
ಕೋಟ್ಯಂತರ ಕನ್ನಡಿಗರ ಮನಗೆದ್ದ 'ರಂಗನಾಯಕಿ'
ಕನ್ನಡ ಚಿತ್ರರಂಗದ ಸುವರ್ಣ ಯುಗದ ಅಪ್ರತಿಮ ನಟಿ, ಕೋಟ್ಯಂತರ ಕನ್ನಡಿಗರ ಮನಗೆದ್ದ 'ರಂಗನಾಯಕಿ' ಅಂದ್ರೆ ಯಾರು ಅಂತ ಕೇಳಿದ್ರೆ ಬಹುತೇಕ ಕನ್ನಡಿಗರು ಅದು 'ಆರತಿ' ಅಂತ ಹೇಳೋದು ಗ್ಯಾರಂಟಿ. ಇಂದಿನ (ಜೆನ್ ಜಿ) ಜನರೇಷನ್ ಹೊರತುಪಡಿಸಿದರೆ, ಹಿಂದಿನ ಎಲ್ಲಾ ಸಿನಿಪ್ರೇಮಿಗಳಿಗೆ ನಟಿ ಆರತಿ (Aarathi) ಯಾರು ಅನ್ನೋದನ್ನ ಮತ್ತೆಮತ್ತೆ ಹೇಳಬೇಕಾಗಿಲ್ಲ. 'ನಾಗರಹಾವು, ಪೂಜಾಫಲ, ರಂಗನಾಯಕಿ, ಗೆಜ್ಜೆ ಪೂಜೆ' ಹೀಗೆ ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಮನೆಮನೆಯಲ್ಲಿ ಮನದಲ್ಲಿ ನೆಲೆಸಿರುವವರು. ಇಂಥ ನಟಿ ಆರತಿ ಈಗ ನಟಿಸುತ್ತಿಲ್ಲ ಅನ್ನೋದು ಕೂಡ ಗೊತ್ತು. ನಟಿಸುವುದು ಹಾಗಿರಲಿ, ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಕೂಡ ಬಹಳಷ್ಟು ಅಭಿಮಾನಿಗಳಿಗೆ ಗೊತ್ತಿಲ್ಲ. ಹಾಗಿದ್ದರೆ, ನಟಿ ಆರತಿ ಬಗ್ಗೆ ಹಲವು ಮಾಹಿತಿಗಳು ಇಲ್ಲಿವೆ ನೋಡಿ..
ಈ ವರ್ಷದ ಶುರುವಿನಲ್ಲಿ ಒಮ್ಮೆ ಆರತಿಯವರು ಬೆಂಗಳೂರಿಗೆ ಬಂದುಹೋಗಿದ್ದಾರೆ. ಆದರೆ, ಅವರು ಬಹಳ ವರ್ಷಗಳಿಂದ ಯಾವುದೇ ವೇದಿಕೆ, ಸಂದರ್ಶನಗಳು ಅಥವಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ನಟಿ ಅರತಿಯವರು ಸಿನಿಮಾದಲ್ಲಿ ನಟಿಸುತ್ತಿದ್ದಾಗ ಸಹಜವಾಗಿ ಸುದ್ದಿಯಾಗುತ್ತಿದ್ದರು. ಸಿನಿಮಾ ಹಾಗೂ ವೈಯಕ್ತಿಕ ಜೀವನದ ಕಾರಣಕ್ಕೆ ಅಂದಿನ ಕಾಲದಲ್ಲಿ ಬಹಳಷ್ಟು ಸುದ್ದಿಯಾಗಿದ್ದ ನಟಿ ಆರತಿಯವರು ಈಗ ಮಾಧ್ಯಮಗಳು ಹಾಗೂ ಮಾತುಗಳಿಂದ ತುಂಬಾ ಅಂತರ ಕಾಯ್ದುಕೊಂಡಿದ್ದಾರೆ. ಅದಕ್ಕೆ ಕಾರಣ, 'ಅವರೀಗ ಆಧ್ಯಾತ್ಮ, ಸಮಾಜಸೇವೆ ಹಾಗೂ ಇನ್ನಿತರ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು, ಜೊತೆಗೆ, ಆರತಿಯವರು ಈಗ ಜೀವನದಲ್ಲಿ ಬಹಳಷ್ಟು ಮಾಗಿದ್ದು, ತುಂಬಾ ಪ್ರಬುದ್ಧತೆಯಿಂದ ನಡೆದುಕೊಳ್ಳುತ್ತಾರೆ' ಎಂದು ಅವರ ಆತ್ಮೀಯರು ಹೇಳುತ್ತಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಹಾಗೂ ಚರಣರಾಜ್ ಹೀಗೆ ಅನೇಕ ದಿಗ್ಗಜ ನಟರ ಜೊತೆ ನಟಿಸಿ, 'ನಾಗರಹಾವು', 'ಶರಪಂಜರ', 'ಎಡಕಲ್ಲು ಗುಡ್ಡದ ಮೇಲೆ' ನಂತಹ ಕ್ಲಾಸಿಕ್ ಸಿನಿಮಾಗಳನ್ನು ನೀಡಿದ ಆರತಿ ಅವರು ಚಿತ್ರರಂಗದಿಂದ ದೂರವಾಗಿ ದಶಕಗಳೇ ಕಳೆದಿವೆ. ಸದ್ಯ ಅಮೆರಿಕಾದಲ್ಲಿ ನೆಲೆಸಿರುವ ಇವರು, ಗ್ಲಾಮರ್ ಪ್ರಪಂಚದಿಂದ ಸಂಪೂರ್ಣವಾಗಿ ದೂರ ಸರಿದುಬಿಟ್ಟಿದ್ದಾರೆ. ಆದರೆ, ತಾಯಿಮಣ್ಣಿನ ಮೇಲಿನ ಋಣ, ಮಮಕಾರ ಮಾತ್ರ ಅವರನ್ನು ಆಗಾಗ ಕರ್ನಾಟಕಕ್ಕೆ ಎಳೆದು ತರುತ್ತಿದೆ ಎನ್ನಲಾಗುತ್ತಿದೆ.
ನಟಿ ಆರತಿ ಅವರು ಬೆಂಗಳೂರಿಗೆ ಆಗಮಿಸುತ್ತಿರುವುದಕ್ಕೆ ಕೇವಲ ವೈಯಕ್ತಿಕ ಕಾರಣಗಳಿಲ್ಲ, ಬದಲಾಗಿ ಒಂದು ದೊಡ್ಡ ಸಮಾಜಮುಖಿ ಉದ್ದೇಶವಿದೆ. ಅವರು ಅಮೆರಿಕಾದಲ್ಲಿದ್ದರೂ ತಮ್ಮ ಹುಟ್ಟೂರಿನ ಮೇಲಿನ ಪ್ರೀತಿಯನ್ನು ಮರೆತಿಲ್ಲ. ಕೋಲಾರ ಜಿಲ್ಲೆಯಲ್ಲಿರುವ ಕೆಲವು ಸರ್ಕಾರಿ ಶಾಲೆಗಳನ್ನು ಆರತಿ ಅವರು ದತ್ತು ಪಡೆದಿದ್ದಾರೆ. ಈ ಶಾಲೆಗಳ ಅಭಿವೃದ್ಧಿ, ಅಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ.
ಸದ್ದಿಲ್ಲದೆ ಸಮಾಜ ಸೇವೆ:
ಯಾವುದೇ ಪ್ರಚಾರ ಬಯಸದೆ, ಕ್ಯಾಮೆರಾ ಕಣ್ಣುಗಳಿಂದ ದೂರ ಉಳಿದು ಅವರು ಮಾಡುತ್ತಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಶಾಲೆಗಳ ಮೇಲ್ವಿಚಾರಣೆ ನಡೆಸಲು ಮತ್ತು ಮಕ್ಕಳ ಪ್ರಗತಿಯನ್ನು ಖುದ್ದಾಗಿ ವೀಕ್ಷಿಸಲು ಅವರು ಆಗಾಗ ಅಮೆರಿಕಾದಿಂದ ಕರ್ನಾಟಕಕ್ಕೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲೇ ಅವರು ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಹಲವು ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ.
ಅಂದು ತೆರೆಯ ಮೇಲೆ ತಮ್ಮ ನಟನೆಯ ಮೂಲಕ ಕ್ರಾಂತಿ ಮಾಡಿದ್ದ ಈ ನಟಿ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ. ಅವರು ಆಗಾಗ ಕನ್ನಡನಾಡಿಗೆ ಬಂದಾಗ, ಅವರನ್ನು ವಿಮಾನ ನಿಲ್ದಾಣದಲ್ಲಿ ಕಂಡಾಗ ಅಭಿಮಾನಿಗಳು, "ಅಂದಿನ ಅದೇ ಕಳೆ, ಹೆಚ್ಚಿನ ಗಾಂಭೀರ್ಯ ಹಾಗೂ ಪ್ರಬುದ್ಧತೆ ಈಗ ಅವರಲ್ಲಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಈ ಹಿರಿಯ ಜೀವ, ಕಲಾವಿದೆಯ ಸಮಾಜ ಸೇವೆ ಹೀಗೆಯೇ ಮುಂದುವರಿಯಲಿ ಎಂಬುದು ಎಲ್ಲರ ಆಶಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.