ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯ, ಜಡೇಶ್ ಕೆ ಹಂಪಿ ನಿರ್ದೇಶನದ ಚಿತ್ರಕ್ಕೆ ಮುಹೂರ್ತ ಆಗಿದೆ. ಈ ಚಿತ್ರದ ಮೂಲಕ ದುನಿಯಾ ವಿಜಯ್ ಪುತ್ರಿ ರಿತನ್ಯಾ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯ, ಜಡೇಶ್ ಕೆ ಹಂಪಿ ನಿರ್ದೇಶನದ ಚಿತ್ರಕ್ಕೆ ಮುಹೂರ್ತ ಆಗಿದೆ. ಈ ಚಿತ್ರದ ಮೂಲಕ ದುನಿಯಾ ವಿಜಯ್ ಪುತ್ರಿ ರಿತನ್ಯಾ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಈ ಹಿಂದೆ ‘ಸಾರಥಿ’ ಚಿತ್ರ ನಿರ್ಮಿಸಿದ್ದ ಸತ್ಯ ಪ್ರಕಾಶ್ ಈ ಚಿತ್ರಕ್ಕೆ ನಿರ್ಮಾಪಕರು. ಅವರ ಪುತ್ರ ಸೂರಜ್ ಕೂಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರದಲ್ಲಿ ನಟಿಸಿದ್ದ ಶಿಶಿರ್ ಈ ಚಿತ್ರದಲ್ಲಿ ರಿತನ್ಯಾಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ದುನಿಯಾ ವಿಜಯ್ ಮಾತನಾಡಿ, ‘ಇದು ನನಗೆ ವಿಶೇಷ ದಿನ. ನನ್ನ ಮಗಳು ನನ್ನ ಜತೆಗೆ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾಳೆ. ನಾನು ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷಗಳಾದವು. ನಾನು ಈ ಹಂತಕ್ಕೆ ಬರಲು ಕಾರಣವಾಗಿದ್ದು ಅವಮಾನಗಳು, ನೋವು, ದುಃಖವೇ. ಅಂಥ ಸಂಕಷ್ಟಗಳು ಇಲ್ಲದೆ ನನ್ನ ಮಗಳು ರಿತನ್ಯಾ ಚಿತ್ರರಂಗಕ್ಕೆ ಪರಿಚಯ ಆಗುತ್ತಿದ್ದಾಳೆ. ಒಬ್ಬ ತಂದೆಯಾಗಿ ನನಗೆ ಬಂದ ಚಿತ್ರಕಥೆ ಹಾಗೂ ಪಾತ್ರದಲ್ಲಿ ಅರ್ಧ ನನ್ನ ಮಗಳಿಗೆ ಕೊಟ್ಟಿದ್ದೇನೆ. ನಾನೊಬ್ಬ ಕಲಾವಿದನಾಗಿ ಇದಕ್ಕಿಂತ ಹೆಚ್ಚೇನು ತ್ಯಾಗ ಮಾಡಲಾರೆ. ನಿರ್ದೇಶಕರ ಕೋರಿಕೆ, ಕತೆ ಬೇಡಿದ್ದರಿಂದಲೇ ನನ್ನ ಮಗಳು ಈ ಚಿತ್ರದಲ್ಲಿ ನಟಿಸುತ್ತಿದ್ದಾಳೆ ’ಎಂದರು.
ಅಭಿಮನ್ಯು ಎದುರು ಭೀಮನ ಘರ್ಜನೆ: ನಿಖಿಲ್ ಚಿತ್ರಕ್ಕೆ ವಿಲನ್ ಆದ ದುನಿಯಾ ವಿಜಯ್!
ಪುರಾಣ, ರಾಜಕೀಯ ಮತ್ತು ಐತಿಹಾಸಿಕ ವಿಶೇಷತೆಗಳನ್ನು ಒಳಗೊಂಡ ಕೋಲಾರ ಭಾಗದ ಕತೆಯನ್ನು ಈ ಚಿತ್ರದ ಮೂಲಕ ಜಡೇಶ್ ಹೇಳುತ್ತಿದ್ದಾರೆ. ‘12 ವರ್ಷಗಳ ನಂತರ ಸಾರಥಿ ಚಿತ್ರದ ನಿರ್ಮಾಪಕರು ನಮ್ಮ ಈ ಚಿತ್ರ ನಿರ್ಮಿಸುತ್ತಿದ್ದಾರೆ. ರಿತನ್ಯಾ ಈ ಚಿತ್ರದ ಮೂಲಕ ಲಾಂಚ್ ಆಗುತ್ತಿದ್ದಾರೆ. ಕೋಲಾರ ಭಾಗದವರೇ ಆದ ಮಾಸ್ತಿ ಸಂಭಾಷಣೆ ಬರೆಯುತ್ತಿರುವುದು ನಿರ್ದೇಶಕನಾಗಿ ನನಗೆ ಖುಷಿ ತಂದಿದೆ’ ಎಂದರು ಜಡೇಶ್. ರಿತನ್ಯಾ ಮಾತನಾಡಿ, ‘ಬಾಂಬೆಯ ಅನುಪಮ್ ಖೇರ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನಾ ತರಬೇತಿ ಮಾಡಿಕೊಂಡು ಬಂದಿದ್ದೇನೆ. ನನ್ನ ತಂದೆ ನನ್ನ ಮೇಲಿಟ್ಟಿರುವ ನಂಬಿಕೆ, ನಿರ್ದೇಶಕರ ಕಲ್ಪನೆಯ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡುತ್ತೇನೆ’ ಎಂದರು.