ನಟ ಧ್ರುವ ಸರ್ಜಾ ಅವರ 'ಮಾರ್ಟಿನ್' ಸಿನಿಮಾವನ್ನು ಟೀಕಿಸಿದ ಯೂಟೂಬರ್ ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಕೆಟ್ಟದಾಗಿ ರಿವ್ಯೂ ಮಾಡಿದ್ದಕ್ಕೆ ಅಭಿಮಾನಿಗಳು ದೂರು ನೀಡಿದ್ದರು. ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿಯೂ ಸುಧಾಕರ್ ವಿರುದ್ಧ ವಾರೆಂಟ್ ಇತ್ತು.
ಬೆಂಗಳೂರು (ಅ.15): ನಟ ಧ್ರುವ ಸರ್ಜಾ ಅವರ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀರಾ ಕೆಟ್ಟದಾಗಿ ಮಾತನಾಡಿ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದ ಖ್ಯಾತ ಯೂಟೂಬರ್ ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ ಗೌಡನನ್ನು ಪೊಲೀಸರು ಅರೆಸ್ಟ್ ಮಾಡಿ ಮೆತ್ತಗೆ ಮಾಡಿ ಕಳುಹಿಸಿದ್ದಾರೆ.
ಹೌದು, ಮಾರ್ಟಿನ್ ಸಿನಿಮಾ ಬಿಡುಗಡೆಯಾದ ನಂತರ ಈ ಸಿನಿಮಾದ ಬಗ್ಗೆ ಪರ ವಿರೊಧ ಚರ್ಚೆಗಳು ಹರಿದಾಡುತ್ತಿವೆ. ಇದರಲ್ಲಿ ಬಹುತೇಕರು ಉತ್ತಮವಾಗಿದೆ ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಸಿನಿಮಾ ಸರಿಯಾಗಿಲ್ಲ ಎಂದು ಕೆಟ್ಟದಾಗಿ ರಿವ್ಯೂ ನೀಡಿದ್ದರು. ಸಿನಿಮಾದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ, ಅದನ್ನು ಬೇರೊಬ್ಬರ ಮೇಲೆ ಹೇರುವುದಕ್ಕೆ ಅವಕಾಶವಿಲ್ಲ. ಸಿನಿಮಾದ ಬಗ್ಗೆ ಕೆಟ್ಟದಾಗಿ ರಿವ್ಯೂ ನೀಡುವುದರಲ್ಲಿ ಎಲ್ಲರಿಗಿಂತ ಮುಂದೆ ಹೋಗಿ ತಾನು ಹೆಚ್ಚು ವೀಕ್ಷಣೆ ಪಡೆದುಕೊಳ್ಳಬೇಕೆಂದ ಉದ್ದೇಶದಿಂದ ಖ್ಯಾತ ಯ್ಯೂಟೂಬರ್ ಆಗಿರುವ ಸೋಶಿಯಲ್ ಮಿಡಿಯಾ ಇನ್ಫ್ಲೂಯೆನ್ಸರ್ ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ್ ಗೌಡ ತೀರಾ ಕೆಟ್ಟದಾಗಿ ಮಾರ್ಟಿನ್ ಸಿನಿಮಾದ ಬಗ್ಗೆ ರಿವ್ಯೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
undefined
ಇದನ್ನೂ ಓದಿ: Martin Film Review: ಮಾವನ ದೇಶ ಭಕ್ತಿ, ಅಳಿಯನ ಘರ್ಜನೆ: ಮೆಡಿಸನ್ ಮಾಫಿಯಾ, ಅಂತಾರಾಷ್ಟ್ರೀಯ ಕ್ರೈಮ್!
ಇದರ ಬೆನ್ನಲ್ಲಿಯೇ ಪೊಲೀಸರಿಗೆ ಈ ಬಗ್ಗೆ ಮಾರ್ಟಿನ್ ಚಿತ್ರದ ನಾಯಕ ಧ್ರುವ ಸರ್ಜಾ ಅವರ ಅಭಿಮಾನಿಗಳು ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ ಈ ಹಿಂದೆ ಯೂಟೂಬರ್ ಸುಧಾಕರನ ವಿರುದ್ಧ ಹಲ್ಲೆಗೆ ಸಂಬಂಧಪಟ್ಟಂತೆ ಒಂದು ಕೇಸಿನಲ್ಲಿ ವಾರೆಂಟ್ ಇಶ್ಯೂ ಆಗಿದ್ದರೂ ಪೊಲೀಸ್ ಠಾಣೆಗೆ ಹಾಜರಾಗದೇ ತಲೆ ಮರೆಸಿಕೊಂಡು ಓಡಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಮಾರ್ಟಿನ್ ಸಿನಿಮಾದ ಬಗ್ಗೆ ಕೆಟ್ಟದಾಗಿ ರಿವ್ಯೂ ಮಾಡಿದ್ದಕ್ಕೆ ದೂರು ಬಂದ ಬೆನ್ನಲ್ಲಿಯೇ ಆತನ್ನು ಬೆಂಗಳೂರು ಹೊರವಲಯದ ಆದನಾಯಕನಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲ್ಲೆ ಪ್ರಕರಣದ ಸಂಬಂಧ ಆತನನ್ನು ಕೆಲವೊಂದಿಷ್ಟು ವಿಚಾರಣೆ ಮಾಡಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದಾದ ನಂತರ ಎರಡನೇ ದೂರು ಮಾರ್ಟಿನ್ ಸಿನಿಮಾ ಕುರಿತ ರಿವ್ಯೂ ವಿಡಿಯೋದ ಬಗ್ಗೆ ವಿಚಾರಿಸಿದ್ದಾರೆ. ಆಗ ಸ್ಟ್ರಾಂಗ್ ಸುಧಾಕರ ಮಾಡಿದ ವಿಡಿಯೋದಲ್ಲಿ 'ನಾನು ಜೀವನದಲ್ಲಿ ನೋಡಿದ ಅತ್ಯಂತ ಕೆಟ್ಟ ಸಿನಿಮಾ ಮಾರ್ಟಿನ್ ಎಂದೆಲ್ಲಾ ಹೇಳಿಕೊಂಡಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಎಲ್ಲರೂ ಕೆಜಿಎಫ್ ಸಿನಿಮಾ ಕಾಪಿ ಮಾಡುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮಾದರಿಯಲ್ಲಿಯೇ ಕಳಪೆಯಾಗಿ ಉಪೇಂದ್ರ ಅವರ 'ಕಬ್ಜ' ಸಿನಿಮಾ ಮಾಡಲಾಗಿದೆ. ಕಬ್ಜ ಸಿನಿಮಾದ ಮುಂದುವರಿದ ಕಳಪೆ ಭಾಗ ಎನ್ನುವಂ ರೀತಿಯಲ್ಲಿ ಮಾರ್ಟಿನ್ ಸಿನಿಮಾ ಮಾಡಲಾಗಿದೆ' ಎಂದೆಲ್ಲಾ ಹೇಳಿಕೆ ನೀಡಿದ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದನು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೀಕ್ಷಣೆಗಳು, ಲೈಕ್ಸ್ ಹಾಗೂ ಕಾಮೆಂಟ್‌ಗಳು ಬಂದಿದ್ದವು. ಇದರಿಂದ ಸ್ಟ್ರಾಂಗ್ ಸುಧಾಕರ ಬೇರೊಂದು ಸಿನಿಮಾದ ಬಗ್ಗೆ ಕೆಟ್ಟದಾಗಿ ಮಾತನಾಡಿ ವಿಡಿಯೋ ಮಾಡಿದರೆ ಫೇಮಸ್ ಆಗಬಹುದು ಎಂದು ನಿರೀಕ್ಷೆ ಮಾಡಿದ್ದನು. ಆದರೆ, ಈ ಹಿನ್ನೆಲೆಯಲ್ಲಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿ ಪೊಲೀಸರಿಂದ ವಾರ್ನಿಂಗ್ ಪಡೆಯುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಬೆನ್ನಲ್ಲೇ, ಕಲರ್ಸ್ ಕನ್ನಡದೊಂದಿಗಿನ ಸಂಬಂಧ ಬಿಚ್ಚಿಟ್ಟ ಕಿಚ್ಚ ಸುದೀಪ!
ಇನ್ನು ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ನಿನ್ನ ವೈಯಕ್ತಿಕ ವರ್ಚಿಸ್ಸಿಗೆ ಸಿನಿಮಾ ಬಗ್ಗೆ ಕೆಟ್ಟದಾಗಿ ರಿವ್ಯೂ ಮಾಡಿದ ವಿಡಿಯೋವನ್ನು ಪೊಲೀಸರು ಡಿಲೀಟ್ ಮಾಡಿಸಿದ್ದಾರೆ. ಜೊತೆಗೆ, ಸ್ಟಾಂಗ್ ಸುಧಾಕರನಿಗೆ ಪೊಲೀಸ್ ಠಾಣೆಯಲ್ಲಿ ಕೂರಿಸಿ ಎಚ್ಚರಿಕೆ ನೀಡುವ ಮೂಲಕ ಆತನನ್ನು ಮೆತ್ತಗೆ ಮಾಡಿದ್ದಾರೆ. ಕೊನೆಗೆ ಆತನಿಂದ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡು ವಿಡಿಯೋ ಡಿಲೀಟ್ ಮಾಡಿದ್ದರ ಬಗ್ಗೆ ಅಧಿಕೃತ ಮಾಹಿತಿ ಖಚಿತಪಡಿಸಿಕೊಂಡಿದ್ದಾರೆ. ಇನ್ನು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟ್ರಾಂಗ್ ಸುಧಾಕರ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.