ಗಾಜನೂರಿನಲ್ಲಿ ಮಿಸ್ಸಿಂಗ್‌ ಕೇಸ್‌;ಸತ್ಯ ಕತೆ ಆಧರಿತ ಸಿನಿಮಾ ಪೋಸ್ಟರ್‌ ರಿಲೀಸ್‌ ಮಾಡಿದ ಧ್ರುವ ಸರ್ಜಾ!

By Suvarna NewsFirst Published Jan 22, 2021, 10:06 AM IST
Highlights

ಗಾಜನೂರು... ಎಂದಾಗ ನೆನಪಾಗುವುದು ಡಾ ರಾಜ್‌ಕುಮಾರ್‌. ಈಗ ಅದೇ ಹೆಸರಿನಲ್ಲಿ ಸಿನಿಮಾ ಆಗುತ್ತಿದೆ. ಆದರೆ, ಈ ‘ಗಾಜನೂರು’ಗೂ ಅಣ್ಣಾವ್ರ ಊರಿಗೂ ಸಂಬಂಧ ಇಲ್ಲ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ಇರುವ ಗಾಜನೂರು. ಇದೇ ಊರಿನಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ಮಾಡಲಾಗುತ್ತಿದೆ. 

ಅವತಾರ್‌ ಈ ಚಿತ್ರದ ನಾಯಕ. ಸೋನಲ್‌ ಮೊಂತೆರೋ ನಾಯಕಿ. ವಿಜಯ್‌ ನಿರ್ದೇಶಕರು. ಕ್ಯಾಟರಿಂಗ್‌ ಉದ್ಯಮಿ ಅವಿನಾಶ್‌ ಕಲಬುರಗಿ ನಿರ್ಮಾಪಕರು. ಇತ್ತೀಚೆಗೆ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆಯಿತು. ನಟ ಧ್ರುವ ಸರ್ಜಾ ಅವರು ಮುಖ್ಯತಿಥಿಗಳಾಗಿ ಆಗಮಿಸಿ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದರೆ, ನಿರ್ದೇಶಕ ನಂದ ಕಿಶೋರ್‌ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.

ಓ ಮೈ ಲವ್‌ ಪಕ್ಕಾ ಕಮರ್ಷಿಯಲ್! 

ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು. ನಿರ್ದೇಶಕ ವಿಜಯ್‌ ಅವರು ನಂದಕಿಶೋರ್‌ ಗರಡಿಯಲ್ಲಿ ಪಳಗಿದವರು. ‘ಒಂದು ಊರಿನಲ್ಲಿ ನಡೆಯುವ ನೈಜ ಘಟನೆ. ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣವೊಂದು ದಾಖಲಾಗುತ್ತದೆ. ಇದರ ತನಿಖೆಗೆ ಇಳಿಯುವ ಪೊಲೀಸ್‌ ಇಲಾಖೆಗೆ ಕ್ರೈಮಿನ ಮತ್ತೊಂದು ಮುಖ ಗೊತ್ತಾಗುತ್ತದೆ. ಅದೇನು ಎಂಬುದು ಚಿತ್ರದ ಕತೆ. ಪ್ರಚಾರದ ಗಿಮಿಕ್‌ಗಾಗಿ ಚಿತ್ರಕ್ಕೆ ಗಾಜನೂರು ಎನ್ನುವ ಹೆಸರಿಟ್ಟಿಲ್ಲ. ಇದು ತೀರ್ಥಹಳ್ಳಿ ಗಾಜನೂರಿನ ಕತೆ. ಚಿತ್ರಕ್ಕೆ ಹೊಂದಿಕೆ ಆಗುತ್ತದೆ ಎಂಬ ಕಾರಣಕ್ಕೆ ಇಟ್ಟಿದ್ದೇವೆ’ ಎಂಬುದು ನಿರ್ದೇಶಕರು ಹೇಳುವ ವಿವರಣೆ.

ನಗಿಸಿ ರಂಜಿಸಿ ಖುಷಿ ಪಡಿಸಿ ಆಚೆ ಕಳಿಸ್ತೀನಿ: ನರಸಿಂಹ 

ಶ್ರೀಧರ್‌ ವಿ ಸಂಭ್ರಮ್‌ ಸಂಗೀತ, ತನ್ವಿಕ್‌ ಛಾಯಾಗ್ರಾಹಣ ಚಿತ್ರಕ್ಕಿದೆ. ರವಿಶಂಕರ್‌, ಕುರಿ ಪ್ರತಾಪ್‌, ತರಂಗ ವಿಶ್ವ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕತೆ ಬರೆದಿರುವುದು ಕೀರ್ತಿ. ಒಂದು ವರ್ಷದ ಹಿಂದೆಯೇ ನಿರ್ದೇಶಕರಿಗೆ ಕತೆ ಹೇಳಿದ್ದರಂತೆ. ಕನ್ನಡ, ತೆಲುಗು, ತಮಿಳು, ತುಳು ಸೇರಿ ಒಟ್ಟು ಏಳು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆಯಂತೆ.

‘ನಾನು ಇಲ್ಲಿಯವರೆಗೂ ಏಳೆಂಟು ಚಿತ್ರಗಳಲ್ಲಿ ನಟಿಸಿದ್ದೇನೆ. ತೆಲುಗಿನಲ್ಲೂ ಸಿನಿಮಾ ಮಾಡಿದ್ದೇನೆ. ಆದರೆ, ನನಗೆ ಯಾವುದೂ ಹೆಸರು ತಂದು ಕೊಡಲಿಲ್ಲ. ಹೀಗಾಗಿ ಗಾಜನೂರು ನನಗೆ ಮೊದಲ ಸಿನಿಮಾ ಎನ್ನಬಹುದು. ಎರಡು ವರ್ಷ ವಿರಾಮ ತೆಗೆದುಕೊಂಡು ಮಾಡುತ್ತಿರುವ ಸಿನಿಮಾ ಇದು. ಈ ಚಿತ್ರದಲ್ಲಿನ ಪಾತ್ರಕ್ಕಾಗಿ ಡ್ಯಾನ್ಸ್‌ ಹಾಗೂ ಆ್ಯಕ್ಷನ್‌ ತರಬೇತಿ ಮಾಡಿಕೊಂಡಿದ್ದೇನೆ. ಒಂದು ಒಳ್ಳೆಯ ಕತೆಯ ಚಿತ್ರಕ್ಕೆ ಹೀರೋ ಆಗುತ್ತಿರುವ ಖುಷಿ ಇದೆ’ ಎಂದರು ಅವತಾರ್‌.

ಸಿನಿಮಾಗಾಗಿ ಏನು ಬೇಕಾದರೂ ಮಾಡುತ್ತೇನೆ: ಧ್ರುವ ಸರ್ಜಾ 

ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುವ ಮೂಲಕ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಹಾಸ್ಯ ನಟ ತಬಲಾ ನಾಣಿ. ‘ನಾನು ಹತ್ತಿರದಿಂದ ನೋಡಿದ ತಂಡವಿದು. ಒಳ್ಳೆಯ ಕತೆ ಮಾಡಿಕೊಂಡಿದ್ದಾರೆ. ಇಲ್ಲಿ ನಾನು ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ತಬಲಾ ನಾಣಿ.

click me!