ದೊಡ್ಡ ಸಿನಿಮಾಗಳಿಲ್ಲದೆ ಸಪ್ಪೆ ಆಗಿದ್ದ ಚಿತ್ರರಂಗಕ್ಕೆ ಭೀಮನ ಪ್ರವೇಶ ಭೀಮ ಬಲ ತುಂಬಲಿದೆ ಎಂಬ ನಿರೀಕ್ಷೆ ಇದೆ. ಅದಕ್ಕೆ ಪೂರಕವಾಗಿ ಬಾಗಿಲು ಹಾಕಿದ್ದ ಹಲವು ಚಿತ್ರಮಂದಿರಗಳು ಭೀಮನ ಆಗಮನಕ್ಕೆ ಮತ್ತೆ ಬಾಗಿಲು ತೆರೆದು ಕಾಯುತ್ತಿವೆ. ಈ ಮಧ್ಯೆ ಸಿನಿಮಾದ ಹಾಡುಗಳೆಲ್ಲಾ ಹಿಟ್ ಆಗಿದ್ದು, ಚಿತ್ರದ ಮೇಲಿನ ಕುತೂಹಲ ಹೆಚ್ಚಿದೆ.
ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಭೀಮ’ ಸಿನಿಮಾ ಮುಂದಿನ ವಾರ ಆ.9ರಂದು ಬಿಡುಗಡೆ ಆಗುತ್ತಿದೆ. ದೊಡ್ಡ ಸಿನಿಮಾಗಳಿಲ್ಲದೆ ಸಪ್ಪೆ ಆಗಿದ್ದ ಚಿತ್ರರಂಗಕ್ಕೆ ಭೀಮನ ಪ್ರವೇಶ ಭೀಮ ಬಲ ತುಂಬಲಿದೆ ಎಂಬ ನಿರೀಕ್ಷೆ ಇದೆ. ಅದಕ್ಕೆ ಪೂರಕವಾಗಿ ಬಾಗಿಲು ಹಾಕಿದ್ದ ಹಲವು ಚಿತ್ರಮಂದಿರಗಳು ಭೀಮನ ಆಗಮನಕ್ಕೆ ಮತ್ತೆ ಬಾಗಿಲು ತೆರೆದು ಕಾಯುತ್ತಿವೆ. ಈ ಮಧ್ಯೆ ಸಿನಿಮಾದ ಹಾಡುಗಳೆಲ್ಲಾ ಹಿಟ್ ಆಗಿದ್ದು, ಚಿತ್ರದ ಮೇಲಿನ ಕುತೂಹಲ ಹೆಚ್ಚಿದೆ.
ಜನಪದ, ಶಾಸ್ತ್ರೀಯ, ಡ್ಯುಯೆಟ್ ಹೀಗೆ ಬೇರೆ ಬೇರೆ ವಿಧದ ಹಾಡುಗಳನ್ನು ನೀಡಿ ‘ಭೀಮ’ ಮೇಲೆ ಆಸಕ್ತಿ ಹುಟ್ಟುವಂತೆ ಮಾಡಿರುವ ಸಂಗೀತ ನಿರ್ದೇಶಕ ಚರಣ್‌ರಾಜ್, ‘ದುನಿಯಾ ವಿಜಯ್ ಅವರು ಕಟ್ಟಿಕೊಟ್ಟಿರುವ ಜಗತ್ತು ಮತ್ತು ಅವರು ತೋರಿಸಿರುವ ಘಟನೆಗಳಿಗೆ ಪೂರಕವಾಗಿ ಹಾಡುಗಳನ್ನು ಕೊಟ್ಟಿದ್ದೇನೆ. ಅವರು ಸದಾ ಹೊಸತನಕ್ಕೆ ತುಡಿಯುತ್ತಾರೆ. ಪ್ರಯೋಗಗಳಿಗೆ ಸದಾ ಸಿದ್ಧರಾಗಿರುತ್ತಾರೆ. ಆದ್ದರಿಂದಲೇ ಬೇರೆ ಬೇರೆ ರೀತಿಯ ಹಾಡುಗಳನ್ನು ಕೊಡುವುದು ಸಾಧ್ಯವಾಗಿದೆ. ಅಲ್ಲದೇ ಆ ಎಲ್ಲಾ ಹಾಡುಗಳನ್ನು ಪ್ರೇಕ್ಷಕರು ಸ್ವೀಕರಿಸಿದ್ದಾರೆ. ಹಾಡುಗಳ ಗೆಲುವೇ ಚಿತ್ರದ ಮೇಲಿನ ಕುತೂಹಲವನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.
ಸಲಗ ದಾಖಲೆ ಮುರಿಯಲಿದೆಯಾ ಭೀಮ: ಸಾವಿರ ಆನೆಗಳ ಶಕ್ತಿ ಭೀಮ ಎಂದ ದುನಿಯಾ ವಿಜಯ್!
‘ಭೀಮ’ ಚಿತ್ರದ ‘ಬ್ಯಾಡ್ ಬಾಯ್ಸ್’, ‘ಐ ಲವ್ ಯೂ ಕಣೇ’, ‘ಬೂಮ್ ಬೂಮ್ ಬೆಂಗಳೂರು’, ‘ನೂರ್ ರುಪಾಯಿ ಮಿಕ್ಸ್’, ‘ಡೋಂಟ್ ವರಿ ಬೇಬಿ ಚಿನ್ನಮ್ಮ’ ಎಂಬೆಲ್ಲಾ ಹಾಡುಗಳಿಗೆ ಜನಮನ್ನಣೆ ಸಿಕ್ಕಿವೆ. ಅದರಲ್ಲೂ ‘ಬೂಮ್ ಬೂಮ್ ಬೆಂಗಳೂರು’ ಹಾಡನ್ನು ನಾಗರಹೊಳೆಯ ಬುಡಕಟ್ಟು ಜನಾಂಗದ ಗಾಯಕರು ಹಾಡಿರುವುದು ವಿಶೇಷ.
ಈ ಕುರಿತು ಚರಣ್‌ರಾಜ್, ‘ದುನಿಯಾ ವಿಜಯ್ ಅವರಿಗೆ ಜೇನು ಕುರುಬ ಸಮುದಾಯದ ಹಾಡಿನ ಕುರಿತು ತಿಳಿದಿತ್ತು. ಆ ಹಾಡಿಗೆ ಶ್ರೀಮಂತ ಪರಂಪರೆ ಇದೆ ಮತ್ತು ಮನ ಸೆಳೆಯುವ ಗುಣವನ್ನು ಹೊಂದಿದೆ. ಆ ಹಾಡನ್ನು ಮತ್ತು ಅಲ್ಲಿನ ಪ್ರತಿಭೆಗಳನ್ನು ನಮ್ಮ ಸಿನಿಮಾಗೆ ಬಳಸಿಕೊಳ್ಳಬಹುದೇ ಎಂದು ದುನಿಯಾ ವಿಜಯ್ ಕೇಳಿದಾಗ ತಕ್ಷಣ ಒಪ್ಪಿಕೊಂಡೆ. ಕೊಡಗು ಮೂಲದ ನನಗೆ ಈ ರೀತಿಯ ಜನಪದ ಹಾಡುಗಳ ಸಂಸ್ಕೃತಿಯ ಪರಿಚಯ ಇದೆ. ನಾವು ಆ ಹಾಡನ್ನು ಬಳಸಿಕೊಂಡು ಅದಕ್ಕೆ ಆಧುನಿಕ ಸ್ಪರ್ಶ ನೀಡಿದೆವು. ಅದರ ಸಾಹಿತ್ಯ, ಸಂಗೀತ ಜನರನ್ನು ಸೆಳೆದಿರುವುದು ಸಂತೋಷ ಕೊಟ್ಟಿದೆ’ ಎನ್ನುತ್ತಾರೆ.
ಸೌಂಡಿಂಗ್ ಬಗ್ಗೆಯೂ ಮಾತನಾಡಿದ ಅವರು, ‘ಆ ಪ್ರತಿಭಾವಂತ ಗಾಯಕರು ಅವರದೇ ಆದ ಸಂಗೀತೋಪಕರಣಗಳನ್ನೂ ತಂದಿದ್ದರು. ಅದರಿಂದಾಗಿ ವಿಶಿಷ್ಟವಾದ ಸದ್ದುಗಳನ್ನು ದಾಟಿಸುವುದಕ್ಕೆ ಸಾಧ್ಯವಾಯಿತು. ಈ ಹಾಡಿನ ಮೂಲಕ ನನಗೆ ಅವರ ಶ್ರೀಮಂತ ಸಂಸ್ಕೃತಿಯನ್ನು ಅರಿಯುವುದು ಸಾಧ್ಯವಾಯಿತು. ಸಾಮಾನ್ಯವಾಗಿ ಇಂಥಾ ಸಂಸ್ಕೃತಿಗಳು ದೊಡ್ಡ ಸಮೂಹಕ್ಕೆ ತಲುಪುವುದೇ ಇಲ್ಲ. ಈ ಪ್ರತಿಭೆಯನ್ನು ನಮ್ಮ ಸಿನಿಮಾ ಮೂಲಕ ದೊಡ್ಡ ಸಮೂಹಕ್ಕೆ ತಲುಪಿಸುತ್ತಿರುವ ಖುಷಿ ಇದೆ’ ಎಂದು ಹೇಳುತ್ತಾರೆ. ‘ಭೀಮ’ ಚಿತ್ರವನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಿಸಿದ್ದಾರೆ. ಅಶ್ವಿನಿ, ಭೀಮ, ಅಚ್ಯುತ್ ಕುಮಾರ್, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಪ್ರಧಾನ ಪಾತ್ರಗಳಲ್ಲಿದ್ದಾರೆ.
ಭೀಮ ಸಿನಿಮಾ ಯಾಕೆ ನೋಡಬೇಕು..?: ದುನಿಯಾ ವಿಜಯ್ ಏನ್ ಹೇಳ್ತಾರೆ!
ಚಿತ್ರ ವೀಕ್ಷಣೆಗೆ ಸಿಎಂಗೆ ಆಹ್ವಾನ: ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾದ ವೀಕ್ಷಣೆಗೆ ಚಿತ್ರತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದೆ. ದುನಿಯಾ ವಿಜಯ್ ಹಾಗೂ ತಂಡದವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಿನಿಮಾದ ಬಗೆಗೆ ವಿವರ ನೀಡಿ ಸಿಎಂ ಅವರನ್ನು ಚಿತ್ರ ವೀಕ್ಷಣೆಗೆ ಆಹ್ವಾನಿಸಿದರು. ಮುಖ್ಯಮಂತ್ರಿಗಳು ಸಿನಿಮಾ ನೋಡುವ ಭರವಸೆ ನೀಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.