ರಾಜ್‌ ಇದ್ದಲ್ಲಿ ಸಹಾನುಭೂತಿ, ಪ್ರೀತಿ, ಶ್ರದ್ಧೆ ಇರುತ್ತಿತ್ತು; ಇಂದು ರಾಜ್‌ಕುಮಾರ್ ಹುಟ್ಟುಹಬ್ಬ ಸಂಭ್ರಮ!

Kannadaprabha News   | Asianet News
Published : Apr 24, 2021, 03:11 PM IST
ರಾಜ್‌ ಇದ್ದಲ್ಲಿ ಸಹಾನುಭೂತಿ, ಪ್ರೀತಿ, ಶ್ರದ್ಧೆ ಇರುತ್ತಿತ್ತು; ಇಂದು ರಾಜ್‌ಕುಮಾರ್ ಹುಟ್ಟುಹಬ್ಬ ಸಂಭ್ರಮ!

ಸಾರಾಂಶ

1960ನೇ ಇಸವಿ. ಚೆನ್ನೈನ ಗೋಲ್ಡನ್‌ ಸ್ಟುಡಿಯೋದಲ್ಲಿ ಭಕ್ತ ಕನಕದಾಸ ಕನ್ನಡ ಚಿತ್ರದ ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ’ ಎಂಬ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಕನಕದಾಸರ ಪಾತ್ರದಲ್ಲಿ ರಾಜ್‌ಕುಮಾರ್‌ರವರು ಅಭಿನಯಿಸುತ್ತಿದ್ದರು. ಉಡುಪಿ ಶ್ರೀಕೃಷ್ಣ ಕನಕದಾಸನಿಗೆ ದರ್ಶನ ಕೊಡುವ ದೃಶ್ಯ. ಅಲ್ಲಿ ಶ್ರೀಕೃಷ್ಣ ಕನಕನ ಕಡೆಗೆ ತಿರುಗುತ್ತಾ ದರ್ಶನ ಕೊಡುವ ಸಂದರ್ಭದಲ್ಲಿ ಓರ್ವ ಸ್ವಾಮಿಗಳು ಶ್ರೀಕೃಷ್ಣನಿಗೆ ಮಂಗಳಾರತಿ ಮಾಡುತ್ತಿರುವ ದೃಶ್ಯಕ್ಕಾಗಿ ಓರ್ವ ಸ್ವಾಮಿ ಅಲ್ಲಿರಬೇಕಾಗಿತ್ತು.

ಸಿವಿ ಶಿವಶಂಕರ್‌

 ಸ್ವಾಮಿಗಳ ಪಾತ್ರಕ್ಕೆ ಓರ್ವ ವ್ಯಕ್ತಿಯನ್ನು ನಿರ್ದೇಶಕರು ಹುಡುಕುತ್ತಿದ್ದರು. ಶೂಟಿಂಗ್‌ ನೋಡುತ್ತಾ ನಿಂತಿದ್ದ ಸೀತಾರಾಮರಾಜು ಎಂಬ ವ್ಯಕ್ತಿಯ ಕಡೆಗೆ ರಾಜ್‌ಕುಮಾರ್‌ ನೋಡಿ, ‘ನಿರ್ದೇಶಕರೇ, ಈ ಸೀತಾರಾಮರಾಜುಗೆ ಸ್ವಾಮಿಗಳ ವೇಷ ಹಾಕಿ’ ಎಂದರು. ಅಲ್ಲಿಯೇ ಇದ್ದ ಹುಣಸೂರು ಕೃಷ್ಣಮೂರ್ತಿಗಳೂ ಸಹ, ‘ಇವರನ್ನೇ ಸ್ವಾಮಿಗಳನ್ನಾಗಿ ಮಾಡೋಣ. ಡೈಲಾಗ್‌ ಏನೂ ಇಲ್ಲ. ಸ್ವಾಮಿಗಳು ಶ್ರೀಕೃಷ್ಣನಿಗೆ ಮಂಗಳಾರತಿ ಮಾಡೋದು ಅಷ್ಟೇ. ಇವರಿಗೆ ಸ್ವಾಮಿಗಳ ಮೇಕಪ್‌ ಮಾಡಿ ಕರೆದುಕೊಂಡು ಬನ್ನಿ’ ಎಂದರು.

ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದ ಡಾ. ರಾಜ್ ಪ್ರೀತಿಯ 'ಕಸ್ತೂರಿ ನಿವಾಸ'ಕ್ಕೆ 50 ವರ್ಷ! 

ಸೀತಾರಾಮರಾಜು ಗಡ್ಡ ಬೆಳೆಸಿಕೊಂಡಿದ್ದರು. ಅವರಿಗೆ ಸ್ವಾಮಿಗಳ ಮೇಕಪ್‌ ಮಾಡಲು ಅವರು ಮುಖದ ಕ್ಷಾೌರ ಮಾಡಿಸಿಕೊಂಡು ಬರಬೇಕಾಗುತ್ತದೆ ಎಂದರು ನಿರ್ದೇಶಕರು. ಅಲ್ಲಿಯೇ ಇದ್ದ ನಾನು ಹಾಗೂ ಕಾಮಿಡಿಯನ್‌ ಗುಗ್ಗು- ಸ್ಟುಡಿಯೋ ಹೊರಗಿರುವ ಸೆಲೂನ್‌ಗೆ ಕರೆದುಕೊಂಡು ಹೋಗಿ ಮುಖ ಕ್ಷಾೌರ ಮಾಡಿಸಿ ಕರೆತಂದೆವು. ಆದರೆ ಅವರಿಗೆ ಸ್ನಾನ ಮಾಡಿಸಲು ಸ್ಟುಡಿಯೋದಲ್ಲಿ ಆ ದಿನ ನೀರೇ ಇರಲಿಲ್ಲ. ರಾಜ್‌ಕುಮಾರ್‌, ‘ಸ್ವಾಮಿಗಳು ಸ್ನಾನವಿಲ್ಲದೆ ದೇವರಿಗೆ ಮಂಗಳಾರತಿ ಮಾಡುವುದು ತಪ್ಪು. ಅವರ ಮೈ ನೆನೆಯುವಷ್ಟಾದರೂ ನೀರು ತಂದು ಅವರ ಮೈಯನ್ನು ಒದ್ದೆ ಬಟ್ಟೆಯಿಂದ ಒರೆಸಿ, ಒಂದು ಲೋಟ ನೀರಿನಲ್ಲಿ ಮುಖ ತೊಳೆಸಿದರೆ ಸ್ವಾಮಿಗಳು ಪುನೀತರಾಗುತ್ತಾರೆ. ಆ ನಂತರ ಮೇಕಪ್‌ ಮಾಡುವುದು ಪುಣ್ಯ ಕಾರ್ಯ’ ಎಂದು ನಗುತ್ತಾ ಸಲಹೆ ಕೊಟ್ಟರು. ಅಲ್ಲಿದ್ದವರೆಲ್ಲ, ‘ಇದು ಯೋಗ್ಯ ಸಲಹೆ’ ಎಂದರು.

ರಾಜ್‌ಕುಮಾರ್‌ ಹೇಳಿದರು, ‘ದೇವರಿಗೆ ಪೂಜೆ ಮಾಡೋ ಸ್ವಾಮಿಗಳು ಸ್ನಾನ ಮಾಡಿಲ್ಲ ಅನ್ನೋದು ಪ್ರೇಕ್ಷಕರಿಗೆ ಗೊತ್ತಾಗೋದಿಲ್ಲ. ಆದರೆ ನನಗೆ ಗೊತ್ತಿರುತ್ತಲ್ಲ. ಆದ್ದರಿಂದ ನನ್ನ ಪಾತ್ರಕ್ಕೆ ತನ್ಮಯತೆ, ಭಕ್ತಿ ಬರೋದಕ್ಕೆ ಹೇಗೆ ಸಾಧ್ಯ? ನನ್ನ ಪಾತ್ರ ಏಟು ತಿನ್ನುತ್ತಲ್ಲ’ ಅಂದರು. ಆಗ ಹುಣಸೂರರು, ‘ಕನಕದಾಸನಿಗೆ ದರ್ಶನ ಕೊಡೋದು ಶ್ರೀಕೃಷ್ಣನೇ ಹೊರತು ಪೂಜಾರಿ ಅಲ್ಲ’ ಅಂದರು. ‘ಪೂಜಾರಿ ಮಂಗಳಾರತಿ ಮಾಡುವುದು ಪ್ರೇಕ್ಷಕರಿಗೆ ಕಾಣುತ್ತದೆ. ನಿಮ್ಮ ಕಣ್ಣಿಗೆ ಶ್ರೀಕೃಷ್ಣ ಬಿಟ್ಟರೆ ನಿರ್ದೇಶಕರು, ಹಣ ಕೊಡೋ ನಿರ್ಮಾಪಕರು ಯಾರೂ ಕಾಣಿಸುವುದಿಲ್ಲ’ ಎಂದು ನಗುತ್ತಾ ಹೇಳಿದರು.

ವರನಟ ಡಾ.ರಾಜ್‌ ಅಗಲಿ ಇಂದಿಗೆ 15 ವರ್ಷ; ಕುಟುಂಬಸ್ಥರು, ಅಭಿಮಾನಿಗಳ ಸ್ಮರಣೆ 

ಹೀಗೆ ತಮಾಷೆಯಾಗಿ ಮಾತುಗಳು ಬಂದುಹೋಗುತ್ತಿದ್ದರೆ ಸೀತಾರಾಮರಾಜು, ‘ನಾನು ಮೇಕಪ್‌ ಮಾಡಿಸಿಕೊಳ್ಳುವುದೇ ಇಲ್ಲ. ಸ್ವಾಮಿ ಪಾತ್ರ ಬೇರೆ ಯಾರಿಗಾದರು ಹಾಕಿ’ ಅಂದರು. ಆಗ ಕಾಮಿಡಿಯನ್‌ ಗುಗ್ಗು, ‘ಹೊರಗಡೆ ಟೀ ಅಂಗಡಿಯಿಂದ ಬಿಸಿ ನೀರು ತಂದಿದ್ದೇನೆ. ಇವರ ಮೈ ಒರೆಸಿ ಮೇಕಪ್‌ ಮಾಡುತ್ತೇನೆ’ ಅಂದರು. ಅದಕ್ಕೆ ರಾಜ್‌ಕುಮಾರ್‌, ‘ಟೀ ಅಂಗಡಿಯವನು ಪಾಪ, ಟೀಗೆ ಇಟ್ಟಿದ್ದ ಬಿಸಿ ನೀರನ್ನೇ ಕೊಟ್ಟಿದ್ದಾನೆ’ ಎಂದು ಅನುಕಂಪ ವ್ಯಕ್ತಪಡಿಸಿದಾಗ ಪ್ರೊಡಕ್ಷನ್‌ ಮ್ಯಾನೇಜರ್‌ ವೀರಯ್ಯ, ‘ಟೀ ಅಂಗಡಿಯವನಿಗೆ ಹನ್ನೆರಡು ಟೀಗೆ ಆರ್ಡರ್‌ ಕೊಟ್ಟು ಬಂದಿದ್ದೇನೆ. ನೀವು ಶೂಟಿಂಗ್‌ ಮುಂದುವರಿಸಿ’ ಎಂದರು.

ಡಾ.ರಾಜ್‌ಕುಮಾರ್ ಕರುನಾಡನ್ನಗಲಿ ಕಳೆಯಿತು 15 ವರ್ಷ! 

ಆಗ ರಾಜ್‌ಕುಮಾರ್‌ ತಾವು ಕುಳಿತಿದ್ದ ಜಾಗದಿಂದಲೇ, ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ...’ ಹಾಡಿದರು. ಪರಸ್ಪರ ಚರ್ಚೆ, ಪಾತ್ರದ ಬಗ್ಗೆ ತನ್ಮಯತೆ, ಮತ್ತೊಬ್ಬರ ಬಗ್ಗೆ ಅನುಕಂಪ ರಾಜ್‌ ಚಿತ್ರಗಳ ಶೂಟಿಂಗಿನಲ್ಲಿ ತೀರಾ ಸಾಮಾನ್ಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?