
ಬಣ್ಣದ ಬುಗುರಿಗೂ ಗಾಲಿ ಜನಾರ್ಧನ ರೆಡ್ಡಿಗೂ ನಂಟು!
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಮರೆಯಾಗದ ಹಾಡುಗಳ ಪೈಕಿ ‘ಮಹಾಕ್ಷತ್ರಿಯ’ ಚಿತ್ರದ ‘ಈ ಭೂಮಿ ಬಣ್ಣದ ಬುಗುರಿ’ ಗೀತೆಗೆ ವಿಶೇಷ ಸ್ಥಾನವಿದೆ. ಜೀವನದ ತತ್ವವನ್ನು ಸರಳ ಪದಗಳಲ್ಲಿ ಕಟ್ಟಿಕೊಟ್ಟಿರುವ ಈ ಹಾಡು ಇಂದಿಗೂ ಸಂಗೀತಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಜೈಲಿನ ದಿನಗಳಲ್ಲೂ ಇದೇ ಹಾಡು ಮಾನಸಿಕ ನೆಮ್ಮದಿ ನೀಡಿತ್ತು ಎಂಬ ಅಚ್ಚರಿಯ ವಿಚಾರ ಇದೀಗ ಬಹಿರಂಗವಾಗಿದೆ.
ಒಂದು ಹಾಡು ಕೇಳುಗರ ಮನಸ್ಸನ್ನು ರಂಜಿಸುವುದಷ್ಟೇ ಅಲ್ಲ, ಕಷ್ಟದ ಸಮಯದಲ್ಲಿ ಸಾಂತ್ವನ ನೀಡುವ ಶಕ್ತಿಯನ್ನೂ ಹೊಂದಿರುತ್ತದೆ. ಇದಕ್ಕೆ ‘ಈ ಭೂಮಿ ಬಣ್ಣದ ಬುಗುರಿ’ ಹಾಡೇ ಸಾಕ್ಷಿ ಎಂದು ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ಜನಾರ್ದನ ರೆಡ್ಡಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಬಾಬು ಅವರ ಜೊತೆ ಭಾವುಕರಾಗಿ ಆ ಹಾಡಿನೊಂದಿದೆ ಇದ್ದ ತಮ್ಮ ಅನುಭವವನ್ನು ಹಂಚಿಕೊಂಡಿದ್ದರಂತೆ.
ಜೈಲಿನಲ್ಲಿದ್ದ ಕಠಿಣ ದಿನಗಳಲ್ಲಿ ಮಾನಸಿಕ ನೆಮ್ಮದಿ ಪಡೆಯಲು ಪ್ರತಿದಿನ ಮೂರು ಬಾರಿ ‘ಈ ಭೂಮಿ ಬಣ್ಣದ ಬುಗುರಿ’ ಹಾಡನ್ನು ಕೇಳುತ್ತಿದ್ದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದನ್ನು ಬಾಬು ನೆನಪಿಸಿಕೊಂಡಿದ್ದಾರೆ. ಆ ಮಾತು ಕೇಳಿ ತಮಗೆ ಅಪಾರ ಸಂತೋಷವಾಯಿತು ಎಂದಿರುವ ಅವರು, ಒಂದು ಸಿನಿಮಾ ಹಾಡು ವ್ಯಕ್ತಿಯೊಬ್ಬರ ನೋವಿನ ಕ್ಷಣಗಳಲ್ಲಿ ಎಷ್ಟರಮಟ್ಟಿಗೆ ಸಾಂತ್ವನ ನೀಡಬಲ್ಲದು ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಗೀತ ನಿರ್ದೇಶಕ ಹಂಸಲೇಖ ಅವರೊಂದಿಗಿನ ತಮ್ಮ ಆತ್ಮೀಯ ಸಂಬಂಧದ ಬಗ್ಗೆಯೂ ರಾಜೇಂದ್ರ ಸಿಂಗ್ ಬಾಬು ಮನಬಿಚ್ಚಿ ಮಾತನಾಡಿದ್ದಾರೆ. ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರ ನಡುವೆ ಸೃಜನಶೀಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ ತಮ್ಮಿಬ್ಬರ ಸ್ನೇಹದಲ್ಲಿ ಎಂದಿಗೂ ಅಹಂಗೆ ಜಾಗವಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಸಿನಿಮಾದ ಕೆಲಸ ಚೆನ್ನಾಗಿದ್ದರೆ ಮೆಚ್ಚಬೇಕು, ತಪ್ಪಾಗಿದ್ದರೆ ನೇರವಾಗಿ ಹೇಳಬೇಕು ಎಂಬ ಮನೋಭಾವ ಇಬ್ಬರಲ್ಲೂ ಇತ್ತು. ಬಾಬು ಅವರಿಗೆ ಯಾವ ರೀತಿಯ ಸಂಗೀತ ಬೇಕು ಎಂಬುದು ಹಂಸಲೇಖ ಅವರಿಗೆ ಚೆನ್ನಾಗಿ ತಿಳಿದಿತ್ತು. ಅದೇ ರೀತಿ ಹಂಸಲೇಖ ಅವರ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಬಾಬು ಅವರಿಗೂ ಸಂಪೂರ್ಣ ನಂಬಿಕೆಯಿತ್ತು. ಕೆಲವೊಮ್ಮೆ ಹಂಸಲೇಖ ಅವರೇ ತಮ್ಮ ಕಾಲ್‌ಶೀಟ್ ಕ್ಯಾಲೆಂಡರ್ ತಂದು, ಬೇಕಾದಷ್ಟು ದಿನಗಳನ್ನು ಬಳಸಿಕೊಳ್ಳುವಂತೆ ಹೇಳುತ್ತಿದ್ದರಂತೆ. ಇಂತಹ ವಿಶ್ವಾಸದ ಬಾಂಧವ್ಯವೇ ಅನೇಕ ಉತ್ತಮ ಸೃಷ್ಟಿಗಳಿಗೆ ಕಾರಣವಾಯಿತು ಎಂದು ಅವರು ಸ್ಮರಿಸಿದ್ದಾರೆ.
ಐದೇ ನಿಮಿಷದಲ್ಲಿ ಹುಟ್ಟಿದ ಸಾರ್ವಕಾಲಿಕ ಹಾಡು!
‘ಈ ಭೂಮಿ ಬಣ್ಣದ ಬುಗುರಿ’ ಹಾಡಿನ ಸೃಷ್ಟಿಯ ಹಿಂದಿನ ಘಟನೆ ನಿಜಕ್ಕೂ ಸಿನಿಮಾ ಕಥೆಯಂತಿದೆ. ‘ಮಹಾಕ್ಷತ್ರಿಯ’ ಚಿತ್ರದಲ್ಲಿ ಎಂಟು ಮಂದಿ ಕ್ರಿಮಿನಲ್‌ಗಳಿಗೆ ಜೀವನದ ಪಾಠ ಹೇಳುವ ಸನ್ನಿವೇಶವಿತ್ತು. ಆದರೆ ಇಂತಹ ಉಪದೇಶದ ಹಾಡುಗಳು ಪ್ರೇಕ್ಷಕರಿಗೆ ಬೋರ್ ಹೊಡೆಸುವ ಸಾಧ್ಯತೆ ಇತ್ತು. ಹೀಗಾಗಿ, ಸಂದೇಶವನ್ನೂ ನೀಡುವ ಜೊತೆಗೆ ಕೇಳುಗರನ್ನು ಸೆಳೆಯುವ ಹಾಡೊಂದನ್ನು ಸಿದ್ಧಪಡಿಸುವ ಜವಾಬ್ದಾರಿ ಬಾಬು ಮತ್ತು ಹಂಸಲೇಖ ಅವರ ಮೇಲಿತ್ತು.
ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಚೆನ್ನೈನ ಪ್ರಸಾದ್ ಸ್ಟುಡಿಯೋಗೆ ಹಾಡಿನ ರೆಕಾರ್ಡಿಂಗ್‌ಗಾಗಿ ಆಗಮಿಸಿದ್ದರು. ಆದರೆ, ಆ ಹೊತ್ತಿಗೆ ಸಾಹಿತ್ಯವೇ ಸಿದ್ಧವಾಗಿರಲಿಲ್ಲ. ಇಷ್ಟು ದೊಡ್ಡ ಗಾಯಕನ ಮುಂದೆ ಖಾಲಿ ಕೈಯಲ್ಲಿ ನಿಲ್ಲಲು ಮುಜುಗರಪಟ್ಟ ಬಾಬು ಮತ್ತು ಹಂಸಲೇಖ ಸ್ಟುಡಿಯೋದಲ್ಲಿನ ಬಾತ್‌ರೂಮ್ ಪಕ್ಕದ ಪುಟ್ಟ ಕೊಠಡಿಯಲ್ಲಿ ಅಡಗಿಕೊಂಡರಂತೆ. ಹೊರಗಿನಿಂದ ಎಸ್‌ಪಿಬಿ ಸಾಹಿತ್ಯದ ಬಗ್ಗೆ ವಿಚಾರಿಸುತ್ತಿದ್ದರೆ, ಒಳಗಿದ್ದವರಿಗೆ ಮಾತ್ರ ಪದಗಳೇ ಹೊಳೆಯುತ್ತಿರಲಿಲ್ಲ.
ಕೊನೆಗೆ ಬಾಬು ಅವರು, ಈ ಜಗತ್ತೇ ಒಂದು ಬಣ್ಣದ ಬುಗುರಿಯಂತೆ. ಅದು ತಿರುಗುವುದನ್ನು ನಿಲ್ಲಿಸಿದಾಗ ಏನಾಗುತ್ತದೆ ಎಂಬ ಕಲ್ಪನೆಯನ್ನು ಇಟ್ಟುಕೊಂಡು ಸಾಹಿತ್ಯ ರಚಿಸುವಂತೆ ಹಂಸಲೇಖ ಅವರಿಗೆ ಸೂಚಿಸಿದರು. ಆ ಒಂದು ಎಳೆಯೇ ಸಾಕಾಯಿತು. ಹಂಸಲೇಖ ಅವರ ಸೃಜನಶೀಲತೆಗೆ ವೇಗ ಸಿಕ್ಕಿತು. ಕೇವಲ ಐದು ನಿಮಿಷಗಳಲ್ಲಿ ‘ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ...’ ಎಂಬ ಅದ್ಭುತ ಸಾಲುಗಳು ಮೂಡಿಬಂದವು.
ಹಾಡಿನ ರೆಕಾರ್ಡಿಂಗ್ ಮುಗಿದ ಬಳಿಕ ಎಸ್‌ಪಿಬಿ, ಇದು ಎಂದಿಗೂ ಸಾವಿಲ್ಲದ ಎಟರ್ನಲ್ ಸಾಂಗ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ವರ್ಷಗಳು ಕಳೆದರೂ ಆ ಮಾತು ನಿಜವಾಗಿಯೇ ಉಳಿದಿದೆ. ‘ಶೋಲೆ’, ‘ಬಂಗಾರದ ಮನುಷ್ಯ’, ‘ಬಂಧನ’, ‘ಮಯೂರ’, ‘ನಾಗರಹಾವು’ ಸೇರಿದಂತೆ ಹಲವು ಕ್ಲಾಸಿಕ್ ಸಿನಿಮಾಗಳಂತೆ ಕೆಲವು ಸೃಷ್ಟಿಗಳು ಪೂರ್ವಯೋಜನೆಯಿಂದಲ್ಲ, ಸಮಯದ ಮ್ಯಾಜಿಕ್‌ನಿಂದ ಹುಟ್ಟುತ್ತವೆ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ‘ಈ ಭೂಮಿ ಬಣ್ಣದ ಬುಗುರಿ’ ಕೂಡ ಅಂತಹ ಅಪರೂಪದ ಸಂಗೀತದ ಅದ್ಭುತವಾಗಿದ್ದು, ಇಂದಿಗೂ ತಲೆಮಾರುಗಳ ಮನಸ್ಸಿನಲ್ಲಿ ಜೀವಂತವಾಗಿದೆ.
'ಟಾಕ್ಸಿಕ್' ಚಿತ್ರದಿಂದ ಲಾಭವೇ ಆಗಿದೆ, ನಷ್ಟ ಅಲ್ಲ.. ಪೇಯ್ಡ್ ಪ್ರಮೋಷನ್ ಗುಟ್ಟು ಬಿಟ್ಟುಕೊಡದ ದಿಲ್ ರಾಜು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.