ಆ್ಯಂಕರ್ ಅಪರ್ಣಾ ಸಾವು, ಶ್ವಾಸಕೋಶದ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಅಧ್ಯಯನ ವರದಿಗಳು ಹೇಳುವುದು ಏನು?
ಎರಡು ವರ್ಷಗಳಿಂದ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ತಮ್ಮೊಳಗೆ ಅಡಗಿಸಿಟ್ಟುಕೊಂಡು ಯಾರಿಗೂ ಹೇಳದೇ ನಿರೂಪಕಿ ಅಪರ್ಣಾ ಕಣ್ಮರೆಯಾಗಿ ಹೋಗಿದ್ದಾರೆ. ಇದನ್ನು ಕನ್ನಡಿಗರಿಗೆ ಇನ್ನೂ ಅರಗಿಸಿಕೊಳ್ಳಲು ಆಗದ ವಿಷಯವೇ. ಇವರ ಸಾವಿನ ಬಳಿಕ ಶ್ವಾಸಕೋಶದ ಕ್ಯಾನ್ಸರ್ ಕುರಿತು ಜನರಲ್ಲಿ ಇನ್ನಷ್ಟು ಆತಂಕ ಮನೆಮಾಡಿದ್ದಂತೂ ಸತ್ಯ. ಏಕೆಂದರೆ, ಎಲ್ಲರಿಗೂ ತಿಳಿದಿರುವಂತೆ ಅಪರ್ಣಾ ಅತ್ಯಂತ ಸುಸಂಸ್ಕೃತ, ಆರೋಗ್ಯಕರ ಜೀವನ ನಡೆಸುತ್ತಿದ್ದರು. ಶ್ವಾಸಕೋಶದ ಕ್ಯಾನ್ಸರ್ ಎಂದಾಕ್ಷಣ ಎಲ್ಲರ ಕಣ್ಣೆದುರಿಗೆ ಬರುವುದು ಸ್ಮೋಕಿಂಗ್ ಮಾಡುವ ಮನುಷ್ಯರೇ. ಆದರೆ ಯಾವ ಚಟವೂ ಇಲ್ಲದಿದ್ದ ಅಪರ್ಣಾ, ಮಾತನ್ನೇ ಉಸಿರಾಗಿಸಿಕೊಂಡ ನಿರೂಪಕಿ, ಶ್ವಾಸಕೋಶದ ಕ್ಯಾನ್ಸರ್‌ಗೆ ಬಲಿಯಾಗಿದ್ದು ಹೇಗೆ ಎಂಬುದು ಕೂಡ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಂಥ ನಗರದಲ್ಲಿರೋ ವಾಯು ಮಾಲಿನ್ಯವೂ ಇದಕ್ಕೆ ಕಾರಣವಾಗಿಬಹುದು ಎಂದೇ ಹೇಳಲಾಗುತ್ತಿದ್ದರೂ, ಇತ್ತೀಚಿಗೆ ಬಿಡುಗಡೆಯಾಗಿರುವ ಅಧ್ಯಯನವೊಂದು ನಾನ್ ಸ್ಮೋಕರ್ಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ಹೇಗೆ ಬಲಿಯಾಗುತ್ತಿದ್ದಾರೆ ಎನ್ನುವ ಅಂಶವೊಂದನ್ನು ತೆರೆದಿಟ್ಟಿದೆ.
ಅದೇ ಪಾಸಿವ್ ಸ್ಮೋಕಿಂಗ್! ಹೌದು. ಧೂಮಪಾನಿಗಳಿಗಿಂತಲೂ ಹೆಚ್ಚು ಕೆಟ್ಟ ಪರಿಣಾಮ ಬೀರುವುದು ಪಾಸಿವ್ ಸ್ಮೋಕರ್ಸ್ಗಳ ಮೇಲೆ ಎಂದಿದೆ ಈ ಅಧ್ಯಯನ ವರದಿ. ಎಂದರೆ ಸ್ಮೋಕಿಂಗ್ ಮಾಡುತ್ತಿರುವವರ ಸಮೀಪ ಇರುವುದು, ಅವರು ಬಿಟ್ಟ ಹೊಗೆಯನ್ನು ಸೇವಿಸುವುದು... ಇದಕ್ಕೆ ಪಾಸಿವ್ ಸ್ಮೋಕಿಂಗ್ ಇಲ್ಲವೇ ಸೆಕೆಂಡ್‌ಹ್ಯಾಂಡ್ ಸ್ಮೋಕರ್ಸ್ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಎನ್ನುವ ಕಾನೂನು ಕೂಡ ಜಾರಿಯಲ್ಲಿ ಇವೆ. ಆದರೆ ಕಾನೂನುಗಳು ಪುಸ್ತಕಗಳಿಗಷ್ಟೇ ಸೀಮಿತ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ರಸ್ತೆಗಳ ಮೇಲೆ ಹೀಗೆ ಸ್ಮೋಕ್ ಮಾಡುತ್ತಾ ಇರುವವರು, ಟ್ರಾಫಿಕ್ ಸಿಗ್ನಲ್ ನಿಂತರೆ ಸಾಕು, ಒಂದು ಸಿಗರೇಟ್ ಸೇಯುವುದು, ಅದಕ್ಕಿಂತಲೂ ಹೆಚ್ಚಾಗಿ ಮನೆಯಲ್ಲಿಯೇ ಯಾರಾದರೂ ಸ್ಮೋಕರ್ಸ್ ಇದ್ದರೆ... ಹೀಗೆ ಪಾಸಿವ್ ಸ್ಮೋಕರ್ಸ್ ಎಲ್ಲಿ ಬೇಕಾದರೂ ಸಿಗುತ್ತಾರೆ.
ಕಣ್ಣೆದುರೇ ಸಾವಿದ್ದರೂ ಇಂಥ ತುಂಟ ನಗು ಸಾಧ್ಯವೆ? ಅಪರ್ಣಾರನ್ನು ಬಿ.ಆರ್.ಛಾಯಾ ಭೇಟಿಯಾದ ಸಮಯದ ವಿಡಿಯೋ...
ಹೀಗೆ ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್ ಮಾಡಿದವರಲ್ಲಿ, ಪ್ರತಿ ವರ್ಷ ಸುಮಾರು 7,330 ಶ್ವಾಸಕೋಶದ ಕ್ಯಾನ್ಸರ್ ಸಾವುಗಳು ಸಂಭವಿಸುತ್ತವೆ, ಇದು ಶ್ವಾಸಕೋಶದ ಕ್ಯಾನ್ಸರ್, ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ ಎಂದಿದೆ ಅಧ್ಯಯನ. ಶ್ವಾಸಕೋಶದ ಕ್ಯಾನ್ಸರ್ ಅನ್ನು ಶ್ವಾಸಕೋಶದ ಕಾರ್ಸಿನೋಮ ಎಂದೂ ಕರೆಯುತ್ತಾರೆ, ಇದು ಶ್ವಾಸಕೋಶದಲ್ಲಿ ಪ್ರಾರಂಭವಾಗುವ ಮಾರಣಾಂತಿಕ ಗಡ್ಡೆಯಾಗಿದೆ . ಶ್ವಾಸಕೋಶದ ಕ್ಯಾನ್ಸರ್ ಉಸಿರಾಟದ ಮಾರ್ಗದಲ್ಲಿ ಜೀವಕೋಶಗಳ ಡಿಎನ್‌ಎಗೆ ಆನುವಂಶಿಕ ಹಾನಿಯಿಂದ ಉಂಟಾಗುತ್ತದೆ. ಸ್ಮೋಕ್ ಮಾಡುವವರಿಗೆ ಇದು ಅತಿ ಹೆಚ್ಚು ಅಪಾಯ ತಂದೊಡ್ಡಿದರೂ ಅವರು ಬಿಟ್ಟ ಹೊಗೆಯನ್ನು ಸೇವನೆ ಮಾಡುವವರಲ್ಲಿ ಆಘಾತಕಾರಿ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಗಳು ಇದಾಗಲೇ ಬಹಿರಂಗಪಡಿಸಿವೆ.
ಒಂದು ವೇಳೆ ಮನೆಯಲ್ಲಿಯೇ ಯಾರಿಗಾದರೂ ವಿಪರೀತ ಸ್ಮೋಕ್ ಮಾಡುವ ಅಭ್ಯಾಸವಿದ್ದರೆ, ಕಿಟಕಿಗಳ ಬಾಗಿಲು ತೆರೆದಿಟ್ಟರೆ ಮುಗಿಯಿತು ಎನ್ನುತ್ತಾರೆ. ಆದರೆ ನೀವು ಕಿಟಕಿಗಳನ್ನು ತೆರೆದರೂ, ಅದರ ಹೊಗೆ ಮನೆಯಾದ್ಯಂತ ಕೋಣೆಯಿಂದ ಕೋಣೆಗೆ ಹರಡುತ್ತದೆ, ಗಂಟೆಗಳ ಕಾಲ ಮನೆಯಲ್ಲಿಯೇ ಇರುವ ಗಾಳಿಯಲ್ಲಿ ಅದು ತೇಲಾಡುತ್ತಾ ಇರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಆದ್ದರಿಂದ ವೈದ್ಯರು ಇದಕ್ಕಾಗಿ ಕೆಲವೊಂದು ಸಲಹೆಗಳನ್ನೂ ಕೊಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎನ್ನುವುದು ಒಂದಾದರೆ, ಮನೆಯಲ್ಲಿಯೇ ಯಾರೂ ಧೂಮಪಾನ ಮಾಡಬೇಡಿ ಎನ್ನುವುದು. ಒಂದು ವೇಳೆ ಸ್ಮೋಕ್ ಮಾಡಲೇಬೇಕೆಂದರೆ, ಮನೆಯಿಂದ ದೂರ ಯಾರೂ ಇಲ್ಲದ ಕಡೆ ಮಾಡಿ, ಕಾರಿನಲ್ಲಿ ಅಥವಾ ವಾಹನದಲ್ಲಿ ಧೂಮಪಾನ ಮಾಡಬೇಡಿ. ಹೀಗೆ ಮಾಡಿ ನಿಮ್ಮವರನ್ನು ಸುರಕ್ಷಿತವಾಗಿರಿಸಿ ಎಂದು ಹೇಳಲಾಗುತ್ತಿದೆ.
ಅಪರ್ಣಾ, ಜೀವನವನ್ನು ನೋಡಿದ ಪರಿಯೇ ಸೊಗಸು... ಸಂದರ್ಶನವೊಂದರ ವಿಡಿಯೋ ತುಣುಕೀಗ ವೈರಲ್