'ತುರ್ತು ನಿರ್ಗಮನ'ದ ಮೂಲಕ 'ಎಕ್ಸ್‌ಕ್ಯೂಸಮಿ' ನಟ ಸುನೀಲ್‌ ರಾವ್ ಕಮ್‌ಬ್ಯಾಕ್‌!

By Suvarna NewsFirst Published Mar 20, 2020, 3:30 PM IST
Highlights

‘ ಎಕ್ಸ್‌ಕ್ಯೂಸಮಿ’ ಖ್ಯಾತಿಯ ನಟ ಸುನೀಲ್‌ ರಾವ್‌ ಮತ್ತೆ ಬಂದಿದ್ದಾರೆ. ಒಂದಷ್ಟುದಿನಗಳ ಗ್ಯಾಪ್‌ ನಂತರ ‘ ತುರ್ತು ನಿರ್ಗಮನ’ ಹೆಸರಿನ ಚಿತ್ರದಲ್ಲಿ ಅವರು ನಾಯಕರಾಗಿ ಅಭಿನಯಿಸಿದ್ದು, ಈಗಾಗಲೇ ಆ ಚಿತ್ರ ವಿಭಿನ್ನ ಟೀಸರ್‌ ಮೂಲಕ ಸಾಕಷ್ಟುಕುತೂಹಲ ಹುಟ್ಟಿಸಿದೆ. ರೀ ಎಂಟ್ರಿಯ ಜತೆಗೆ ಚಿತ್ರದ ವಿಶೇಷತೆ, ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಸುನೀಲ್‌ ರಾವ್‌ ಮಾತು.

ಇದು ನಿಮ್ಮ ಸೆಕೆಂಡ್ಸ್‌ ಇನ್ನಿಂಗ್ಸ್‌ ಅನ್ಕೋಬಹುದಾ?

ಸೆಕೆಂಡ್‌ ಇನ್ನಿಂಗ್ಸ್‌ ಎನ್ನುವುದಕ್ಕಿಂತ ಇದು ಕಮ್‌ ಬ್ಯಾಕ್‌. ಯಾಕಂದ್ರೆ, ನಾನು ಆ್ಯಕ್ಟಿಂಗ್‌ ನಿಲ್ಲಿಸಿರಲಿಲ್ಲ. ಕಳೆದ ವರ್ಷವೇ ‘ಲೂಸ್‌ ಕನೆಕ್ಷನ್‌’ ಅಂತ ಒಂದು ವೆಬ್‌ ಸೀರಿಸ್‌ನಲ್ಲಿ ಅಭಿನಯಿಸಿದ್ದೆ. ಅಲ್ಲಿಂದಲೇ ಮತ್ತೆ ಬಣ್ಣದ ಲೋಕದ ಜರ್ನಿ ಶುರುವಾಗಿತ್ತು. ಆದ್ರೆ ಸಿನಿಮಾ ಅಂತ ಮತ್ತೆ ಬಣ್ಣ ಹಚ್ಚಿದ್ದು ಈಗ. ಹಾಗಾಗಿ ನನ್ನ ದೃಷ್ಟಿಯಲ್ಲಿ ಇದು ಕಮ್‌ಬ್ಯಾಕ್‌

ಅದು ಸರಿ, ಬಣ್ಣದ ಬದುಕಿನಲ್ಲಿ ಏಳು ವರ್ಷ ಗ್ಯಾಪ್‌ ಆಗಿದ್ದು ಯಾಕೆ?

ನಿರ್ಧಿಷ್ಟವಾದ ಕಾರಣ ನಂಗೂ ಗೊತ್ತಿಲ್ಲ. ಆದ್ರೂ ಅದು ಗ್ಯಾಪ್‌ ಆಯಿತು. ಆರಂಭದಲ್ಲಿ ಒಳ್ಳೆಯ ಸಿನಿಮಾ ಬರಲಿ, ಹಾಗೆಯೇ ಒಳ್ಳೆಯ ಪಾತ್ರಗಳು ಸಿಗಲಿ ಎನ್ನುವ ನಿರೀಕ್ಷೆಯಲ್ಲಿದ್ದೆ.ಅದೇ ಕಾರಣಕ್ಕೆ ಕೆಲವು ಸಿನಿಮಾ ಬೇಡ ಅಂತ ಸುಮ್ಮನೆ ಕುಳಿತೆ. ಆದ್ರೆ ಅದು ಆಗ ಅಂದುಕೊಂಡಂತೆ ಆಗಲಿಲ್ಲ. ಒಂದಷ್ಟುದಿನಗಳ ಬ್ರೇಕ್‌ ಅಂದುಕೊಂಡಿದ್ದು ಏಳು ವರ್ಷಕ್ಕೆ ಎಳೆದುಕೊಂಡು ಬಂತು. ಏಳು ವರ್ಷ ಅಂದ್ರೆ ದೊಡ್ಡ ಗ್ಯಾಪ್‌.

'ಎಕ್ಸ್‌ಕ್ಯೂಸ್‌ಮಿ' ನಟ ಸುನೀಲ್‌ ಈಗ 'ತುರ್ತು ನಿರ್ಗಮನ'ದಲ್ಲಿ!

ನಟನೆಯ ಈ ಬ್ರೇಕ್‌ನಲ್ಲಿ ಏನೇನು ಮಾಡಿದ್ರಿ?

ಆ್ಯಕ್ಟಿಂಗ್‌ ಆಚೆ ನನ್ನದೇ ಒಂದಷ್ಟುಆಸಕ್ತಿಗಳಿವೆ. ಅದು ಸಂಗೀತವೂ ಸೇರಿದಂತೆ. ಆ ಕಡೆ ಗಮನ ಹರಿಸಿದೆ. ಒಂದೆರೆಡು ವರ್ಷ ಮುಂಬೈಗೆ ಹೋದೆ. ಹಾಗಂತ ಅಲ್ಲಿ ಹೀರೋ ಆಗುವುದಕ್ಕೆ ಅಲ್ಲ. ಅಂತಹ ಕನಸು ನಂಗೂ ಇರಲಿಲ್ಲ. ಸಂಗೀತ ಕಲಿಯೋಣ ಅಂತಲೂ ಹೋಗಿದ್ದೆ. ಅಲ್ಲಿಂದ ವಾಪಸ್‌ ಬಂದು 2015ರಲ್ಲಿ ಮತ್ತೆ ಆ್ಯಕ್ಟಿಂಗ್‌ ಕಡೆ ಗಮನ ಹರಿಸೋಣ ಅಂದುಕೊಂಡೆ. ಆಫರ್‌ ಬರಲಿಲ್ಲ. ಮತ್ತೆ ಅದು ಕೈಗೂಡಿದ್ದು 2017ರಲ್ಲಿ .

ತುರ್ತುನಿರ್ಗಮನಕ್ಕೆ ನೀವು ಹೀರೋ ಆಗಿದ್ದು ಹೇಗೆ?

ಕೆಲವು ಏನಾದರೂ ಘಟಿಸುತ್ತಿದ್ದರೆ ಒಂದಕ್ಕೊಂದು ಸಂಬಂಧಗಳ ಮೂಲಕವೇ. ಇದು ಕೂಡ ಆಗಿದ್ದು ಹೀಗೆಯೇ.‘ ಲೂಸ್‌ ಕನೆಕ್ಷನ್‌’ ವೆಬ್‌ ಸೀರಿಸ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆ ಹೊತ್ತಿನಲ್ಲಿಯೇ ನಿರ್ದೇಶಕ ಹೇಮಂತ್‌ ಕುಮಾರ್‌, ನನ್ನನ್ನು ಭೇಟಿ ಮಾಡಿದ್ದರು. ನಮ್ಮಿಬ್ಬರ ನಡುವೆ ಒಂದಷ್ಟುಚರ್ಚೆ ನಡೆಯಿತು. ಒಮ್ಮೆ ಕತೆ ಹೇಳಿದರು. ಕಮ್‌ ಬ್ಯಾಕ್‌ ಮಾಡೋದಿಕ್ಕೆ ಅದು ಸೂಕ್ತ ಎನಿಸಿತು. ಅಲ್ಲಿಂದ ಶುರುವಾಗಿದ್ದು ‘ತುರ್ತು ನಿರ್ಗಮನ’.

ನಿಮ್ಮ ದೃಷ್ಟಿಯಲ್ಲಿ ತುರ್ತುನಿರ್ಗಮನದ ವಿಶೇಷತೆ ಏನು?

ಹೊಸಬರ ಸಿನಿಮಾ. ಹಾಗಂತ ಇದೊಂದು ಹೊಸಬರ ಸಿನಿಮಾ ಅಂತೆನಿಸೋದಿಲ್ಲ. ಬದಲಿಗೆ ಅನುಭವಿ ತಂತ್ರಜ್ಞರು ಮಾಡಿದ ಸಿನಿಮಾದಂತೆಯೇ ಇದೆ. ಸಿನಿಮಾ ಕಾನ್ಸೆಪ್ಟ್‌ ತುಂಬಾ ಚೆನ್ನಾಗಿದೆ. ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ನ ಹೊಸ ತೆರನಾದ ಕತೆ ಇಲ್ಲಿದೆ. ಬರವಣಿಗೆಯಲ್ಲಿ ಅಂದುಕೊಂಡಿದ್ದನ್ನು ನಿರ್ದೇಶಕರು ತೆರೆ ಮೇಲೆ ಅಚ್ಚುಕಟ್ಟಾಗಿ ತಂದಿದ್ದಾರೆ. ಟೆಕ್ನಿಕಲಿ ಸಿನಿಮಾ ರಿಚ್‌ ಆಗಿದೆ. ಜತೆಗೆ ದೊಡ್ಡ ತಾರಾಗಣ ಇಲ್ಲಿದೆ. ಸುಧಾರಾಣಿ, ಅಚ್ಯುತ್‌ ಕುಮಾರ್‌, ಸಂಯುಕ್ತಾ ಹೆಗ್ಡೆ ಇದ್ದಾರೆ. ಹಾಡುಗಳಲ್ಲೂ ಸಾಕಷ್ಟುವಿಶೇಷತೆಯಿದೆ.

'ಎಕ್ಸ್‌ಕ್ಯೂಸ್‌ ಮೀ' ನಟ ಸುನಿಲ್‌ ರಾವ್ ಫಾದರ್‌ ಡೈರಿ; ಫೋಟೋ ನೋಡಿ!

ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?

ವಿಕ್ರಮ್‌ ಅಂತ ನನ್ನ ಕ್ಯಾರೆಕ್ಟರ್‌ ಹೆಸರು. ಹದಿ ಹರೆಯದ ಹುಡುಗ. ಒಂಥರ ಹುಂಬ. ತಾನು ಎಲ್ಲರಿಗಿಂತ ಉತ್ತಮ ಎನ್ನುವ ಸ್ವಭಾವ. ತಾನೇನು ಮಾಡದಿದ್ದರೂ, ಬೇರೆಯವರು ಮಾಡೋದೆಲ್ಲ ಸರಿ ಅಂತ ಟೀಕಿಸುವ ವ್ಯಕ್ತಿ. ಒಂದ್ರೀತಿ ಬೇಜವ್ದಾರಿ. ಆತನಿಗೆ ಗುರಿಯೂ ಇಲ್ಲ, ಗುರುವೂ ಇಲ್ಲ, ಒಮ್ಮೆ ಆತನಿಗೂ ಸಮಯದ ಮಹತ್ವ ಗೊತ್ತಾಗುತ್ತೆ. ಆತನ ಜೀವನದ ಕತೆಗೆ ಇನ್ನೊಂದು ಟ್ವಿಸ್ಟ್‌ ಸಿಗುತ್ತೆ. ಅಲ್ಲಿಂದ ಏನಾಗುತ್ತೆ ಎನ್ನುವುದು ನನ್ನ ಪಾತ್ರ.

ಸಿನಿಮಾ ಈಗ ಯಾವ ಸ್ಟೇಜ್‌ನಲ್ಲಿದೆ, ಯಾವಾಗ ರಿಲೀಸ್‌?

ಸಿನಿಮಾ ಈಗ ರಿಲೀಸ್‌ಗೆ ರೆಡಿ ಆಗಿದೆ. ಎಲ್ಲವೂ ಅಂದುಕೊಂಡತಾಗಿದ್ದರೆ ಮಾ.20 ಕ್ಕೆ ಟ್ರೇಲರ್‌ ಲಾಂಚ್‌ ಆಗಬೇಕಿತ್ತು. ಹಾಗೆಯೇ ಏಪ್ರಿಲ್‌ ಮೊದಲ ವಾರಕ್ಕೆ ರಿಲೀಸ್‌ ಪ್ಲ್ಯಾನ್‌ ಇತ್ತು. ಆದರೆ ಈಗ ಕೊರೋನಾ ವೈರಸ್‌ ಭೀತಿಯ ಪರಿಣಾಮ ಎಲ್ಲವೂ ಚೇಂಜಸ್‌ ಆಗಿವೆ.

ನಟನೆಯ ಜರ್ನಿ ಮುಂದುವರೆಯುತ್ತಾ?

ಅದೆಲ್ಲ ಹೇಗೆ ಹೇಳೋದು? ಆದ್ರೂ ಒಂದು ನಂಬಿಕೆಯಿದೆ. ಇಲ್ಲಿ ನನ್ನನ್ನು ನೋಡಿಕೊಂಡು ಬಂದವರಿದ್ದಾರೆ. ನನ್ನ ಮೇಲೆ ನಿರೀಕ್ಷೆ ಇಟ್ಟುಕೊಂಡವರಿದ್ದಾರೆ. ನಟನೆ ಮೆಚ್ಚಿಕೊಂಡವರು ಇದ್ದಾರೆ. ಅವರೆಲ್ಲರ ಸಹಕಾರ, ಬೆಂಬಲ ಇರುತ್ತೆ ಅಂದುಕೊಂಡಿದ್ದೇನೆ. ನಾನಂತೂ ನಟನೆಯತ್ತ ಗಮನಹರಿಸಿದ್ದೇನೆ. ಇದೆಲ್ಲ ಕೈ ಹಿಡಿಯುತ್ತೆ ಎನ್ನುವ ಭರವಸೆಯಿದೆ.

click me!