ಪರಕೀಯರ ವಿರುದ್ಧ ಸಮರ ಸಾರಿದ ಮೊದಲ ಮಹಿಳೆಯ ಕತೆ: ಮಂಸೋರೆ

By Kannadaprabha NewsFirst Published Dec 4, 2020, 9:54 AM IST
Highlights

ಮಹಿಳಾ ಪ್ರಧಾನ ಚಿತ್ರಗಳು ಕನ್ನಡಕ್ಕೆ ಹೊಸದಲ್ಲ. ಆದರೆ, ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಜೀವನ ಪುಟಗಳನ್ನು ಹೇಳುವ ಐತಿಹಾಸಿಕ ಚಿತ್ರಗಳು ಮಾತ್ರ ಸ್ಯಾಂಡಲ್‌ವುಡ್‌ಗೆ ಅಪರೂಪ. ಈ ಕೊರತೆಯನ್ನು ಬ್ರೇಕ್‌ ಮಾಡಲು ಬಹುಕೋಟಿ ವೆಚ್ಚದಲ್ಲಿ, ಬಹುಭಾಷೆಯಲ್ಲಿ ರಾಣಿಯ ಕತೆ ಹೇಳಲು ಹೊರಟಿದ್ದಾರೆ ನಿರ್ದೇಶಕ ಮಂಸೋರೆ.

ರಾಣಿ ಅಬ್ಬಕ್ಕೆ ಚೌಟ ಅಲಿಯಾಸ್‌ ಉಲ್ಲಾಳದ ರಾಣಿ...

ಇತಿಹಾಸ ಪುಟಗಳಲ್ಲಿ ಅಜರಾಮರವಾಗಿ ಉಳಿದಿರುವ ವೀರವನಿತೆ. ಪರಕೀಯರ ವಿರುದ್ಧ ಸಮರ ಸಾರಿದ ಕರ್ನಾಟಕದ ನೆಲದ ರಾಣಿ. ಸತತವಾಗಿ 25 ವರ್ಷಗಳ ಕಾಲ ಯುದ್ಧ ಮಾಡುತ್ತಲೇ ರಾಜ್ಯ ಕಟ್ಟಿದ ಸಮರ ಸೇನಾನಿ. ಈಕೆಯ ಯುದ್ಧ ತಂತ್ರಗಳು, ವ್ಯಾಪರ ನೀತಿಗಳು, ರಾಜ್ಯ ಕಟ್ಟುವ ಬಲಿಷ್ಠ ಪಡೆ, ಮೊಗವೀರರು ಹಾಗೂ ಬ್ಯಾರಿಗಳ ಬೆಂಬಲ... ಹೀಗೆ ಕ್ರಿ.ಶ.16ನೇ ಶತಮಾನದಲ್ಲಿ ಕಂಡರಿಯದ ರೀತಿಯಲ್ಲಿ ಗರ್ಜಿಸಿದ ರಾಣಿ ಅಬ್ಬಕ್ಕ ಚೌಟ ಅವರ ಜೀವನ ಪುಟಗಳು ಈಗ ತೆರೆ ಮೇಲೆ ಮೂಡುತ್ತಿವೆ. ಮಂಸೋರೆ ‘ಅಬ್ಬಕ್ಕ’ ಹೆಸರಿನಲ್ಲಿ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಮಣಿಕರ್ಣಿಕಾ, ಪದ್ಮಾವತಿ, ತೆಲುಗಿನಲ್ಲಿ ರುದ್ರಮ್ಮ ದೇವಿ, ಗೌತಮಿಪುತ್ರ ಶಾತಕರ್ಣಿ ಮುಂತಾದ ಐತಿಹಾಸಿಕ ಹೋರಾಟಗಳ ಮತ್ತು ಅದರ ಸಾರಥಿಗಳ ಜೀವನವನ್ನು ತೆರೆ ಮೇಲೆ ನೋಡಿ ಥ್ರಿಲ್ಲಾದ ಪ್ರೇಕ್ಷಕ, ಕನ್ನಡದ ನೆಲದ ರಾಣಿಯ ಕತೆಯನ್ನೂ ಕೂಡ ನೋಡಬಹುದಾಗಿದೆ.

ಸ್ಯಾಂಡಲ್‌ವುಡ್ ಬಾದ್‌ಶಾ ಮೆಚ್ಚಿದ ‘ಆಕ್ಟ್ 1978’ ಚಿತ್ರ

‘ರಾಣಿ ಅಬ್ಬಕ್ಕನ ಹೋರಾಟದ ಪುಟಗಳು ಗೋಲ್ಡನ್‌ ಡೇಸ್‌. ಸಮುದ್ರ ಯುದ್ಧನೀತಿಯಲ್ಲಿ ನೈಪುಣ್ಯತೆ ಹೊಂದಿದ್ದ ಏಕೈಕಾ ರಾಣಿ ಎನ್ನಬಹುದು. ಮೊಗವೀರರು ಹಾಗೂ ಬ್ಯಾರಿಗಳ ಜತೆ ಸೇರಿಕೊಂಡು ಬಲಿಷ್ಠವಾದ ಸೈನ್ಯ ಕಟ್ಟಿಒಂದು ಕಡೆ ಅರಬ್ಬರ ಜತೆ ಸೌಹಾರ್ದಯುತ ವ್ಯಾಪಾರ ಮಾಡುತ್ತಲೇ, ಅಕ್ರಮವಾಗಿ ದಾಳಿ ಮಾಡುತ್ತಿದ್ದ ಪೋರ್ಚುಗೀಸರನ್ನು ಭಾರತಕ್ಕೆ ಕಾಲಿಡದಂತೆ ಗಟ್ಟಿಯಾಗಿ ಎದುರಿಸಿ ನಿಂತ ಮಹಿಳೆ ರಾಣಿ ಅಬ್ಬಕ್ಕ. ರಣರಂಗದಲ್ಲಿ ಈಕೆಯ ಯುದ್ಧ ನೀತಿ ಕಂಡು ಪೋರ್ಚುಗೀಸರೇ ದಂಗಾಗಿದ್ದರು. ಅದರಲ್ಲೂ ಸಮುದ್ರ ಯುದ್ಧದಲ್ಲಂತೂ ಈಕೆಯನ್ನು ಮೀರಿಸುವುದು ಅಸಾಧ್ಯ ಎಂದು ಗೊತ್ತಾದ ಮೇಲೆ ರಾಣಿ ಅಬ್ಬಕ್ಕ ಚೌಟ ಅವರ ಗಂಡನನ್ನು ಮೋಸದಿಂದ ತಮ್ಮ ಕಡೆಗೆ ಸೆಳೆದುಕೊಂಡು ಕುತಂತ್ರದ ದಾರಿಯಲ್ಲಿ ಅಬ್ಬಕ್ಕನನ್ನು ಸೋಲಿಸುತ್ತಾರೆ. ಅಬ್ಬಕ್ಕನ ಕುರಿತು ಸಿನಿಮಾ ಮಾಡುವುದಕ್ಕೆ ನನಗೆ ಪ್ರೇರಣೆ ಆಗಿದ್ದೇ ಆಕೆಯ ಜಲಮಾರ್ಗದ ಯುದ್ಧ ಪರಿಣತಿ. ಕಳೆದ ಮೂರು ವರ್ಷಗಳಿಂದ ಈ ಕುರಿತು ಅಧ್ಯಯನ ಮಾಡುತ್ತಿದ್ದೆ. ಈಗ ಸೂಕ್ತ ಸಮಯ ಎಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಮಂಸೋರೆ.

ಮೇಕಿಂಗ್‌ ಹೈಲೈಟ್ಸ್‌ಗಳೇನು?

- ಒಟ್ಟು 200 ದಿನಗಳ ಕಾಲ ಚಿತ್ರೀಕರಣ.

- ಕರ್ನಾಟಕ, ಕೇರಳ, ರಾಜಸ್ಥಾನ, ಹೈದಾರಬಾದ್‌ನಲ್ಲಿ ಶೂಟಿಂಗ್‌.

- ವಿವಿಧ 20 ರಿಂದ 25 ಸೆಟ್‌ಗಳ ನಿರ್ಮಾಣ.

- ಸಮುದ್ರದ ಸೆಟ್‌ಗಳು ಹಾಗೂ ವಾರ್‌ ಫೀಲ್ಡ್‌ ಸೆಟ್‌ಗಳಿಗೆ ಹೆಚ್ಚಿನ ಅಧ್ಯತೆ.

- ಇಡೀ ಸಿನಿಮಾ ವಾರ್‌ ರೀತಿಯಲ್ಲಿ ಮೂಡಿ ಬರಲಿದೆ.

- 15 ಮಂದಿ ಪ್ರಮುಖ ಪಾತ್ರದಾರಿಗಳು, 200 ರಿಂದ 250 ಉಳಿದ ಕಲಾವಿದರು.

ಜನರ ಸಿಟ್ಟು, ಅವರ ನೋವು ಸಿನಿಮಾ ಆಗಿದೆ: ಆಕ್ಟ್ 1978 ಸಿನಿಮಾ ಬಗ್ಗೆ ಮಂಸೋರೆ ಮಾತು 

- ಮಲಯಾಳಂ, ಪೋರ್ಚುಗೀಸ್‌ ಕಲಾವಿದರು, ತುಳು ಹಾಗೂ ರಂಗಭೂಮಿ ನಟರ ಅಭಿನಯ.

- ಇಂಡಿಯನ್‌ ಸಿನಿಮಾ ಆದರೂ ತಾಂತ್ರಿಕ ತಂಡದಲ್ಲಿ ಹಾಗೂ ಕಲಾವಿರ ವಿಭಾಗದಲ್ಲಿ ಕನ್ನಡದವರೇ ಹೆಚ್ಚು.

- ಸಂಕ್ರಾಂತಿಗೆ ಈ ಚಿತ್ರದ ನಿರ್ಮಾಣ ಸಂಸ್ಥೆ, ಅಬ್ಬಕ್ಕನ ಪಾತ್ರದಾರಿಯ ಪರಿಚಯ.

- ರಾಣಿ ಅಬ್ಬಕ್ಕ ಚೌಟ ಅವರ ಇತಿಹಾಸ ಅಧ್ಯಯನಕ್ಕೆ ದೊಡ್ಡ ತಂಡ ರಚನೆ.

ಅಬ್ಬಕ್ಕನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆಂಬುದು ಕುತೂಹಲ ಇದೆ. ಕನ್ನಡ, ತುಳು, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಹೀಗಾಗಿ ಎಲ್ಲ ಭಾಷೆಗಳಿಗೂ ಪರಿಚಿತ ಎನಿಸುವ ನಟಿಯನ್ನೇ ಅಬ್ಬಕ್ಕನ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ಮಂಸೋರೆ ನಿರ್ಧರಿಸಿದ್ದಾರೆ. ‘ಅರಬ್ಬಿ ಸಮುದ್ರದ ಅಭಯ ರಾಣಿ’ ಎಂದೇ ಖ್ಯಾತರಾದವರು ರಾಣಿ ಅಬ್ಬಕ್ಕ ಚೌಟ. ಅಂದರೆ ಭಯವೇ ಇಲ್ಲದ ರಾಣಿ ಎನಿಸಿಕೊಂಡಿದ್ದರು. ಇಂಥ ಪಾತ್ರಕ್ಕೆ ಖಡಕ್‌ ನಟಿಯನ್ನೇ ತರುವ ಯೋಚನೆ ಚಿತ್ರತಂಡದ್ದು.

Act 1978: ಗಮನ ಸೆಳೆಯುತ್ತಿದೆ ಮಂಸೋರೆ ನಿರ್ದೇಶನದ ಚಿತ್ರ! 

ಇನ್ನೂ ಮಂಸೋರೆ ಜತೆಗೆ ‘ಆಕ್ಟ್ 1978’ ಚಿತ್ರದಲ್ಲಿ ಕೆಲಸ ಮಾಡಿದ ತಾಂತ್ರಿಕ ತಂಡ ‘ಅಬ್ಬಕ್ಕ’ ಚಿತ್ರತಂಡದಲ್ಲೂ ಮುಂದುವರಿಯಲಿದೆ. ಛಾಯಾಗ್ರಾಹಕರಾಗಿ ಸತ್ಯ ಹೆಗಡೆ, ಕಲಾ ನಿರ್ದೇಶಕರಾಗಿ ಮಹವೀರ್‌ ಸಾಬಣ್ಣವರ್‌, ಸಂತೋಷ್‌ ಪಾಂಚಲ್‌, ನಿರ್ದೇಶನ ಹಾಗೂ ರೈಟಿಂಗ್‌ ತಂಡದಲ್ಲಿ ವೀರೇಂದ್ರ ಮಲ್ಲಣ್ಣ ಅವರಿದ್ದಾರೆ. ಸಂಗೀತ ನಿರ್ದೇಶಕರಾಗಿ ಅಜನಿಶ್‌ ಲೋಕನಾಥ್‌ ಹೊಸದಾಗಿ ಸೇರಿಕೊಂಡಿದ್ದಾರೆ.

click me!