
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಕುಟುಂಬಸ್ಥರು, ಸಿನಿಮಾ ಆಪ್ತರು ಹಾಗೂ ಅಭಿಮಾನಿಗಳನ್ನು ಅಗಲಿ ಇಂದಿಗೆ ಒಂದು ತಿಂಗಳು ಹದಿಮೂರು ದಿನಗಳು ಕಳೆದಿದೆ. ಈಗಲೂ ಅಪ್ಪು ಶ್ರದ್ಧಾಂಜಲಿ ಸಲ್ಲಿಸದೇ ಯಾವ ಕಾರ್ಯಕ್ರಮವೂ ಶುರುವಾಗುತ್ತಿಲ್ಲ. ಬಿಕೋ ಎನ್ನುತ್ತಿರುವ ಕನ್ನಡಿಗರ ಮೌನ ಮುರಿಯುವುದಕ್ಕೆ ಅವರ ಕೊನೆಯ ಸಿನಿಮಾ ಗಂಧದ ಗುಡಿ ಅಥವಾ ಜೇಮ್ಸ್ (James) ಬಿಡುಗಡೆ ಆಗಲೇಬೇಕು.....
ವರನಟ ಡಾ.ರಾಜ್‌ಕುಮಾರ್ (Dr. Rajkumar) ಅವರು ಹುಟ್ಟಿ ಬೆಳೆದ ಗಾಜನೂರು (Gajanuru) ಮನೆ ಎಂದರೆ ಇಡೀ ಕನ್ನಡಿಗರಿಗೆ ಒಂದು ರೀತಿ ದೇಗುಲವಿದ್ದಂತೆ. ಅಣ್ಣಾವ್ರ ಇಷ್ಟು ಚಿಕ್ಕ ಮನೆಯಲ್ಲಿದ್ದರೇ ಎಂದು ಆಶ್ಚರ್ಯ ಪಟ್ಟರೂ ಅವರ ಸರಳತೆಗೆ ಸಾಟಿ ಯಾರಿಲ್ಲ ಎಂದು ಮಾತನಾಡಿಕೊಳ್ಳುತ್ತಾರೆ. ಶಿವರಾಜ್‌ಕುಮಾರ್ (Shivarajkumar), ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಮತ್ತು ಪುನೀತ್ ರಾಜ್‌ಕುಮಾರ್ ಕುಟುಂಬ ಬಿಡುವು ಮಾಡಿಕೊಂಡು ಎರಡು ಮೂರು ತಿಂಗಳಿಗೆ ಒಮ್ಮೆ ಆದರೂ ಗಾಜನೂರಿಗೆ ಭೇಟಿ ನೀಡುತ್ತಿದ್ದರು. ಅಲ್ಲಿನ ಆಲದ ಮರದ (Big Banyan Tree) ಕೆಳಗೆ ಕುಳಿತುಕೊಂಡು ಊರಿನಲ್ಲಿರುವವರನ್ನು ಮಾತನಾಡಿಸಿಕೊಂಡು ಸೆಲ್ಫಿ ಕ್ಲಿಕ್ (Selfie) ಮಾಡಿಕೊಂಡು ಬರುತ್ತಿದ್ದರು. ಗಾಜನೂರು ಅಂದ್ರೆ ಇಡೀ ಕುಟುಂಬಕ್ಕೆ ಒಂದು ಸಂಭ್ರಮವಿದ್ದಂತೆ.
ಅಪ್ಪು ನಿಧನ ಹೊಂದುವ ಮೂರು ತಿಂಗಳ ಹಿಂದೆ ಶಿವಣ್ಣ ಕುಟುಂಬದ ಜೊತೆ ಗಾಜನೂರಿಗೆ ಭೇಟಿ ನೀಡಿದ್ದರು. ಅವರು ನಿಧನವಾದ ದಿನವೂ ಸಹ ಗಾಜನೂರಿಗೆ ಹೋಗುವ ಯೋಜನೆ ಇತ್ತು. ಆದರೆ ಬೆಂಗಳೂರಿಗೆ (Bengaluru) ಅಭಿಮಾನಿಗಳು ಆಗಮಿಸುತ್ತಿದ್ದ ರೀತಿ, ಅವರನ್ನು ನಿಯಂತ್ರಣ ಮಾಡಲು ವಿಫಲವಾದರೆ ಮತ್ತೊಂದು ಜೀವನ ತೊಂದರೆ ಆಗುತ್ತದ ಎನ್ನುವ ಕಾರಣಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಡಲಾಗಿತ್ತು.
ಅಪ್ಪುಗೆ ಗಾಜನೂರು ಮನೆ ಅಂದ್ರೆ ತುಂಬಾನೇ ಇಷ್ಟ. ಅಲ್ಲಿಗೆ ಹೋಗಿ ಕೆಲ ಸಮಯಗಳ ಕಾಲ ಕುಳಿತು ಅಲ್ಲಿರುವ ಅಪ್ಪಾಜಿ ಪೋಟೋ ನೋಡಿಕೊಂಡು ಕಾಫಿ ಟೀ ಕುಡಿದೇ ಬರುತ್ತಿದ್ದರಂತೆ. ಹೀಗಾಗಿ ಡಾ.ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ನೆನಪು ಶಾಶ್ವತವಾಗಿ ಉಳಿಯಬೇಕೆಂದು ಕುಟುಂಬಸ್ಥರು ಚಿಂತಿಸಿ ಗಾಜನೂರು ಮನೆಯಲ್ಲಿ ಮರು ಅಭಿವೃದ್ಧಿಪಡಿಸಿ ಮ್ಯೂಸಿಯಂ (Gajanuru Museum) ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ರಾಜ್ಯದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿ ನೆಲೆನಿಲ್ಲಲಿ ಎಂಬುದು ಕುಟುಂಬದ ಯೋಜನೆ ಎಂದು ಖಾಸಗಿ ವೆಬ್ ಸೈಟ್ ವರದಿ ಮಾಡಿದೆ. ಇದರ ಬಗ್ಗೆ ಕುಟುಂಬಸ್ಥರಿಂದ ಸ್ಪಷ್ಟ ಮಾಹಿತಿ ಇಲ್ಲವಾದರೂ ವಿಚಾರ ಕೇಳಿ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ.
ಗಾಜನೂರು ಮನೆಯ ದುರಸ್ತಿ ಕಾರ್ಯ ಶೀಘ್ರದಲ್ಲಿ ನಡೆಯಲಿದ್ದು ಆನಂತರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟು ಮ್ಯೂಸಿಯಂ ರೀತಿ ಮಾಡಲಾಗುತ್ತದೆ ಎಂದಿದ್ದಾರೆ. ಶಿವಣ್ಣ ಮತ್ತು ರಾಘಣ್ಣ ಅವರು ಆಗಮಿಸಿ ಓಪನಿಂಗ್ ಮಾಡಿದ ನಂತರ ಅಭಿಮಾನಿಗಳಿಗೆ ವೀಕ್ಷಣೆಗೆ ಬಿಡಲಾಗುತ್ತದೆ.
ಕನ್ನಡ ರಾಜೋತ್ಸವಕ್ಕೆ ಅಪ್ಪು ತಮ್ಮ ಕನಸಿನ ಕೂಸು 'ಗಂಧದ ಗುಡಿ' (Gandhada Gudi) ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿದ್ದರು ಆದರೆ ಎರಡು ದಿನ ಹಿಂದೆಯೇ ಅವರು ಕೊನೆಯುಸಿರೆಳೆದ ಕಾರಣ ಪತ್ನಿ ಅಶ್ವಿನಿ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡರು. ನವೆಂಬರ್ 20ರಿಂದ ಪಿಆರ್‌ಕೆ ಸಂಸ್ಥೆ (PRK Productions) ಕೆಲಸ ಆರಂಭಿಸುವುದಾಗಿ ಪತ್ರದ ಮೂಲಕ ತಿಳಿಸಿದ್ದರು ಆನಂತರ ಪತಿಯ ಗಂಧದ ಗುಡಿ ಟೀಸರ್‌ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಡಾ. ಪಾರ್ವತಮ್ಮ ರಾಜ್‌ಕುಮಾರ್ (Dr Parvathamma Rajkumar) ಅವರು ಹುಟ್ಟುಹಬ್ಬದ ನೆನಪಿನ ದಿನ ಬಿಡುಗಡೆ ಮಾಡಲಾಗಿತ್ತು.
ಪಿಆರ್‌ಕೆ ಸಂಸ್ಥೆ ಅದೆಷ್ಟೋ ಹೊಸ ಕಲಾವಿದರಿಗೆ ದೇಗುಲವಿದ್ದಂತೆ. ನಿರ್ದೇಶಕರಾಗಲಿ ಕಲಾವಿದರಾಗಲಿ ತಮ್ಮ ಕನಸ್ಸನ್ನು ಹಂಚಿಕೊಳ್ಳಲು ಬಂದರೆ ಪುನೀತ್ ಮತ್ತು ಅವರ ಪತ್ನಿ ಸಮಯ ನೀಡಿ ಕೇಳುತ್ತಿದ್ದರು. ವೈಯಕ್ತಿಕವಾಗಿ ಭೇಟಿ ಮಾಡಿ ಹೇಗೆ ಪ್ಲಾನ್ ಮಾಡಬೇಕು ಎಂದು ನಿರ್ಧರಿಸುತ್ತಿದ್ದರು. ಇನ್ನು ಮುಂದೆ ಅವರ ಸಂಸ್ಥೆಯಲ್ಲಿ ಹುಟ್ಟುವ ಪ್ರತಿಯೊಂದು ಸಿನಿಮಾ, ಕಲಾವಿದ ಹಾಗೂ ನಿರ್ದೇಶಕ ಅವರ ಕುಟುಂಬದ ಕೂಸು ಇದ್ದಂತೆ.
ಒಟ್ಟಿನಲ್ಲಿ ಅಣ್ಣಾವ್ರು ಮತ್ತು ಅಪ್ಪು ಹೆಸರಿನಲ್ಲಿ ಮ್ಯೂಸಿಯಂ ಆದರೆ ಕನ್ನಡಿಗರಿಗೆ ಸಂಭ್ರಮವೋ ಸಂಭ್ರಮ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.