ರಾಜ್ ಸ್ಮಾರಕ ವಿವಾದ: ನಟ ಚೇತನ್ ಅಹಿಂಸಾ ವಿರುದ್ಧ ಪ್ರತಿಭಟನೆ, ಗಡಿಪಾರಿಗೆ ಆಗ್ರಹ, ಹಲವು ಗಣ್ಯರಿಂದ ಖಂಡನೆ

Published : Apr 28, 2026, 02:40 PM IST
Actor Chetan Ahimsa

ಸಾರಾಂಶ

ವರನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಕುರಿತು ನಟ ಚೇತನ್ ಅಹಿಂಸಾ ನೀಡಿದ ವಿವಾದಾತ್ಮಕ ಹೇಳಿಕೆಯು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರವೇ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಚೇತನ್ ಅವರನ್ನು ಚಿತ್ರರಂಗದಿಂದ ಗಡಿಪಾರು ಮಾಡುವಂತೆ ಮತ್ತು ಅವರ ಸದಸ್ಯತ್ವ ರದ್ದುಪಡಿಸುವಂತೆ ಆಗ್ರಹಿಸಿವೆ.

ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಟ ಚೇತನ್ ಅಹಿಂಸಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ವಿಶೇಷವಾಗಿ ಕರವೇ ( Karnataka Rakshana Vedike) ಕಾರ್ಯಕರ್ತರು ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಭಾರಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 11 ಗಂಟೆಗೆ ಆರಂಭವಾದ ಈ ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ಚೇತನ್ ಅಹಿಂಸಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. “ನಾಡದ್ರೋಹಿ ಚೇತನ್‌ಗೆ ದಿಕ್ಕಾರ” ಮತ್ತು ಕನ್ನಡಿಗರ ಭಾವನೆಗೆ ಧಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಘೋಷಣೆಗಳು ಮೊಳಗಿದವು. ಚೇತನ್ ಅವರು ನೀಡಿರುವ ಹೇಳಿಕೆ ಕನ್ನಡಿಗರ ನಡುವೆ ವೈಮನಸ್ಸು ಮೂಡಿಸುವಂತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸದಸ್ಯತ್ವ ರದ್ದುಪಡಿಸುವಂತೆ ಆಗ್ರಹ

ಪ್ರತಿಭಟನಾಕಾರರು ಚೇತನ್ ಅಹಿಂಸಾ ಅವರನ್ನು ಚಿತ್ರರಂಗದಿಂದ ಗಡಿಪಾರು ಮಾಡಬೇಕು ಹಾಗೂ ಅವರ ಫಿಲ್ಮ್ ಚೇಂಬರ್ ಸದಸ್ಯತ್ವವನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಪ್ರವೀಣ್ ಶೆಟ್ಟಿ ಅವರು ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸರ್ಕಾರಕ್ಕೂ ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಜಯಮಾಲಾ ಪ್ರತಿಕ್ರಿಯೆ

ಈ ಕುರಿತು ಪ್ರತಿಕ್ರಿಯಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಚಿತ್ರರಂಗದ ಭಾಗವಾಗಿರುವ ವ್ಯಕ್ತಿಯೊಬ್ಬರಿಂದ ಇಂತಹ ಹೇಳಿಕೆಗಳು ಬಂದಿರುವುದು ನಮಗೆ ತಲೆತಗ್ಗಿಸುವಂತಾಗಿದೆ. ಚೇತನ್ ಅವರ ಹೇಳಿಕೆ ಬಹಳ ನೋವು ತಂದಿದೆ. ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಇಂತಹ ಮಾತುಗಳು ಸರ್ಕಾರ, ಸಂಸ್ಥೆಗಳು ಹಾಗೂ ಅಭಿಮಾನಿಗಳಿಗೆ ಮುಜುಗರ ಉಂಟುಮಾಡುತ್ತವೆ. ಚೇತನ್ ಅವರು ತಪ್ಪು ಮಾಡುತ್ತಿದ್ದಾರೆ. ಕೂಡಲೇ ಕ್ಷಮೆ ಕೇಳಬೇಕು. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡಬಾರದು. ಅವರ ವಿರುದ್ಧ ಸದಸ್ಯತ್ವ ರದ್ದುಪಡಿಸುವ ಕುರಿತು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆಯಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರವೀಣ್ ಶೆಟ್ಟಿ ಹೇಳಿಕೆ

ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ಭಾರತೀಯ ಚಿತ್ರರಂಗವೇ ಡಾ. ರಾಜಕುಮಾರ್ ಅವರನ್ನು ಗೌರವಿಸುತ್ತದೆ. ಅವರು ಮಾನವೀಯತೆ ಮೆರೆದ ಮಹಾನ್ ವ್ಯಕ್ತಿ. ಇಂತಹ ಮಹನೀಯರ ಬಗ್ಗೆ ಅವಮಾನಕಾರಿ ಹೇಳಿಕೆ ನೀಡುವುದನ್ನು ನಾವು ಸಹಿಸಲಾರೆವು. ನಾವು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ ಎಂದರು. ಚೇತನ್ ಸಮಾಜದ ಹೆಸರಿನಲ್ಲಿ ಮಾತನಾಡುತ್ತಿರುವುದು ಸರಿಯಲ್ಲ. ಸರ್ಕಾರ ನೀಡಿರುವ ಭದ್ರತೆಯನ್ನು ಹಿಂಪಡೆಯಬೇಕು. ಕನ್ನಡ ಹೋರಾಟಗಾರರ ಭಾವನೆಗೆ ಧಕ್ಕೆ ತರೋವರ ವಿರುದ್ಧ ಕಠಿಣ ಕ್ರಮ ಅಗತ್ಯ ಎಂದು ಹೇಳಿದರು.

ಸಾರಾ ಗೋವಿಂದು ಆಕ್ರೋಶ

ಇನ್ನೊಂದೆಡೆ ಸಾರಾ ಗೋವಿಂದು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ಪ್ರತಿಭಟನೆ ನಡೆಸಿದಾಗ ಕ್ಷಮೆ ಕೇಳಿದಂತಿದ್ದರು, ಆದರೆ ಮತ್ತೆ ಅದೇ ಹೇಳಿಕೆ ನೀಡಿದ್ದಾರೆ. ಇಂತಹ ವರ್ತನೆ ಸಹಿಸಲಾಗುವುದಿಲ್ಲ. ಡಾ. ರಾಜಕುಮಾರ್ ಅವರ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು. ತಕ್ಷಣವೇ ಚೇತನ್ ಅವರನ್ನು ಗಡಿಪಾರು ಮಾಡಬೇಕು ಎಂದು ಹೇಳಿದರು. ಪೊಲೀಸರು ಚೇತನ್ ಅವರಿಗೆ ಭದ್ರತೆ ಒದಗಿಸಿರುವುದನ್ನೂ ಪ್ರಶ್ನಿಸಿ, ಅವರಿಗೆ ರಕ್ಷಣೆ ನೀಡುವುದು ಸರಿಯೇ? ಸಾರ್ವಜನಿಕರ ಭಾವನೆಗೆ ಧಕ್ಕೆ ತಂದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒಟ್ಟಿನಲ್ಲಿ, ಡಾ. ರಾಜಕುಮಾರ್ ಕುರಿತು ನೀಡಲಾದ ಹೇಳಿಕೆ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ನಟ ಚೇತನ್ ಅಹಿಂಸಾ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ಚಿತ್ರರಂಗ ಹಾಗೂ ಸರ್ಕಾರ ಈ ವಿಚಾರದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕನ್ನಡ ಸಿನಿಮಾದಲ್ಲಿ ಇದೆಲ್ಲಾ ಅತಿಯಾಯ್ತು; ಯಶ್ ಚಿತ್ರಕ್ಕೆ ಇದೆಲ್ಲಾ ಬೇಕಿರಲಿಲ್ಲ' ಎಂದಿದ್ದಕ್ಕೆ ಯಶ್ ಹೇಳಿದ್ದೇನು ನೋಡಿ!
Sanjay Dutt KD movie controversy: ಜೋಗಿ ಪ್ರೇಮ್ ಸಿನಿಮಾದ ಗೀತೆಗೆ ಸಂಜಯ್ ದತ್ ಕ್ಷಮೆ | ಏನಿದು ವಿವಾದ?