
ಬೆಂಗಳೂರು: ನಟಿ ಚಿತ್ರಾ ಶೆಣೈ ಎಂದರೆ ಈಗಿನ ಪೀಳಿಗೆಯವರಿಗೆ ಸಡನ್ ಆಗಿ ಯಾರು ಎಂದು ತಿಳಿಯದೇ ಇರಬಹುದು. ಆದರೆ ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಮಂದಾಕಿನಿ ಅರ್ಥಾತ್ ಭೂಮಿಕಾಳ ಅಮ್ಮನ ಪಾತ್ರ ಮಾಡಿದ ನಟಿ ಎಂದಾಕ್ಷಣ, ಅವರ ನಟನೆಯ ಬಗ್ಗೆ ಮೆಚ್ಚುಗೆ ಸೂಸುವವರೇ ಇಲ್ಲ. ಆ್ಯಕ್ಟಿಂಗ್ ಮಾಡುತ್ತಿದ್ದಾರೆ ಎನ್ನುವ ಭಾವನೆಯೇ ಬರದೇ ಸಹಜ ನಟನೆಯಿಂದ ಫೇಮಸ್ ಆಗಿರೋ ನಟಿ ಚಿತ್ರಾ ಶೆಣೈ ಅವರು ಇಲ್ಲಿಯವರೆಗೆ ಒಟ್ಟೂ 686 ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದರೆ ಬಹುಶಃ ಇದು ಎಲ್ಲರಿಗೂ ಶಾಕ್ ಕೊಡುವಂಥದ್ದೇ. ಸುದೀಪ್ ಅವರ ಜೊತೆಗೆ ಮಾರ್ಕ್-2ನಲ್ಲಿ ನಟಿಸಿದ್ದ ಚಿತ್ರಾ ಶೆಣೈ ಅವರದ್ದು ಆ ಸಿನಿಮಾ 685ನೇಯದ್ದು. ಅದಾದ ಬಳಿಕ ಇನ್ನೂ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ.
ಅಂದಿನ ಘಟಾನುಘಟಿ ನಾಯಕರಾದ ಶಂಕರ್ನಾಗ್, ಬಾಲರಾಜ್, ಕಾಶಿನಾಥ್, ಗುರು ಕಿರಣ್ ಸೇರಿದಂತೆ ಹಲವು ನಟರ ಜೊತೆ 10 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ನಟಿ ಚಿತ್ರಾ ಶೆಣೈ ಕೊನೆಗೆ ನಾಯಕಿಯ ರೋಲ್ನಿಂದ ಹೊರಕ್ಕೆ ಬಂದರು. ಇದಕ್ಕೆ ಕಾರಣ, ಅವರಿಗೆ ರೊಮಾನ್ಸ್ ಮಾಡಲು ಬರುವುದಿಲ್ಲ ಎನ್ನುವುದಕ್ಕೆ! ಈ ಕುರಿತ ಎಲ್ಲಾ ವಿಷಯಗಳನ್ನು ನಟಿ ಚಿತ್ರಾ ಶೆಣೈ ಅವರು ಓಪನ್ ಆಗಿ ನ್ಯೂಸೋ ನ್ಯೂಸ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಸಿನಿಮಾಗಳಲ್ಲಿ ಇವರು ನಟಿಸಿದ್ದು ಚಿತ್ರಾ ಶೆಣೈ ಹೆಸರಿನಿಂದ ಅಲ್ಲ ಬದಲಿಗೆ ಅರ್ಪಿತಾ ವಿನಾಯಕ ಎಂಬ ಹೆಸರಿನಲ್ಲಿ. ಇದಕ್ಕೆ ಕಾರಣ ಶಂಕರ್ನಾಗ್ ಎಂದಿದ್ದಾರೆ ನಟಿ ಚಿತ್ರಾ. ಆಗಿನ ಸಮಯದಲ್ಲಿ ಚಿತ್ರಾ ಎನ್ನುವ ಹೆಸರಿನವರು ತುಂಬಾ ಜನ ಇದ್ದರು. ಆದ್ದರಿಂದ ಕನ್ಫ್ಯೂಸ್ ಆಗಬಾರದು ಎಂದು ಬೇರೆ ಹೆಸರು ಇಟ್ಟುಕೊಳ್ಳುವಂತೆ ಅವರು ಹೇಳಿದಾಗ, ಸಜೆಸ್ಟ್ ಮಾಡುವಂತೆ ನಾನೇ ಹೇಳಿದೆ. ಆಗ ಅವರು ಇಟ್ಟ ಹೆಸರೇ ಅರ್ಪಿತಾ ವಿನಾಯಕ ಎಂದು ನಟಿ ನೆನಪಿಸಿಕೊಂಡಿದ್ದಾರೆ.
ನಾನು ಮುಂದುವರೆದಿದ್ದರೆ ನೂರಾರು ಸಿನಿಮಾಗಳಲ್ಲಿ ನಾಯಕಿ ಆಗುತ್ತಿದ್ದೆ. ಆದರೆ ಹಾಗೆ ಆಗಲಿಲ್ಲ. ಕೆಲವೊಂದು ಸಿನಿಮಾಮಾಡಿದಾಗ ಅದರಲ್ಲಿ ನನ್ನದು ರೊಮಾನ್ಸ್ ಮಾಡುವ ರೋಲ್ ಇರಲಿಲ್ಲ. ಆದ್ದರಿಂದ ಎಲ್ಲ ಸಿನಿಮಾ ಹೀಗೆ ಎಂದುಕೊಂಡು ಬಿಟ್ಟೆ. ಆದರೆ ಮುಂದೆ ಹಾಗಾಗಲಿಲ್ಲ. ರೊಮಾನ್ಸ್ ದೃಶ್ಯ ಮಾಡಲು ನನ್ನಿಂದ ಸಾಧ್ಯವೇ ಆಗಲಿಲ್ಲ. ಇದು ನನಗೆ ಆಗದ ಮಾತು ಎಂದು ನಾಯಕಿ ಪಾತ್ರದಿಂದ ಹೊರಕ್ಕೆ ಬಂದುಬಿಟ್ಟೆ ಎಂದಿದ್ದಾರೆ ನಟಿ. ಈ ಕುರಿತು ನಟ ಅನಂತ್ನಾಗ್ ಅವರ ಜೊತೆ ನಡೆದ ಒಂದು ಘಟನೆಯನ್ನು ಚಿತ್ರಾ ನೆನಪಿಸಿಕೊಂಡಿದ್ದಾರೆ.
ನಟ ಅನಂತ್ ನಾಗ್ ಅವರ ಜೊತೆ ಒಂದು ರೊಮ್ಯಾಂಟಿಕ್ ಸೀನ್ ಮಾಡಬೇಕಿತ್ತು. ಅದರಲ್ಲಿ ಆಗತಾನೇ ಮದುವೆಯಾದಾಕೆ ನಾನು. ಅವರು ನನ್ನನ್ನು ಕೈಯಿಂದ ತಿರುಗಿಸಿ ಹಿಡಿದುಕೊಳ್ಳುವುದು ಅಷ್ಟೇ ಸೀನ್. ಆದರೆ ನನಗೆ ಅದನ್ನೇ ಮಾಡಲು ಆಗಲಿಲ್ಲ. 50-60 ಟೇಕ್ ತೆಗೆದುಕೊಳ್ಳಬೇಕಾಯ್ತು. ಎಷ್ಟೋ ಬಾರಿ ಅನಂತ್ ಸರ್ ಅವರ ಕಾಲನ್ನೂ ತುಳಿದುಬಿಟ್ಟಿದ್ದೆ. ನಾನೇ ತುಂಬಾ ತೊಂದರೆ ಕೊಟ್ಟೆ, ಆದರೂ ಬೇಸರ ಮಾಡಿಕೊಳ್ಳದ ಅನಂತ್ ನಾಗ್ ಅವರು 50-60 ಟೇಕ್ ತೆಗೆದುಕೊಂಡರು. ಆದರೆ ಕೊನೆಗೂ ಸಾಧ್ಯವೇ ಆಗಲಿಲ್ಲ. ಆಮೇಲೆ ನನ್ನ ಬದಲಿಗೆ ನಟಿ ಮಹಾಲಕ್ಷ್ಮಿಯನ್ನು ಆ ಸಿನಿಮಾಕ್ಕೆ ಆಯ್ಕೆ ಮಾಡಲಾಯಿತು. ಅಲ್ಲಿಯೇ ನನಗೆ ಈ ರೊಮಾನ್ಸ್ ಎಲ್ಲಾ ಬರೋದಿಲ್ಲ ಎಂದು ತಿಳಿದು ನಾಯಕಿ ಪಾತ್ರದಿಂದ ದೂರವಾಗಿಬಿಟ್ಟೆ ಎಂದಿದ್ದಾರೆ ಚಿತ್ರಾ ಶೆಣೈ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.