ನಾದಮಯ ಈ ಲೋಕವೆಲ್ಲ.. ಅನ್ನುತ್ತಿರುವ ಅಣ್ಣಾವ್ರು, ಪಾರ್ವತಮ್ಮ!

By Kannadaprabha News  |  First Published Jul 21, 2023, 9:16 PM IST

ಜೀವನ ಚೈತ್ರ ಸಿನಿಮಾ ಮಾಡಿರೋ ಸಾಮಾಜಿಕ ಕ್ರಾಂತಿ ಬಹಳ ದೊಡ್ಡದು. ಅಣ್ಣಾವ್ರು ಕಣ್ಣಾಲಿ ತುಂಬಿಕೊಂಡು ಹಾಡುವ ನಾದಮಯ ಹಾಡಿನ ಪ್ರಭಾವವನ್ನಂತೂ ವಿವರಿಸೋದು ಕಷ್ಟ. ಇದೀಗ ಆ ಹಾಡಿನ ಶೂಟಿಂಗ್‌ ವೇಳೆ ಅಣ್ಣಾವ್ರು ತನ್ನ ವಿಶಾಲಾಕ್ಷಿ ಪಾರ್ವತಮ್ಮ ಜೊತೆಗೆ ನಿಂತಿರೋ ಫೋಟೋ ವೈರಲ್‌ ಆಗಿದೆ. 
 


ನಿತ್ತಿಲೆ

ಜೀವನ ಚೈತ್ರ ಸಿನಿಮಾ ಅಂದಾಕ್ಷಣ ಕನ್ನಡಿಗರ ಕಿವಿ ನೆಟ್ಟಗಾಗುತ್ತವೆ. ಆ ಕಾಲದ ಜನ ಈ ಸಿನಿಮಾ ಮಾಡಿದ ಕ್ರಾಂತಿಯನ್ನು ಇಂದಿಗೂ ಅಚ್ಚರಿ ಕಣ್ಣುಗಳಿಂದ ನೆನಪಿಸಿಕೊಳ್ಳುತ್ತಾರೆ. ಆದರೆ ಈ ಸಿನಿಮಾದ ಒಂದು ಆಪ್ತ ಫೋಟೋ ದಶಕಗಳ ನಂತರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಂಥದ್ದೇನಿದೆ ಆ ಫೋಟೋದಲ್ಲಿ ಅಂದರೆ ಅದಕ್ಕೆ ಉತ್ತರ ಮುತ್ತುರಾಜನ ವಿಶಾಲಾಕ್ಷಿ ಪಾರ್ವತಮ್ಮ. ಇದೊಂದು ಅವಿಸ್ಮರಣೀಯ ಫೋಟೋವಾಗಿ ಮನಸ್ಸಲ್ಲಿ ಉಳಿಯುವಂತಿದೆ. ಅಣ್ಣಾವ್ರ ಕಣ್ಣಲ್ಲಿರುವ ದೈವಿಕ ಕಳೆಯೂ ಗಮನ ಸೆಳೆಯುತ್ತದೆ. ಇದಕ್ಕೆ ಒಂದು ಕಾರಣ ಇದೆ. 

ಜೀವನ ಚೈತ್ರ ಸಿನಿಮಾದ 'ನಾದಮಯ' ಹಾಡು ಕೇಳದ ಕನ್ನಡಿಗರಿಲ್ಲ. ಅಣ್ಣಾವ್ರ ಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿಬಂದ ಹಾಡಿನ ಸೊಗಸು ಒಂದು ಕಡೆ ಆದರೆ ಇದಕ್ಕೆ ಡಾ ರಾಜ್‌ ಕೊಟ್ಟ ಭಾವಾಭಿನಯದ ತೀವ್ರತೆ ಇನ್ನೊಂದು ಕಡೆ. ಹಿಮಾಲಯ, ಗಂಗಾ ಮಾತೆ, ಕಾಶಿ ವಿಶ್ವನಾಥನ ಸನ್ನಿಧಾನ ಎಲ್ಲ ಈ ಹಾಡೊಂದರಲ್ಲಿ ಬಂದು ಹೋಗುತ್ತದೆ. ಈ ಪರಿಸರದಲ್ಲಿ ಅಣ್ಣಾವ್ರು ಮನದುಂಬಿ ನಾದಮಯ ಹಾಡು ಹಾಡುತ್ತ ಹಾಡುತ್ತ ಭಾವುಕರಾಗಿ ಕಣ್ಣೀರು ಸುರಿಸುವುದು ನಟನೆ ಅಂತ ಯಾರಿಗೂ ಅನಿಸೋದಿಲ್ಲ. ಅಣ್ಣಾವ್ರು ಆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ ರೀತಿ, ಅದರಿಂದ ಉದ್ಭವಿಸಿದ ಅನುಭೂತಿ ಅದು. ಆ ಹಾಡನ್ನು ಎಷ್ಟು ಸಲ ಕೇಳಿದರೂ ಮನಸ್ಸು ದಣಿಯೋದಿಲ್ಲ. ಬದಲಿಗೆ ಪ್ರತೀ ಸಲವೂ ಮನಸ್ಸು ತುಂಬಿ ಬರುತ್ತದೆ. ನಾದಮಯ ಗೀತೆ ಹಾಡುತ್ತ ಹಾಡುತ್ತ ಅಣ್ಣಾವ್ರು ಭಾವುಕರಾಗುತ್ತಿದ್ದರೆ ಅದನ್ನು ನೋಡುವ ಜನರೂ ಕಣ್ಣಾಲಿ ಒರೆಸಿಕೊಳ್ಳುತ್ತಾರೆ. 

ಸಿನಿಮಾದಲ್ಲಿ ನಾವು ನೋಡುವ ಇಂಥಾ ಭಾವತೀವ್ರತೆಯ ಸನ್ನಿವೇಶದ ಶೂಟಿಂಗ್‌ ಹೇಗಿದ್ದಿರಬಹುದು ಅನ್ನೋದು ಹಲವರು ಪ್ರಶ್ನೆ. ಅದಕ್ಕೆ ಉತ್ತರವಾಗಿ ಈ ಫೋಟೋವಷ್ಟೇ ನಮ್ಮ ಪಾಲಿಗೆ ಸದ್ಯಕ್ಕೆ ಲಭ್ಯವಿದೆ. ಇದರಲ್ಲಿ ಅಣ್ಣಾವ್ರ ಪಕ್ಕ ಅವರ ಜೀವನ ಸಂಗಾತಿ ಪಾರ್ವತಮ್ಮ ಇದ್ದಾರೆ. ನಾದಮಯ ಹಾಡಿನಲ್ಲಿ ಅಣ್ಣಾವ್ರು ಎಷ್ಟು ನಿರ್ಮಲವಾಗಿ ಕಾಣುತ್ತಾರೋ ಆ ನಿರ್ಮಲತೆ ಈ ಫೋಟೋದಲ್ಲೂ ಕಾಣುತ್ತದೆ. ಜೊತೆಗೆ ಡಾ. ರಾಜ್ ಮುಖದಲ್ಲೊಂದು ದೈವಿಕ ಹೊಳಪು ಕಾಣಿಸುತ್ತಿದೆ. ಅವರು ಈ ಹಾಡಿನಲ್ಲಿ ಯಾವ ಮಟ್ಟಿಗೆ ತಲ್ಲೀನರಾಗಿ ಹೋಗಿರಬಹುದು ಅನ್ನೋದನ್ನು ಈ ಫೋಟೋವೇ ನಮಗೆ ತೋರಿಸಿಕೊಡುತ್ತದೆ. 

ಜೀವನ ಚೈತ್ರ 1992ರಲ್ಲಿ ಬಿಡುಗಡೆಯಾದ ಸಿನಿಮಾ. ದೊರೈ- ಭಗವಾನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಚಿತ್ರದಲ್ಲಿ ಸಾಮಾಜಿಕ ಕಳಕಳಿಯ ಸಂದೇಶವಿದೆ. ಮದ್ಯಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ ರಾಜ್‌ಕುಮಾರ್ ಅಭಿನಯಿಸಿದ್ದಾರೆ. ಮಾಧವಿ ಈ ಚಿತ್ರದ ನಾಯಕಿ. ಇದು ಒಂದು ರೀತಿಯಲ್ಲಿ ಅಣ್ಣಾವ್ರ ಕಂಬ್ಯಾಕ್‌ ಸಿನಿಮಾವೂ ಆಗಿತ್ತು. ಮೂರು ವರ್ಷಗಳ ಬ್ರೇಕ್‌ ಬಳಿಕ ಅಣ್ಣಾವ್ರು ಈ ಸಿನಿಮಾದಲ್ಲಿ ನಟಿಸಿದರು ಅನ್ನೋ ಮಾಹಿತಿ ಸಿಗುತ್ತದೆ. ಇದು ಕಾದಂಬರಿ ಆಧರಿತ ಸಿನಿಮಾ. ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರ ಜೀವನಚೈತ್ರ ಕಾದಂಬರಿಯೇ ಸಿನಿಮಾವಾಗಿತ್ತು. ಪ್ರಾರಂಭದಲ್ಲಿ ಈ ಚಿತ್ರದ ಶೀರ್ಷಿಕೆ ಸಿಂಹಾದ್ರಿಯ ಸಿಂಹ ಎಂದಾಗಿತ್ತು. ಆ ಬಳಿಕ ಜೀವನ ಚೈತ್ರ ಹೆಸರೇ ಫೈನಲ್‌ ಆಯ್ತು.

Tap to resize

Latest Videos

ರಾಜ್‌ಕುಮಾರ್‌ ಕುಟುಂಬಕ್ಕೆ ಮತ್ತೊಂದು ಆಘಾತ: ಅಪಘಾತದಲ್ಲಿ ಕಾಲು ಕಳೆದುಕೊಂಡ ನಟ ಧ್ರುವನ್‌

ಈ ಚಿತ್ರದ ಮೂಲಕ ರಾಜ್ ಕುಮಾರ್ ಕನ್ನಡ ಪ್ರೇಕ್ಷಕರನ್ನು ತಮ್ಮ ಅಭಿನಯದಿಂದ ಮೋಡಿ ಮಾಡಿದರು. ಮದ್ಯಪಾನ ಜಾಗೃತಿಯನ್ನೂ ಈ ಚಿತ್ರ ಮಾಡಿತ್ತು. ಈ ಚಿತ್ರದ ಪರಿಣಾಮವಾಗಿ ಕರ್ನಾಟಕದಲ್ಲಿನ ಹಲವಾರು ಹೆಂಡದಂಗಡಿಗಳು ಮುಚ್ಚಲ್ಪಟ್ಟವು. ಅನೇಕರು ಕುಡಿತದ ಚಟದಿಂದ ಹೊರಬಂದರು. ಈ ಮೂಲಕ ಸಿನಿಮಾವೊಂದು ಎಂಥಾ ಮಹಾನ್‌ ಸಾಮಾಜಿಕ ಬದಲಾವಣೆ ಮಾಡಬಹುದು ಅನ್ನೋದಕ್ಕೆ ಈ ಸಿನಿಮಾ ಉದಾಹರಣೆ ಆಗಿ ಇಂದಿಗೂ ನಿಲ್ಲುತ್ತದೆ. ಈ ಚಿತ್ರಕ್ಕೆ ಅಣ್ಣಾವ್ರಿಗೆ ಅನೇಕ ಪ್ರಶಸ್ತಿಗಳು ಬಂದವು. ಆದರೆ ಅಣ್ಣಾವ್ರೇ ಹೇಳುತ್ತಿದ್ದಂತೆ, ಅವರ ಅಭಿಮಾನಿ ದೇವರು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಷ್ಟೇ ಅಲ್ಲದೇ ಸ್ಫೂರ್ತಿಯನ್ನೂ ಪಡೆದದ್ದು ಅವರಿಗೆ ಬಹುದೊಡ್ಡ ಪ್ರಶಸ್ತಿ ಆಗಿತ್ತು.

ರಾಜ್‌ಕುಮಾರ್‌ ಗೂ ರಾಜಕೀಯಕ್ಕೂ ಎಣ್ಣೆ- ಸೀಗೇಕಾಯಿ..ರಾಜಕೀಯ ಕುರುಕ್ಷೇತ್ರಕ್ಕೆ ಅಣ್ಣಾವ್ರು ಬರಲಿಲ್ಲ ಯಾಕೆ..?

click me!