
ನಾಡಪ್ರಭು ಕೆಂಪೇಗೌಡ ಸಿನಿಮಾ ಕುರಿತು ಸ್ಯಾಂಡಲ್‌ವುಡ್‌ನಲ್ಲಿ ಒಂದಿಲ್ಲೊಂದು ಸುದ್ದಿಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಈ ಹಿಂದೆಯೇ ಬೆಂಗಳೂರು ಕಟ್ಟಿದ ಕೆಂಪೇಗೌಡರ ಕುರಿತ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ನಾಡಪ್ರಭು ಕೆಂಪೇಗೌಡ ಶೀರ್ಷಿಕೆಯನ್ನೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದರು. ಆದರೆ, ಸಿನಿಮಾ ಮಾತ್ರ ಶುರುವಾಗಿರಲಿಲ್ಲ. ಇದೀಗ ಸದ್ದಿಲ್ಲದೆ, ಅಧಿಕೃತವಾಗಿ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಮಾ ಕೆಲಸಕ್ಕೆ ಇಳಿದಿದ್ದಾರೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಸಿನಿಮಾ ಮಾಡಬೇಕೆಂಬುದು ನಿರ್ದೇಶಕ ನಾಗಾಭರಣ ಅವರ ಎರಡು ದಶಕಗಳ ಕನಸು. ಇದೀಗ ಆ ಕನಸು ಸಾಕಾರಗೊಳ್ಳುತ್ತಿದೆ.
‘ಅಲ್ಲಮ’ ಸಿನಿಮಾ ಬಳಿಕ ಟಿಎಸ್ ನಾಗಾಭರಣ ಹಾಗೂ ಡಾಲಿ ಧನಂಜಯ್ ಮತ್ತೊಂದು ಐತಿಹಾಸಿಕ ಚಿತ್ರಕ್ಕೆ ಜತೆಯಾಗಿದ್ದಾರೆ. ಈ ಜೋಡಿಯ ಸಿನಿಮಾ ಹೆಸರು ‘ನಾಡಪ್ರಭು ಕೆಂಪೇಗೌಡ’. ಈ ಐತಿಹಾಸಿಕ ಸಿನಿಮಾಕ್ಕೆ 'ಬೆಂಗಳೂರು ಕಾರಣಿಕ' ಎಂಬ ಟ್ಯಾಗ್ ಲೈನ್ ಕೂಡ ಇದೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಜೀವನ ಪುಟಗಳನ್ನು ಆಧರಿಸಿದ ಚಾರಿತ್ರಿಕ ಸಿನಿಮಾ ಇದು. ನಾಯಕನಾಗಿ ಧನಂಜಯ್ ಆಯ್ಕೆ ಆಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಕೆಂಪೇಗೌಡ ಪಾತ್ರದಲ್ಲಿ ಧನಂಜಯ್ ನಟಿಸಲಿದ್ದು, ಖಡಕ್ ಮುಖಾರವಿಂದದಲ್ಲಿ ಧನಂಜಯ್ ಮಿಂಚಿದ್ದಾರೆ. ಕೆಂಪೇಗೌಡ ಜಯಂತಿ ನಿಮಿತ್ತ (ಜೂನ್ 21) ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಜತೆಗೆ ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ದುಡಿಯಲಿದ್ದಾರೆ ಎಂಬುದನ್ನೂ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಅನಾವರಣ ಮಾಡಿದ್ದಾರೆ ನಿರ್ದೇಶಕ ನಾಗಾಭರಣ. ಕೆಂಪೇಗೌಡ ಪಾತ್ರದಲ್ಲಿ ಎದುರಾಗುವುದರ ಜತೆಗೆ ಡಾಲಿ ಪಿಚ್ಚರ್ಸ್ ಅರ್ಪಿಸುವ ಈಶ್ವರ ಎಂಟರ್ಪ್ರೈಸಸ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಎಂ.ಎಸ್. ಶಿವರುದ್ರಪ್ಪ, ಶುಭಂ ಗುಂಡಾಲ ಈ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ. ಪರಿಕಲ್ಪನೆ, ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನದ ಜವಾಬ್ದಾರಿ ನಾಗಾಭರಣ ಅವರದ್ದು. ಸಹಕಥೆ ಪ್ರತಿಭಾ ನಂದಕುಮಾರ್, ಕಾರ್ಯಕಾರಿ ನಿರ್ಮಾಪಕರಾಗುವುದರ ಜತೆಗೆ ಸಹ ನಿರ್ದೇಶಕರಾಗಿ ಪನ್ನಗಭರಣ ಕೆಲಸ ಮಾಡಲಿದ್ದಾರೆ.
ಡಾಲಿಯ ಕೋಟಿಯಲ್ಲಿ ಎಮೋಷನಲ್ ಆದ ಸಲಗ: ಧನಂಜಯ್‌ಗೂ ದುನಿಯಾ ವಿಜಿಗಿರುವ ಸಂಬಂಧವೇನು?
ಸಂಗೀತ ನಿರ್ದೇಶನ ವಾಸುಕಿ ವೈಭವ್ ಅವರ ಜವಾಬ್ದಾರಿ. ಅದ್ವೈತ್ ಗುರುಮೂರ್ತಿ ಈ ಚಿತ್ರದ ಛಾಯಾಗ್ರಾಹಕರಾಗಿರಲಿದ್ದಾರೆ. ಸದ್ಯ ಕೆಂಪೇಗೌಡ ಜಯಂತಿ ನಿಮಿತ್ತ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಸಿನಿಮಾ ಚಿತ್ರೀಕರಣ ಯಾವಾಗಿನಿಂದ ಶುರು? ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ? ಎಂಬಿತ್ಯಾದಿ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ರಿವೀಲ್ ಮಾಡಲಿದೆ. ಇನ್ನು ಈ ಸಿನಿಮಾವನ್ನು ದರ್ಶನ್ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಕೆಂಪೇಗೌಡರ ಖಡಕ್ ಪಾತ್ರದಲ್ಲಿ ದರ್ಶನ್ ಅವರು ಇದ್ದರೆ ಹೇಗಿರಬಹುದು ಎನ್ನುವಂತಹ ಫ್ಯಾನ್ಸ್ ಎಡಿಟೆಡ್ ಫೋಟೋಗಳು ಕೂಡಾ ವೈರಲ್ ಆಗಿದ್ದವು. ಆದರೆ ದರ್ಶನ್ ಅಲ್ಲ, ನಾಡಪ್ರಭು ಕೆಂಪೇಗೌಡ ಎನ್ನುವ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.