ಲಾಕ್‌ಡೌನ್ ಘೋಷಣೆಯಾಗಿ ಇಂದಿಗೆ ಸರಿಯಾಗಿ ಆರು ತಿಂಗಳು. ಸಿನಿಮಾ ಥೇಟರುಗಳು ಬಂದ್ ಆಗಿ ಅರ್ಧವರ್ಷ. ಚಿತ್ರರಂಗ ಕಳಕೊಂಡದ್ದೆಷ್ಟು?
ಚಿತ್ರರಂಗದ ವಾರ್ಷಿಕ ವಹಿವಾಟು ಸುಮಾರು 4800 ಕೋಟಿ. ಅದರ ಅರ್ಧ ಅಂತಿಟ್ಟುಕೊಂಡರೂ ಆರು ತಿಂಗಳಲ್ಲಿ ಚಿತ್ರರಂಗಕ್ಕೆ ಆದ ನಷ್ಟ2400 ಕೋಟಿ. ಇದು ಕಳೆದ ವರ್ಷದ ಲೆಕ್ಕಾಚಾರ ಆಧರಿಸಿದ್ದು. ಇದರಲ್ಲಿ ಥೇಟರ್ ಮಾಲೀಕರ ಪಾಲು ಶೇ.30. ಮಿಕ್ಕ ಎಪ್ಪತ್ತು ವರ್ಸೆಂಟ್ ಬೇರೆ ಬೇರೆ ರೂಪದಲ್ಲಿ ಚಿತ್ರರಂಗಕ್ಕೇ ವಾಪಸ್ಸು ಬರುತ್ತಿತ್ತು. ಅದನ್ನೆಲ್ಲ ಈಗ ಕಳಕೊಂಡಿದ್ದೇವೆ. ಇದು ನಿಜಕ್ಕೂ ತುಂಬಲಾರದ ನಷ್ಟ.
Fact Check: ಗುಡ್ ನ್ಯೂಸ್! ಅ.1ರಿಂದ ಸಿನಿಮಾ ಥಿಯೇಟರ್‌ಗಳು ಓಪನ್?
ಇದು ಹಿರಿಯ ಚಿತ್ರಪ್ರದರ್ಶಕ ಕೆ ವಿ ಧನಂಜಯ ಅವರ ಲೆಕ್ಕಾಚಾರ. ಅವರು ಕರಾರುವಾಕ್ಕಾಗಿ ಹೇಳುವಂತೆ, ಥೇಟರ್‌ಮಾಲೀಕರ ಪರಿಸ್ಥಿತಿ ಏನೇನೂ ಚೆನ್ನಾಗಿಲ್ಲ. ಅಸ್ಸಾಮ್ ಸರ್ಕಾರ ಚಿತ್ರಮಂದಿರಗಳಿಗೆ 25 ಲಕ್ಷ ಸಬ್ಸಿಡಿ ಘೋಷಿಸಿದೆ. ಸಾಲ ಕೊಡುತ್ತಿದೆ. ಕೋವಿಡ್ ಕಟ್ಟಳೆ ಪ್ರಕಾರ ಬದಲಾವಣೆ ಮಾಡಿಕೊಳ್ಳಿ ಎಂದು ಪ್ರೋತ್ಸಾಹಿಸುತ್ತಿದೆ. ಪಕ್ಕದ ತಮಿಳುನಾಡು ಸರ್ಕಾರ ನ್ಯಾಯಾಲಯದ ಮೊರೆ ಹೋಗಿದೆ. ಆಂಧ್ರ ಸರ್ಕಾರ ತಾನಾಗಿಯೇ ರಿಯಾಯಿತಿ ಕೊಟ್ಟಿದೆ. ಕೇರಳದಲ್ಲಿ ವಿನಾಯಿತಿ ಸಿಕ್ಕಿದೆ. ಆದರೆ ಕರ್ನಾಟಕದ ಪ್ರದರ್ಶಕರನ್ನು ಕೇಳುವವರೇ ಇಲ್ಲ. ಮೂವತ್ತು ವರ್ಷಗಳಿಂದ ತೆರಿಗೆ ಕಟ್ಟಿಕೊಂಡು ಬರುವವನು, ಆರು ತಿಂಗಳು ಚಿತ್ರಮಂದಿರ ನಡೆಸಿಲ್ಲ ಅಂದರೂ ಪ್ರಾಪರ್ಟಿ ತೆರಿಗೆ, ಕರೆಂಟು ಬಿಲ್ಲು ಕಟ್ಟುವಂತೆ ಒತ್ತಾಯಿಸುತ್ತಿದೆ. ಕಟ್ಟದೇ ಇರುವವರ ಕನೆಕ್ಷನ್ ಕಟ್ ಮಾಡುತ್ತಿದೆ. ಮುಂದೆ ಭಯಂಕರ ಕಷ್ಟವಿದೆ ಅನ್ನುತ್ತಾರೆ ಧನಂಜಯ್.
ಥೇಟರ್ ಆರಂಭಿಸುತ್ತೀರಾ ಎಂಬ ಪ್ರಶ್ನೆಗೆ ಅವರು ನಿರಾಶೆಯಿಂದ ಕೈ ಚೆಲ್ಲುತ್ತಾರೆ. ‘ಯಾಕಾಗಿ ಆರಂಭಿಸಬೇಕು ಅಂತ ಗೊತ್ತಾಗುತ್ತಿಲ್ಲ. ಸ್ಟಾರುಗಳು ಯಾರೂ ಶೂಟಿಂಗ್ ಮಾಡುತ್ತಿಲ್ಲ. ಥೇಟರ್ ಆರಂಭಿಸಿದರೆ ನಾಲ್ಕು ತಿಂಗಳಿಗೆ ಇರುವ ಸಿನಿಮಾಗಳ ಸ್ಟಾಕ್ ಖಾಲಿಯಾಗ್ತದೆ. ಆಮೇಲೆ ಏನು ಮಾಡೋಣ. ದೊಡ್ಡ ಸಿನಿಮಾಗಳಿಲ್ಲದೇ ಹೋದರೆ ಥೇಟರ್ ವ್ಯವಸ್ಥೆ ನಡೆಯುವುದಿಲ್ಲ. ಅಲ್ಲದೇ ಪ್ರೇಕ್ಷಕರು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಹತ್ತು ವರ್ಷಕ್ಕಿಂತ ಚಿಕ್ಕೋರು ಅರವತ್ತು ವರ್ಷ ಮೀರಿದೋರು ಬರೋ ಹಾಗಿಲ್ಲ. ಸುಮಾರು ಒಂದೂವರೆ ಲಕ್ಷ ಮಂದಿ ಬೆಂಗಳೂರು ಬಿಟ್ಟಿದ್ದಾರೆ. ಸಿನಿಮಾ ನೋಡೋರು ಯಾರು ಗೊತ್ತಾಗುತ್ತಿಲ್ಲ’. ಇದು ಧನಂಜಯ ಲೆಕ್ಕಾಚಾರ.
79 ವರ್ಷ ಹಳೆ 'ಸೆಂಟ್ರಲ್ ಟಾಕೀಸ್' ನೆಲಸಮ!
ಮುಂದಿನ ದಾರಿಯೇನು?
ಅವರ ಉತ್ತರ ಸ್ಪಷ್ಟವಾಗಿದೆ. ‘ಹೊಂದಿಕೊಂಡು ಬಾಳಲು ಕಲೀಬೇಕು. ಹೀರೋಗಳು ಕಡಿಮೆ ಸಂಭಾವನೆ ತಗೋಬೇಕು, ಥೇಟರಿನೋರು ಕಡಿಮೆ ಬಾಡಿಗೆ ತಗೋಬೇಕು. ಬಿರಿಯಾನಿಯೇ ಬೇಕೂಂತೇನಿಲ್ಲ, ಪುಳಿಯೋಗರೆಯೂ ಸಾಕು ಅನ್ನೋ ಧೋರಣೆ ಬರಬೇಕು. ಚಿತ್ರರಂಗ ಮತ್ತೆ ಚೇತರಿಸೋ ತನಕ ದುರಾಸೆ ಬಿಟ್ಟು, ಸಂಭಾಳಿಸಿಕೊಂಡು ಹೋಗಬೇಕು. ಆಗ ಭವಿಷ್ಯವಿದೆ. ಇಲ್ಲದೇ ಹೋದರೆ ಕಷ್ಟವೇ ಖಾತ್ರಿ’.
ಓಟಿಟಿಗಳಿವೆಯಲ್ಲ, ಅಲ್ಲಿ ಜನ ಸಿನಿಮಾ ನೋಡೋಲ್ಲವೇ ಅಂತ ಕೇಳಿದರೆ ಧನಂಜಯ ಮರುಪ್ರಶ್ನೆ ಹಾಕುತ್ತಾರೆ. ‘ಯಾವ ನಿರ್ಮಾಪಕನೂ ಓಟಿಟಿಯಿಂದ ಹಾಕಿದ ಪೂರ್ತಿ ಹಣ ಬಂತು ಅಂತ ಹೇಳಿಲ್ಲ. ಶೇಕಡಾ 20 ಅಲ್ಲಿಂದ ಬರಬಹುದು. ಮಿಕ್ಕಿದ್ದು ಥೇಟರಿನಿಂದಲೇ ಬರಬೇಕು. ಅದರಲ್ಲೂ ಎಲ್ಲ ಸರಿಹೋದ ನಂತರ ಜನ ಓಟಿಟಿ ನೋಡ್ತಾರಾ ಥೇಟರಿಗೆ ಬರ್ತಾರಾ ಇನ್ನೂ ಸ್ವಷ್ಟವಿಲ್ಲ. ಈಗ ಡ್ರೈವಿನ್ ಥೇಟರ್ ಮಾಡ್ತೀವಿ ಅಂತಾರೆ. ಒಂದೋ ಎರಡೋ ಮಾಡಬಹುದು. ಅದನ್ನು ನಂಬಿ ಸಿನಿಮಾ ಮಾಡಕ್ಕಾಗಲ್ಲ. ಥೇಟರ್ ರೀಓಪನ್ ಆದರೂ ಸುಮಾರು ಹದಿನೈದು ಪರ್ಸೆಂಟ್ ಥೇಟರುಗಳು ಶಾಶ್ವತವಾಗಿ ಬಂದ್ ಆಗ್ತವೆ ಅನ್ನಿಸ್ತದೆ’ ಎಂದು ಧನಂಜಯ ಭವಿಷ್ಯವನ್ನು ತೆರೆದಿಟ್ಟರು.
ಚಿತ್ರರಂಗಕ್ಕೂ ಕೊರೋನಾ ಬಿಸಿ; ಸದ್ಯಕ್ಕಿಲ್ಲ ಸ್ಟಾರ್ ಸಿನಿಮಾಗಳ ರಿಲೀಸ್!
ಅವರ ಪ್ರಕಾರ ತಕ್ಷಣ ಸರ್ಕಾರ ನೆರವಿಗೆ ಬರದಿದ್ದರೆ, ಮತ್ತೆ ವಾರಕ್ಕೆರಡು ದಿನ ಲಾಕ್‌ಡೌನ್ ಮಾಡಿದರೆ, ಕೋವಿಡ್ ಜಾಸ್ತಿಯಾದರೆ ಚಿತ್ರರಂಗ ಚೇತರಿಸಿಕೊಳ್ಳಲು ತುಂಬಾ ಕಾಲ ಬೇಕಾಗುತ್ತದೆ. 2400 ಕೋಟಿ ಸಣ್ಣ ಮೊತ್ತ ಅಲ್ಲ, ಬಿದ್ದದ್ದು ಸಣ್ಣ ಪೆಟ್ಟೂಅಲ್ಲ.