ಕೃಷಿ ತಾಪಂಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೈಕಲಾಜಿಕಲ್ ಥ್ರಿಲ್ಲರ್ 'ಬ್ಲಾಂಕ್' ಚಿತ್ರದ ಟ್ರೇಲರನ್ನು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮೆಚ್ಚಿಕೊಂಡಿದ್ದಾರೆ ಮತ್ತು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಚಿತ್ರ ಫೆ.25ರಂದು ಬಿಡುಗಡೆಯಾಗಲಿದೆ.
ಕೃಷಿ ತಾಪಂಡ (Krishi Thapanda) ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೈಕಲಾಜಿಕಲ್ ಥ್ರಿಲ್ಲರ್ 'ಬ್ಲಾಂಕ್' (Blank) ಚಿತ್ರದ ಟ್ರೇಲರನ್ನು (Trailer) ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) ಮೆಚ್ಚಿಕೊಂಡಿದ್ದಾರೆ ಮತ್ತು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಚಿತ್ರ ಫೆ.25ರಂದು ಬಿಡುಗಡೆಯಾಗಲಿದೆ. 'ನಮ್ಮ ಚಿತ್ರದ ಟ್ರೇಲರ್ ನೋಡಿ ರಮ್ಯಾ ನನಗೆ ಫೋನ್ ಮಾಡಿ ಶುಭ ಕೋರಿದರು. ಟ್ರೇಲರ್ ಭರವಸೆ ಮೂಡಿಸುತ್ತಿದೆ ಎಂದು ಹೇಳಿದರು. ನಂತರ ಚಿತ್ರದ ಪೋಸ್ಟರ್‌ಗಳನ್ನು ಕೇಳಿದರು. ಟ್ರೇಲರ್ ಜತೆಗೆ ಚಿತ್ರದ ಪೋಸ್ಟರ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಇದರಿಂದ ರಮ್ಯಾರನ್ನು ಫಾಲೋ ಮಾಡುವವರು ನಮ್ಮ ಚಿತ್ರದ ಟ್ರೇಲರ್ ನೋಡುವಂತಾಯಿತು. ಇದು ನಮ್ಮ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ' ಎನ್ನುತ್ತಾರೆ ಕೃಷಿ ತಾಪಂಡ.
ಇತ್ತೀಚೆಗೆ ಕನ್ನಡದ 'ಬ್ಲಾಂಕ್' ಸಿನಿಮಾದ ಬಗ್ಗೆ ರಮ್ಯಾ ಅವರು ಇನ್ಸ್‌ಸ್ಟಾಗ್ರಾಮ್‌ನಲ್ಲಿ (Instagram) ಸ್ಟೋರಿ ಪೋಸ್ಟ್ ಮಾಡಿಕೊಂಡಿದ್ದರು. ಕೃಷಿ ತಾಪಂಡ, ಪೂರ್ಣಚಂದ್ರ ಮೈಸೂರು, ಸುಚೇಂದ್ರ ಪ್ರಸಾದ್ ಮುಂತಾದವರು ಅಭಿನಯಿಸಿರುವ ಈ ಸಿನಿಮಾದ ಟ್ರೇಲರ್ ನೋಡಿ ರಮ್ಯಾ ಇಷ್ಟಪಟ್ಟಿದ್ದು, ನಟಿ ಕೃಷಿ ತಾಪಂಡ ಅವರಿಗೆ ರಮ್ಯಾ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಈ ಮೂಲಕ ಅವರು 'ಬ್ಲಾಂಕ್' ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಈ ಚಿತ್ರಕ್ಕೆ ಎಸ್. ಜಯ್ ( S Jay) ನಿರ್ದೇಶನ ಮಾಡಿದ್ದು, ಎನ್.ಪಿ. ಮಂಜುನಾಥ ಪ್ರಸನ್ನ ಬಂಡವಾಳ ಹೂಡಿದ್ದಾರೆ. ಕನಸು ಮತ್ತು ವಾಸ್ತವಗಳ ನಡುವಿನ ಕಥೆಯನ್ನು ಈ ಸಿನಿಮಾ ಹೊಂದಿದೆ. ಅದರಲ್ಲಿ ಕೃಷಿ ತಾಪಂಡ ಅವರು ಮೂರು ಬಗೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
Jaggesh: ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಭೇಟಿಯಾದ ನವರಸ ನಾಯಕ!
ನಿರ್ದೇಶಕ ಎಸ್. ಜಯ್ ಅವರಿಗೆ ಇದು ಮೊದಲ ಸಿನಿಮಾವಾಗಿದ್ದು, ಚೊಚ್ಚಲ ಪ್ರಯತ್ನದಲ್ಲೇ ಅವರು ಪ್ರಯೋಗಾತ್ಮಕ ಮಾದರಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸಾಮಾನ್ಯವಾಗಿ ನಿರ್ದೇಶಕರು ಈ ರೀತಿ ಪ್ರಯೋಗ ಮಾಡಲು ಮುಂದಾದರೆ ನಿರ್ಮಾಪಕರ ಸಹಕಾರ ಸಿಗುವುದು ಕಡಿಮೆ. ಆದರೆ 'ಬ್ಲಾಂಕ್' ಚಿತ್ರದ ನಿರ್ಮಾಪಕ ಎನ್.ಪಿ. ಮಂಜುನಾಥ ಪ್ರಸನ್ನ ಅವರು ಹೊಸ ಪ್ರತಿಭೆಗಳ ಕನಸಿಗೆ ನೀರೆರೆದಿದ್ದಾರೆ. ಇಂಥ ನಿರ್ಮಾಪಕರು ಸಿಕ್ಕಿದ್ದರಿಂದ ಅಂದುಕೊಂಡ ರೀತಿಯೇ ಸಿನಿಮಾ ಮೂಡಿಬರಲು ಸಾಧ್ಯವಾಯ್ತು ಎಂದು ಚಿತ್ರದ ನಿರ್ದೇಶಕ ಎಸ್. ಜಯ್ ತಿಳಿಸಿದ್ದಾರೆ.
'ಉತ್ತಮ ಚಿತ್ರ ನಿರ್ಮಾಣ ಮಾಡಿರುವ ಸಂತೋಷವಿದೆ. ಬೇರೆ ಭಾಷೆಗಳಲ್ಲಿ ಮಾತ್ರ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳು ಬರುತ್ತದೆ. ನಮ್ಮಲ್ಲಿ ಬರುವುದಿಲ್ಲ ಎನ್ನುತ್ತಾರೆ. ಆದರೆ ಇತ್ತೀಚೆಗೆ ಕನ್ನಡದಲ್ಲೂ ಸಾಕಷ್ಟು ವಿಭಿನ್ನ ಕಥೆಯುಳ್ಳ ಚಿತ್ರಗಳು ಬರುತ್ತಿದೆ. ನಮ್ಮ ಚಿತ್ರದ ಬಗ್ಗೆ ಹೆಚ್ಚು ಹೊಗಳುವುದಿಲ್ಲ. ಆದರೆ ಯಾರಿಗೂ ನಿರಾಸೆ ಮಾಡದ ಚಿತ್ರ ಅಂತ ಹೇಳುತ್ತೇನೆ. ನಮ್ಮ ನಿರ್ದೇಶಕರ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ' ಎಂದು ಚಿತ್ರದ ಬಗ್ಗೆ ನಿರ್ಮಾಪಕ ಮಂಜುನಾಥ್ ಪ್ರಸನ್ನ ಮಾತನಾಡಿದ್ದಾರೆ.
Ramya: ಸ್ಯಾಂಡಲ್‌ವುಡ್ ಕಮ್ ಬ್ಯಾಕ್ ಬಗ್ಗೆ 'ಕುತೂಹಲ ಹೀಗೆ ಉಳಿಸಿಕೊಳ್ಳಿ' ಎಂದ ಮೋಹಕ ತಾರೆ!
ಯಾವಾಗಲೂ ಕಮರ್ಷಿಯಲ್ ಸಿನಿಮಾ ಮಾಡುವ ನನಗೆ ಈ ಚಿತ್ರ ತುಂಬಾ ವಿಭಿನ್ನ ಎನಿಸಿತು. ಏನಾದರೂ ಆಗಲಿ ಎಂದು ರಿಸ್ಕ್ ತೆಗೆದುಕೊಂಡು ಈ ಪಾತ್ರ ಮಾಡಿದ್ದೇನೆ. ಸಿಗರೇಟ್ ಸೇದುವಂತಹ ದೃಶ್ಯಗಳು ಕೂಡ ಈ ಸಿನಿಮಾದಲ್ಲಿ ಇವೆ. ನಟನೆಗೆ ಹೆಚ್ಚು ಮಹತ್ವ ಇದೆ. ಇಂತಹ ಚಿತ್ರದಲ್ಲಿ ನಟಿಸಿದರೆ ನಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಬಹುದು ಎಂದು ಚಿತ್ರದ ನಟಿ ಕೃಷಿ ತಾಪಂಡ ಹೇಳಿದ್ದಾರೆ. ಶ್ರೀಶಾಸ್ತ ಸಂಗೀತ ಸಂಯೋಜನೆ. ಜೆ.ಪಿ. ಮ್ಯಾನ್ ಕ್ಯಾಮೆರ ಕೈಚಳಕ ಚಿತ್ರಕ್ಕಿದ್ದು, ಕೃಷಿ ತಾಪಂಡ, ಪೂರ್ಣಚಂದ್ರ ಮೈಸೂರು ಜೊತೆಗೆ ಭರತ್ ಹಾಸನ್, ರಶ್ ಮಲ್ಲಿಕ್, ಸುಚೇಂದ್ರ ಪ್ರಸಾದ್, ಪ್ರಶಾಂತ್ ಸಿದ್ದಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.