5 ಲಕ್ಷದ ಬಜೆಟ್ ಇದ್ದ ಕಾಲದಲ್ಲಿ ₹60 ಲಕ್ಷ ಹೂಡಿ ಸಾಹಸ, ಭಾರತೀಯ ಸಿನಿರಂಗವನ್ನೇ ಬೆರಗುಗೊಳಿಸಿದ್ದ ಅಣ್ಣಾವ್ರ ಚಿತ್ರ!

Published : Nov 25, 2026, 10:42 AM IST
Dr Rajkumar Mayura

ಸಾರಾಂಶ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕೆಲವು ಸಿನಿಮಾಗಳು ಕೇವಲ ಮನರಂಜನೆಯ ಮಾಧ್ಯಮವಾಗಿ ಉಳಿಯುವುದಿಲ್ಲ. ಅವು ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಭಾಷೆಯ ಅಭಿಮಾನ ಮತ್ತು ಚಿತ್ರರಂಗದ ಸಾಹಸಕ್ಕೆ ಸಾಕ್ಷಿಯಾಗುತ್ತವೆ. ಅಂತದ್ದರಲ್ಲಿ ಡಾ. ರಾಜ್ ಅವರ ಈ ಐತಿಹಾಸಿಕ ಹಿಟ್ ಮೂವಿ ಕೂಡ ಒಂದು.

ಇಂದಿನಂತೆ ನೂರಾರು ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಸಿನಿಮಾಗಳನ್ನು ನಿರ್ಮಿಸುವ ವಾತಾವರಣ ಅಂದಿನ ಕನ್ನಡ ಚಿತ್ರರಂಗದಲ್ಲಿ ಇರಲಿಲ್ಲ. ಚಿತ್ರ ನಿರ್ಮಾಣಕ್ಕೆ ಬೇಕಾದ ಮಾರುಕಟ್ಟೆ, ತಾಂತ್ರಿಕ ಸೌಲಭ್ಯಗಳು ಮತ್ತು ವಿತರಣಾ ವ್ಯವಸ್ಥೆ ಇಂದಿನಷ್ಟು ವಿಸ್ತಾರವಾಗಿರಲಿಲ್ಲ. ಹೀಗಾಗಿ ಸಾಮಾನ್ಯ ಸಿನಿಮಾಗಳನ್ನು ಸುಮಾರು 5ರಿಂದ 6 ಲಕ್ಷ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿತ್ತು.

ಕನ್ನಡ ಚಿತ್ರರಂಗದ ಸುವರ್ಣ ಯುಗದ ಆರಂಭಿಕ ದಿನಗಳಲ್ಲಿ ಕೇವಲ 5 ರಿಂದ 6 ಲಕ್ಷ ರೂಪಾಯಿಗಳು ಸಾಕಾಗುತ್ತಿತ್ತು. ಅಂದಿನ ಸೀಮಿತ ಮಾರುಕಟ್ಟೆಯ ವ್ಯಾಪ್ತಿಯಲ್ಲಿ, ಒಂದು ಅದ್ಧೂರಿ ಐತಿಹಾಸಿಕ ಸಿನಿಮಾಕ್ಕಾಗಿ 8 ರಿಂದ 10 ಲಕ್ಷ ರೂಪಾಯಿಗಳನ್ನು ಹೂಡುವುದೇ ನಿರ್ಮಾಪಕರ ಪಾಲಿಗೆ ದೊಡ್ಡ ಸಾಹಸವಾಗಿತ್ತು. ಅಂತಹ ಕಾಲಘಟ್ಟದಲ್ಲಿ ಬಿ.ಆರ್. ಪಂತುಲು, ಬಿ.ಎಸ್. ರಂಗಾ ಅವರಂತಹ ದಿಗ್ಗಜ ನಿರ್ಮಾಪಕರು ತಮ್ಮ ದೂರದೃಷ್ಟಿಯ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ್ದರು.

ಅದೇ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಧೀಮಂತ ನಿರ್ಮಾಪಕರು ಟಿ.ಪಿ. ವೇಣುಗೋಪಾಲ್. ತಮ್ಮ ‘ರಮೇಶ್ ಮೂವೀಸ್’ ಬ್ಯಾನರ್ ಅಡಿಯಲ್ಲಿ ಕನ್ನಡಿಗರ ಹೆಮ್ಮೆಯ ಇತಿಹಾಸವನ್ನು ಬೆಳ್ಳಿತೆರೆಯ ಮೇಲೆ ತರಬೇಕೆಂಬ ಮಹತ್ವಾಕಾಂಕ್ಷೆಯ ಕನಸನ್ನು ಅವರು ಕಂಡಿದ್ದರು. ಅದು ಕೇವಲ ಒಂದು ಸಿನಿಮಾವಾಗಿರಲಿಲ್ಲ. ಬದಲಾಗಿ ಕರುನಾಡಿನ ಮೊದಲ ಸಾಮ್ರಾಜ್ಯವಾದ ಕದಂಬ ವಂಶದ ಸ್ಥಾಪಕ, ಕನ್ನಡದ ಮೊದಲ ದೊರೆ ಮಯೂರವರ್ಮನ ವೀರಗಾಥೆಯಾಗಿತ್ತು.

ಕೈಬಿಟ್ಟಿದ್ದ ಯೋಜನೆಗೆ ಸಿಕ್ಕ ಅನಿರೀಕ್ಷಿತ ತಿರುವು

ಆರಂಭದಲ್ಲಿ ‘ಮಯೂರ’ ಚಿತ್ರವನ್ನು ನಿರ್ಮಿಸುವ ಯೋಜನೆ ರೂಪುಗೊಂಡಿತ್ತಾದರೂ, ಚಿತ್ರಕ್ಕೆ ತಗಲುವ ಭಾರಿ ವೆಚ್ಚ ಮತ್ತು ಬಜೆಟ್ ಮಿತಿಮೀರುವ ಕಾರಣದಿಂದಾಗಿ ಆ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿತ್ತು. ಆದರೆ, ಈ ಐತಿಹಾಸಿಕ ಕಥೆ ತೆರೆಯ ಮೇಲೆ ಮೂಡಿಬರಲೇಬೇಕು ಎಂಬುದು ವಿಧಿಯ ಸಂಕಲ್ಪವಾಗಿತ್ತು.

ಒಂದು ದಿನ ಮನೆಯಲ್ಲಿ ಹಳೆಯ ಕಾಗದಪತ್ರಗಳನ್ನು ವಿಲೇವಾರಿ ಮಾಡುತ್ತಿದ್ದ ಸಂದರ್ಭದಲ್ಲಿ, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಕಣ್ಣಿಗೆ ಖ್ಯಾತ ಸಾಹಿತಿ ದೇವುಡು ನರಸಿಂಹಶಾಸ್ತ್ರಿಗಳು ರಚಿಸಿದ್ದ ‘ಮಯೂರ’ ಕಾದಂಬರಿ ಬಿದ್ದಿತು. ಕುತೂಹಲದಿಂದ ಆ ಕಾದಂಬರಿಯನ್ನು ಸಂಪೂರ್ಣವಾಗಿ ಓದಿದ ಪಾರ್ವತಮ್ಮನವರು, ಕಥೆಯ ಗಾಂಭೀರ್ಯ ಮತ್ತು ಮಯೂರಶರ್ಮನ ಸ್ವಾಭಿಮಾನದ ಹೋರಾಟಕ್ಕೆ ಮಾರುಹೋದರು. ಈ ಅದ್ಭುತ ಕೃತಿ ಖಂಡಿತವಾಗಿಯೂ ಸಿನಿಮಾವಾಗಬೇಕು ಎಂಬ ದೃಢ ನಿರ್ಧಾರವನ್ನು ಅವರು ಅಂದೇ ತೆಗೆದುಕೊಂಡರು.

ಅಂದಿನ ಕಾಲಕ್ಕೆ ಊಹಿಸಲೂ ಅಸಾಧ್ಯವಾದ ₹60 ಲಕ್ಷದ ಸಾಹಸ!

ಪಾರ್ವತಮ್ಮನವರ ಆ ದೃಢ ನಿರ್ಧಾರದೊಂದಿಗೆ ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಸಾಹಸವೊಂದು ಆರಂಭವಾಯಿತು. ನಾಲ್ಕೈದು ಲಕ್ಷ ರೂಪಾಯಿಗಳಲ್ಲಿ ಸಿನಿಮಾಗಳು ನಿರ್ಮಾಣವಾಗುತ್ತಿದ್ದ 1970ರ ದಶಕದಲ್ಲಿ, ‘ಮಯೂರ’ ಚಿತ್ರಕ್ಕಾಗಿ ಹೂಡಿಕೆಯಾದ ಮೊತ್ತ ಬರೋಬ್ಬರಿ 60 ಲಕ್ಷ ರೂಪಾಯಿಗಳು!

ಅಂದಿನ ಮಾರುಕಟ್ಟೆಯ ಲೆಕ್ಕಾಚಾರದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಒಂದೇ ಸಿನಿಮಾದ ಮೇಲೆ ಹೂಡುವುದು ವಾಣಿಜ್ಯ ದೃಷ್ಟಿಯಿಂದ ಹುಚ್ಚು ಸಾಹಸದಂತೆ ಕಂಡರೂ, ಆ ನಿರ್ಧಾರದ ಹಿಂದೆ ಒಂದು ಅಚಲವಾದ ನಂಬಿಕೆಯಿತ್ತು. ಅದು ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಅಭಿನಯ ಸಾಮರ್ಥ್ಯ ಮತ್ತು ಪ್ರೇಕ್ಷಕರು ಅವರ ಮೇಲಿಟ್ಟಿದ್ದ ಅಪಾರ ಪ್ರೀತಿಯ ಮೇಲಿನ ಭರವಸೆ.

ಚಿತ್ರದ ಪ್ರಚಾರದ ಜಾಹೀರಾತುಗಳಲ್ಲಿಯೂ ಅಂದಿನ ಚಿತ್ರತಂಡ ಅತ್ಯಂತ ಹೆಮ್ಮೆಯಿಂದ, "ಈ ಶತಮಾನದ ಅತ್ಯಂತ ವೈಭವೋಪೇತ ಚಿತ್ರ" ಎಂದು ಘೋಷಿಸಿತ್ತು. ಅಷ್ಟೇ ಅಲ್ಲದೆ, "ಭಾರತೀಯ ಚಿತ್ರರಂಗದಲ್ಲಿ ತನ್ನದೇ ಸಿನಿಮಾವನ್ನು ಕೋಟ್ಯಂತರ ರೂಪಾಯಿಗಳ ಮಟ್ಟಕ್ಕೆ ಪಣಕ್ಕಿಟ್ಟು ಗೆಲ್ಲಿಸಬಲ್ಲ ಏಕೈಕ ನಟ ಡಾ. ರಾಜ್‌ಕುಮಾರ್" ಎಂಬ ಮಾತುಗಳು ಅಂದು ಸಿನಿಪ್ರಿಯರ ವಲಯದಲ್ಲಿ ಸಂಚಲನ ಮೂಡಿಸಿದ್ದವು. ಪ್ರಮುಖ ವಿಷ್ಯವೆಂದರೆ 1975ರ ಕಾಲದ 1 ಲಕ್ಷದ ಈಗಿನ ಮಾರುಕಟ್ಟೆ ಮೌಲ್ಯ ಅಂದಾಜು 32 ಲಕ್ಷ!

ಕನ್ನಡ ಚಿತ್ರರಂಗದ ಬಂಗಾರದ ಅಧ್ಯಾಯ

1975ರಲ್ಲಿ ತೆರೆಕಂಡ ‘ಮಯೂರ’ ಕೇವಲ ಒಂದು ಮನರಂಜನಾ ಚಿತ್ರವಾಗಿ ಉಳಿಯದೆ, ಕನ್ನಡಿಗರ ಸ್ವಾಭಿಮಾನ, ಸಾಹಸ ಮತ್ತು ಇತಿಹಾಸದ ಪ್ರತೀಕವಾಗಿ ದಾಖಲಾಯಿತು. ವಿಜಯ್ ಅವರ ಸಮರ್ಥ ನಿರ್ದೇಶನ, ಚಿ. ಉದಯಶಂಕರ್ ಅವರ ಮನಮುಟ್ಟುವ ಸಂಭಾಷಣೆ ಮತ್ತು ಸಾಹಿತ್ಯ, ಹಾಗೂ ಜಿ.ಕೆ. ವೆಂಕಟೇಶ್ ಅವರ ಇಂಪಾದ ಸಂಗೀತ ಚಿತ್ರದ ಯಶಸ್ಸಿಗೆ ಭದ್ರ ಬುನಾದಿ ಹಾಕಿದವು. ಬ್ರಾಹ್ಮಣ ಯುವಕ ಮಯೂರಶರ್ಮನಿಂದ ಕದಂಬ ಸಾಮ್ರಾಜ್ಯದ ಚಕ್ರವರ್ತಿ ಮಯೂರವರ್ಮನಾಗಿ ಬದಲಾಗುವ ಪಾತ್ರದಲ್ಲಿ ಡಾ. ರಾಜ್‌ಕುಮಾರ್ ಅವರು ಪರಕಾಯ ಪ್ರವೇಶ ಮಾಡಿದ್ದರು. ಇಂದಿಗೂ ‘ಮಯೂರ’ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಳಿಸಲಾಗದ ಚಿನ್ನದ ಅಧ್ಯಾಯವಾಗಿ ರಾರಾಜಿಸುತ್ತಿದೆ. ಡಾ. ರಾಜ್‌ಕುಮಾರ್, ಮಂಜುಳಾ, ಶ್ರೀನಾಥ್, ವಜ್ರಮುನಿ, ಎಂ. ಪಿ. ಶಂಕರ್, ಕೆ. ಎಸ್. ಅಶ್ವಥ್, ಬಾಲಕೃಷ್ಣ ಈ ಚಿತ್ರದ ಪ್ರಮುಖ ತಾರಾಗಣ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನಾನೇ ಮಾಡಿದರೆ ಹೇಗೆ?' ಶಿವಣ್ಣನ ಬದಲು ಅಣ್ಣಾವ್ರೇ ಹೀರೋ ಆಗಿದ್ದೇಕೆ? ಈ ಬ್ಲಾಕ್ ಬಸ್ಟರ್ ಸಿನಿಮಾದ ಹಿಂದಿದೆ ರೋಚಕ ಕತೆ
ಅಭಿಮಾನಿಗಳ ಕಣ್ಣಂಚಲಿ ಜಾರಿದ ಹನಿ, ಪುಣ್ಯ ಸ್ಮರಣೆಯಲ್ಲಿ ಅನ್ನದಾನ ಮಾಡಿ ಅಂಬಿ ಗುಣ ಸ್ಮರಿಸಿದ ಸುಮಲತಾ