ಮೈಸೂರಿನವರಾದರೂ ನಟಿ ಅಮೃತಾ ಅಯ್ಯಂಗಾರ್‌ಗೆ ದಸರಾಗೆ ಆಹ್ವಾನಿಸಲಿಲ್ಲ ಏಕೆ? ಬೇಸರ ವ್ಯಕ್ತಪಡಿಸಿದ ನಟಿ

Published : Oct 24, 2026, 07:15 PM IST
Amrutha Iyengar

ಸಾರಾಂಶ

Amrutha Iyengar Mysuru Dasara: ನಾಡಹಬ್ಬ ದಸರಾದಲ್ಲಿ ಸ್ಯಾಂಡಲ್‌ವುಡ್ ತಾರೆಯರ ದಂಡೇ ಭಾಗವಹಿಸಿದ್ದರೂ, ಮೈಸೂರು ಮೂಲದ ಜನಪ್ರಿಯ ನಟಿ ಅಮೃತಾ ಅಯ್ಯಂಗಾರ್‌ಗೆ ಅಧಿಕೃತ ಆಹ್ವಾನ ಸಿಕ್ಕಿಲ್ಲ. ಇದೀಗ ಸ್ವಂತ ಊರಿನ ಸಂಭ್ರಮಕ್ಕೆ ಕರೆಯೋಲೆ ಬಾರದಿದ್ದಕ್ಕೆ ಅಮೃತಾ ಹೇಳಿದಿಷ್ಟು..

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಪಾಲ್ಗೊಂಡು ಕಳೆತಂದಿದ್ದರು. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನವರೇ ಆದ ಪ್ರತಿಭಾವಂತ ನಟಿ ಅಮೃತಾ ಅಯ್ಯಂಗಾರ್ ಅವರಿಗೆ ಈ ಬಾರಿಯ ದಸರಾ ಆಚರಣೆಗೆ ಯಾವುದೇ ಅಧಿಕೃತ ಆಹ್ವಾನ ಸಿಕ್ಕಿರಲಿಲ್ಲ. ಈ ಕುರಿತು ಸ್ವತಃ ಅಮೃತಾ ಅಯ್ಯಂಗಾರ್ ಅವರೇ ಮುಕ್ತವಾಗಿ ಮಾತನಾಡಿದ್ದು, ತಮ್ಮ ಹುಟ್ಟೂರಿನ ಸಂಭ್ರಮಕ್ಕೆ ಆಹ್ವಾನ ಬಾರದಿದ್ದಾಗ ಆರಂಭದಲ್ಲಿ ತಮಗೆ ಬೇಸರವಾಗಿದ್ದು ನಿಜ ಎಂದು ಹೇಳಿಕೊಂಡಿದ್ದಾರೆ.

‘ನಮ್ಮೂರಿನ ಹಬ್ಬಕ್ಕೆ ಕರೆಯಲಿಲ್ಲವಲ್ಲ’ ಎಂದೆನಿಸಿತು

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಕುರಿತು ಮನಬಿಚ್ಚಿ ಮಾತನಾಡಿರುವ ನಟಿ ಅಮೃತಾ, "ಅಧಿಕೃತ ಕರೆಯೋಲೆ ಯಾಕೆ ಬರಲಿಲ್ಲ ಅಂತ ನನಗೂ ಗೊತ್ತಿಲ್ಲ. ಬಹುಶಃ ನನ್ನ ಹೆಸರು ಮರೆತುಹೋಯಿತೋ ಅಥವಾ ಎಲ್ಲೋ ಏನೋ ಮಿಸ್ ಆಯ್ತೋ ಗೊತ್ತಿಲ್ಲ" ಎಂದು ತಿಳಿಸಿದ್ದಾರೆ.

ನಾನೊಬ್ಬ ಅಪ್ಪಟ ಮೈಸೂರಿನ ಹುಡುಗಿ. ನಮ್ಮೂರಿನ ಅತ್ಯಂತ ದೊಡ್ಡ ಹಬ್ಬದಲ್ಲಿ ಪಾಲ್ಗೊಳ್ಳಲು ನನ್ನ ಸ್ವಂತ ಊರಿನಿಂದಲೇ ಕರೆಯೋಲೆ ಬರಲಿಲ್ಲವಲ್ಲ ಎಂದು ಆರಂಭದಲ್ಲಿ ಮನಸ್ಸಿಗೆ ತುಸು ನೋವಾಯಿತು, ಬೇಜಾರಾಯಿತು" ಎಂದು ತಮ್ಮ ಮನದಾಳದ ನೋವನ್ನು ಹೊರಹಾಕಿದ್ದಾರೆ.

ದಸರಾ ಮುಗಿದ ಬೆನ್ನಲ್ಲೇ ಹಲವರು, "ಮೈಸೂರಿನ ಹುಡುಗಿಯಾಗಿಯೂ ನೀವು ಜಂಬೂಸವಾರಿಯಲ್ಲಿ ಯಾಕೆ ಕಾಣಿಸಲಿಲ್ಲ?" ಎಂದು ತಮ್ಮ ಬಳಿ ಅತ್ಯಂತ ಪ್ರೀತಿಯಿಂದ ವಿಚಾರಿಸಿದ್ದಾಗಿ ನಟಿ ಅಮೃತಾ ಅಯ್ಯಂಗಾರ್ ತಿಳಿಸಿದ್ದಾರೆ. ಈ ವಿಚಾರದಲ್ಲಿ ತಾಯಿ ಚಾಮುಂಡೇಶ್ವರಿಯ ಮೇಲೆ ಅಪಾರ ಭಕ್ತಿ ವ್ಯಕ್ತಪಡಿಸಿರುವ ಅವರು, "ಮುಂಬರುವ ದಿನಗಳಲ್ಲಿ ಅಧಿಕೃತ ಆಹ್ವಾನ ಪಡೆಯುವಷ್ಟು ಮಟ್ಟಿಗೆ ಸಿನಿಮಾರಂಗದಲ್ಲಿ ದೊಡ್ಡ ಸಾಧನೆ ಮಾಡಲು ಆ ತಾಯಿ ಚಾಮುಂಡೇಶ್ವರಿ ನನಗೆ ಶಕ್ತಿ ಮತ್ತು ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸಿದ್ದೇನೆ" ಎಂದಿದ್ದಾರೆ. ಇದೇ ವೇಳೆ ತಮ್ಮ ಬಾಲ್ಯವನ್ನು ಮೆಲಕು ಹಾಕಿದ ನಟಿ, ತಾವು ಮೈಸೂರಿನಲ್ಲಿದ್ದಾಗ ಚಿಕ್ಕಂದಿನಿಂದಲೂ ಅದೆಷ್ಟೋ ಬಾರಿ ಕಣ್ಣಾರೆ ಕಂಡು ಆನಂದಿಸಿದ್ದ ದಸರಾ ವೈಭವ ಹಾಗೂ ಜಂಬೂಸವಾರಿಯ ಸುಮಧುರ ಕ್ಷಣಗಳನ್ನು ಭಾವುಕರಾಗಿ ನೆನಪಿಸಿಕೊಂಡಿದ್ದಾರೆ.

ಸಕಾರಾತ್ಮಕವಾಗಿ ಯೋಚಿಸಿ ಮನಸ್ಸು ಹಗುರ ಮಾಡಿಕೊಂಡೆ

ಆದರೆ, ಈ ಬೇಸರವನ್ನು ಮನಸ್ಸಿನಲ್ಲಿಟ್ಟುಕೊಂಡು ಕುಗ್ಗದೆ ಅತ್ಯಂತ ಪಕ್ವವಾಗಿ ಯೋಚಿಸಿರುವುದಾಗಿ ತಿಳಿಸಿದ ನಟಿ, "ನನ್ನನ್ನು ಅಧಿಕೃತವಾಗಿ ಆಹ್ವಾನಿಸುವಷ್ಟು ದೊಡ್ಡ ಸಾಧನೆಯನ್ನು ನಾನು ಚಿತ್ರರಂಗದಲ್ಲಿ ಇನ್ನೂ ಮಾಡಿಲ್ಲವೇನೋ ಅನ್ನಿಸಿತು. ನನ್ನ ಕೆಲಸ, ನನ್ನ ನಟನೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಮುಂದಿನ ದಿನಗಳಲ್ಲಿ ಅವರೇ ಗುರುತಿಸಿ ಗೌರವದಿಂದ ಆಹ್ವಾನಿಸುವಂತೆ ನಾನು ಸಿನಿಮಾರಂಗದಲ್ಲಿ ಇನ್ನಷ್ಟು ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಸಕಾರಾತ್ಮಕವಾಗಿ ಯೋಚಿಸಿದೆ" ಎಂದು ಹೇಳುವ ಮೂಲಕ ತಮ್ಮ ವಿನಮ್ರತೆಯನ್ನು ಮೆರೆದಿದ್ದಾರೆ.

'ಪಾಪ್‌ಕಾರ್ನ್ ಮಂಕಿ ಟೈಗರ್', 'ಬಡವ ರಾಸ್ಕಲ್', 'ಲವ್ ಮಾಕ್‌ಟೇಲ್ 2' ಮುಂತಾದ ಯಶಸ್ವಿ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಮೃತಾ ಅಯ್ಯಂಗಾರ್ ಅವರ ಈ ಮಾತುಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಹಂಕಾರವಿಲ್ಲದೆ ತಮ್ಮನ್ನು ತಿದ್ದಿಕೊಂಡು, ಕೆಲಸದ ಮೂಲಕವೇ ಉತ್ತರ ನೀಡಲು ಮುಂದಾಗಿರುವ ನಟಿಯ ಪ್ರಬುದ್ಧ ನಿಲುವಿಗೆ ನೆಟ್ಟಿಗರು ಹಾಗೂ ಸಿನಿಪ್ರಿಯರು ಫಿದಾ ಆಗಿದ್ದಾರೆ.

ಮೂಲತಃ ಮೈಸೂರಿನವರೇ ಆದ ಅಮೃತಾ ಅಯ್ಯಂಗಾರ್ ಅವರ ಬಾಲ್ಯ, ವಿದ್ಯಾಭ್ಯಾಸ ಎಲ್ಲವೂ ಸಾಂಸ್ಕೃತಿಕ ನಗರಿಯಲ್ಲೇ ಕಳೆದಿದೆ. ಬಾಲ್ಯದಲ್ಲಿ ಸಾಮಾನ್ಯ ಜನರಂತೆ ರಸ್ತೆ ಬದಿಯಲ್ಲೇ ನಿಂತು ಜಂಬೂಸವಾರಿ ಹಾಗೂ ದಸರಾ ಮೆರವಣಿಗೆಯನ್ನು ಕಣ್ತುಂಬಿಕೊಂಡು ಬೆಳೆದವರು ಅವರು. ಹೀಗಾಗಿ ಚಿತ್ರರಂಗಕ್ಕೆ ಕಾಲಿಟ್ಟು, ಜನಪ್ರಿಯ ನಾಯಕಿಯಾಗಿ ಗುರುತಿಸಿಕೊಂಡ ಮೇಲೆ ತಮ್ಮದೇ ತವರೂರಿನ ಐತಿಹಾಸಿಕ ಉತ್ಸವಕ್ಕೆ ಅತಿಥಿಯಾಗಿ ಆಹ್ವಾನ ಪಡೆಯಬೇಕೆಂಬ ಸಹಜವಾದ ಪುಟ್ಟ ಆಸೆಯೊಂದು ಅವರಲ್ಲಿತ್ತು. ಇದೇ ಕಾರಣಕ್ಕೆ ಸ್ವಂತ ಊರಿನಿಂದಲೇ ಕರೆಯೋಲೆ ಬಾರದಿದ್ದಾಗ ಅವರ ಮನಸ್ಸಿಗೆ ತುಸು ನೋವಾಗಿದ್ದು ಸಹಜ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

DKD ವೇದಿಕೆಯಲ್ಲಿ 'ನಿನ್ನಂಥ ಅಪ್ಪ ಇಲ್ಲ' ಹಾಡು ರೀಕ್ರಿಯೇಟ್​: ಆ ದಿನಗಳ ನೆನೆದು ಕಣ್ಣೀರಿಟ್ಟ ಸುಧಾರಾಣಿ
ದರ್ಶನ್ ಬಿಡುಗಡೆಗೆ ಪತ್ನಿ ವಿಜಯಲಕ್ಷ್ಮಿಯೇ ಅಡ್ಡಗಾಲು ಹಾಕುತ್ತಿದ್ದಾರಾ? ಧನ್ವೀರ್ ಹೇಳುತ್ತಿರೋ ಈ ಮಾತಿನ ಹಿಂದೆ ನಿಗೂಢ ಸತ್ಯ ಅಡಗಿದೆಯೇ?