
1. ಪಿಆರ್ಕೆ ಸಂಸ್ಥೆಯ ಎರಡನೇ ಚಿತ್ರ
ನಟ ಪುನೀತ್ರಾಜ್ಕುಮಾರ್ ಹಾಗೂ ಅಶ್ವಿನಿ ಪುನೀತ್ರಾಜ್ಕುಮಾರ್ ಅವರ ಸಾರಥ್ಯದ ಪಿಆರ್ಕೆ ಬ್ಯಾನರ್ನ ಎರಡನೇ ಚಿತ್ರವಾಗಿ ತೆರೆ ಮೇಲೆ ಮೂಡುತ್ತಿದೆ ‘ಮಾಯಾಬಜಾರ್’. ಈ ಹಿಂದೆ ಹೇಮಂತ್ ನಿರ್ದೇಶನದಲ್ಲಿ ‘ಕವಲುದಾರಿ’ ಚಿತ್ರವನ್ನು ತೆರೆಗೆ ತರಲಾಗಿತ್ತು. ಸಾಕಷ್ಟುಸಮಯ ತೆಗೆದುಕೊಂಡು ಕೊಂಚ ತಡವಾದರೂ ರಾಧಾಕೃಷ್ಣ ರೆಡ್ಡಿ ನಿರ್ದೇಶನದ ‘ಮಾಯಾಬಜಾರ್’ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹೊಸ ರೀತಿಯ ಕತೆಗಳ ಜತೆಗೆ ಹೊಸ ನಿರ್ದೇಶಕ, ನಟ- ನಟಿಯರಿಗೆ ವೇದಿಕೆಯಾಗಿ ಚಿತ್ರಗಳನ್ನು ನಿರ್ಮಿಸುತ್ತಿರುವುದರಿಂದ ಪಿಆರ್ಕೆ ಬ್ಯಾನರ್ನ ಎರಡನೇ ಚಿತ್ರದ ಬಗ್ಗೆ ಸಾಕಷ್ಟುನಿರೀಕ್ಷೆಗಳು ಹುಟ್ಟಿಕೊಂಡಿವೆ.
'ಮಾಯಾಬಜಾರ್' ವಿಷ್ಯ ಗೊತ್ತಾ? ಪುನೀತ್ ರಾಜ್‌ಕುಮಾರ್ ಹೇಳ್ತಾರೆ ಕೇಳಿ!
2. ನಿರ್ದೇಶಕರ ಮೊದಲ ಕನಸು
ನಿರ್ದೇಶಕ ರಾಧಾ ಕೃಷ್ಣರೆಡ್ಡಿ ಅವರಿಗೆ ಇದು ಮೊದಲ ಕನಸು. ತಮ್ಮ ಮೊದಲ ನಿರ್ದೇಶನದ ಸಿನಿಮಾ ತೆರೆ ಮೇಲೆ ಮೂಡುತ್ತಿರುವ ಸಂಭ್ರಮದಲ್ಲಿದ್ದಾರೆ. ಒಂದೇ ಒಂದು ಕಿರು ಚಿತ್ರವನ್ನು ನಿರ್ದೇಶಿಸಿದ ಅನುಭವ ಇದ್ದ, ರಾಧಾಕೃಷ್ಣ ರೆಡ್ಡಿ ಅವರು ಪಿಆರ್ಕೆ ಬ್ಯಾನರ್ನಲ್ಲಿ ಸಿನಿಮಾ ನಿರ್ದೇಶಿಸಲು ಅವಕಾಶ ಸಿಕ್ಕಿದ್ದು ಅವರು ಮಾಡಿಕೊಂಡಿದ್ದ ಕತೆಯ ಕಾರಣಕ್ಕೆ. ನೇರವಾಗಿ ಪುನೀತ್ ರಾಜ್‌ಕುಮಾರ್ ಅವರೇ ಕತೆ ಕೇಳಿದ ಮೇಲೆ ‘ತುಂಬಾ ಚೆನ್ನಾಗಿದೆ. ನೀವು ಈ ಹಿಂದೆ ಯಾವ ಸಿನಿಮಾ ಮಾಡಿದ್ದೀರಿ’ ಎಂದು ಪುನೀತ್ ಅವರು ಕೇಳಿದ್ದರಂತೆ. ಹೀಗೆ ಕತೆಯಿಂದಲೇ ಮೊದಲ ಪ್ರಯತ್ನದಲ್ಲೇ ದೊಡ್ಡ ನಿರ್ಮಾಣ ಸಂಸ್ಥೆಗೆ ಸಿನಿಮಾ ಮಾಡುವ ಅವಕಾಶಕ್ಕೆ ಪಾತ್ರರಾಗಿದ್ದಾರೆ.
3.ವಿಭಿನ್ನ ತಾರಾಗಣ
ಬಹುಭಾಷೆಯಲ್ಲಿ ಕೋಟಿಗಳ ಲೆಕ್ಕದಲ್ಲಿ ಸೆಟ್ಟೇರುವ ಚಿತ್ರಗಳಲ್ಲೂ ಇಂಥ ವಿಭಿನ್ನ ಕಾಂಬಿನೇಷನ್ನ ತಾರಾಗಣ ಇರಲ್ಲ. ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಖಡಕ್ ನಟ ಪ್ರಕಾಶ್ ರೈ, ಕಂಚಿನ ಕಂಠದ ವಸಿಷ್ಠ ಸಿಂಹ, ನಕ್ಕಿ ನಗಿಸುವ ಕಾಮಿಡಿ ಕಿಂಗ್ ಸಾಧು ಕೋಕಿಲಾ, ಸೆನ್ಸ್ಶೇಷನಲ್ ಸ್ಟಾರ್ ರಾಜ್ ಬಿ ಶೆಟ್ಟಿ, ಪ್ರಭುದ್ಧ ಅಚ್ಯುತ್ ಕುಮಾರ್, ಚಿರ ಯೌವ್ವನೆ ಸುಧಾರಾಣಿ, ನವ ತಾರೆ ಚೈತ್ರ ರಾವ್... ಹೀಗೆ ಘಟಾನುಘಟಿ ಕಲಾವಿದರೇ ಇಲ್ಲಿದ್ದಾರೆ. ಮಾಯಾಬಜಾರ್ನ ಸ್ಪೆಷಲ್ ಮೆನುನೇ ಈ ತಾರಾಗಣ ಎನ್ನಬಹುದು. ಆದರೆ, ಇಲ್ಲಿ ಯಾರೂ ವಿಲನ್ಗಳಲ್ಲ, ಯಾರೂ ಹೀರೋಗಳಲ್ಲ. ಕತೆಯಲ್ಲೂ ಇಂಥ ಕಲಾವಿದರೇ ಬೇಕು ಎನ್ನುವ ಬೇಡಿಕೆ ಇತ್ತು. ಆ ಕಾರಣಕ್ಕೆ ಈ ಡಿಫರೆಂಟ್ ಕಾಂಬಿನೇಷನ್ ಒಂದೇ ಚಿತ್ರದಲ್ಲಿ ಜತೆಯಾಗಿದೆಯಂತೆ.
ಮಾಯಾ ಬಜಾರ್‌ನಲ್ಲಿ ಪುನೀತ್ ಸಖತ್ ಸ್ಟೆಪ್!
4.ಕನ್ನಡಕ್ಕೆ ಹೊಸತನದ ಕತೆ
ಇದು ರೆಗ್ಯೂಲರ್ ಸಿನಿಮಾ ಅಲ್ಲ. ಕ್ಯಾರೆಕ್ಟರ್ಗಳನ್ನು ಆಧರಿಸಿ ಕತೆ. ಕಾಲ್ಪನಿಕಾ ಕತೆಯಾದರೂ ತೆರೆ ಮೇಲೆ ಕೆಲವು ಸನ್ನಿವೇಶಗಳನ್ನು ನೋಡಿದಾಗ ಪ್ರಸ್ತುತ ಬೆಳವಣಿಗೆಗಳ ಜತೆ ತಾಳೆ ಹಾಕುತ್ತೇವೆ. ಮೂರು ಜೀವನಗಳು, ಒಂದು ಘಟನೆ ಸಂಭವಿಸಿದಾಗ ಈ ಮೂರು ಜೀವನಗಳು ಏನಾಗುತ್ತವೆ. ಒಂದು ವೇಳೆ ಬೇರೆ ಬೇರೆ ದಾರಿಗಳಲ್ಲಿರುವ ಈ ಮೂರು ಒಟ್ಟಿಗೆ ಬಂದರೆ ಹೇಗಿರುತ್ತದೆ ಎಂಬುದೇ ಚಿತ್ರದ ಕತೆ. ಆ ಘಟನೆ ಏನು ಮತ್ತು ಆ ಮೂರು ಜೀವನಗಳು ಯಾರದ್ದು ಎಂಬುದು ಚಿತ್ರದ ಮುಖ್ಯ ಕೇಂದ್ರಬಿಂದು. ಮೊದಲ ಬಾರಿಗೆ ನೀವು ಸಾಧು ಕೋಕಿಲಾ ಅವರನ್ನು ವಿಶೇಷವಾದ ಗೆಟಪ್ನಲ್ಲಿ ನೋಡುತ್ತೀರಿ.
5. ಬಜಾರ್ನ ಐದು ಹೈಲೈಟ್ಗಳು
ಒಂದು ವಿಭಿನ್ನವಾದ ಕತೆ. ಈ ರೀತಿಯ ಜಾನರ್ ಸಿನಿಮಾಗಳು ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದಿಲ್ಲ. ಕತೆಗೆ ಪೂರಕವಾದ ತಾರಾಗಣ, ನಗಿಸುತ್ತಲೇ ಅಳಿಸುವ ಪಕ್ಕಾ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಪುನೀತ್ ರಾಜ್‌ಕುಮಾರ್ ಹಾಡು. ಇವಿಷ್ಟು‘ಮಾಯಾಬಜಾರ್’ ಚಿತ್ರದ ಟಾಪ್ 5 ಹೈಲೈಟ್ಸ್ಗಳು ಎನ್ನಬಹುದು.
6. ರೆಟ್ರೋಗೆ ಪವರ್ ಡ್ಯಾನ್ಸ್
ಇಡೀ ಸಿನಿಮಾ ಮುಗಿದ ಮೇಲೆ ಕತೆ ಜತೆಗೆ ಪುನೀತ್ರಾಜ್ಕುಮಾರ್ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ. ಕಪ್ಪು ಬಿಳುಪಿನಲ್ಲಿ ರೆಟ್ರೋ ಸ್ಟೈಲಿನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಹಾಡು ಮೂಡಿ ಬರುತ್ತದೆ. ಎಸ್ ಪಿ ಬಾಲಸುಬ್ರಮಣ್ಯಂ ಹಾಡಿರುವ ಈ ಹಾಡಿಗೆ ಪವರ್ಫುಲ್ ಡ್ಯಾನ್ಸ್ ಮಾಡಿದ್ದು, ಬ್ಲಾಕ್ ಆಂಡ್ ವೈಟ್ನಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಿದಾಗ ನಿರ್ದೇಶಕರು ಡಾ ರಾಜ್‌ಕುಮಾರ್ ಅವರೇ ನೆನಪಾದರಂತೆ. ಈ ಹಾಡು ಚಿತ್ರದ ಕೊನೆಯಲ್ಲಿ ಬರಲಿದೆ. ಹೀಗಾಗಿ ಕತೆ ಜತೆಗೆ ಪುನೀತ್ ಅವರ ಈ ಹಾಡು ಮತ್ತು ಡ್ಯಾನ್ಸ್ ಕೂಡ ಮನಸ್ಸಿನಲ್ಲಿ ಉಳಿಯುತ್ತದಂತೆ.
7. ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?
ಅಂದಹಾಗೆ ಮೂರು ತಿಂಗಳ ಹಿಂದೆಯೇ ಈ ಚಿತ್ರವನ್ನು ನೋಡಿದ್ದರಂತೆ. ‘ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ ಅನಿಸುತ್ತಿಲ್ಲ. ಚಿತ್ರದ ಪ್ರತಿಯೊಂದು ಪಾತ್ರವೂ ನೆನಪಿನಲ್ಲಿ ಉಳಿಯುತ್ತದೆ. ಪಾತ್ರಧಾರಿಗಳ ಮೇಲೆ ಕತೆ ಮುಂದುವರಿಸಿಕೊಂಡು ಹೋಗುವುದು ಸವಾಲು. ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ. ಒಳ್ಳೆಯ ಚಿತ್ರವನ್ನು ನಮ್ಮ ಬ್ಯಾನರ್ನಲ್ಲಿ ನಿರ್ಮಿಸಿದ ಖುಷಿ ಇದೆ’ ಇದು ಚಿತ್ರವನ್ನು ನೋಡಿದ ಮೇಲೆ ಪುನೀತ್ ರಾಜ್‌ಕುಮಾರ್ ನಿರ್ದೇಶಕರ ಜತೆ ಹಂಚಿಕೊಂಡ ಮೊದಲ ಅಭಿಪ್ರಾಯ.
8. ಕಲರ್ಫುಲ್ ಕೋಲಾಜ್
ಸಾಮಾನ್ಯ ಜನರ ಜೀವನಗಳ ಮತ್ತು ಅವರ ನಿತ್ಯ ಬದುಕಿನ ಕತೆಗಳ ಒಂದು ಕೋಲಾಜ್ ಈ ಸಿನಿಮಾ. ಚಿತ್ರದ ಪ್ರತಿ ದೃಶ್ಯವೂ ಅತ್ಯಂತ ಸಹಜವಾಗಿ ಮೂಡಿ ಬಂದಿದೆ. ಹೀಗಾಗಿ ಎಲ್ಲೂ ವೈಭವೀಕರಣ ಮಾಡದೆ ಎಲ್ಲವನ್ನೂ ಸುಂದರವಾಗಿಯೇ ಕಟ್ಟಿಕೊಡಲಾಗಿದೆ. ಈ ಕಾರಣಕ್ಕೆ ‘ಮಾಯಾಬಜಾರ್’ ಚಿತ್ರ ನೋಡುಗರಿಗೆ ಹತ್ತಿರವಾಗಿಸುವ ಗುಣ ಇದೆ.
9.ತಾಂತ್ರಿಕತೆಯ ಮೆರಗು
ತಾಂತ್ರಿಕವಾಗಿಯೂ ಸಿನಿಮಾ ತುಂಬಾ ಚೆನ್ನಾಗಿದೆ.ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ಯೋಗರಾಜ್ ಭಟ್ ಹಾಗೂ ಪವನ್ ಸಾಹಿತ್ಯ, ಮಿಥುನ್ ಮುಕುಂದನ್ ಸಂಗೀತ, ಜಗದೀಶ್ ಸಂಕಲನ, ಹರ್ಷ ಹಾಗೂ ಧನು ನೃತ್ಯ ನಿರ್ದೇಶನ ಚಿತ್ರಕ್ಕೆ ತಾಂತ್ರಿಕ ಮೆರುಗು ನೀಡಿದೆ. ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ನಿರ್ದೇಶಕರೇ ಬರೆದಿದ್ದಾರೆ. ಕತೆ ಮತ್ತು ಪಾತ್ರಧಾರಿಗಳ ಕಾಣಕ್ಕೆ ಪ್ರೇಕ್ಷಕ ತಾಂತ್ರಿಕತೆಯ ಕಡೆಗೆ ಹೆಚ್ಚು ಗಮನ ಕೊಡದಿದ್ದರೂ, ಮೇಕಿಂಗ್ ಹಾಗೂ ತಾಂತ್ರಿಕತೆಯಲ್ಲಿ ಯಾವುದೇ ಕೊರತೆ ಕಾಣದಂತೆ ಚಿತ್ರತಂಡ ಕೆಲಸ ಮಾಡಿದೆಯಂತೆ.
10. ಯಾಕೆ ನೋಡಬೇಕು
ಈ ಚಿತ್ರವನ್ನು ಯಾಕೆ ನೋಡಬೇಕು ಎಂಬುದಕ್ಕೆ ನಿರ್ದೇಶಕರು ಟ್ರೇಲರ್ನಲ್ಲಿ ಗುಟ್ಟು ಬಿಟ್ಟುಕೊಟ್ಟಿದ್ದಾರಂತೆ. Pಲ್ ಥ್ರಿಲ್ಲರ್ ಚಿತ್ರಗಳನ್ನೇ ನೋಡಿರುವವರಿಗೆ ಥ್ರಿಲ್ಲರ್ ಜತೆಗೆ ಹಾಸ್ಯವೂ ಸೇರಿಕೊಂಡಿರುವ ಸಿನಿಮಾ ನೋಡುವ ಅವಕಾಶ ಈ ಚಿತ್ರ ಒದಗಿಸುತ್ತಿದೆ. ನೂರಕ್ಕೆ ನೂರು ಭಾಗ ಮನರಂಜನೆಯನ್ನು ಕೊಡುವ ಸಿನಿಮಾ. ನಿಮ್ಮ ಜೀವನದ ಎಲ್ಲ ಒತ್ತಡಗಳನ್ನು ಮರೆಯುವಂತೆ ಮಾಡಿ, ಥಿಯೇಟರ್ನಲ್ಲಿ ಇದ್ದಷ್ಟುಹೊತ್ತು ರಿಲ್ಯಾಕ್ಸ್ ಮೂಡಿಗೆ ಕರೆದುಕೊಂಡು ಹೋಗುವ ಶಕ್ತಿ ಈ ಚಿತ್ರಿಕ್ಕಿದೆ. ಪ್ರೇಕ್ಷಕರ ತಲೆಗೆ ಹುಳ ಬಿಡುವ ಗೊಂದಲಗಳು ಚಿತ್ರದಲ್ಲಿ ಇಲ್ಲ. ಹೀಗಾಗಿ ಧೈರ್ಯದಿಂದ ಸಿನಿಮಾ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.