
'ಇಕ್ಕಟ್', 'ಬಡವ ರಾಸ್ಕಲ್' ಸಿನಿಮಾ ಖ್ಯಾತಿಯ ನಾಗಭೂಷಣ್ (Nagabhushan) ಮತ್ತು ಪ್ರಿಯಾಂಕಾ ತಿಮ್ಮೇಶ್ (Priyanka Thimmesh) ನಟನೆಯ ವರ್ಚ್ಯುವಲ್ ಚಿತ್ರ 'ಮೇಡ್ ಇನ್ ಚೈನಾ' (Made in China).ಈ ಸಿನಿಮಾದ ಟೀಸರ್ (Teaser) ಈಗಾಗಲೇ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆದಿದೆ. ಹೌದು! ಆರಂಭದಿಂದ ಕೊನೆಯವರೆಗೂ ವೀಡಿಯೋ ಕಾಲ್ ಮೂಲಕವೇ ನಡೆಯುವ ಚಿತ್ರವಾಗಿದ್ದು, ಇದು ಕನ್ನಡದ ಮೊದಲ ವರ್ಚುವಲ್ ಸಿನಿಮಾವಾಗಿದೆ. ಈಗಾಗಲೇ ಮಲಯಾಳಂನಲ್ಲಿ ಇಂತಹದ್ದೊಂದು ಪ್ರಯತ್ನ ಮಾಡಲಾಗಿತ್ತು. ಲಾಕ್‌ಡೌನ್ ವೇಳೆ ಮಲಯಾಳಂ ನಟ ಫಹಾದ್ ಫಾಸಿಲ್ ಹಾಗೂ ತಂಡ ಸೇರಿಕೊಂಡು 'ಸಿ ಯು ಸೂನ್' (See You Soon) ಎಂಬ ಚಿತ್ರವನ್ನು ನಿರ್ಮಾಣ ಮಾಡಿತ್ತು.
ಇದೀಗ ಅದೇ ಮಾದರಿಯಲ್ಲಿ 'ಮೇಡ್ ಇನ್ ಚೈನಾ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 'ಮೇಡ್ ಇನ್ ಚೈನಾ' ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಸಿನಿಮಾ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಸಿನಿಮಾ. ಕಾನ್ಸೆಪ್ಟ್ ಅನ್ನೇ ಬಂಡವಾಳವಾಗಿಟ್ಟುಕೊಂಡು ನಿರ್ಮಿಸಿದ ಸಿನಿಮಾ. ಇದು ಕನ್ನಡದ ಮೊದಲ ವರ್ಚುವಲ್ ಸಿನಿಮಾ ಕೂಡ ಹೌದು. ಇಡೀ ವಿಡಿಯೋ ಕಾಲ್‌ಗಳ ಮೂಲಕವೇ ಸಾಗುತ್ತದೆ. ಈಗಾಗಲೇ ಬಿಡುಗಡೆಯಾಗಿರುವ 'ಮೇಡ್ ಇನ್ ಚೈನಾ' ಸಿನಿಮಾದ ಟೀಸರ್ ಈ ಕಾನ್ಸೆಪ್ಟ್‌ಗೆ ಜನರಿಗೆ ತಿಳಿಸಿದೆ. ಅಲ್ಲದೆ ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಅಂತಲೂ ಹಿಂಟ್ ಕೊಟ್ಟಿದೆ. ಇದೀಗ ಈ ಚಿತ್ರವು ತೆರೆಗೆ ಬರಲು ಸಜ್ಜಾಗಿದೆ.
Priyanka Thimmesh: 'ಮೇಡ್ ಇನ್ ಚೈನಾ' ಕನ್ನಡದ ಮೊದಲ ವರ್ಚ್ಯುವಲ್ ಸಿನಿಮಾ!
ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಇದೇ ಮಾರ್ಚ್ 11ಕ್ಕೆ 'ಮೇಡ್ ಇನ್ ಚೈನಾ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ಅಯೋಗ್ಯ', 'ರತ್ನಮಂಜರಿ' ಸಿನಿಮಾಗಳ ಛಾಯಾಗ್ರಾಹಕ ಪ್ರೀತಮ್ ತೆಗ್ಗಿನಮನೆ (Preetham Tegginamane) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಗ್ರಾಫಿಕ್ಸ್, ಎಡಿಟಿಂಗ್ ಹಾಗೂ ಛಾಯಾಗ್ರಹಣ ಕೂಡ ಇವರದ್ದೇ. 'ಇದೊಂದು ಪ್ರಯೋಗಶೀಲ ಚಿತ್ರ. ಈವರೆಗೆ ಇಂಥಾ ಚಿತ್ರವನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡಿದ ಉದಾಹರಣೆ ಇಲ್ಲ. ನಾವು ಆ ಸಾಹಸಕ್ಕೆ ಮುಂದಾಗಿದ್ದೇವೆ. ಇದು ಲಾಕ್‌ಡೌನ್ ಕಾಲದ ಫ್ಯಾಮಿಲಿ ಡ್ರಾಮಾ. ಗರ್ಭಿಣಿ ಪತ್ನಿ ಭಾರತದಲ್ಲಿರುತ್ತಾಳೆ, ಪತಿ ಚೀನಾದಲ್ಲಿರುತ್ತಾನೆ. ಇವರಿಬ್ಬರ ನಡುವಿನ ವೀಡಿಯೋ ಕಾಲ್ ಮಾತುಕತೆಯಲ್ಲೇ ಚಿತ್ರವಿದೆ' ಎಂದು ನಿರ್ದೇಶಕ ಪ್ರೀತಮ್ ತೆಗ್ಗಿನಮನೆ ತಿಳಿಸಿದ್ದಾರೆ.
ಇನ್ನು ಲಾಕ್‌ಡೌನ್‌ನಲ್ಲಿ ಫಾರಿನಲ್ಲಿ ಲಾಕ್ ಆಗುವ ನವ ಮದುಮಗನ ಪಾತ್ರದಲ್ಲಿ ನಾಗಭೂಷಣ್ ಕಾಣಿಸಿಕೊಂಡರೆ. ನಾಯಕಿಯಾಗಿ ಬಿಗ್‌ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ನಟಿಸಿದ್ದಾರೆ. 'ಬಡವ ರಾಸ್ಕಲ್' ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಕಾಮಿಡಿಯ ಕಚಗುಳಿ ಇಟ್ಟಿದ್ದ ನಾಗಭೂಷಣ ಈ ಚಿತ್ರದಲ್ಲೂ ಪ್ರೇಕ್ಷಕರಿಗೆ ಹಾಸ್ಯವನ್ನು ಉಣಬಡಿಸಲು ತವಕದಲ್ಲಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಪ್ರಿಯಾಂಕಾ ತಿಮ್ಮೇಶ್ ಅವರು ಗರ್ಭಿಣಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ದೃಶ್ಯಗಳು ವಿಡಿಯೋ ಕಾಲ್ ಮಾದರಿಯಲ್ಲಿ ಇದ್ದರೂ ಕೂಡ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಎಂಜಾಯ್ ಮಾಡಬಹುದು. ಈ ಹೊಸ ಪ್ರಕಾರಕ್ಕೆ ಹೊಂದಿಕೊಳ್ಳಲು ಪ್ರೇಕ್ಷಕರಿಗೆ 10 ನಿಮಿಷ ಬೇಕಾಗಬಹುದು. ನಂತರ ಸಿನಿಮಾ ಇಷ್ಟ ಆಗುತ್ತದೆ ಎಂದು ನಿರ್ದೇಶಕ ಪ್ರೀತಂ ಹೇಳಿದ್ದಾರೆ.
KGF Chapter 2: ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್: 'ಕೆಜಿಎಫ್ 2' ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್!
'ಮೇಡ್ ಇನ್ ಚೈನಾ' ವರ್ಚುವಲ್ ಸಿನಿಮಾವಾದ್ದರಿಂದ ಇದನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ನಾಗಭೂಷಣ್ ಅವರಿಗೆ ಆರಂಭದಲ್ಲಿ ಅನುಮಾನ ಇತ್ತು. ನಂತರ ಅವರ ಮನವೊಲಿಸಿ ಶೂಟಿಂಗ್ ಮಾಡಿದೆವು. ಈಗ ಔಟ್ಪುಟ್ ನೋಡಿ ಅವರು ಖುಷಿಪಟ್ಟಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಮತ್ತು ನಾಗಭೂಷಣ್ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ. ಫ್ಯಾಮಿಲಿ ಡ್ರಾಮಾ ಕಥೆ ಈ ಚಿತ್ರದಲ್ಲಿದೆ' ಎಂದು ಪ್ರೀತಂ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು 'ಮೇಡ್ ಇನ್ ಚೈನಾ' ಚಿತ್ರದಲ್ಲಿ ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಕೂಡ ನಟಿಸಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಸಿನಿಮಾಗೆ ಕಥೆ ಬರೆದಿದ್ದಾರೆ. ವಿವಾನ್ ರಾಧಾಕೃಷ್ಣ ಸಂಗೀತ ಸಂಯೋಜನೆಯಿದ್ದು, ಎನ್. ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.