
ನಟ ದರ್ಶನ್ ಹುಟ್ಟುಹಬ್ಬಕ್ಕೆ 100 ದಿನ ಬಾಕಿ; ಈಗಿನಿಂದಲೇ ಅಭಿಮಾನಿಗಳ ಸಂಭ್ರಮ ಶುರು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ (Darshan Thoogudeepa Birthday) ಇನ್ನೂ ಸಾಕಷ್ಟು ಸಮಯವಿದೆ. ಆದರೆ, ಅವರ ಅಭಿಮಾನಿಗಳಲ್ಲಿ ಮಾತ್ರ ಈಗಿನಿಂದಲೇ ಹಬ್ಬದ ವಾತಾವರಣ ಶುರುವಾಗಿದೆ. ದರ್ಶನ್ ಅವರ 50ನೇ ವರ್ಷದ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಫ್ಯಾನ್ಸ್ ಸಜ್ಜಾಗುತ್ತಿರುವ ಸೂಚನೆ ಸಿಕ್ಕಿದೆ. ಹುಟ್ಟುಹಬ್ಬಕ್ಕೆ 100 ದಿನ ಬಾಕಿ ಇರುವುದನ್ನು ಸಾರುವ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ದರ್ಶನ್ ಅವರ ಜನ್ಮದಿನ ಫೆಬ್ರವರಿ 16. ಮುಂದಿನ ವರ್ಷ ಅವರು 50ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಈ ವಿಶೇಷ ದಿನಕ್ಕಾಗಿ ಅಭಿಮಾನಿಗಳು ಈಗಲೇ ಸಿದ್ಧತೆ ಆರಂಭಿಸಿರುವಂತೆ ಕಾಣುತ್ತಿದೆ. ದರ್ಶನ್ ಅಭಿಮಾನಿಗಳ ‘ಡಿ ಕಂಪನಿ’ ತಂಡದ ಅಧಿಕೃತ ಫ್ಯಾನ್ ಪೇಜ್ ‘D Company (R) Official’ನಲ್ಲಿ 100 ದಿನಗಳ ಕೌಂಟ್‌ಡೌನ್ ಪೋಸ್ಟರ್ ಹಂಚಿಕೊಳ್ಳಲಾಗಿದೆ.
ಪೋಸ್ಟರ್‌ನಲ್ಲಿ ದರ್ಶನ್ ಅವರ ನಾಲ್ಕು ಫೋಟೋಗಳನ್ನು ಕೊಲಾಜ್ ಮಾಡಲಾಗಿದ್ದು, ಅದರಲ್ಲಿ ಅವರ ಬಾಲ್ಯದ ಚಿತ್ರವೂ ಸ್ಥಾನ ಪಡೆದಿದೆ. “ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಡಿ’ಬಾಸ್ ಅವರ ಹುಟ್ಟುಹಬ್ಬಕ್ಕೆ ಕೇವಲ 100 ದಿನಗಳು ಬಾಕಿ” ಎಂಬ ಸಂದೇಶದೊಂದಿಗೆ ಅಭಿಮಾನಿಗಳ ಪ್ರೀತಿ ವ್ಯಕ್ತವಾಗಿದೆ.
ದರ್ಶನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಕೌಂಟ್‌ಡೌನ್ ನಡೆಸುವುದು ಹೊಸದೇನಲ್ಲ. ಕಳೆದ ವರ್ಷವೂ ಇದೇ ರೀತಿಯ ಯೋಜನೆ ರೂಪಿಸಿದ್ದರು. ದರ್ಶನ್ ಅವರ ಸಿನಿ ಪಯಣವನ್ನು ನೆನಪಿಸುವಂತೆ, ಅವರು ನಟಿಸಿದ ಸಿನಿಮಾಗಳ ಪೋಸ್ಟರ್‌ಗಳು ಮತ್ತು ಫೋಟೋಗಳನ್ನು ದಿನಕ್ಕೊಂದರಂತೆ ಹಂಚಿಕೊಳ್ಳಲಾಗಿತ್ತು. ಹುಟ್ಟುಹಬ್ಬದ ದಿನದವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಸಂಭ್ರಮ ಮುಂದುವರಿದಿತ್ತು.
ಈ ಬಾರಿ ದರ್ಶನ್ ಅವರ 50ನೇ ವರ್ಷದ ಜನ್ಮದಿನವಾಗಿರುವುದರಿಂದ ಆಚರಣೆಯ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ‘ಡಿ ಕಂಪನಿ’ ಅಭಿಮಾನಿಗಳು ಯಾವ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಿದ್ದಾರೆ ಎಂಬ ಕುತೂಹಲವೂ ಮೂಡಿದೆ.
ಸದ್ಯಕ್ಕೆ 100 ದಿನಗಳ ಪೋಸ್ಟರ್ ಮೂಲಕವೇ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮಕ್ಕೆ ಮುನ್ನುಡಿ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೌಂಟ್‌ಡೌನ್ ಯಾವ ರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.