ಚಲನಚಿತ್ರ ಮಂಡಳಿ ಹಗರಣ ತನಿಖೆಗೆ ಮನವಿ

By Kannadaprabha NewsFirst Published Jan 14, 2021, 9:06 AM IST
Highlights

ಚಲನಚಿತ್ರ ಮಂಡಳಿ ಹಗರಣ ತನಿಖೆಗೆ ಮನವಿ ಒತ್ತಾಯ | ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸದಸ್ಯರ ಆಗ್ರಹ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಣಕಾಸು ದುರುಪಯೋಗ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆದಷ್ಟುಬೇಗ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಾಣಿಜ್ಯ ಮಂಡಳಿಯ ಸದಸ್ಯರು ಜಿಲ್ಲಾ ನೋಂದಣಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಿರ್ದೇಶಕ, ನಿರ್ಮಾಪಕರನ್ನು ಒಳಗೊಂಡ ವಾಣಿಜ್ಯ ಮಂಡಳಿ ಸದಸ್ಯರು ‘ಕಳೆದ 20 ವರ್ಷಗಳಿಂದ ಅನೇಕ ರೀತಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಅಪಸ್ವರಗಳು ಕೇಳಿ ಬರುತ್ತಿವೆ. ಇದಕ್ಕೆ ತಕ್ಕಂತೆ ಸಿಸಿಐನಲ್ಲಿ ಕೇಸು ದಾಖಲಾಗಿ ಕೋಟಿ ಕೋಟಿ ದಂಡ ಕಟ್ಟಿರುವುದು ಆಡಳಿತ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷವೋ ಅಥವಾ ಆಯ್ಕೆಯಾದ ಪದಾಧಿಕಾರಿಗಳ ಅನುಭವ ಕೊರತೆಯೋ ಗೊತ್ತಿಲ್ಲ. ಆದರೆ, ಸಂಸ್ಥೆಯಲ್ಲಿ ಸದಸ್ಯರ ಹಣ ಮಾತ್ರ ಬೇಕಾಬಿಟ್ಟಿಯಾಗಿ ವ್ಯಯಿಸಲಾಗುತ್ತಿದೆ. ಚಿತ್ರರಂಗದ ಅಭಿವೃದ್ಧಿಗೆ ಮಾತ್ರ ವೆಚ್ಚ ಮಾಡುತ್ತಿಲ್ಲ’ ಎಂದು ವಾಣಿಜ್ಯ ಮಂಡಳಿಯ ಸದಸ್ಯರ ಕೂಟ ಆರೋಪಿಸಿದೆ.

ಮಗಳು ಬಂದ ಖುಷಿಗೆ ಮಾಧ್ಯಮಕ್ಕೆ ಗಿಫ್ಟ್ ಕೊಟ್ಟ ವಿರುಷ್ಕಾ: ಜೊತೆಗಿತ್ತೊಂದು ರಿಕ್ವೆಸ್ಟ್

ಸ್ವಜನ ಪಕ್ಷಪಾತ, ಹಣ ದುರುಪಯೋಗ, ಬೈಲಾ ಉಲ್ಲಂಘನೆ, ನಿಯಮ ಬಾಹಿರ ಚಟುವಟಿಕೆಗಳು ಸೇರಿದಂತೆ ಹಲವು ವಿಚಾರಗಳಲ್ಲಿ ದೂರು ನೀಡಿದ್ದು, ನ್ಯಾಯಾಲಯ ಕೂಡ ಮಧ್ಯಂತರ ಆದೇಶ ಹೊರಡಿಸಿದೆ. ಹೀಗಾಗಿ ವಾಣಿಜ್ಯ ಮಂಡಳಿಯಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆಯೋ, ಇಲ್ಲವೋ ಎಂಬುದನ್ನು ಸಮಗ್ರವಾಗಿ ತನಿಖೆ ಮಾಡಿ ಸತ್ಯಾಸತ್ಯತೆಯನ್ನು ಸದಸ್ಯರ ಮುಂದಿಟ್ಟು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪಾರದರ್ಶಕ ಆಡಳಿತಕ್ಕೆ ದಾರಿ ಮಾಡಿಕೊಡಬೇಕು. ಅಲ್ಲದೆ ಕಾಯ್ದೆ 1960ರ ಕಲಂ 25ರ ಅಡಿ ಬರುವ ವಿಷಯಗಳಲ್ಲೂ ಗೊಂದಲ ನಿರ್ಮಾಣವಾಗಿದೆ. ಈ ಗೊಂದಲವನ್ನೂ ಸಹ ಬಗೆಹರಿಸಬೇಕು ಎಂದು ನಿರ್ದೇಶಕ ರಾಜೇಂದ್ರ ಸಿಂಗ್‌ಬಾಬು ಮನವಿ ಮಾಡಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ:

ನಿರ್ಮಾಪಕ ಕೃಷ್ಣಗೌಡ ಹಾಗೂ ಪ್ರದೀಪ್‌ ಎಂಬುವವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿಯಮ ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸುತ್ತಿಲ್ಲ, ಸುಳ್ಳು ಲೆಕ್ಕ ತೋರಿಸಿ ಸದಸ್ಯರ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಚಾಲ್ತಿಯಲ್ಲಿ ಇರದ ನಿರ್ಮಾಪಕರಿಗೆ ಸಾಲ ನೀಡಲಾಗಿದೆ, ವಾಣಿಜ್ಯ ಮಂಡಳಿಯಲ್ಲಿ ಸಣ್ಣ ಪುಟ್ಟಕಾಮಗಾರಿಗಳಿಗೂ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವುದಾಗಿ ಹೇಳುತ್ತಿರುವುದು, ನಿರ್ಮಾಪಕ ಹಾಗೂ ಸದಸ್ಯರಲ್ಲದವರನ್ನು ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಿರುವುದು ಸೇರಿದಂತೆ ಹಲವು ವಿಚಾರಗಳ ಸುತ್ತ ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ದೂರಿನ ಅನ್ವಯ ವಿಚಾರಣೆ ಮಾಡಿದ ನ್ಯಾಯಾಲಯ, ದೂರುದಾರರ ಆರೋಪಗಳು ಮೇಲ್ನೋಟಕ್ಕೆ ಕಂಡು ಬರುತ್ತಿವೆ ಎಂದು ಪರಿಗಣಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಯಾವುದೇ ಹಣಕಾಸಿನ ವ್ಯವಹಾರ ನಡೆಸಬಾರದು, 20 ವರ್ಷಗಳ ಲೆಕ್ಕಪತ್ರಗಳನ್ನು ಪರಿಶೀಲನೆ ನಡೆಸಬೇಕು ಎಂದು ಮಧ್ಯಂತರ ಅದೇಶ ನೀಡಿತ್ತು. ಈ ಸಂಬಂಧ ಅಧಿಕಾರಿಯೊಬ್ಬರನ್ನು ನೇಮಕ ಮಾಡಿ ತನಿಖೆಗೆ ಅದೇಶ ನೀಡಲಾಗಿದೆ.

ಹೀಗಾಗಿ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್‌, ಪಿ.ಶೇಷಾದ್ರಿ, ನಿರ್ಮಾಪಕರಾದ ರಾಮು, ಮದನ್‌ ಪಟೇಲ್‌, ಶೈಲೇಂದ್ರ ಬಾಬು, ಜೈ ಜಗದೀಶ್‌, ವಿಜಯ್‌ ಲಕ್ಷ್ಮೀಸಿಂಗ್‌, ಕವಿತಾ ಲಂಕೇಶ್‌, ಜೋಸೈಮನ್‌ ಮುಂತಾದವರು ಪತ್ರಿಕಾಗೋಷ್ಠಿ ನಡೆಸಿ, ಈ ತನಿಖೆ ಪಾರದರ್ಶಕವಾಗಿ, ಆದಷ್ಟುಬೇಗ ನಡೆಯಬೇಕು ಎಂದು ಜಿಲ್ಲಾ ನೋಂದಣಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

click me!