
ಪ್ರಿಯಾ ಕೆರ್ವಾಶೆ
ನನ್ನ ತಂದೆಯ ಊರು ಮಂಡ್ಯದ ಸಮೀಪ ಇರುವ ಹುಲಿವಾನ. ಅದೇ ನನ್ನ ಹೆಸರಿನೊಂದಿಗೂ ಸೇರಿಕೊಂಡಿದೆ. ಹಿರಿಯ ಕಲಾವಿದ ಹುಲಿವಾನ್ ಗಂಗಾಧರಯ್ಯ ನಮ್ಮೂರಿನವರೇ. ಆದರೆ ನಾನು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದೆ.
ನನ್ನ ಅಮ್ಮನಿಗೆ ತನಗೆ ಮಗಳೇ ಹುಟ್ಟಬೇಕು ಅಂತಿತ್ತಂತೆ. ಮಗಳಾದರೆ ಅವಳಿಗೆ ಚೆಂದ ಡ್ರೆಸ್ ಮಾಡಬಹುದು, ಕ್ಯೂಟ್ ಆಗಿ ಚೆನ್ನಾಗಿರುತ್ತೆ ಅಂತ. ಹಾಗೇ ನಾನು ಹುಟ್ಟಿದಾಗ ಬಹಳ ಖುಷಿಯಿಂದ ನನಗೆ ಕ್ಯೂಟ್ ಆಗಿ ಡ್ರೆಸ್ ಮಾಡುತ್ತಿದ್ದರು. ಅದನ್ನು ನೋಡಿ ಚಿಕ್ಕವಳಿಂದಲೇ ನನಗೆ ಎಲ್ಲರೂ ‘ಹೀರೋಯಿನ್’ ಅಂತಲೇ ಕರೆಯುತ್ತಿದ್ದರು.
ಕ್ಯಾಮರಾ ಎದುರು ಮಿಂಚಬೇಕು, ಸೊಗಸಾಗಿ ಡ್ರೆಸ್ ಮಾಡಬೇಕು, ಕ್ಯೂಟ್ ಆಗಿ ಕಾಣಬೇಕು ಅನ್ನೋದೆಲ್ಲ ಬಾಲ್ಯದಿಂದಲೇ ಇತ್ತು. ‘ಎಕ್ಕ’ದಲ್ಲೂ ನಾನು ಮೊದಮೊದಲಿಗೆ ಯಾವ ಆ್ಯಂಗಲ್‌ನಲ್ಲಿ ನನ್ನ ಲುಕ್ ಚೆನ್ನಾಗಿರುತ್ತೆ ಅಂತಲೇ ನೋಡುತ್ತಿದ್ದೆ. ಆದರೆ ಯಾವಾಗ ಮಲ್ಲಿಕಾ ಪಾತ್ರ ಸಂಪೂರ್ಣವಾಗಿ ನನ್ನನ್ನು ಆವರಿಸಿತೋ ಆಗ ಲುಕ್, ಬ್ಯೂಟಿ ಎಲ್ಲ ಮರೆತುಹೋಯಿತು. ಪಾತ್ರಕ್ಕಿಂತ ದೊಡ್ಡದು ಯಾವುದೂ ಇಲ್ಲ ಅನಿಸಿತು.
ಮಲ್ಲಿಕಾ ಪಾತ್ರವನ್ನು ನನಗೆ ಕೊಡುವ ಮೊದಲು ನಿರ್ದೇಶಕರು ಎರಡೂ ನಾಯಕಿ ಪಾತ್ರಗಳ ಬಗ್ಗೆಯೂ ವಿವರಿಸಿ ಇವೆರಡರಲ್ಲಿ ಯಾವ ಪಾತ್ರ ನೀನು ಮಾಡಿದರೆ ಬೆಸ್ಟ್ ಅಂತ ಕೇಳಿದರು. ನಾನು ಮಲ್ಲಿಕಾ ಪಾತ್ರದ ಕಡೆ ಬೊಟ್ಟು ಮಾಡಿದ್ದೆ. ಅಂಥಾ ಮತ್ತೊಂದು ಪಾತ್ರ ನಾನು ನೋಡಿರಲಿಲ್ಲ. ಅದೇ ಪಾತ್ರ ಸಿಕ್ಕಾಗ ಆದ ಖುಷಿ ಅಷ್ಟಿಷ್ಟಲ್ಲ.
ನಾನು ಮನರಂಜನಾ ಕ್ಷೇತ್ರಕ್ಕೆ ಬಂದಿದ್ದೇ ಆಕಸ್ಮಿಕ. ಟೆಂಟ್ ಸಿನಿಮಾದಲ್ಲಿ ನಟನೆಯ ಕಲಿಕೆಯಲ್ಲಿದ್ದಾಗ ‘ಮಿಥುನ ರಾಶಿ’ ಸೀರಿಯಲ್ಲಿಗೆ ಕರೆದರು. ಶುರುವಿನಲ್ಲಿ ಬೇಡ ಅಂದುಕೊಂಡವಳು ಆಮೇಲೆ ಹೋದೆ. ಅದಾಗಿ ಸೆಕೆಂಡ್ ಪಿಯುಸಿ ಎಕ್ಸಾಂ ಹತ್ತಿರ ಬಂದಾಗ ಆ ಪಾತ್ರಕ್ಕೆ ಗುಡ್‌ಬೈ ಹೇಳಿದೆ. ಮುಂದೆ ಒಂದೆರಡು ಚಿತ್ರಗಳಲ್ಲಿ ಅಭಿನಯಿಸಿದೆ. ಆದರೆ ಸಿನಿಮಾರಂಗ ಕೈ ಹಿಡಿಯುತ್ತಾ ಇಲ್ಲವಾ ಅನ್ನುವ ಅನುಮಾನ ಇತ್ತು. ಕೌಲಾಲಂಪುರದಲ್ಲಿ ಆರ್ಕಿಟೆಕ್ಚರ್ ಓಡಿ ಪದವಿ ಪಡೆದೆ. ವಿದೇಶದಲ್ಲಿ ಮಾಸ್ಟರ್ಸ್ ಮಾಡುವ ಪ್ಲಾನ್ ಇತ್ತು. ಆ ಹೊತ್ತಿಗೆ ‘ಕರಾವಳಿ’ ಸಿನಿಮಾದಿಂದ ಆಫರ್ ಬಂತು. ಆ ಸಿನಿಮಾ ಕೆಲಸ ಮುಗೀತಾ ಬರುವಾಗ ‘ಎಕ್ಕ’ಕ್ಕೆ ಕರೆಬಂತು.
ನಾನು ‘ಎಕ್ಕ’ ಸಿನಿಮಾಕ್ಕೆ ಬರುವ ಮೊದಲು ರಿಷಬ್ ಶೆಟ್ಟಿ ಸಿನಿಮಾಕ್ಕೆ ಆಡಿಷನ್ ಕೊಟ್ಟಿದ್ದೆ. ರಿಷಬ್ ಅವರು ನನ್ನ ನಟನೆ ಮೆಚ್ಚಿಕೊಂಡರೂ, ‘ಈ ಪಾತ್ರಕ್ಕೆ ನೀನು ಚಿಕ್ಕವಳಾದೆ, ಮುಂದೆ ಯಾವತ್ತಾದರೂ ನನ್ನ ಸಿನಿಮಾಕ್ಕೆ ನಿನ್ನನ್ನು ಆಯ್ಕೆ ಮಾಡ್ತೀನಿ’ ಅಂದಿದ್ದರು. ಆದರೆ ಅಲ್ಲಿ ನನ್ನ ನಟನೆ ನೋಡಿದ ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಅವರು ‘ಎಕ್ಕ’ ಸಿನಿಮಾಕ್ಕೆ ನನ್ನ ಹೆಸರು ಸೂಚಿಸಿದರು.
ನನಗೆ ಈಗ ಅನಿಸುತ್ತೆ. ನಾನು ಓದಿದ ಮೌಂಟ್ ಕಾರ್ಮೆಲ್ ಕಾಲೇಜಿಂದ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಅಂಥಾ ಪ್ರತಿಭೆಗಳು ಹೊರಬಂದಿದ್ದಾರೆ. ನಾನೂ ಅವರ ಸಾಲಿನಲ್ಲಿ ನಿಲ್ಲಬೇಕು. ಈ ಕೆರಿಯರ್‌ನ ಪೀಕ್ ಅನ್ನು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.