
ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ನಟಿ ಆಶಿಕಾ ರಂಗನಾಥ್ ಸಿನಿಮಾಗಳಷ್ಟೇ ಅಲ್ಲ, ತಮ್ಮ ಫುಡ್ ಲವ್‌ಗೂ ಸಾಕಷ್ಟು ಜನಪ್ರಿಯರು. ಹೊಸಹೊಸ ಖಾದ್ಯಗಳನ್ನು ಸವಿಯುವುದು ಅವರ ನೆಚ್ಚಿನ ಹವ್ಯಾಸ. ಸಮಯ ಸಿಕ್ಕಾಗ ವಿವಿಧ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ, ರುಚಿಕರವಾದ ಆಹಾರವನ್ನು ಸವಿಯುವ ಆಶಿಕಾ, ಅದರ ಫೋಟೋ ಹಾಗೂ ವಿಡಿಯೋಗಳನ್ನು ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.
ಈ ನಡುವೆ ಆಶಿಕಾ ಅವರ ಹಳೆಯ ಸಂದರ್ಶನದ ವಿಡಿಯೋ ಒಂದು ಮತ್ತೆ ವೈರಲ್ ಆಗಿದೆ. ಆ ಸಂದರ್ಶನದಲ್ಲಿ ಬೆಂಗಳೂರಿನಲ್ಲಿ ತಮಗೆ ಅತ್ಯಂತ ಇಷ್ಟವಾದ ಹೋಟೆಲ್‌ಗಳು ಹಾಗೂ ಅಲ್ಲಿ ತಪ್ಪದೇ ಸವಿಯುವ ಖಾದ್ಯಗಳ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಬಿರಿಯಾನಿ ಎಂದರೆ ಆಶಿಕಾಗೆ ವಿಶೇಷ ಪ್ರೀತಿ. ಅದಕ್ಕಾಗಿಯೇ ಅವರ ಮೊದಲ ಆಯ್ಕೆ ಶಿವಾಜಿ ಮಿಲಿಟರಿ ಹೋಟೆಲ್. "ನಾನು ಆಗಾಗ್ಗೆ ಅಲ್ಲಿಗೆ ಹೋಗುತ್ತೇನೆ. ಅಲ್ಲಿನ ಬಿರಿಯಾನಿ ಮಾತ್ರವಲ್ಲ, ಬಹುತೇಕ ಎಲ್ಲ ಖಾದ್ಯಗಳೂ ನನಗೆ ತುಂಬಾ ಇಷ್ಟ," ಎಂದು ಆಶಿಕಾ ಹೇಳಿಕೊಂಡಿದ್ದಾರೆ.
ಭಾರತೀಯ ಊಟದ ಜೊತೆಗೆ ಏಷ್ಯನ್ ಫುಡ್ ಕೂಡ ಆಶಿಕಾ ಅವರ ಫೇವರಿಟ್ ಪಟ್ಟಿಯಲ್ಲಿದೆ. ಕೊರಿಯನ್, ಜಪಾನೀಸ್ ಹಾಗೂ ಇತರೆ ಏಷ್ಯನ್ ಖಾದ್ಯಗಳನ್ನು ಸವಿಯಲು ಅವರು ಬೆಂಗಳೂರಿನ ಇಂದಿರಾನಗರದಲ್ಲಿರುವ ಲಕ್ಕಿ ಚಾನ್ ರೆಸ್ಟೋರೆಂಟ್‌ಗೆ ಭೇಟಿ ನೀಡುತ್ತಾರಂತೆ. ವಿಶೇಷವಾಗಿ ಅಲ್ಲಿನ ಸೂಶಿ ಅವರಿಗೆ ಬಹಳ ಇಷ್ಟವಂತೆ. ಸಿಹಿ-ಖಾರದ ಸ್ನ್ಯಾಕ್ಸ್ ವಿಷಯಕ್ಕೆ ಬಂದರೆ, ಆಶಿಕಾ ಅವರ ಮನ ಗೆದ್ದಿರುವುದು ವಿ.ಬಿ. ಬೇಕರಿ. ಅಲ್ಲಿನ ಪ್ರಸಿದ್ಧ ಸ್ವೀಟ್ ಅಂಡ್ ಸಾಲ್ಟ್ ಬಿಸ್ಕೆಟ್ ಅವರ ಫೇವರಿಟ್ ತಿಂಡಿಗಳಲ್ಲೊಂದು ಎಂದು ಅವರು ತಿಳಿಸಿದ್ದಾರೆ.
ಇನ್ನು ದೋಸೆ ಪ್ರಿಯರಾಗಿರುವ ಆಶಿಕಾ, ಬೆಂಗಳೂರಿನ ಹಳೆಯ ಹಾಗೂ ಜನಪ್ರಿಯ ಟಿಫಿನ್ ಸೆಂಟರ್‌ಗಳಲ್ಲಿ ಒಂದಾದ ಎಸ್‌ಎಲ್‌ಎನ್ ಟಿಫಿನ್ ರೂಂ (ಮುದ್ದಣ್ಣ ಹೋಟೆಲ್) ಅನ್ನು ವಿಶೇಷವಾಗಿ ಮೆಚ್ಚಿಕೊಳ್ಳುತ್ತಾರೆ. ಅಲ್ಲಿನ ಗರಿಗರಿಯಾದ ದೋಸೆ ಮತ್ತು ಮೃದುವಾದ ಇಡ್ಲಿಯ ರುಚಿ ಇಂದಿಗೂ ಅದೇ ಮಟ್ಟದಲ್ಲಿ ಉಳಿದಿದೆ. ಹಲವು ದಶಕಗಳಿಂದ ಒಂದೇ ಗುಣಮಟ್ಟದ ಆಹಾರ ನೀಡುತ್ತಿರುವುದು ಈ ಹೋಟೆಲ್‌ನ ವಿಶೇಷತೆ ಎಂದು ಆಶಿಕಾ ಪ್ರಶಂಸಿಸಿದ್ದಾರೆ.
ಬಿರಿಯಾನಿ, ಸೂಶಿ, ಬಿಸ್ಕೆಟ್ ಅಥವಾ ದೋಸೆ... ಯಾವ ಖಾದ್ಯವೇ ಆಗಿರಲಿ, ರುಚಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಆಶಿಕಾ ರಂಗನಾಥ್, ಈ ನಾಲ್ಕು ಹೋಟೆಲ್‌ಗಳಿಗೆ ಅವಕಾಶ ಸಿಕ್ಕಾಗಲೆಲ್ಲ ಭೇಟಿ ನೀಡಿ ತಮ್ಮ ನೆಚ್ಚಿನ ಖಾದ್ಯಗಳನ್ನು ಸವಿಯುವುದನ್ನು ಮಿಸ್ ಮಾಡಿಕೊಳ್ಳುವುದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.