈಸ್ಕೂಲ್ ದಿನಗಳಿಂದಲೇ ಸ್ಕೂಲ್ ಹೊರಗಿನ ಡ್ಯಾನ್ಸ್ ಪ್ರೋಗ್ರಾಂಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಅದೊಂದು ಸಲ ಮೈಸೂರಿನಲ್ಲಿ ಯಾವುದೋ ಆರ್ಕೆಸ್ಟ್ರಾ ನಡೀತಿತ್ತು. ಅದಕ್ಕೆ ಅತಿಥಿಯಾಗಿ ಉಪೇಂದ್ರ ಬಂದಿದ್ದರು. ಚಿಕ್ಕ ಹುಡುಗ ನವೀನ್ ಆರ್ಕೆಸ್ಟ್ರಾ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡೋದನ್ನು ಕಂಡ ಉಪೇಂದ್ರ ಹುಡುಗನನ್ನು ಕರೆದು ಮೆಚ್ಚುಗೆಯ ಮಾತಾಡಿ ಶಾಭಾಷ್ ಅಂತ ಹೊಗಳಿದರು. ಆ ಹೊತ್ತಿಗಾಗಲೇ ಸಿನಿಮಾ ರಂಗದಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿದ್ದ ಉಪ್ಪಿ ಮಾತು ನವೀನ್‌ನಲ್ಲಿ ತುಂಬಿದ ಸ್ಫೂರ್ತಿ ಅವರು ಎಂಟರ್‌ಟೈನ್‌ಮೆಂಟ್ ಫೀಲ್ಡ್‌ಗೆ ಬರಲು ಮೊದಲು ಮೆಟ್ಟಿಲು.
ನಾಟಕ ಮಾಡುತ್ತಿದ್ದ ದಿನಗಳು
ಬೆಂಗಳೂರಿನ ಥಿಯೇಟರ್ ಸರ್ಕಲ್‌ನಲ್ಲಿ ಯಶ್ ಬಗ್ಗೆ ಅನೇಕ ಕತೆಗಳು ಕೇಳಿಬರುತ್ತವೆ. ಅವುಗಳಲ್ಲೊಂದು ಅವರ ಸ್ವಾಭಿಮಾನದ್ದು. ಕೈಯಲ್ಲಿ ಹಣವಿಲ್ಲದೇ ಬಸ್‌ಸ್ಟಾಂಡ್‌ನಲ್ಲಿ ಮಲಗಿ ನೀರು ಕುಡಿದು ನಾಟಕ ತಂಡದ ರಿಹರ್ಸಲ್‌ಗೆ ಅವರು ಬರುತ್ತಿದ್ದರು. ಕೈಯಲ್ಲಿ ಕಾಸಿಲ್ಲದಿದ್ದರೂ ಹೊಟ್ಟೆ ಹಸಿವಿನಿಂದ ಚುರುಗುಟ್ಟುತ್ತಿದ್ದರೂ ಯಾರ ಮುಂದೆಯೂ ಹಣಕ್ಕೆ ಕೈ ಚಾಚಿದವರಲ್ಲ. ಕೊನೆಗೊಮ್ಮೆ ಇವರ ಸ್ಥಿತಿ ಬಗ್ಗೆ ತಿಳಿದುಕೊಂಡ ಹಿರಿಯ ರಂಗ ನಿರ್ದೇಶನಕರೊಬ್ಬರು ಪಕ್ಕದ ಕ್ಯಾಂಟೀನ್‌ನವರಿಗೆ ಒಂದು ಮಾತು ಹೇಳ್ತಾರೆ, 'ಈ ಹುಡುಗ ಯಾವಾಗ ಎಷ್ಟು ತಿಂತಾನೋ ಅಷ್ಟು ಊಟ, ತಿಂಡಿ ಕೊಡಿ. ಕಾಸು ಮಾತ್ರ ತೊಗೋಬೇಡಿ. ಅದನ್ನೆಲ್ಲ ನನ್ನ ಅಕೌಂಟ್‌ಗೆ ಸೇರಿಸಿ' ಅಂತ. ಆಮೇಲೆ ಯಶ್ ಹಸಿವಿನಿಂದ ಬವಳಿ ಬಂದು ಕೂರುವ ದಿನಗಳು ದೂರಾದವು ಅನ್ನೋದು ನಾಟಕ ತಂಡದವರೇ ಹೇಳುವ ಕಥೆ. ಇಷ್ಟಾದರೂ ಯಶ್ ನಟನಾಗಿ ಕಾಣಿಸಿಕೊಂಡಿದ್ದು ಕಡಿಮೆ. ಬ್ಯಾಕ್‌ಸ್ಟೇಜ್ ಕೆಲಸ ಮಾಡುತ್ತಿದ್ದದ್ದೇ ಹೆಚ್ಚು.
ಸೀರಿಯಲ್‌ನಲ್ಲಿ (Serial) ಸಿಕ್ಕ ಹುಡುಗಿ ಬಾಳ ಗೆಳತಿಯಾದಳು
ಯಶ್ ಮೊದಲ ಸೀರಿಯಲ್ ನಂದಗೋಕುಲ. ಈ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದ ಹುಡುಗಿ ರಾಧಿಕಾ ಪಂಡಿತ್ (Radhika Pandith). ಈ ಹುಡುಗಿಯ ನಟನೆ, ಸ್ವಭಾವ, ಸೌಂದರ್ಯ ಎಲ್ಲವೂ ಯಶ್ ಗಮನ ಸೆಳೆಯಿತು. ಮುಂದೆ ಅನಂತ್‌ನಾಗ್ (Ananthnag) ಜೊತೆಗೆ 'ಪ್ರೀತಿ ಇಲ್ಲದ ಮೇಲೆ' ಎಂಬ ಸೀರಿಯಲ್‌ನಲ್ಲೂ ನಟಿಸುತ್ತಾರೆ. ಯಶ್ ಸಿನಿಮಾದಲ್ಲಿ ಭರವಸೆ ಮೂಡಿಸಿದ್ದು ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ. ಈ ಸಿನಿಮಾದಲ್ಲೂ ಅವರ ಮನಕದ್ದ ಹುಡುಗಿ ರಾಧಿಕಾ ಅವರ ನಾಯಕಿಯಾಗಿ ಕಾಣಿಸಿಕೊಂಡರು. ಮುಂದೆ 'ಕಿರಾತಕ' ಚಿತ್ರ ಬಿಗ್ ಹಿಟ್ ಆಯ್ತು. 'ಲಕ್ಕಿ', 'ಡ್ರಾಮಾ', 'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ' ಯಂಥಾ ಸಿನಿಮಾಗಳು ಭರ್ಜರಿ ಸಕ್ಸಸ್ ದಾಖಲಿಸಿದರೆ, ರಾಧಿಕಾ ಪಂಡಿತ್ ಜೊತೆಗಿನ 'ಮಿಸ್ಟರ್ ಆಂಡ್ ಮಿಸ್ಸೆಸ್ ರಾಮಾಚಾರಿ' ಯಶ್ ಅವರನ್ನು ಬೇರೇ ಲೆವೆಲ್‌ಗೆ ಕೊಂಡೊಯ್ಯಿತು. ರಾಧಿಕಾ ಪಂಡಿತ್ ಈ ಹೊತ್ತಿಗೆ ಅವರ ಮನದನ್ನೆಯಾಗಿದ್ದು ಮತ್ತೊಂದು ವಿಶೇಷ.
Yash Birthday: ಕುಟುಂಬದ ಜೊತೆ ಸರಳವಾಗಿ ಬರ್ತ್‌ಡೇ ಆಚರಿಸಲಿರುವ ರಾಕಿಂಗ್ ಸ್ಟಾರ್
ಕೆಜಿಎಫ್ (KGF) ನ ಭರ್ಜರಿ ಸಕ್ಸಸ್
ಇಡೀ ಜಗತ್ತೇ ಯಶ್ ಅನ್ನೋ ತರುಣ ನಟನತ್ತ ತಿರುಗಿ ನೋಡೋ ಹಾಗೆ ಮಾಡಿದ್ದು ಕೆಜಿಎಫ್. ಮೂರು ವರ್ಷಗಳ ಕೆಳಗೆ ವಿಜಯ್ ಕಿರಗಂದೂರು ನಿರ್ಮಾಣದ ಬಹುಕೋಟಿ ಬಜೆಟ್‌ನ ಈ ಚಿತ್ರದ ನಿರ್ದೇಶಕರು ಪ್ರಶಾಂತ್ ನೀಲ್ (Prashanth Neel). ಇಡೀ ದೇಶದಲ್ಲೇ ಯಶ್ ಅಂದರೆ ಯುವಕರು ಮೀಸೆ ತಿರುವಿ ಅಭಿಮಾನ ಪ್ರಕಟಿಸಲು ಕಾರಣವಾದ ಚಿತ್ರವಿದು. ಈ ಸಿನಿಮಾದ ಬಳಿಕ ಯಶ್ ಇಂಡಿಯನ್ ಸ್ಟಾರ್ ಆಗಿ ಗುರುತಿಸಿಕೊಂಡರು. ಇತ್ತೀಚೆಗೆ ಅಮೀರ್‌ಖಾನ್ (Amir Khan) ರಂಥಾ ಬಾಲಿವುಡ್ ನಟರೂ ಯಶ್ ನಟನೆಯನ್ನು ಹಾಡಿ ಹೊಗಳಿದ್ದಾರೆ. ಅನೇಕ ಸ್ಟಾರ್ ನಟರು ಯಶ್ ಆಕ್ಟಿಂಗ್‌ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಇದೀಗ ಬಹು ನಿರೀಕ್ಷೆಯ ಕೆಜಿಎಫ್ 2 ಪೋಸ್ಟರ್ ಯಶ್ ಬರ್ತ್ಡೇ ದಿನ ರಿಲೀಸ್ ಆಗಿದೆ. ಒಂದು ಅಚ್ಚರಿ ಅಂದರೆ ಈ ಹಿಂದೆ ಪ್ರಕಟಿಸಿದಂತೇ ಏಪ್ರಿಲ್ 14ರಂದೇ ಸಿನಿಮಾ ರಿಲೀಸ್ ಮಾಡೋದಾಗಿ ಸಿನಿಮಾ ತಂಡ ಹೇಳಿಕೊಂಡಿದೆ.
ಇದರ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನೂ ಯಶ್ ಮಾಡುತ್ತಿದ್ದಾರೆ. 'ಯಶೋಮಾರ್ಗ' ಮೂಲಕ ಅನೇಕ ಸಾಮಾಜಿಕ ಕಾರ್ಯ ಮಾಡಿದ್ದಾರೆ. ಯಶ್ ಬರ್ತ್ ಡೇಯನ್ನು ಇಡೀ ಚಿತ್ರರಂಗ, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ನಿನ್ನೆಯಿಂದಲೇ 'ವರ್ಲ್ಡ್ ಈಸ್ ಮೈ ಟೆರಿಟರಿ' ಅನ್ನೋ ಟ್ಯಾಗ್‌ಲೈನ್‌ನಲ್ಲಿ ಅವರ ಸಿಡಿಪಿಗಳು ವೈರಲ್ ಆಗುತ್ತಿವೆ. ಟೀಮ್ ಕೆಜಿಎಫ್ ಯಶ್ ಅವರ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ. ಎಲ್ಲೆಡೆ ಯಶ್ ಯಿಸಂ ಹಬ್ಬುತ್ತಿದೆ. ಹ್ಯಾಪಿ ಬರ್ತ್ ಡೇ ರಾಕಿಂಗ್ ಸ್ಟಾರ್!