ಇಂದು 2 ಬಿಗ್‌ ಬಜೆಟ್‌ ಚಿತ್ರ ಬಿಡುಗಡೆ; ಸುದೀಪ್‌, ದುನಿಯಾ ವಿಜಯ್‌ ಪೈಪೋಟಿ!

By Kannadaprabha NewsFirst Published Oct 14, 2021, 8:40 AM IST
Highlights

ನಟ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್‌ ನಟಿಸಿ ನಿರ್ದೇಸಿಸಿರುವ ‘ಸಲಗ’ ಚಿತ್ರಗಳು ದಸರಾ ಹಬ್ಬದ ಅಂಗವಾಗಿ ಗುರುವಾರ ರಾಜ್ಯಾದ್ಯಾಂತ ತೆರೆ ಕಾಣುತ್ತಿವೆ. ಇಬ್ಬರು ಸ್ಟಾರ್‌ ನಟರ ಎರಡು ಬಿಗ್‌ ಬಜೆಟ್‌ನ ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಕೊರೋನಾದಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ ಮತ್ತೆ ಹೊಸ ಕಳೆ ಬಂದಿದೆ.
 

ರಾಜ್ಯದ ಬಹುತೇಕ ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣ ಆಗಿದ್ದು, ಇಬ್ಬರು ನಟರ ಅಭಿಮಾನಿಗಳು ಚಿತ್ರಮಂದಿರಗಳನ್ನು ಅಲಂಕರಿಸುವ ಮೂಲಕ ತಮ್ಮ ನೆಚ್ಚಿನ ನಟರ ಚಿತ್ರಗಳನ್ನು ಸ್ವಾಗತಿಸುವುದಕ್ಕೆ ಸಜ್ಜಾಗಿದ್ದಾರೆ. ಕಳೆದ ಎರಡು ದಿನಗಳಿಂದ ಎರಡೂ ಚಿತ್ರಗಳಿಗೆ ಮುಂಗಡ ಬುಕ್ಕಿಂಗ್‌ ಆರಂಭವಾಗಿ ಶೇ.60ರಿಂದ 80ರಷ್ಟುಟಿಕೆಟ್‌ಗಳು ಮಾರಾಟವಾಗಿವೆ. ಕೆಲವು ಚಿತ್ರಮಂದಿರಗಳಲ್ಲಿ ಮೊದಲ ದಿನದ ನಾಲ್ಕೂ ಶೋಗಳು ಹೌಸ್‌ಫುಲ್‌ ಆಗಿವೆ.

ಈ ಬಾರಿ ದಸರಾ ಹಬ್ಬ ವಾರದ ಕೊನೆಯಲ್ಲಿ ಬಂದಿರುವುದರಿಂದ 4ರಿಂದ 5 ದಿನ ರಜೆಗಳು ಸಿಗಲಿವೆ. ಈ ಕಾರಣಕ್ಕೆ ‘ಬುಕ್‌ಮೈ ಶೋ’ನಲ್ಲಿ ಹಲವು ಕಡೆ 2 ಹಾಗೂ 3 ದಿನಗಳ ಶೋಗಳು ಬುಕ್‌ ಆಗಿವೆ.

ಥೇಟರಲ್ಲೇ ಸಿನಿಮಾ ನೋಡ್ಬೇಕು ಅಂತಿದ್ದಾರೆ ಅಮ್ಮ: ಕಿಚ್ಚ ಜೊತೆ ಮಾತುಕತೆ

350 ಚಿತ್ರಮಂದಿರಗಳಲ್ಲಿ ಸುದೀಪ್‌:

ಕೋಟಿಗೊಬ್ಬ 3 ಚಿತ್ರ ರಾಜ್ಯದ 350 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದ್ದು, ಮಲ್ಟಿಪ್ಲೆಕ್ಸ್‌ಗಳು ಸೇರಿ ಮೊದಲ ದಿನವೇ 1300ರಿಂದ 1400 ಶೋಗಳ ಪ್ರದರ್ಶನ ಕಾಣಲಿದೆ. ಮೊದಲ ಶೋ ದಾವಣಗೆರೆಯಲ್ಲಿ ಗುರುವಾರ ನಸುಕಿನ ಜಾವ 3.30ಕ್ಕೇ ಆರಂಭವಾದರೆ, ತುಮಕೂರಿನ ಎರಡು ಚಿತ್ರಮಂದಿರಗಳಲ್ಲಿ ಬೆಳಗ್ಗೆ 5 ಗಂಟೆಗೆ ಫಸ್ಟ್‌ ಶೋ ಶುರುವಾಗಲಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮುಂತಾದ ಕಡೆ ಬೆಳಗ್ಗೆ 7 ಗಂಟೆಗೆ ಸಿನಿಮಾ ಪ್ರದರ್ಶನ ಆಗುತ್ತಿದೆ. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರ, ಜೆಪಿ ನಗರ, ವಿಕ್ಟರಿ ಸಿನಿಮಾಸ್‌ ಸೇರಿದಂತೆ ಹಲವು ಕಡೆ ‘ಕೋಟಿಗೊಬ್ಬ 3’ ಚಿತ್ರಕ್ಕೆ ದಿನಕ್ಕೆ 5ರಿಂದ 6 ಪ್ರದರ್ಶನಗಳು ಕಾಣಲಿವೆ.

ಕೆಲ ಪ್ರಮುಖ ಚಿತ್ರಮಂದಿರಗಳಲ್ಲಿ ಎರಡು ದಿನಗಳ ಎಲ್ಲ ಪ್ರದರ್ಶನಗಳು ಮುಂಗಡ ಬುಕ್ಕಿಂಗ್‌ ಆಗಿವೆ. ಬುಕ್‌ ಮೈ ಶೋನಲ್ಲಿ ಶೇ.90ರಷ್ಟುಮುಂಗಡ ಬುಕ್ಕಿಂಗ್‌ ಆಗಿದ್ದು, ತಾಂತ್ರಿಕ ದೋಷ ಇರುವ ಯಾವ ಚಿತ್ರಮಂದಿರಗಳಲ್ಲೂ ನಮ್ಮ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ. - ಸೂರಪ್ಪ ಬಾಬು, ಕೋಟಿಗೊಬ್ಬ 3 ಚಿತ್ರದ ನಿರ್ಮಾಪಕ

1200 ಸ್ಕ್ರೀನ್‌ಗಳಲ್ಲಿ ಸಲಗ ಚಿತ್ರ:

ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿರುವ ‘ಸಲಗ’ ಚಿತ್ರ 300 ಚಿತ್ರಮಂದಿರಗಳ 1200 ಸ್ಕ್ರೀನ್‌ಗಳಲ್ಲಿ ತೆರೆ ಕಾಣುತ್ತಿದೆ. ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಬೆಳಗ್ಗೆ 9 ಗಂಟೆಗೆ ಮೊದಲ ಶೋ ಆರಂಭವಾಗಲಿದ್ದು, ಮೊದಲ ದಿನ ಒಟ್ಟು 1300ಕ್ಕೂ ಹೆಚ್ಚು ಶೋಗಳ ಪ್ರದರ್ಶನಕ್ಕೆ ‘ಸಲಗ’ ಚಿತ್ರ ಸಾಕ್ಷಿ ಆಗುತ್ತಿದೆ. ಬಿಡುಗಡೆ ಆಗುತ್ತಿರುವ ಬಹುತೇಕ ಚಿತ್ರಮಂದಿರಗಳ ಮೊದಲ ದಿನದ ನಾಲ್ಕು ಶೋಗಳು ಹೌಸ್‌ಫುಲ್‌ ಆಗಿದ್ದು, ಇನ್ನೆರಡು ದಿನಗಳಲ್ಲಿ ಒಂದು ವಾರದ ಎಲ್ಲಾ ಶೋಗಳ ಟಿಕೆಟ್‌ಗಳು ಸೇಲ್‌ ಆಗಲಿವೆ ಎನ್ನಲಾಗಿದೆ.

"

ನಮ್ಮ ಚಿತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆ ನೋಡಿದರೆ ಪ್ರೇಕ್ಷಕರಿಗೆ ಕೊರೋನಾ ಭಯ ಇಲ್ಲ ಎನ್ನಬಹುದು. ಖಂಡಿತ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಾರೆ ಎನ್ನುವ ನಂಬಿಕೆ ಇದೆ. ಈ ಬಾರಿಯ ದಸರಾ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ವರವಾಗಿದೆ. - ಕೆ.ಪಿ. ಶ್ರೀಕಾಂತ್‌, ಸಲಗ ಚಿತ್ರದ ನಿರ್ಮಾಪಕ

click me!