‘ನಿನ್ನ ಮೇಲೆಯೇ ಫುಲ್ ಸಿನಿಮಾ’ ಅಂತ ಉಪ್ಪಿ ಹೇಳಿದ್ದರ ಅರ್ಥ ಗೊತ್ತಾಗಿದ್ದು ಕ್ಲೈಮ್ಯಾಕ್ಸ್‌ನಲ್ಲಿ ಎಂದ ಜನಪ್ರಿಯ ಕಿರುತೆರೆ ನಟಿ!

Published : Nov 15, 2026, 08:48 PM IST
Swasthik movie

ಸಾರಾಂಶ

Swasthik movie: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ಸ್ವಸ್ತಿಕ್’ ಸಿನಿಮಾದಲ್ಲಿ ನಟಿಸಿದ್ದ ಜನಪ್ರಿಯ ಕಿರುತೆರೆ ನಟಿಯೊಬ್ಬರು, ಆ ಚಿತ್ರದ ಶೂಟಿಂಗ್ ವೇಳೆ ನಡೆದ ತಮಾಷೆಯ ಘಟನೆಯನ್ನು ನೆನೆದು ನಕ್ಕಿದ್ದಾರೆ. ‘ನಿನ್ನ ಮೇಲೆಯೇ ಸಿನಿಮಾ’ ಅಂತ ಹೇಳಿ 10 ದಿನ ಬರೀ ಮಷಿನ್ ತುಳಿಸಿ, ಕೊನೆಗೆ ಕ್ಲೈಮ್ಯಾಕ್ಸ್‌ನಲ್ಲಿ ಉಪೇಂದ್ರ ಕೊಟ್ಟ ಆ ಟ್ವಿಸ್ಟ್ ಏನು? ಆ ನಟಿ ಯಾರು? ಇಲ್ಲಿದೆ ಸಂಪೂರ್ಣ ವಿವರ.

ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನ ಹಾಗೂ ವಿಭಿನ್ನ ಮೇಕಿಂಗ್ ಶೈಲಿ ಎಷ್ಟು ಕುತೂಹಲಕಾರಿಯಾಗಿರುತ್ತದೆಯೋ, ಅವರ ಸಿನಿಮಾಗಳ ಶೂಟಿಂಗ್ ಅನುಭವಗಳೂ ಅಷ್ಟೇ ರೋಚಕ ಹಾಗೂ ತಮಾಷೆಯಾಗಿರುತ್ತವೆ. ಇದೀಗ ಉಪೇಂದ್ರ ಅವರ ಸ್ವಸ್ತಿಕ್ (Swasthik) ಸಿನಿಮಾದಲ್ಲಿ ತಂಗಿ ಪಾತ್ರ ನಿರ್ವಹಿಸಿದ್ದ ಜನಪ್ರಿಯ ನಟಿ ವಾಣಿಶ್ರೀ, ಆ ಚಿತ್ರದ ಶೂಟಿಂಗ್ ವೇಳೆ ನಡೆದ ತಮಾಷೆಯ ಘಟನೆಯನ್ನು ನೆನೆದು ಬಿದ್ದು ಬಿದ್ದು ನಕ್ಕಿದ್ದಾರೆ.

ತಮಿಳು ಸಿನಿಮಾ ಬಿಟ್ಟು ಒಪ್ಪಿಕೊಂಡಿದ್ದ ಚಿತ್ರ

ಆ ದಿನಗಳ ನೆನಪನ್ನು ಹಂಚಿಕೊಂಡಿರುವ ನಟಿ ವಾಣಿಶ್ರೀ, "ನನಗೊಂದು ಫೋನ್ ಕಾಲ್ ಬಂತು. ಇಂಥದ್ದೊಂದು ಸಿನಿಮಾ ಮಾಡ್ತಿದ್ದೀವಿ, ಇದರಲ್ಲಿ ತಂಗಿ ಪಾತ್ರ ತುಂಬಾ ಚೆನ್ನಾಗಿದೆ, ನೀವೇ ಮಾಡಬೇಕು ಎಂದರು. ನಾನು ಆಗ ಒಂದು ತಮಿಳು ಚಿತ್ರ ಮಾಡಬೇಕಿತ್ತು. ಆದರೆ ಈ ಪಾತ್ರಕ್ಕಾಗಿ ಆ ತಮಿಳು ಸಿನಿಮಾವನ್ನೇ ಬಿಟ್ಟು ಸ್ವಸ್ತಿಕ್ ಚಿತ್ರವನ್ನು ಒಪ್ಪಿಕೊಂಡೆ. ಆಗ ಚಿತ್ರತಂಡದವರು, ‘ನೀನು ತಲೆಕೆಡಿಸಿಕೊಳ್ಳಬೇಡ, ಫುಲ್ ಸಿನಿಮಾ ನಿನ್ನ ಮೇಲೆಯೇ ಇರುತ್ತೆ’ ಎಂದು ಭರವಸೆ ನೀಡಿದ್ದರು" ಎಂದು ಹೇಳಿದ್ದಾರೆ.

10 ದಿನ ಡೈಲಾಗ್ ಇಲ್ಲ, ಬರೀ ಮಷಿನ್ ತುಳಿಯೋದೇ ಕೆಲಸ!

ಚಿತ್ರೀಕರಣ ಶುರುವಾದಾಗಿನ ತಮಾಷೆಯನ್ನು ವಿವರಿಸಿದ ಅವರು, "ಆ ಚಿತ್ರವನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನನಗೆ ನಗು ಬರುತ್ತದೆ. ಯಾಕೆಂದರೆ, ಶೂಟಿಂಗ್‌ನ ಮೊದಲ ಹತ್ತು ದಿನ ನನಗೆ ಒಂದೇ ಒಂದು ಡೈಲಾಗ್ ಇರಲಿಲ್ಲ! ಬರೀ ಮಷಿನ್ ತುಳಿಯೋದೇ ನನ್ನ ಕೆಲಸವಾಗಿತ್ತು. ಬೆಳಗ್ಗೆಯಿಂದ ರಾತ್ರಿಯವರೆಗೂ ಬಂದು ಕೂತು ಮಷಿನ್ ತುಳಿಯುವುದು, ನಿರ್ದೇಶಕರು ‘ಆ್ಯಕ್ಷನ್’ ಅಂದ ತಕ್ಷಣ ಮಷಿನ್ ತುಳಿಯುತ್ತಲೇ ಇರುವುದು! ನಾನು ಬೇಸತ್ತು ಉಪೇಂದ್ರ ಸರ್ ಬಳಿ ಹೋಗಿ, ‘ಏನ್ ಸರ್, ನನ್ನ ಮೇಲೆ ಸಿನಿಮಾ ಅಂತ ಹೇಳಿ ಮಷಿನ್ ತುಳಿಯೋದನ್ನು ಬಿಟ್ಟು ಬೇರೆ ಏನೂ ಮಾಡಿಸ್ತಾನೇ ಇಲ್ವಲ್ಲ?’ ಅಂದೆ. ಅದಕ್ಕೆ ಉಪೇಂದ್ರ ಅವರು ನಗುತ್ತಾ ‘ಏ ಬರ್ತೀರವ್ವ, ತಾಳು’ ಅಂತ ಹೇಳಿದ್ದರು" ಎಂದು ನಗುತ್ತಾ ವಿವರಿಸಿದ್ದಾರೆ.

ಮೈಸೂರು ಪ್ಯಾಲೇಸ್ ಕ್ಲೈಮ್ಯಾಕ್ಸ್‌ನಲ್ಲಿ ಕ್ಯಾಮೆರಾ, ಬಾಂಬ್ ಟ್ವಿಸ್ಟ್!

ಕೊನೆಗೆ ‘ಫುಲ್ ಸಿನಿಮಾ ನಿನ್ನ ಮೇಲೆಯೇ ಇರುತ್ತೆ’ ಎಂಬ ಮಾತಿನ ಅಸಲಿ ಅರ್ಥ ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಯಿತಂತೆ! "ನಾವು ವಿಶೇಷ ಅನುಮತಿ ಪಡೆದು ಮೈಸೂರು ಪ್ಯಾಲೇಸ್‌ನಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡುತ್ತಿದ್ದೆವು. ಆ ದೃಶ್ಯದಲ್ಲಿ ಏನಾಯ್ತು ಅಂದ್ರೆ, ಕ್ಯಾಮೆರಾವನ್ನೇ ನನಗೆ ಕಟ್ಟಿಬಿಟ್ಟಿದ್ದರು! ‘ಓಡು’ ಅಂದ್ರು, ನಾನು ಓಡಿದೆ. ಅದು ಮುಗಿದ ಮೇಲೆ ಮತ್ತೊಂದು ದೃಶ್ಯದಲ್ಲಿ ನನಗೆ ಬಾಂಬ್ ಕಟ್ಟಲಾಗಿತ್ತು. ಬಾಂಬ್ ಬ್ಲಾಸ್ಟ್ ಆಗಿ ನಾನು ಛಿದ್ರ ಛಿದ್ರ ಆಗೋ ಸೀನ್ ಅದು! ಆಗಲೂ ‘ಅದೇ ನಿನ್ನ ಮೇಲೆ ಇರೋ ಸೀನ್’ ಅಂದ್ರು. ಇದನ್ನೆಲ್ಲಾ ನೋಡಿ ನನಗೆ ಬಿದ್ದು ಬಿದ್ದು ನಗು ಬಂದಿತ್ತು. ಮನೆಗೆ ಬಂದು, ‘ಅಮ್ಮಾ, ಈ ಫಿಲ್ಮ್‌ನಲ್ಲಿ ನಂದೇ ಸೀನ್ ಅಮ್ಮ, ಸಿನಿಮಾ ಫುಲ್ ನನ್ನ ಮೇಲೆಯೇ ಇದೆ’ ಅಂತ ಹೇಳಿ ನಕ್ಕಿದ್ದೆ" ಎಂದು ಆ ಸವಿ ನೆನಪನ್ನು ನಟಿ ಹಾಸ್ಯಮಯವಾಗಿ ಹಂಚಿಕೊಂಡಿದ್ದಾರೆ.

ಚಿತ್ರದ ವಿಶೇಷತೆ ಏನು?

90ರ ದಶಕದ ಕೊನೆಯಲ್ಲಿ ತೆರೆಕಂಡಿದ್ದ ಉಪೇಂದ್ರ ನಿರ್ದೇಶನದ 'ಸ್ವಸ್ತಿಕ್' ಸಿನಿಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಾಯಕನಾಗಿ ಅಭಿನಯಿಸಿದ್ದರು. ಅಲ್ಲಿಯವರೆಗೆ ಹಾಸ್ಯ ಮತ್ತು ಕೌಟುಂಬಿಕ ಸಿನಿಮಾಗಳಲ್ಲಿ ಮಿಂಚಿದ್ದ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಭಯೋತ್ಪಾದನೆ ಹಾಗೂ ಬಾಂಬ್ ಸ್ಫೋಟದ ಸುತ್ತ ಸಾಗುವ ಈ ಥ್ರಿಲ್ಲರ್ ಸಿನಿಮಾ ಹೊಸ ಬಗೆಯ ಪಾತ್ರವನ್ನು ನೀಡಿತ್ತು. ಆಧುನಿಕ ಆ್ಯಕ್ಷನ್ ಕ್ಯಾಮೆರಾಗಳಿಲ್ಲದ ಆ ಕಾಲದಲ್ಲೇ ಕಲಾವಿದರಿಗೆ ಕ್ಯಾಮೆರಾ ಕಟ್ಟಿ ಚಿತ್ರೀಕರಣ ನಡೆಸಿದ ಉಪೇಂದ್ರ ಅವರ ವಿಭಿನ್ನ ಮೇಕಿಂಗ್ ಶೈಲಿ ಇಂದಿಗೂ ಸಿನಿಪ್ರಿಯರಲ್ಲಿ ಚರ್ಚೆಯಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾ. ರಾಜ್​ ನಟನೆಯ 'ಒಂದು ಮುತ್ತಿನ ಕಥೆ' ಸಿನಿಮಾದ ಯಾರಿಗೂ ತಿಳಿಯದ ರಹಸ್ಯ ತೆರೆದಿಟ್ಟ ನಟಿ ಅರ್ಚನಾ
ನಟ ಉಪೇಂದ್ರ ಮನೆಯಲ್ಲಿ ಮದುವೆ ಸಂಭ್ರಮ: ಕ್ಯೂಟ್​ ಫೋಟೋಸ್​​ ಶೇರ್​ ಮಾಡಿಕೊಂಡ ನಟಿ ಪ್ರಿಯಾಂಕಾ