ನಟ ದರ್ಶನ್ ಅವರು ಮಾಡಿದ ಸಹಾಯದ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಿನಿಮಾ ಕೆಲಸಗಳು, ವಿವಾದಗಳಿಂದ ಆಗಾಗ ಸದ್ದು ಮಾಡು ನಟ ದರ್ಶನ್ ಸಾಮಾಜಿಕ ಕೆಲಸಗಳನ್ನು ಮಾಡೋದನ್ನು ಮರೆಯೋದಿಲ್ಲ. ಈ ಹಿಂದೆ ಅವರೇ ಹೇಳಿಕೊಂಡಂತೆ ಬೇರೆಯವರಿಗೆ ಸಹಾಯ ಮಾಡಲು ವರ್ಷಕ್ಕೆ ಅವರಿಗೆ ಎರಡು ಕೋಟಿ ರೂಪಾಯಿ ಸಾಲೋದಿಲ್ವಂತೆ. ಬೇರೆಯವರಿಗೆ ಸಹಾಯ ಮಾಡಿದ ವಿಚಾರವನ್ನು ದರ್ಶನ್ ಅವರು ಎಲ್ಲಿಯೂ ಹೇಳಿಕೊಳ್ಳೋದಿಲ್ಲ. ಈಗ ನಟ ಸುದರ್ಶನ್ ಪತ್ನಿ ಶೈಲಶ್ರೀ ಅವರ ಆಶ್ರಮದ ಖರ್ಚನ್ನು ನಟ ದರ್ಶನ್ ನಿಭಾಯಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಗಣೇಶ್ ಕಾಸರಗೋಡು ಪೋಸ್ಟ್ ಹೀಗಿದೆ…!
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಕಲಾವಿದರ ಕುಟುಂಬದ ಕುಡಿಯೊಂದು ನೆಲೆ ಬೆಲೆಯಿಲ್ಲದೇ ಇದೇ ಬೆಂಗಳೂರಿನ ಆಶ್ರಮಕ್ಕೆ ಸೇರಿಕೊಂಡು ಆಶ್ರಯ ಪಡೆದಿರುವ ದುರಂತ ಸುದ್ದಿಯೊಂದರ ಹಿಂದೆ ಬಿದ್ದಿದ್ದೇನೆ. ಹೌದು, ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಆರ್.ಎನ್. ನಾಗೇಂದ್ರರಾಯರ ಮುದ್ದಿನ ಸೊಸೆ ಇಲ್ಲೇ ಈ ಕಾಂಕ್ರೀಟ್ ಕಾಡಿನ ನಡುವೆ ಕಳೆದು ಹೋಗಿದ್ದಾರೆ! ಸುದರ್ಶನ್ ಅವರ ಸಾವಿನ ನಂತರ ದಿಕ್ಕಿಲ್ಲದ ಪರದೇಶಿಯಾಗಿ ಏಕಾಂಗಿ ಬದುಕು ಕಂಡುಕೊಂಡಿದ್ದ ಶೈಲಶ್ರೀ ಮೇಡಂ ಸೈಲೆಂಟ್ ಆಗಿ ಆಶ್ರಮ ಸೇರಿಕೊಂಡಿರುವ ಹೃದಯ ವಿದ್ರಾವಕ ಸುದ್ದಿಯೊಂದು ಬಂದಿದೆ…
ಬೇಕಿದ್ರೆ ಹಸು ಸಾಕ್ಕೊಂಡಿರ್ತೀನಿ, ಆದರೆ ಅದನ್ನು ಮಾತ್ರ ಮಾಡಲ್ಲ: ನಟ ದರ್ಶನ್ ಹೇಳಿದ್ದೇನು?
ಈ ಸುದ್ದಿಯ ಬೆನ್ನು ಹತ್ತಿ ಹೋದಾಗ ಸಿಕ್ಕ ವಿವರಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ : ಖ್ಯಾತ ನಾಯಕ ನಟ ಸುದರ್ಶನ್ ಅವರ ಕಾಲಾನಂತರ ನಾಗರಬಾವಿಯ ಅಪಾರ್ಟ್ಮೆಂಟೊಂದರಲ್ಲಿ ಬದುಕು ನಡೆಸುತ್ತಿದ್ದರು ಶೈಲಶ್ರೀ. ಮಕ್ಕಳಿಗೆ ಸಂಗೀತ ಹೇಳಿಕೊಟ್ಟು ಅಷ್ಟೋ ಇಷ್ಟೋ ಸಂಪಾದಿಸುತ್ತಿದ್ದ ಈ ಕಲಾವಿದೆ ಹೇಗೋ ಜೀವನದ ದಾರಿ ಕಂಡುಕೊಂಡಿದ್ದರು. ಆದರೆ ಅಪಾರ್ಟ್ಮೆಂಟ್ ಓನರ್ ಆ ಬಿಲ್ಡಿಂಗನ್ನು ನೆಲಸಮ ಮಾಡಿ ಮತ್ತೊಂದು ಬೃಹತ್ ಅಪಾರ್ಟ್ಮೆಂಟ್ ಕಟ್ಟಲು ತಯಾರಿ ನಡೆಸಿದಾಗ ಶೈಲಶ್ರೀ ಮೇಡಂ ಜಾಗ ಖಾಲಿ ಮಾಡಬೇಕಾಯಿತು. ಒಂಟಿ ಜೀವ. ಎಲ್ಲಿಗೆ ಹೋಗುವುದೆಂದು ದಿಕ್ಕು ತೋಚದೇ ಕುಳಿತಿದ್ದಾಗ ಅವರಿಗೆ ದಿಕ್ಕಾದವರು ಕನ್ನಡದ ಮತ್ತೊಬ್ಬ ಹಿರಿಯ ನಟಿ ಗಿರಿಜಾ ಲೋಕೇಶ್. ಇವರ ಸಲಹೆಯಂತೆ ಶೈಲಶ್ರೀ ಆಶ್ರಮ ಸೇರಿಕೊಂಡರು. ಆಶ್ರಮದ ಖರ್ಚು ವೆಚ್ಚಗಳನ್ನು ಅದೇ ಹಿರಿಯ ನಟಿ ತಾತ್ಕಾಲಿಕವಾಗಿ ನೋಡಿಕೊಂಡರು. ಆದರೆ ದೀರ್ಘಕಾಲದ ತನಕ ಆರ್ಥಿಕವಾಗಿ ಸಹಾಯ ಮಾಡುವುದು ಅವರಿಗೂ ಕಷ್ಟವಾದಾಗ ದೊಡ್ಡ ನೆರವಿಗೆ ನಿಂತವರು ನಟ ದರ್ಶನ್ ತೂಗುದೀಪ! ತಮ್ಮ ಸೋದರ ದಿನಕರ್ ಮೂಲಕ ಶೈಲಶ್ರೀಯವರ ಕೊನೆಗಾಲದ ತನಕ ಈ ಸಹಾಯವನ್ನು ನೀಡಲು ದರ್ಶನ್ ತಾವಾಗಿಯೇ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬ ನಿಲುವಿನ ದರ್ಶನ್ ಎಷ್ಟೇ ಗುಪ್ತವಾಗಿ ಈ ದೊಡ್ಡ ಸಹಾಯವನ್ನು ಮಾಡಿದರೂ ಸುದ್ದಿ ಹೊರಬಿದ್ದಿದೆ…
PHOTOS: 'ನನ್ನ ಹೆಂಡ್ತಿ ಕಿರಿಕ್ ಮಾಡ್ತಾ ಇದ್ರೆ ಮುದ್ದು ರಾಕ್ಷಸಿ ಅಂತಾನೇ ಕರಿತೀನಿ'; ನಟ ದರ್ಶನ್ ತೂಗುದೀಪ
ನಟ ದರ್ಶನ್ ಅವರು ದಿನಕರ್ ತೂಗುದೀಪ ಮೂಲಕ ಶೈಲಶ್ರೀ ಅವರಿಗೆ ಐವತ್ತು ಸಾವಿರ ರೂಪಾಯಿ ನೀಡಿದ್ದರಂತೆ. ಅದಾದ ನಂತರದಲ್ಲಿ ಆಶ್ರಮದ ಅಷ್ಟು ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ದರ್ಶನ್ ನಿರ್ಧಾರ ಮಾಡಿದ್ದಲ್ಲದೆ, ಇಂದಿಗೂ ನಿಭಾಯಿಸುತ್ತಿದ್ದಾರೆ.
ಈ ನಡುವೆ ಯುಟ್ಯೂಬ್ ಓನರ್'ವೊಬ್ಬ ಶೈಲಶ್ರೀಯವರನ್ನು ಸಂದರ್ಶಿಸಿ ಏಳೆಂಟು ಎಪಿಸೋಡ್ ಮಾಡಿ ಹೋದವನು ಈ ಅಸಹಾಯಕ ನಟಿಯ ಹೆಸರು ಹೇಳಿಕೊಂಡು ನಾಲ್ಕಾರು ಲಕ್ಷ ಸಂಪಾದಿಸಿ, ಸ್ವಂತಕ್ಕೆ ಬ್ಯಾಂಕ್ ಬ್ಯಾಲೆನ್ಸ್ ಏರಿಸಿಕೊಂಡ ಸುದ್ದಿಯೂ ಹೊರಬಂದಿದೆ. ಇಂಥಾ ಅಮಾನುಷ ಕೃತ್ಯಕ್ಕೆ ಹೇಗಾದರೂ ಆತನಿಗೆ ಮನಸ್ಸು ಬಂತೋ ಗೊತ್ತಿಲ್ಲ. ಕಲೆಯ ಹೆಸರಿನಲ್ಲಿ ಮಾಧ್ಯಮವನ್ನು ಹೀಗೆ ದುರುಪಯೋಗ ಪಡಿಸಿಕೊಂಡರೆ ಕರ್ಮ ರಿಟರ್ನ್ಸ್ ಎನ್ನದೇ ವಿಧಿಯಿಲ್ಲ...