ಅ.14ರಂದು ಬಿಡುಗಡೆಯಾಗುತ್ತಿರುವ ದುನಿಯಾ ವಿಜಯ್ ನಿರ್ದೇಶನದ, ಕೆ.ಪಿ. ಶ್ರೀಕಾಂತ್ ನಿರ್ಮಾಣದ ‘ಸಲಗ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಆತ್ಮೀಯರೆಲ್ಲರೂ ಒಟ್ಟು ಸೇರಿದರೆ ಎಂಥಾ ಒಣ ಒಣ ಕಾರ್ಯಕ್ರಮವನ್ನೂ ಆಪ್ತವನ್ನಾಗಿಸಬಲ್ಲರು ಅನ್ನುವುದಕ್ಕೆ ‘ಸಲಗ’(Salaga)ಸಿನಿಮಾದ ಪ್ರೀ-ರಿಲೀಸ್ ಸಮಾರಂಭ ಸಾಕ್ಷಿಯಾಯಿತು. ಅ.14ರಂದು ಬಿಡುಗಡೆಯಾಗುತ್ತಿರುವ ‘ಸಲಗ’ ಚಿತ್ರದ ನಿರ್ದೇಶಕ ದುನಿಯಾ ವಿಜಯ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮತ್ತು ಚಿತ್ರತಂಡಕ್ಕೆ ಶುಭ ಕೋರಲು ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್ ರಾಜ್‌ಕುಮಾರ್ ಬಂದಿದ್ದರು. ಮೂವರೂ ಆಪ್ತರು. ಮಾತಿಗೆ ನಿಂತಾಗ ತೆರೆದ ಹೃದಯದಿಂದ ಮಾತನಾಡಿದ್ದೇ ಅದಕ್ಕೆ ಪುರಾವೆ.
ಆರಂಭದಲ್ಲಿ ಮಾತಿಗೆ ನಿಂತ ಉಪೇಂದ್ರ, ‘ನಾನು ಅಣ್ಣಾವ್ರ ಮನೆಯಿಂದ ಬಂದವನು’ ಎಂದರು. ಶಿವರಾಜ್ ಕುಮಾರ್, ‘ನಾನು ಜಗಳಾಡುತ್ತೇನೆ. ಆದರೆ ಉಪೇಂದ್ರ ಬಳಿ ಮಾತ್ರ ಜಗಳಾಡಲ್ಲ. ಐ ಲವ್ ಯೂ ಉಪ್ಪಿ’ ಎಂದರು. ಅವರ ಹಿಂದೆಯೇ ಬಂದ ಪುನೀತ್ ರಾಜ್‌ಕುಮಾರ್, ‘ನನಗೆ ಉಪೇಂದ್ರ ಅವರ ಎಲ್ಲಾ ಸಿನಿಮಾ ಇಷ್ಟ. ಅವರ ತರ್ಲೆ ನನ್ ಮಗ ಸಿನಿಮಾ ನೂರಕ್ಕೂ ಹೆಚ್ಚು ಬಾರಿ ನೋಡಿದ್ದೇನೆ. ಈಗಲೂ ಮೊಬೈಲಲ್ಲಿ ಇದೆ. ನಂಗೆ ಹಿಂದೊಂದು ಆಸೆ ಇತ್ತು. ಶಿವಣ್ಣ ಸಿನಿಮಾನ ನಾನು ನಿರ್ದೇಶನ ಮಾಡಬೇಕು ಅಂತ. ಈ ಸಲಗ ಸಿನಿಮಾ ನೋಡಿ ಮತ್ತೆ ಆ ಆಸೆ ಹುಟ್ಟಿದರೂ ಅಚ್ಚರಿ ಇಲ್ಲ’ ಎಂದರು. ತಕ್ಷಣ ಉಪೇಂದ್ರ, ‘ನಾನು ನಿಮಗೆ ಅಸಿಸ್ಟ್ ಮಾಡ್ತೀನಿ’ ಎಂದು ಹೇಳಿದರು. ಶಿವಣ್ಣ ಅಂತೂ ಉತ್ಸಾಹದಿಂದ ಎದ್ದು ಸ್ಟೇಜ್ ಹತ್ತಿ ಪುನೀತ್ ಬಳಿ ಆ್ಯಕ್ಷನ್ ಕಟ್ ಹೇಳಿ ನಟಿಸಿಯೇ ಬಿಟ್ಟರು. ಅಲ್ಲಿಗೆ ಆ ಕ್ಷಣಗಳಿಗೆ ಸಾಕ್ಷಿಯಾದ ಎಲ್ಲರೂ ಹಗುರಾಗಿದ್ದರು. ನಗುವಷ್ಟೇ ಉಳಿದಿತ್ತು. ಎಲ್ಲರಲ್ಲೂ ಸಂತೋಷ ಮನೆ ಮಾಡಿತ್ತು.
undefined
ಅ.10ರಂದು ದುನಿಯಾ ವಿಜಿಯ ಸಲಗ ಚಿತ್ರದ ಪ್ರಿ-ರಿಲೀಸ್ ಸಂಭ್ರಮ
ಕೊರೋನಾ ಸಂಕಷ್ಟದ ನಂತರ ಬಿಡುಗಡೆಯಾಗುತ್ತಿರುವ ದೊಡ್ಡ ಸಿನಿಮಾ ‘ಸಲಗ’. ತಾವು ದೊಡ್ಡದಾಗಿ ಬರುತ್ತಿದ್ದೇವೆ ಎಂಬುದನ್ನು ಜಗತ್ತಿಗೆ ತಿಳಿಸಲು ಈ ಕಾರ್ಯಕ್ರಮ ಏರ್ಪಾಡಾಗಿತ್ತು. ಟೀಸರ್, ಪ್ರೊಮೋಷನಲ್ ಹಾಡುಗಳನ್ನು ತೋರಿಸಲಾಯಿತು. ಗಿರಿಜಾ ಸಿದ್ದಿ, ಗೀತಾ ಸಿದ್ದಿ ಟಿನಿಂಗ ಮಿನಿಂಗ ಟಿಶ್ಶಾ ಸಾಂಗನ್ನು ಹಾಡಿದರು. ಮೂವರು ಖ್ಯಾತನಾಮರು ಮೆಚ್ಚಿ ಅವರ ಜೊತೆ ಫೋಟೋಗೆ ನಿಂತು ಆ ಇಬ್ಬರು ಪ್ರತಿಭಾವಂತರ ಖುಷಿ ಹೆಚ್ಚಿಸಿದರು.
ಚಿತ್ರತಂಡಕ್ಕೆ ಬೆನ್ನು ತಟ್ಟಲು ರಾಜಕಾರಣಿಗಳಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಂದಿದ್ದರು. ಡಿ.ಕೆ.ಶಿವಕುಮಾರ್ ಮೈಕ್ ಎತ್ತಿಕೊಳ್ಳುತ್ತಲೇ, ‘ನೀವೆಲ್ಲಾ ಬಣ್ಣ ಹಚ್ಚಿಕೊಂಡು ನಟಿಸುತ್ತೀರಿ. ನಾವು ಬಣ್ಣ ಹಚ್ಚದೆಯೇ ನಟಿಸುತ್ತೇವೆ’ ಎಂದು ನಗಿಸಿದರು. ‘ನಾನೂ ಚಿತ್ರರಂಗಕ್ಕೆ ಸೇರಿದವನೇ. ಸಿನಿಮಾ ಡಬ್ಬಾಗಳನ್ನು ಎತ್ತಿಕೊಂಡು ತಿರುಗುತ್ತಿದ್ದೆ. ಆಮೇಲೆ ಪ್ರದರ್ಶಕನಾದೆ. ಈಗ ನಮ್ಮ ಮಲ್ಟಿಪ್ಲೆಕ್ಸ್‌ಗಳಲ್ಲಿ ಸುಮಾರು 25 ಸ್ಕ್ರೀನ್‌ಗಳನ್ನು ಹೊಂದಿದ್ದೇವೆ. ನಿಮ್ಮ ಯಶಸ್ಸು ನಮ್ಮ ಯಶಸ್ಸು’ ಎಂದರು.
ಸಲಗ: ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ದುನಿಯಾ ವಿಜಯ್ ಟೀಂ
ಸಿದ್ದರಾಮಯ್ಯ ಅವರು, ‘ಸಲಗ ಚಿತ್ರಕ್ಕೆ ನಾನೇ ಕ್ಲಾಪ್ ಮಾಡಿದ್ದೆ. ಕಾಲೇಜು ದಿನಗಳಲ್ಲಿ ತುಂಬಾ ಸಿನಿಮಾ ನೋಡುತ್ತಿದ್ದೆ. ರಾಜಕಾರಣಕ್ಕೆ ಬಂದ ಮೇಲೆ ಸಿನಿಮಾ ನೋಡುವುದು ಕಡಿಮೆಯಾಯಿತು. ಸಲಗ ಚಿತ್ರವನ್ನು ಸಮಯ ಮಾಡಿಕೊಂಡು ನೋಡುತ್ತೇನೆ’ ಎಂದರು.
ಡಾಲಿ ಧನಂಜಯ್, ನಾಯಕಿ ಸಂಜನಾ ಆನಂದ್ ಹರ್ಷಚಿತ್ತರಾಗಿದ್ದರು. ಕಡೆಗೆ ದುನಿಯಾ ವಿಜಯ್, ‘ನನಗೆ ಆರಂಭದಲ್ಲಿ ಶಿವಣ್ಣ ಒಂದು ಮಾತು ಹೇಳಿದ್ದರು. ಹಾರ್ಡ್ ವರ್ಕ್ ಮಾಡಮ್ಮಾ ಎಂಬ ಆ ಮಾತು ನನಗೆ ಯಾವತ್ತೂ ನೆನಪಿರುತ್ತದೆ. ಅದನ್ನೇ ನಂಬಿದ್ದೇನೆ. ನನ್ನ ಕೆಲಸ ‘ಸಲಗ’ ರಿಲೀಸ್ ಆದ ದಿನ ನಿಮಗೆ ಗೊತ್ತಾಗುತ್ತದೆ. ಅವತ್ತು ಮಾತನಾಡುತ್ತೇನೆ’ ಎಂದು ಹೇಳಿದರು.
ಇಷ್ಟೆಲ್ಲಾ ಆಗುವಾಗ ಇಡೀ ಚಿತ್ರತಂಡ ಖುಷಿಯಾಗಿತ್ತು. ಛಾಯಾಗ್ರಾಹಕ ವೀರಸೇನ, ಸಂಗೀತ ನಿರ್ದೇಶಕ ಚರಣ್‌ರಾಜ್, ಸಂಭಾಷಣಾಕಾರ ಮಾಸ್ತಿ ಕೆಲಸಕ್ಕೆ ಮೆಚ್ಚುಗೆ ಸಿಕ್ಕಿತ್ತು. ಅಲ್ಲಿ ನೆರೆದವರಿಗೆಲ್ಲಾ ಸಂತೋಷವಾಗಿತ್ತು.