ವೈರಲ್ ಅಗುತ್ತಿದೆ ಜಿಮ್ಮಿ ಚಿತ್ರದ ಇಂಗ್ಲಿಷ್ ಸಾಂಗ್. ಸ್ವತಃ ಸಾನ್ವಿನೇ ಅಣ್ಣನ ಸಿನಿಮಾಗೆಂದು ಬರೆದು ಹಾಡಿರುವ ಹಾಡಿದು....
ಕನ್ನಡಪ್ರಭ ಸಿನಿವಾರ್ತೆ‘ಸಾಮಾನ್ಯವಾಗಿ ಅಪ್ಪ ಕರೆಕ್ಷನ್ ಹೇಳುತ್ತಾರೆ. ಹಾಗಾಗಿ ನನಗೆ ಈ ಹಾಡಿನ ಕುರಿತು ಕುತೂಹಲ ಇತ್ತು. ನಮ್ಮ ಮನೆಯ ಟೆರೇಸ್ ಮೇಲೆ ಈ ಟೀಸರ್ ನೋಡಲು ಹಲವು ಮಂದಿ ಸೇರಿದ್ದರು. ಈ ಹಾಡು ಅಪ್ಪನಿಗೆ ಇಷ್ಟವಾಗಲಿ ಎಂದು ನಾನು ಬೇಡಿಕೊಳ್ಳುತ್ತಿದ್ದೆ. ಟೀಸರ್ ಪ್ರಸಾರವಾಗಿ ಮುಗಿದ ಮೇಲೆ ಅಪ್ಪ ಬಂದು ನನ್ನನ್ನು ತಬ್ಬಿಕೊಂಡರು. ಅದು ನನಗೆ ವಿಶೇಷ ಕ್ಷಣ’.
- ಹೀಗೆ ಹೇಳಿದ್ದು ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್.
ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆ, ನಿರ್ದೇಶನದ ‘ಜಿಮ್ಮಿ’ ಚಿತ್ರದ ಟೀಸರ್‌ನಲ್ಲಿ ಬರುವ ಹಾಡಿನ ಸಾಹಿತ್ಯ ಮತ್ತು ಧ್ವನಿ ಸಾನ್ವಿ ಸುದೀಪ್ ಅವರದು. ಅವರು ಸಂಚಿತ್ ಅವರ ಮೊದಲ ಪ್ರಯತ್ನಕ್ಕೆ ಬೆಂಬಲಿಸಲು ಈ ಮೂಲಕ ಸಾಥ್ ನೀಡಿದ್ದಾರೆ.
ನನ್ನ ಮಗಳು ಚೆನ್ನಾಗಿ ಹಾಡ್ತಾಳೆ ಅಂತ ಗೊತ್ತು ಇಷ್ಟು ಚೆನ್ನಾಗಿ ಅಂತ ಗೊತ್ತಿರಲಿಲ್ಲ: ಸುದೀಪ್
‘ನಾನು ಸ್ವಲ್ಪ ನಾಚಿಕೆ ಸ್ವಭಾವದ ಹುಡುಗಿ. ಹಾಗಾಗಿ ವೇದಿಕೆ ಮೇಲೆ ಹತ್ತುವ ಕುರಿತು ಅಪ್ಪನಿಗೆ ಅನುಮಾನ ಇತ್ತು. ನಾನು ಏಳನೇ ತರಗತಿಯಲ್ಲಿ ಮೊದಲ ಬಾರಿಗೆ ಗಾಯನಕ್ಕೆ ಹೆಸರು ಕೊಟ್ಟಿದ್ದೆ. ಅವತ್ತು ಅಪ್ಪ ಕೂಡ ಬಂದಿದ್ದರು. ಅವರು ಅವತ್ತು ನನ್ನ ಹಾಡು ಕೇಳಿ ಅಚ್ಚರಿ ಪಟ್ಟಿದ್ದರು. ಈಗೆಲ್ಲಾ ಅವರು ನನಗೆ ತುಂಬಾ ಸಪೋರ್ಟ್ ಮಾಡುತ್ತಾರೆ. ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡಿಗೆ ನಾನೇ ಟ್ರ್ಯಾಕ್ ಸಿಂಗರ್ ಆಗಿದ್ದೆ’ ಎಂದು ಸಾನ್ವಿ ತನ್ನ ಮತ್ತು ಗಾಯನ ಕುರಿತು ಹೇಳುತ್ತಾರೆ.
‘ಜಿಮ್ಮಿ’ ಚಿತ್ರದ ಟೀಸರ್ ಹಾಡನ್ನು ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಸಾನ್ವಿ ಸುದೀಪ್ ಗಾಯನವನ್ನೂ ಮೆಚ್ಚಿಕೊಂಡಿದ್ದಾರೆ. ಖುದ್ದು ಸುದೀಪ್, ‘ನನ್ನ ಮಗಳು ಹಾಡುತ್ತಾಳೆ ಅಂತ ಗೊತ್ತಿತ್ತು, ಇಷ್ಟು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತಿರಲಿಲ್ಲ’ ಎಂದಿದ್ದಾರೆ. ಅಲ್ಲಿಗೆ ಸೂಪರ್‌ಸ್ಟಾರ್ ತಂದೆಯ ಮಗಳು ಸೂಪರ್ ಗಾಯಕಿಯಾಗಿ ಚಿತ್ರರಂಗಕ್ಕೆ ಬರುವ ಲಕ್ಷಣಗಳು ದಟ್ಟವಾಗಿವೆ.
‘ಜಿಮ್ಮಿ’ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.