
ಡಾ ವಿಷ್ಣುವರ್ಧನ್ ( Dr Vishnuvardhan ) ಅವರು ನಿಧನರಾಗಿ ಹದಿನೈದು ವರ್ಷಗಳಾಯ್ತು. ಈಗ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸಮಾಧಿಯನ್ನು ನೆಲಸಮ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಇವರ 75ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ತಯಾರಿ ಕೂಡ ನಡೆದಿತ್ತು. ಫೇಸ್‌ಬುಕ್ ಲೈವ್ ಬಂದಿರೋ ವಿಷ್ಣು ಅಭಿಮಾನಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಈ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಹನ್ನೊಂದು ವರ್ಷಗಳ ಹೋರಾಟ ನೀರಲ್ಲಿ ಹೋಮ ಮಾಡಿದಂತಾಯಿತು. ಡಾ.ವಿಷ್ಣುವರ್ಧನ್ ಅವರಿಗೆ ಹತ್ತು ಗುಂಟೆ ಜಾಗ ಕೊಡಲಾಗದ ನಾಚಿಕಗೇಡಿನ ಸರ್ಕಾರ ಇದು. ಅದರ ಮೇಲೆ ನಂಬಿಕೆ ಕಳೆದುಕೊಂಡು ನಾವು ಕೋರ್ಟ್ ಮೆಟ್ಟಿಲೇರಿದ್ದೆವು. ಈ ವಿಷ್ಯವಾಗಿ ಅಭಿಮಾನಿಗಳಾದ ನಿಮಗೆ ಯಾವುದೇ ಹಕ್ಕಿಲ್ಲ ಕೋರ್ಟ್ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಅವರ ಕುಟುಂಬ ಅಥವಾ ಸರ್ಕಾರವಷ್ಟೇ ಕೇಳಬೇಕು ಎಂದುಬಿಟ್ಟಿತು. ಕುಟುಂಬದವರಂತೂ ನಮಗೆ ಮೈಸೂರಿನಲ್ಲಿ ಜಾಗ ಸಿಕ್ಕಿದೆ, ಅಲ್ಲಿ ಸ್ಮಾರಕವೂ ಆಗಿದೆ. ಆದ್ದರಿಂದ ಅಭಿಮಾನ್ ಸ್ಟುಡಿಯೋದ ಜಾಗವನ್ನು ನಾವು ಕೇಳುವುದಿಲ್ಲ ಎಂದುಬಿಟ್ಟರು.
ಸರ್ಕಾರದ ಸಚಿವರಾದ ಡಿಕೆ ಶಿವಕುಮಾರ್, ಶಿವರಾಜ್ ತಂಗಡಗಿ ಅವರಿಗೆ ಮನವಿ ಕೊಟ್ಟಾಗ ಅವರು ಪುಣ್ಯಭೂಮಿ ಉಳಿಸುವ ಭರವಸೆ ಕೊಟ್ಟರು. ಆ ಎಲ್ಲದರ ಜೊತೆ ಇದುವರೆಗೆ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಇಷ್ಟೆಲ್ಲದರ ನಂತರ ನಮಗೆ ಹೇಳಲು, ಕೇಳಲು ಇನ್ನೇನಿತ್ತು? ರಾತ್ರೋರಾತ್ರಿ ನೂರಾರು ಪೋಲೀಸರ ನೇತೃತ್ವದಲ್ಲಿ ಈ ನೆಲಸಮ ಕಾರ್ಯಾಚರಣೆ ನಡೆದಿದೆ. ಒಬ್ಬ ಮೇರು ಕಲಾವಿದನಿಗೆ ಹತ್ತು ಗುಂಟೆ ಜಾಗ ಕೊಡಲಾಗದಂತಹ ವ್ಯವಸ್ಥೆಗೆ ಧಿಕ್ಕಾರವಿರಲಿ. ಬಾಲಣ್ಣನ ವಂಶಸ್ಥರೆನಿಸಿಕೊಂಡವರು ಸಮಾಧಿ ಜಾಗದಲ್ಲಿ ಮಾಲ್ ಕಟ್ಟಲು ಹೊರಟಿದ್ದಾರೆ. ಅವರಿಗೆ ಬೆನ್ನೆಲುಬಾಗಿ ಒಬ್ಬ ರಾಜಕಾರಣಿಯೂ ಜೊತೆಯಾಗಿದ್ದಾನೆ. ಹಣಕ್ಕಾಗಿ ಇಷ್ಟು ನೀಚ ಬಾಳು ಬಾಳಬೇಕಾ? ಧಿಕ್ಕಾರವಿರಲಿ. ರಾತ್ರೋರಾತ್ರಿ ಹೇಡಿಗಳ ಹಾಗೆ ನೆಲಸಮ ಮಾಡುವುದು ಬಿಟ್ಟು ಹಗಲಲ್ಲಿ ಮಾಡುವ ಎದೆಗಾರಿಕೆಯಾದರೂ ಅವರಿಗೆ ಇರಬೇಕಿತ್ತು.
ಬಾಲಣ್ಣನವರ ಕುಟುಂಬ ದುರಾಸೆಯ ಜನ, ಥರ್ಡ್ ಗ್ರೇಡ್ ಜನರು, ಅವರ ತಾತನ ಸಮಾಧಿಯನ್ನು ಕೂಡ ನಾಶ ಮಾಡಿದವರು, ವಿಷ್ಣುವರ್ಧನ್ ಸಮಾಧಿಯನ್ನು ಬಿಡ್ತಾರಾ ಎಂಬ ಡೌಟ್ ಇತ್ತು. ಹೀಗಾಗಿ ನಾವು ಹೋರಾಟ ಮಾಡಿದ್ದೆವು, ಆದರೆ ಫಲ ಸಿಗಲಿಲ್ಲ. ಯಜಮಾನ್ರು ಬದುಕಿದ್ದಾಗ ಅವರ ಕಟೌಟ್‌ಗಳನ್ನು ಸುಟ್ಟು ಹಾಕಿದಾಗ, ಸಗಣಿ ಎರಚಿದಾಗಲೂ ಕೂಡ ಅವರು ಸುಮ್ಮನಿರಿ ಅಂತ ಹೇಳಿದ್ದರು. ಅವರಿಲ್ಲದ ಸಮಯದಲ್ಲಿ ನಾವು ಸಾವು ನೋವು ಆಗೋದು ಬೇಡ ಅಂತ ಅಭಿಮಾನಿಗಳಾಗಿ ಸುಮ್ಮನಿದ್ದೆವು. ಕುಟುಂಬದವರು ಕೂಡ ನಮಗೆ ಸಾಥ್ ಕೊಡಲಿಲ್ಲ. ನಾಯಕನಾಗಿ ಇದು ನನ್ನ ಸೋಲು, ನಾನು ಸೋತಿದ್ದೇನೆ.
ಬಾಲಣ್ಣನವರ ಫ್ಯಾಮಿಲಿ ಅಲ್ಲಿ ಹೇಗೆ ಮಾಲ್ ಕಟ್ಟುತ್ತಾರೆ ಅಂತ ನೋಡ್ತೀವಿ, ನಾವು ಅದರ ವಿರುದ್ಧ ಹೋರಾಡ್ತೀವಿ. ಒಟ್ಟಿನಲ್ಲಿ ಈಗ ಏನೂ ಮಾತನಾಡಲಾಗದ ಸ್ಥಿತಿಯಲ್ಲಿದ್ದೇನೆ, ಶೂನ್ಯ ಕಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.