ನಿರ್ದೇಶಕ ಗುರುಪ್ರಸಾದ್ ಅವರ ಸಾವಿನ ಬೆನ್ನಲ್ಲೇ ಅವರ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಶಾಪ ಹಾಕಿದ್ದು ಯಾರಿಗೆ?
ನಿರ್ದೇಶಕ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಇನ್ನೂ ನಿಗೂಢವಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಮೃತಪಟ್ಟಿರುವ ಅವರ ಕೊಳೆತ ದೇಹ ಇಂದು ಪತ್ತೆಯಾಗಿದ್ದು, ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಇದಾಗಲೇ ಗುರುಪ್ರಸಾದ್ ಅವರ ಸಾವಿನ ಕುರಿತು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆಯೇ ಗುರುಪ್ರಸಾದ್ ಅವರ ಮೂರು ವರ್ಷಗಳ ಹಿಂದಿನ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೋವಿಡ್ ಸಮಯದಲ್ಲಿ ಗುರುಪ್ರಸಾದ್ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದ್ದಾಗ, ಸರ್ಕಾರದ ವಿರುದ್ಧ ಕೂಗಾಡಿ ನಾನು ಯಾವಾಗ ಸತ್ತರೂ ನನ್ನ ಶಾಪ ಇವರಿಗೇ ತಟ್ಟೋದು ಎಂದು ರೇಗಾಡಿದ್ದರು. ಇದು ನನ್ನ ಕೊನೆಯ ಕ್ಷಣಗಳ ಕೊನೆಯ ಮಾತುಗಳಾಗಿರಬಹುದು. ನಮ್ಮ ಮನೆಯವರೆಗೆ ಕೋವಿಡ್ ತಂದುಕೊಟ್ಟ ಯಡಿಯೂರಪ್ಪ, ವಿಜಯೇಂದ್ರ ಎಲ್ಲರಿಗೂ ಧನ್ಯವಾದ ಎನ್ನುತ್ತಲೇ ವಿಡಿಯೋ ಆರಂಭಿಸಿದ್ದ ಗುರುಪ್ರಸಾದ್ ಅವರು ಎಲ್ಲಾ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮೋದಿ ಪ್ರಾಮಾಣಿಕ, ಒಳ್ಳೆಯವ. ಆದರೆ ಬಿಜೆಪಿಯವರು ಎಲ್ಲರೂ ಪ್ರಾಮಾಣಿಕರು ಅಲ್ಲ, ಜೆಡಿಎಸ್, ಕಾಂಗ್ರೆಸ್ಸಿಗರಲ್ಲೂ ಅಪ್ರಾಮಾಣಿಕರೇ ಹೆಚ್ಚು. ನಿಮಗೆಲ್ಲಾ ಕೋಟಿ ಕೋಟಿ ಅಂದ್ರೆ ಲೆಕ್ಕಕ್ಕೆ ಇಲ್ಲ. ಈ ದರಿದ್ರ ಜೀವನ ನಡೆಸಲು ನನಗೆ ಕರೋನಾ ಎನ್ನುವ ಗಿಫ್ಟ್ ಕೊಟ್ಟಿದ್ದೀರಿ ಎಂದು ಗುರುಪ್ರಸಾದ್ ವಿಡಿಯೋದಲ್ಲಿ ಹೇಳಿದ್ದರು. ಕರೋನಾ ಸಮಯದಲ್ಲಿ ಸಿನಿಮಾ ಇಂಡಸ್ಟ್ರಿಯವರಿಗೆ ತೊಂದರೆಯಾಗಿದ್ದಕ್ಕೆ ಅವರು ಈ ರೀತಿ ಆಕ್ರೋಶ ಹೊರ ಹಾಕಿದ್ದರು. ಕರೋನಾ ಬಂದ್ರೆ ನಾನೇನೂ ಸಾಯಲೇಬೇಕೆಂದೇನೂ ಇಲ್ಲ. ಒಂದು ವೇಳೆ ಸತ್ತರೂ ಈ ಶಾಪಗಳು ನಿಮ್ಮನ್ನು ಕೊನೆ ಕ್ಷಣಗಳವರೆಗೆ ತಟ್ಟುತ್ತದೆ. ನನ್ನ ಶಾಪಗಳು ಕಳ್ಳತನದಿಂದ, ಮೋಸ-ವಂಚನೆಯಿಂದ ದುಡ್ಡು ಮಾಡುವವರಿಗೆ ತಟ್ಟುತ್ತದೆ ಎಂದು ಹೇಳಿದ್ದರು.
ಗುರುಪ್ರಸಾದ್ ಗಡ್ಡ ಶೇವ್ ಮಾಡ್ದೇ ಇರೋದಕ್ಕೆ ಡಾ.ರಾಜ್ ಕಾರಣವಂತೆ! ಕುತೂಹಲದ ಘಟನೆ ಅವರೇ ಹೇಳಿದ್ರು ಕೇಳಿ...
ಕರೋನಾದಿಂದ ಸಿನಿಮಾ ಇಂಡಸ್ಟ್ರಿಯ ಸಾಯುತ್ತಿದೆ. ಒಂದು ವೈರಸ್ ಬಂದ್ರೆ ಅದನ್ನು ಹತೋಟಿಗೆ ತರಲು ನಿಮ್ಮಿಂದ ಆಗುತ್ತಿಲ್ಲ. ಒಂದು ಲಕ್ಷ ಟೆಂಟ್ ಹಾಕಿ ಎಂದು ಸುಧಾಕರ್ ಅವರಿಗೆ ಹೇಳಿದ್ರೆ ಕಾಮನ್ ಸೆನ್ಸ್ ಇಲ್ಲಾ. ಎಲ್ಲಾ ಮನೆಗೂ ಕರೋನಾ ಗಿಫ್ಟ್ ಕೊಟ್ಟಿದ್ದಾರೆ. ಇನ್ನು ಡಿಕೆಶಿ ಕಥೆ ಸಾಕಷ್ಟು ಹೇಳಬಲ್ಲೆ ಎನ್ನುತ್ತಲೇ ಎಲ್ಲಾ ರಾಜಕಾರಣಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಅಕಸ್ಮಾತ್ ನಾನು ಸತ್ತು ಹೋದರೆ ಇದೆಲ್ಲಾ ಹೇಳಲು ಆಗುವುದಿಲ್ಲವಲ್ಲ, ಅದಕ್ಕಾಗಿ ಈ ವಿಡಿಯೋದಲ್ಲಿ ಹೇಳುತ್ತಿದ್ದೇನೆ ಎಂದಿದ್ದಾರೆ. ನಾನು ಸೋಯೋಕೆ ಮುಂಚೆ ಹೇಳಬೇಕಾದ ಮಾತು ಇದು ರಾಜಕೀಯದವರೆಲ್ಲ ನಿಯತ್ತಾಗಿ ಕೆಲಸ ಮಾಡಿ. ಕರೋನಾ ಬಂದ್ರೂ ಇನ್ನೂ ಪಾಠ ಕಲಿತಿಲ್ಲ ಎಂದ್ರೆ ಏನು? ನೀವೆಲ್ಲಾ ಕೋವಿಡ್ ಬಂದರೂ ವ್ಯವಹಾರ ಮಾಡುತ್ತಿದ್ದೀರಿ. ಈಗಲೂ ಹಣ ಮಾಡುವುದೇ ನಿಮ್ಮ ಗುರಿ. ನನ್ನ ಶಾಪ ಹಾಗೂ ನನ್ನ ನೋವು ನಿಮ್ಮನ್ನು ತಟ್ಟದೆಯೇ ಇರೋದಿಲ್ಲ ಎಂದು ರೇಗಾಡಿದ್ದಾರೆ.
ನನ್ನ ಈ ವಿಡಿಯೋ ನೋಡಿದ ಮೇಲೆ, ನಾನು ಎಷ್ಟು ಅಪ್ರಾಮಾಣಿಕ, ಯಾರಿಗೆ ಮೋಸ ಮಾಡಿದ್ದೀನಿ ಎಂಬುದನ್ನೆಲ್ಲ ಹುಡುಕಾಡ್ತೀರಾ ಎನ್ನೋದು ಗೊತ್ತು, ಹುಡುಕಿಕೊಳ್ಳಿ. ನಮ್ಮ ಸಾಲ ತೀರಿಸೋಕೆ, ನಮ್ಮ ಕರ್ತವ್ಯ ನಿಭಾಯಿಸೋದಕ್ಕೆ ಶ್ರಮದಿಂದ ದುಡಿಯೋ ನಮಗೆ ನೀವು ಈ ರೀತಿ ಮಾಡ್ತಾ ಇದ್ದೀರಾ. ನಿಮಗೆ ನೀವು ಕೋಟಿ ಮಾಡುವುದೇ ಮುಖ್ಯವಾಗಿ ಬಿಟ್ಟಿದೆ. ನನಗೆ ಕರೋನಾ ತಂದು ಕೊಟ್ಟದ್ದಕ್ಕೆ ನಿಮಗೆಲ್ಲ ಶಾಪ ತಟ್ಟೇ ತಟ್ಟುತ್ತೆ. ಸಿನಿಮಾ ಇಂಡಸ್ಟ್ರಿಯವರನ್ನೆಲ್ಲ ನೀವು ಸಾಯಿಸ್ತಾ ಇದ್ದೀರಾ. ನಾವು ಹುಲು ಮಾನವರು ಒಂದು ಇರುವೆಯಷ್ಟೇ ನಾವೆಲ್ಲರೂ. ಆದರೆ ನಮಗೆ ಮೆದುಳು ಚುರುಕಾಗಿದೆ, ಅದಕ್ಕಾಗಿ ನಾವು ಈ ಮಟ್ಟಿಗೆ ಬದುಕುತ್ತಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಸೂಪರ್ ಕನ್ನಡ ಫ್ಯಾಕ್ಟ್ ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿತ್ತು. ಅದೀಗ ವೈರಲ್ ಆಗುತ್ತಿದೆ.