
ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರ ಸಿನಿಪಯಣಕ್ಕೆ ಮತ್ತೊಂದು ಅಪರೂಪದ ಗೌರವ ಸಿಕ್ಕಿದೆ. ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನದ ಸೇವೆಯನ್ನು ಗುರುತಿಸುವ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಈ ಮೂಲಕ ಈ ಗೌರವ ಪಡೆದ ಎರಡನೇ ಕನ್ನಡದ ನಟ ಹಾಗೂ ಮೂರನೇ ಕನ್ನಡಿಗ ಎಂಬ ಹೆಗ್ಗಳಿಕೆಗೆ ಅನಂತ್ ನಾಗ್ ಪಾತ್ರರಾಗಿದ್ದಾರೆ. ಆದರೆ ಪ್ರಶಸ್ತಿ ಘೋಷಣೆಯ ಬೆನ್ನಲ್ಲೇ ಸುದ್ದಿಯಾಗುತ್ತಿದೆ ಮತ್ತೊಂದು ನೋವಿನ ಸುದ್ದಿ.. ಇದರಿಂದ ಅನಂತ್ ಅಭಿಮಾನಿಗಳು ಬೇರಸಗೊಂಡಿದ್ದಾರೆ. ಅದು- ಅನಂತ್ ನಾಗ್ ಅವರ ಮನಸ್ಸಿನಲ್ಲಿ ಹಲವು ವರ್ಷಗಳಿಂದ ಕನಸಾಗಿ ಉಳಿದುಕೊಂಡಿರುವ ನೋವು.. ಸಿನಿಮಾ ಅಗಬೇಕಾಗಿದ್ದು ಆ ಒಂದು ಕಥೆ.. ಅದೂ ಕೂಡ ಕನ್ನಡದ ಮತ್ತೊಬ್ಬ ಮೇರು ಕಲಾವಿದ ಡಾ ವಿಷ್ಣುವರ್ಧನ್ ಅವರೊಂದಿಗೆ ನಟಿಸಬೇಕಾಗಿದ್ದ ಸಿನಿಮಾ..! ಅದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಹೌದು, ಅದು ಸಾಮಾನ್ಯ ಸಿನಿಮಾ ಅಲ್ಲ. ಬಸವಣ್ಣ ಮತ್ತು ಬಿಜ್ಜಳರ ಕುರಿತಾದ ಐತಿಹಾಸಿಕ ಕಥೆಯನ್ನು ದೊಡ್ಡ ಪರದೆಯ ಮೇಲೆ ತರಬೇಕು ಎಂಬುದು ಅನಂತ್ ನಾಗ್ ಅವರ ಬಹುದಿನಗಳ ಕನಸಾಗಿತ್ತಂತೆ. ಅದಕ್ಕಿಂತ ವಿಶೇಷವೆಂದರೆ, ಈ ಸಿನಿಮಾದಲ್ಲಿ ಬಸವಣ್ಣ ಹಾಗೂ ಬಿಜ್ಜಳನ ಪಾತ್ರದಲ್ಲಿ ತಾವು ಮತ್ತು ವಿಷ್ಣುವರ್ಧನ್ ನಟಿಸಬೇಕು ಎಂದು ಅನಂತ್ ನಾಗ್ ಅವರು ಕನಸು ಕಂಡಿದ್ದರಂತೆ. ಅಷ್ಟೇ ಅಲ್ಲ. ಆ ಚಿತ್ರವನ್ನು ಅವರ ಸ್ವಂತ ತಮ್ಮ ಶಂಕರ್ ನಾಗ್ ಅವರೇ ನಿರ್ದೇಶಿಸಬೇಕು ಎಂಬುದು ಅವರ ಕನಸಾಗಿತ್ತು. ಅಲ್ಲೂ ಕೂಡ ಅನಂತ್ ನಾಗ್ ಅವರ ಕನಸಲ್ಲಿ ಧಾರಾಳಿತನವಿತ್ತು. ಅದೇನೆಂದರೆ- ತಾವು ಹಾಗೂ ವಿಷ್ಣುವರ್ಧನ್ ಇಬ್ಬರಲ್ಲಿ ಬಸವಣ್ಣ-ಬಿಜ್ಜಳ ಪಾತ್ರದಲ್ಲಿ ಯಾರು ಬೇಕಾದರೂ ನಟಿಸಬಹುದು ಎಂಬ ಆಯ್ಕೆ! ಈ ಎಲ್ಲಾ ಸಂಗತಿಗಳನ್ನೂ ಅವರು ತಮ್ಮ ಸಹೋದರ ಶಂಕರ್ ನಾಗ್ ಬಳಿ ಹೇಳಿಕೊಂಡಿದ್ದರಂತೆ. ಆದರೆ ಆ ಕಾಲದಲ್ಲಿ ಈ ಮೂವರೂ ತುಂಬಾ ಬ್ಯುಸಿ ಆಗಿದ್ದರಿಂದ ಅದಕ್ಕೆ ಕಾಲಾವಕಾಶ ಕೂಡಿ ಬರಲೇ ಇಲ್ಲ!
ಹಿಂದೊಮ್ಮೆ ಸಂದರ್ಶನದಲ್ಲಿ ಅನಂತ್ ನಾಗ್ ತಮ್ಮ ಈ ಆಸೆಯ ಬಗ್ಗೆ ಮಾತನಾಡಿದ್ದರು. ವಿದೇಶಿ ಸಿನಿಮಾಗಳು ತಮ್ಮ ಕಲ್ಪನೆಗಳ ಮೇಲೆ ದೊಡ್ಡ ಪ್ರಭಾವ ಬೀರಿದ್ದವು ಎಂದು ಅವರು ಹೇಳಿದ್ದರು. ವಿಶೇಷವಾಗಿ ಇತಿಹಾಸ, ಧರ್ಮ, ರಾಜಕೀಯ ಮತ್ತು ಸಮಾಜದ ನಡುವಿನ ಸಂಬಂಧವನ್ನು ಆಳವಾಗಿ ಚಿತ್ರಿಸಿದ ಸಿನಿಮಾಗಳು ಅವರನ್ನು ಸೆಳೆದಿದ್ದವು. ಡೇವಿಡ್ ಲೀನ್ ಅವರ ‘ಡಾಕ್ಟರ್ ಜಿವಾಗೊ’, ‘ಲಾರೆನ್ಸ್ ಆಫ್ ಅರೇಬಿಯಾ’, ‘ದಿ ಬ್ರಿಡ್ಜ್ ಆನ್ ದಿ ರಿವರ್ ಕ್ವಾಯಿ’, ‘ಎ ಪ್ಯಾಸೇಜ್ ಟು ಇಂಡಿಯಾ’ ಸೇರಿದಂತೆ ಹಲವು ಸಿನಿಮಾಗಳು ತಮ್ಮ ಮೇಲೆ ಗಾಢ ಪರಿಣಾಮ ಬೀರಿದ್ದವು ಎಂದು ಅವರು ನೆನಪಿಸಿಕೊಂಡಿದ್ದರು.
ನಂತರ ಕರ್ನಾಟಕಕ್ಕೆ ಬಂದ ಮೇಲೆ ಕನ್ನಡದ ಸಾಹಿತ್ಯ ಮತ್ತು ನಾಟಕಗಳತ್ತ ಅವರ ಆಸಕ್ತಿ ಮತ್ತಷ್ಟು ಹೆಚ್ಚಾಯಿತು. ಬಸವಣ್ಣ ಮತ್ತು ಬಿಜ್ಜಳರ ಕುರಿತಾದ ಕೃತಿಗಳನ್ನು ಓದುತ್ತಿದ್ದಾಗ, ಈ ಕಥೆಯನ್ನು ಸಿನಿಮಾವಾಗಿ ಯಾಕೆ ಮಾಡಬಾರದು ಎಂಬ ಆಲೋಚನೆ ಅವರಿಗೆ ಮೂಡಿತಂತೆ. ಗಿರೀಶ್ ಕಾರ್ನಾಡರ ‘ತಲೆದಂಡ’, ಲಂಕೇಶ್ ಹಾಗೂ ಕಂಬಾರರ ಬರಹಗಳೂ ಈ ವಿಚಾರದ ಬಗ್ಗೆ ಅವರ ಆಸಕ್ತಿಯನ್ನು ಹೆಚ್ಚಿಸಿದ್ದವು.
ಆಗ ಅನಂತ್ ನಾಗ್ ತಮ್ಮ ಸಹೋದರ ಶಂಕರ್ ನಾಗ್ ಅವರೊಂದಿಗೆ ಈ ಕನಸನ್ನು ಹಂಚಿಕೊಂಡಿದ್ದರು. “ನೀನು ನಿರ್ದೇಶನ ಮಾಡು, ನಾವು ಪಾತ್ರ ಮಾಡೋಣ” ಎಂಬ ರೀತಿಯಲ್ಲಿ ಚರ್ಚೆಯೂ ನಡೆದಿತ್ತಂತೆ. ಬಳಿಕ ವಿಷ್ಣುವರ್ಧನ್ ಅವರೊಂದಿಗೂ ಮಾತನಾಡಿ, “ನೀವು ಬಿಜ್ಜಳನ ಪಾತ್ರ ಮಾಡಿದರೆ ನಾನು ಬಸವಣ್ಣನ ಪಾತ್ರ ಮಾಡುತ್ತೇನೆ; ನೀವು ಬಸವಣ್ಣನ ಪಾತ್ರ ಮಾಡಿದರೆ ನಾನು ಬಿಜ್ಜಳನ ಪಾತ್ರ ಮಾಡುತ್ತೇನೆ” ಎಂದು ಹೇಳಿದ್ದರಂತೆ. ಈ ಎಲ್ಲಾ ಸಂಗತಿಗಳನ್ನು ಸ್ವತಃ ನಟ ಅನಂತ್ ನಾಗ್ ಅವರೇ ಹಿಂದೊಮ್ಮೆ ಹೇಳಿಕೊಂಡಿದ್ದು ಈಗ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ' ಘೋಷಣೆ ಬೆನ್ನಲ್ಲೇ ಮತ್ತೆ ವೈರಲ್ ಆಗುತ್ತಿದೆ.
ಕಲ್ಪನೆ ಮಾಡಿಕೊಳ್ಳಿ—ಒಂದೆಡೆ ಬಸವಣ್ಣನಾಗಿ ಅಥವಾ ಬಿಜ್ಜಳನಾಗಿ ಅನಂತ್ ನಾಗ್, ಮತ್ತೊಂದೆಡೆ ಬಿಜ್ಜಳನಾಗಿ ಅಥವಾ ಬಸವಣ್ಣನಾಗಿ ವಿಷ್ಣುವರ್ಧನ್, ನಿರ್ದೇಶನದ ಜವಾಬ್ದಾರಿ ಶಂಕರ್ ನಾಗ್! ಕನ್ನಡ ಚಿತ್ರರಂಗದ ಮೂವರು ದಿಗ್ಗಜರು ಒಂದೇ ಐತಿಹಾಸಿಕ ಸಿನಿಮಾದಲ್ಲಿ ಒಂದಾಗುವ ಅಪೂರ್ವ ಅವಕಾಶವಾಗುತ್ತಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಆ ಸಿನಿಮಾ ಕನಸು ನನಸಾಗಲಿಲ್ಲ.
ಅಂದಹಾಗೆ, 'ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ' ಎಂದು ಕೆಲವು ವರ್ಷಗಳ ಹಿಂದೆಯೇ ನಟ ಅನಂತ್ ನಾಗ್ ಅವರು ಹೇಳಿದ್ದಾರೆ. ಅದರಂತೆಯೇ ಇತ್ತೀಚೆಗೆ ಅವರು ಯಾವುದೇ ಸಿನಿಮಾಗೆ ಬಣ್ಣ ಹಚ್ಚಿಲ್ಲ. ಇದು ಅನಂತ್ ನಾಗ್ ಅವರ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಮಿಗಳಿಗೆ ಬೇಸರ ಮೂಡಿಸಿರುವುದು ಸುಳ್ಳಲ್ಲ. ಆದರೆ, ಈ ಹಿರಿಯ ನಟನಿಗೆ ವಯಸ್ಸಾಗಿದೆ.. ಇನ್ನೂ ನಟಿಸುತ್ತಲೇ ಇರಿ ಎಂದು ನಿರೀಕ್ಷಿಸುವುದು, ಒತ್ತಾಯ ಮಾಡುವುದು ಕೂಡ ಅಪರಾಧ ಎನ್ನಬಹುದು. ಹೇಗೂ ಅವರು ನಟಿಸಿದ ಬಹಳಷ್ಟು ಸಿನಿಮಾಗಳು ನಮ್ಮ ಜೊತೆಗಿವೆ. ನೋಡಿ ಖುಷಿಪಡಬಹುದು, ಏನಂತೀರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.